ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿಹರೆಯದವರನ್ನು ಕಾಡುವ ರಕ್ತಸ್ರಾವ

Last Updated 30 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ವನಜಾ 9ನೆಯ ತರಗತಿಯಲ್ಲಿ ಸರ್ಕಾರಿ ಫ್ರೌಢಶಾಲೆಯ ವಿದ್ಯಾರ್ಥಿನಿ. ಕ್ಲಾಸಿನಲ್ಲಿ ತಲೆಸುತ್ತಿ ಬಿದ್ದಳೆಂದು ಶಿಕ್ಷಕಿಯೋರ್ವರು ಹೊರರೋಗಿ ವಿಭಾಗಕ್ಕೆ ಕರೆತಂದಿದ್ದರು. ಸಮವಸ್ತ್ರದಲ್ಲಿ ಬಂದಿದ್ದರಿಂದ ತಕ್ಷಣವೇ ಅವಳನ್ನು ಪರೀಕ್ಷಿಸುವಾಗ ಗೊತ್ತಾಗಿದ್ದು ಕಳೆದ ಹದಿಮೂರು ದಿನಗಳ ಹಿಂದೆ ಮಾಸಿಕ ಋತುಸ್ರಾವ ಪ್ರಾರಂಭವಾಗಿದ್ದು ನಿಂತೇ ಇರಲಿಲ್ಲ ಎನ್ನುವುದು. ಮುಖ ಮೈ ಎಲ್ಲ ಬಿಳಚಿಕೊಂಡು ತೀರಾ ನಿಶ್ಶಕ್ತಗೊಂಡಿದ್ದಳು.

ಸಂಕೋಚದಿಂದ ಮನೆಯಲ್ಲೂ ಹೇಳದೇ, ಶಿಕ್ಷಕರಿಗೂ ತಿಳಿಸದೇ, ಸುಮ್ಮನಿದ್ದು ಅತಿಸ್ರಾವವಾಗಿ ರಕ್ತಹೀನತೆಯಿಂದ ಬಳಲುತ್ತಿದ್ದ  ಸ್ಥಿತಿಯಲ್ಲಿ ಶಾಲೆಯಿಂದ ಶಿಕ್ಷಕಿ ಕರೆತಂದಿದ್ದರು. ಋತುಸ್ರಾವವನ್ನು ಕಡಿಮೆ ಮಾಡುವ ಚುಚ್ಚುಮದ್ದು ಕೊಟ್ಟು ಅವಳ ಹಿಮೋಗ್ಲೋಬಿನ್ ಪರೀಕ್ಷೆ ಮಾಡಿಸಿದಾಗ ಅವಳ ಹಿಮೋಗ್ಲೋಬಿನ್ 5 ಮಿ.ಗ್ರಾಂ. ನಷ್ಟಿತ್ತು. ಹತ್ತಿರದ ಹಳ್ಳಿಯಲ್ಲಿದ್ದ ಅವರ ಪೋಷಕರನ್ನು ಕರೆಸಿ ವಿವರವಾಗಿ ಅವಳಿಗಾಗುತ್ತಿರುವ ಅತಿರಕ್ತಸ್ರಾವದ ಬಗ್ಗೆ ತಿಳಿಸಿ 3–4 ಬಾಟಲಿ ಸೂಕ್ತ ರಕ್ತವನ್ನು ಪೂರೈಕೆ ಮಾಡಿ, ಸೂಕ್ತ ಔಷಧಿಯನ್ನು ಕೊಡಲಾಯಿತು. ಒಂದೇ ವಾರಕ್ಕೆ ಮತ್ತೆ ಶಾಲೆಗೆ ಹೋಗುವ ಹಾಗೆ ಆದಳು.

ಏನಿದು, ಆಡಿ ಕುಣಿದು ಕುಪ್ಪಳಿಸುವ ಬಾಲೆಯರಲ್ಲೂ ಹೀಗೆ ರಕ್ತಸ್ರಾವವಾಗಬಹುದೇ? ನಾವೇನು ಮಟ್ಟು ನಿಲ್ಲುವ ಸಮಯದಲ್ಲಷ್ಟೇ ಇಂತಹ ತೊಂದರೆಗಳಿಗೊಳಗಾಗಬಹುದೆಂದು ಅಂದುಕೊಂಡಿದ್ದೆವು ಎಂದು ಶಿಕ್ಷಕಿಯ ಅಳಲಾದರೆ, ಹಲವು ಅತಿರಕ್ತಸ್ರಾವದಿಂದ ಬಳಲುವ ಹೆಣ್ಣು ಮಕ್ಕಳ ತಾಯಂದಿರು ‘ಮೇಡಂ ನಮಗಂತೂ ಈ ಬಟ್ಟೆ ಒಗೆದು ಒಗೆದು ಸಾಕಾಗಿಬಿಟ್ಟಿದೆ.

ತೊಡೆಸಂದಿಯೂ ಸೆಲೆತು ಹೋಗಿದೆ. ಏನಿದು ಓಡಾಡಕ್ಕೂ ಕಷ್ಟ ಆಗ್ತಿದೆ’ ಎಂದು ಅವಲತ್ತುಕೊಳ್ಳುತ್ತಾರೆ. ಹೀಗೆ ಹರೆಯಕ್ಕೆ ಪಾದಾರ್ಪಣೆ ಮಾಡಿದ ಕೆಲವು ಹೆಣ್ಣು ಮಕ್ಕಳಲ್ಲಿ  19 ವರ್ಷದೊಳಗಾಗಿ ಅತಿಯಾದ ರಕ್ತಸ್ರಾವ ಆಗಿ ಅವರ ದೈನಂದಿನ ಚಟುವಟಿಕೆಗಳಿಗೂ ತೊಂದರೆಯಾಗಿ ಶೈಕ್ಷಣಿಕವಾಗಿಯೂ ಏರುಪೇರಾಗಬಹುದು.

ಬಾಲ್ಯಾವಸ್ಥೆಯಿಂದ ಯೌವನಾವಸ್ಥೆಗೆ ಕಾಲಿಡುವ ಸಂಕ್ರಮಣ ಸ್ಥಿತಿಯಲ್ಲಿ ಹಲವು ದೈಹಿಕ, ಮಾನಸಿಕ, ಭಾವನಾತ್ಮಕ ಬದಲಾವಣೆಗಳು ಕಾಣಿಸಿಕೊಳ್ಳುವುದರ ಜೊತೆಗೆ ಈ ಋತುಚಕ್ರದ ತೊಂದರೆಯಿಂದಾಗಿ ಆರೋಗ್ಯದ ಏರುಪೇರನ್ನು ಎದುರಿಸಲು ಬಹಳ ಹೆಣಗಾಡಬೇಕಾಗುತ್ತದೆ. ಇದು ರೋಗಿಗೂ ಹಾಗೂ ಪಾಲಕರಿಗೂ ಯಾತನೆ ಹಾಗೂ ಆತಂಕದ ಸನ್ನಿವೇಶವನ್ನೂ ಉಂಟುಮಾಡಬಹುದು. ಆದ್ದರಿಂದ ಈ ಬಗ್ಗೆ ಸಂಪೂರ್ಣವಾಗಿ ಪಾಲಕರಿಗೆ ಹಾಗೂ ಪೋಷಕರಿಗೂ ಹಾಗೂ ಸ್ವತಃ ಹರೆಯದ ಹೆಣ್ಣುಮಕ್ಕಳಿಗೂ, ಶಿಕ್ಷಕರಿಗೂ ಈ ಬಗ್ಗೆ ಸೂಕ್ತ ಮಾಹಿತಿ ಇರಬೇಕಾದುದು ಮುಖ್ಯ.

ಹೆಣ್ಣುಮಕ್ಕಳು ಹರೆಯಕ್ಕೆ ಪಾದಾರ್ಪಣೆ ಮಾಡುತ್ತಿದ್ದ ಹಾಗೆ ಮೆದುಳಿನ ಹೈಪೋಥಲಾಮಸ್‌ನಿಂದ ನಿರ್ದೇಶಿತವಾಗಿ ಪಿಟ್ಯೂಟರಿ ಗ್ರಂಥಿಯಿಂದ ಎಪ್.ಎಸ್.ಎಚ್. ಮತ್ತು ಎಲ್.ಎಚ್. (F.S.H. & L.H.) ಹಾರ್ಮೋನುಗಳು ಲಯಬದ್ಧ ಪ್ರಮಾಣದಲ್ಲಿ ಉತ್ಪಾದನೆಯಾಗಿ ಮೊದಲ 15 ದಿನಗಳು ಅಂಡಾಶಯಗಳು ಉತ್ತೇಜನಗೊಂಡು ಕೋಶಿಕೆಯಿಂದ ಒಂದೇ ಒಂದು ಅಂಡಾಣು ಪಕ್ವವಾಗಿ ಹೊರಬರುತ್ತದೆ. ಇದನ್ನು ಅಂಡೋತ್ಪತ್ತಿ ಎನ್ನುತ್ತೇವೆ (ಓವಿಲೇಷನ್).

ಅಂಡೋತ್ಪತ್ತಿಯ ನಂತರ ಕೋಶಿಕೆಯು ಕಾರ್ಪಸ್ ಲುಟಿಯಮ್ ಆಗಿ ಪರಿವರ್ತನೆ ಹೊಂದಿ ಅದರಿಂದ ಪ್ರೊಜೆಸ್ಟ್ರಾನ್ ಹಾರ್ಮೋನು ಉತ್ಪತ್ತಿ ಆಗುತ್ತದೆ. ಈ ಸಮಯದಲ್ಲಿ ಗರ್ಭಕೋಶದ ಲೋಳೆಪದರವು ಬೆಳೆಯುತ್ತಿದ್ದು ಅಂಡಾಣು ಮತ್ತು ವೀರ್ಯಾಣುಗಳ ಸಮಾಗಮವಾದಲ್ಲಿ ಭ್ರೂಣಾಗಮನವಾಗಿ ಬರಬಹುದೆಂದು ಗರ್ಭಕೋಶದಲ್ಲಿ ಮೆತ್ತನೆಯ ಹಾಸಿಗೆಯನ್ನು ತಯಾರು ಮಾಡಿರುತ್ತದೆ. ಆದರೆ ಅಂಡ ಹಾಗೂ ವೀರ್ಯಾಣು ಫಲಿತವಾಗದಿದ್ದಲ್ಲಿ ಅಂಡಾಣು 48 ಗಂಟೆಗಳಲ್ಲಿ ಸತ್ತು ಹೋಗುತ್ತದೆ; ಹಾಗೂ ಗರ್ಭಕೋಶದ ಒಳಪದರವು ಭ್ರೂಣಾಗಮನವಾಗದಿದ್ದಾಗ ಹಾರ್ಮೋನುಗಳ ಮಟ್ಟ ಕಡಿಮೆಯಾಗಿ ಚೂರು ಚೂರಾಗಿ ಹೊರಬರುವ ಪ್ರಕ್ರಿಯೆಯೆ ಮಾಸಿಕ ಋತುಚಕ್ರ ಎನಿಸಿಕೊಳ್ಳುತ್ತದೆ. ಈ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಬೇಕು.

ಹೆಚ್ಚಿನ ಸಂದರ್ಭಗಳಲ್ಲಿ ಅಂಡರಹಿತ ಋತುಚಕ್ರವೇ ಹರೆಯದವರ ಅತಿರಕ್ತಸ್ರಾವಕ್ಕೆ ಕಾರಣ. ಏಕೆಂದರೆ ಹದಿವಯಸ್ಸಿನಲ್ಲಿ ಹೈಪೋಥಲಾಮಸ್-ಪಿಟ್ಯೂಟರಿ ಗ್ರಂಥಿ-ಅಂಡಾಶಯದ ಅಕ್ಷವೂ ಪರಿಪಕ್ವವಾಗದೇ ಹಾರ್ಮೋನುಗಳ ಬಿಡುಗಡೆಯು ಲಯಬದ್ಧವಾಗಿ ಆಗುವುದಿಲ್ಲ. ಅದರಲ್ಲಿಯೂ ಎಲ್.ಎಚ್. ಹಾರ್ಮೋನ್ ಹಗಲಿನಲ್ಲಿಯೂ ಲಯಬದ್ಧವಾಗಿ ಬಿಡುಗಡೆಯಾದಾಗ ಅಂಡೋತ್ಪತ್ತಿಯ ಸಹಿತವಾದ ಋತುಚಕ್ರವಾಗುತ್ತದೆ.

ಇಲ್ಲದಿದ್ದಲ್ಲಿ ಅಂಡರಹಿತವಾದ ಋತುಚಕ್ರವಾಗಿ ಕೇವಲ ಇಸ್ಟ್ರೋಜನ್ ಹಾರ್ಮೋನು ಮಾತ್ರ ಹೆಚ್ಚಿದ್ದು ಅಂಡೋತ್ಪತ್ತಿಯಾಗುವಷ್ಟು ಎಲ್.ಎಚ್. ಹಾರ್ಮೋನು ಇಲ್ಲದಿದ್ದಾಗ ಪ್ರೊಜೆಸ್ಟ್ರನ್ ಹಾರ್ಮೋನು ಉತ್ಪಾದನೆಯಾಗದೇ ಕೇವಲ ಇಸ್ಟ್ರೋಜನ್‌ನಿಂದ ಗರ್ಭಕೋಶದ ಲೋಳೆಪದರ ಅಧಿಕವಾಗಿ ಬೆಳೆದು ಒಂದು ಹಂತವನ್ನು ಮೀರಿ ಬೆಳೆದಾಗ ರಕ್ತಸರಬರಾಜು ನಿಂತುಹೋಗಿ, ಒಳಪದರ ಚೂರು ಚೂರಾಗಿ ಸ್ರಾವದ ರೂಪದಲ್ಲಿ ಹೊರಬಂದು ಅತಿ ರಕ್ತಸ್ರಾವ ಎನಿಸಿಕೊಳ್ಳುತ್ತದೆ.

ಜೊತೆಗೆ ಸ್ಥಳೀಯವಾಗಿ ಉತ್ಪಾದನೆಯಾಗುವ ಹಾರ್ಮೋನುಗಳ ಮಟ್ಟದಲ್ಲಿಯೂ ಏರುಪೇರಾಗಿ ಅಧಿಕ ರಕ್ತಸ್ರಾವವಾಗುತ್ತದೆ. ಆದ್ದರಿಂದ ಈ ಸಂದರ್ಭಗಳಲ್ಲಿ ಮೊದಲು ರೋಗಿಗೆ ಹಾಗೂ ಪಾಲಕರಿಗೆ ಭರವಸೆ ನೀಡುವುದು ಮುಖ್ಯ. ಮೊದಲು ರಕ್ತಸ್ರಾವವನ್ನು ತಡೆಗಟ್ಟುವ ಸೂಕ್ತ ಔಷಧಿಗಳನ್ನು ಕೊಟ್ಟು (ಮೆಫನೆಮಿಕ್ ಆಸಿಡ್ ಮತ್ತು ಟ್ರಾನೆಕ್ಸೆಮಿಕ್ ಆಸಿಡ್) ನಂತರ 3–6 ತಿಂಗಳು ಪ್ರೊಜೆಸ್ಟ್ರಾನ್ ಹಾಗೂ ಇಸ್ಟ್ರೋಜನ್ ಹಾರ್ಮೋನುಗಳ ಮಾತ್ರೆಗಳನ್ನು ಕೊಡಬೇಕಾಗುತ್ತದೆ.

ಒದರೊಂದಿಗೆ ಸೂಕ್ತ ರಕ್ತಪರೀಕ್ಷೆಗಳನ್ನು ಪೆಲ್ವಿಕ್ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಇತ್ಯಾದಿ ಅವಶ್ಯವಿದ್ದರೆ ಮಾಡಿಸಬೇಕಾಗುತ್ತದೆ. ಪಿಸಿಓಡಿ ಸಮಸ್ಯೆ ಇದ್ದರೂ ಸೂಕ್ತ ಹಾರ್ಮೋನು ಚಿಕಿತ್ಸೆ ಕೊಡಬೇಕಾಗುತ್ತದೆ. ಥೈರಾಯಿಡ್ ಹಾರ್ಮೋನು ಕಡಿಮೆ ಇದ್ದಾಗ ಥೈರಾಯಿಡ್ ಹಾರ್ಮೋನು ಚಿಕಿತ್ಸೆ ಕೊಡಬೇಕಾಗುತ್ತದೆ.

ಒಟ್ಟಾರೆ ಹಲವು ಬದಲಾವಣೆಗಳು ಆಗುವ ಹರೆಯದ ಡೋಲಾಯಮಾನ ಸ್ಥಿತಿಯಲ್ಲಿ ಋತುಚಕ್ರದ ಬಗೆಗೂ ಸಾಕಷ್ಟು ಪ್ರಚಲಿತವಿರುವ ಸಂಪ್ರದಾಯ ಹಾಗೂ ಮೂಢನಂಬಿಕೆ, ತಪ್ಪು ಕಲ್ಪನೆಗಳಿರುವ ಇಂದಿನ ಕಾಲಘಟ್ಟದಲ್ಲಿ ಹರೆಯದವರ ಮನವೊಲಿಸಿ ಮುಜುಗರವಾಗದ ಹಾಗೇ ಅವರ ಚರಿತೆಯನ್ನು ತೆಗೆದುಕೊಂಡು ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ.

ಹೆಣ್ಣುಮಕ್ಕಳ ಪೋಷಕರು, ಪಾಲಕರು ಮತ್ತು ಶಿಕ್ಷಕರು ಈ ಮಾಹಿತಿಯನ್ನು ತಿಳಿದುಕೊಂಡಿರಬೇಕು. ಹೆಣ್ಣುಮಕ್ಕಳು ಅತಿರಕ್ತಹೀನತೆಯಿಂದಾಗಿ ತೊಂದರೆಯಾಗುವುದನ್ನು ತಪ್ಪಿಸಲು ಆರಂಭದಲ್ಲಿಯೇ ವಿಷಯವನ್ನು ಮುಚ್ಚಿಡದೇ, ಆಪ್ತರೊಂದಿಗೆ ಚರ್ಚಿಸಿ, ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಹದಿಹರೆಯದಲ್ಲಿ ಸೂಕ್ತ ಪೌಷ್ಟಿಕ ಆಹಾರಸೇವನೆ ಹಾಗೂ ನಿಯಮಿತ ದೈಹಿಕ ಚಟುವಟಿಕೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ.

ಹರೆಯದಲ್ಲಿ ಅಧಿಕ ರಕ್ತಸ್ರಾವಕ್ಕೆ ಕಾರಣಗಳೇನು?
ಮಾಸಿಕ ಋತುಚಕ್ರ ತಿಂಗಳಿಗೊಮ್ಮೆ ಬಂದು ಪ್ರತಿ ತಿಂಗಳು 60–80 ಎಂ.ಎಲ್. ನಷ್ಟು (3–4ಚಮದಷ್ಟು) ರಕ್ತಸ್ರಾವವಾಗಬಹುದು, ಇದು ಸಹಜ. ಆದರೆ ಕೆಲವರಲ್ಲಿ ಮೇಲೆ ತಿಳಿಸಿದ ಘಟನೆಯಂತಹ ಅತಿಯಾದ ರಕ್ತಸ್ರಾವವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಶೇ.70ರಷ್ಟರಲ್ಲಿ ಅಂಡರಹಿತ ಋತುಚಕ್ರಗಳು. ಇನ್ನೂ ಕೆಲವರಲ್ಲಿ ಪಿಸಿಓಡಿ ಸಮಸ್ಯೆಗಳಿಂದ, ಕೆಲವರಲ್ಲಿ ಥೈರಾಯಿಡ್ ಸ್ರಾವ ಕಡಿಮೆಯಾಗುವುದರಿಂದ ಇನ್ನು ಕೆಲವರಲ್ಲಿ ರಕ್ತಹೆಪ್ಪುಗಟ್ಟುವಿಕೆಯ ತೊಂದರೆಗಳಾದ ಐ.ಟಿ.ಪಿ. ಇತ್ಯಾದಿಗಳಿಂದ ಅತಿರಕ್ತಸ್ರಾವವಾಗಬಹುದು.

ಇನ್ನೂ ಕೆಲವರಲ್ಲಿ ಅಪರೂಪಕ್ಕೆ ಗರ್ಭಕೋಶದ ಶಾರೀರಿಕ ರಚನೆಯಲ್ಲಿ ವ್ಯತ್ಯಾಸದಿಂದ ಹಾಗೂ ಯಕೃತ್ ಮೂತ್ರಪಿಂಡದ ತೊಂದರೆಯಿಂದ, ಮತ್ತು ಕೆಲವೊಮ್ಮೆ ಅಪಘಾತದಿಂದ ಜನನಾಂಗಗಕ್ಕೆ ಆಗುವ ಗಾಯಗಳಿಂದ, ಸೋಂಕು ಇತ್ಯಾದಿಗಳಿಂದ ಅತಿರಕ್ತಸ್ರಾವವಾಗಬಹುದು. ಕೆಲವು ಹೆಣ್ಣುಮಕ್ಕಳು ಮದುವೆಗೂ ಮೊದಲು ಗರ್ಭಧಾರಣೆಯಾಗಿ ಸ್ವಯಂ ಗರ್ಭಪಾತ ಮಾತ್ರೆಗಳನ್ನು ತೆಗೆದುಕೊಂಡು ಅರ್ಧಂಬರ್ಧ ಗರ್ಭಪಾತವಾಗಿ ಬಹಳಷ್ಟು ದಿನ ರಕ್ತಸ್ರಾವವಾಗಬಹುದಾದ ಸಾಧ್ಯತೆಯನ್ನೂ ಅಲ್ಲಗಳೆಯಲಾಗುವುದಿಲ್ಲ. ಆದ್ದರಿಂದ ರೋಗಿಯ ಮನವೊಲಿಸಿ ಇವೆಲ್ಲವುಗಳ ಸೂಕ್ತವಾದ ಚರಿತ್ರೆ ತೆಗೆದುಕೊಂಡು ಸೂಕ್ತ ದೈಹಿಕ ತಪಾಸಣೆ ನಡೆಸಿ ಅಗತ್ಯ ಲ್ಯಾಬ್ ಪರೀಕ್ಷೆಗಳನ್ನು ನಡೆಸಿ, ಅತಿ ರಕ್ತಸ್ರಾವಕ್ಕೆ ಕಾರಣಗಳನ್ನು ಕಂಡುಹಿಡಿಯಬೇಕು.

ಅನಂತರ ರೋಗಿ ಹಾಗೂ ತಂದೆ-ತಾಯಿಯರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ನಿರ್ದಿಷ್ಟ ಕಾರಣ ಹಾಗೂ ಚಿಕಿತ್ಸೆಯ ಬಗ್ಗೆ ಮನದಟ್ಟು ಮಾಡಿಸಬೇಕು. ಎಷ್ಟು ರಕ್ತಹೀನತೆ ಉಂಟಾಗಿದೆ? ದುಗ್ಧ ರಸಗ್ರಂಥಿಗಳು ದೊಡ್ಡದಾಗಿದೆಯೆ? ವಸಡಿನಲ್ಲಿ ಸ್ರಾವವಿದೆಯೆ? ನಾಡಿ ಹಾಗೂ ರಕ್ತದೊತ್ತಡ ಪರೀಕ್ಷೆ, ಯಕೃತ್ ಹಾಗೂ ಗುಲ್ಮ ದೊಡ್ಡದಾಗಿದೆಯೇ? ಮೈ ಮೇಲೆ ಅನವಶ್ಯಕ ರೋಮಗಳಿವೆಯೆ? ಚರ್ಮದ ಮೇಲೆ ಕೆಂಪು ಗುಳ್ಳೆಗಳಿವೆಯೆ? – ಎಂದು ತಪಾಸಣೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT