ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿಹರೆಯದೊಂದಿಗೆ ಸಾಗೀತೆ ಹದಹರೆಯದ ದೋಣಿಗಳು!

Last Updated 30 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಊರಿಗೆ ಹೋಗಿದ್ದಾಗ ನಾನೂ, ತಂಗಿ ಲೋಕಾಭಿರಾಮ ನಡೆಸುತ್ತಿದ್ದೆವು. ಮಕ್ಕಳು, ಅವರ ಅಭಿರುಚಿಗಳು, ಓದು ಹೀಗೆ ಮಾತಾಡುತ್ತಿದ್ದಾಗ ತಂಗಿ ಸ್ವಲ್ಪ ಹೆಚ್ಚೇ ಎನ್ನಿಸುವಷ್ಟು ಮಗಳ ಬಗ್ಗೆ ಚಿಂತಿತಳಾಗಿದ್ದಂತೆ ಕಂಡಿತು. ವಿಚಾರಿಸಿದಾಗ ಅವಳ ಗಾಬರಿಯಿದ್ದಿದ್ದು ಹದಿಹರೆಯ ಈಗಷ್ಟೇ ಮುಟ್ಟಿದ ಮಗಳು ಮಾಡಿಕೊಳ್ಳುವ ಸಣ್ಣಪುಟ್ಟ ಅಲಂಕಾರದ ಕುರಿತು. ಮಗಳ  ಸ್ನೇಹಿತೆಯರು ಮತ್ತವರ ಮಾತುಕತೆ, ಅವರ ಹೇರ್‌ಸ್ಟೈಲ್ ಅವರೊಂದಿಗೇ ಓದುತ್ತಿರುವ ಮಗಳ ಬದಲಾಗುತ್ತಿರುವ ಅಭಿರುಚಿಗಳು – ಎಲ್ಲವೂ ಅವಳನ್ನು ಸ್ವಲ್ಪ ಚಿಂತೆಗೆ ದೂಡಿತ್ತು.

‘ನನ್ನ ಕೇಳದೇ, ಫ್ರಿಂಜಸ್ ಅಂತೆ, ಮಣ್ಣು, ಹಣೆ ಮೇಲಿನ ಕೂದಲನ್ನು ಕಟ್ ಮಾಡ್ಕೊಂಡಿದಾಳೆ, ಮಾಡ್ಕೊಬಾರದು ಅಂತಲ್ಲ, ಆದ್ರೆ ಇದೆಲ್ಲಾ ಈಗಲೇ ಒಂಭತ್ತನೇ ಕ್ಲಾಸಿಗೇ ಬೇಕಾ, ಇದೆಲ್ಲ ಶುರು ಆದ್ರೆ ಓದಿನ ಕಡೆ ಗಮನ ಕಡಿಮೆ ಆಗುತ್ತೆ’. ಆತಂಕದಿಂದ ಹೇಳಿದ ರೀತಿಗೇ ಪಾಪವೆನ್ನಿಸಿತ್ತು. ಆ ಆತಂಕದಲ್ಲಿ, ಅಂಬಿಕಾ, ಚಂದನಾ ನನ್ನೆಲ್ಲ ಸ್ನೇಹಿತೆಯರ ಮುಖಗಳು ಜೊತೆಯಲ್ಲೇ, ನನ್ನ ಆತಂಕದ ಮುಖವೂ ತಂಗಿಯ ಮುಖದೊಂದಿಗೇ ಕಂಡಂತಾಯಿತು. ಅಮ್ಮಂದಿರ ಸಹಜ ಮತ್ತು ಕೆಲವೊಮ್ಮೆ ಅನಗತ್ಯ ಆತಂಕಕ್ಕೆ ಎಂದಾದರೂ ಪರಿಹಾರ ಸಿಕ್ಕಿದೆಯೇ?

ಸಾಯಂಕಾಲ ಶಾಲೆಯಿಂದ ಮನೆಗೆ ಬಂದ ತಂಗಿಯ ಮಗಳನ್ನು ತಬ್ಬಿ ಕೇಳಿದಾಗ ‘ನಿನ್ನ ಹತ್ತಿರವೂ ಚಾಡಿ ಹೇಳಿದಳೇ?’ ಎನ್ನುವಂತೆ ಅಸಹನೆಯೊಂದಿಗೆ ಅವಮಾನದ ಕಣ್ಣೀರು ದಬದಬನೆ ಸುರಿಯಿತು. ದೊಡ್ಡ ಹಣೆಯ ಶಾಶ್ವತಿಯ ಮುಖಕ್ಕೆ ಅವಳೇ ಮಾಡ್ಕೊಂಡಿದ್ದ ಫ್ರಿಂಜಸ್ ನಿಜಕ್ಕೂ ಚೆನ್ನಾಗಿಯೇ ಕಾಣುತ್ತಿತ್ತು. ಇನ್ನೂ ಮುದ್ದಾಗಿ ಕಾಣುತ್ತಿದ್ದಳು.

ತಂಗಿಗೆ ಕಾಣದಂತೆ ‘ಸುಪರ್ ಆಗಿ ಕಾಣ್ತಿದ್ದಿ ಮುದ್ದಮ್ಮಾ, ಆದ್ರೆ ಅಮ್ಮನ್ಹತ್ರ ಹೇಳಿನೋ ಕೇಳಿನೋ ಮಾಡ್ಬೇಕಿತ್ತಲ್ವೇ’ ಎಂದಿದ್ದಕ್ಕೇ ‘ಅವಳೆಲ್ಲಿ ಬಿಡ್ತಾಳೇ! ದೊಡ್ಡಮ್ಮ, ನನ್ ಕ್ಲಾಸಿನ ಹುಡ್ಗೀರನ್ನ ನೀನು ನೋಡ್ಬೇಕು, ಎಷ್ಟೆಲ್ಲ ಡ್ರೆಸ್, ಸ್ಟೈಲ್ ಮಾಡ್ಕೊಂಡು ಬರ್ತಾರೆ, ನಂಗೂ ಹೀಗೆ ಮಾಡ್ಕೋಬೇಕು ಅನ್ನಿಸಿತು’ –  ದುಃಖದಿಂದ ಹೇಳಿದ ರೀತಿಗೆ ಪೆಚ್ಚೆನಿಸಿತ್ತು. ಮಗಳದ್ದೂ, ಅಮ್ಮಂದೂ ಇಬ್ಬರದ್ದೂ ಒಂದೇ ಕಂಪ್ಲೇಂಟ್ ‘ನನ್ನ ಮಾತೇ ಕೇಳಲ್ಲ, ಅರ್ಥನೇ ಮಾಡ್ಕೊಳಲ್ಲ’ ಎನ್ನುವುದು. ಯೋಚಿಸಿದಾಗ ನಿಜಕ್ಕೂ ಅಲ್ಲಿ ನಡೆಯುತ್ತಿದ್ದ ಸಂಘರ್ಷ ಹದಿಹರೆಯ ಮತ್ತು ಹದಹರೆಯದ್ದು ಅನ್ನಿಸಿತು.

ಸ್ನೇಹಿತೆ ಪದ್ಮಳ ಮಗನದ್ದು ಇನ್ನೊಂದು ಸಮಸ್ಯೆ, ಭುಜದಿಂದ ಆರಂಭವಾಗಿ ಕುತ್ತಿಗೆಯವರೆಗೂ ಚಾಚಿದ ಟ್ಯಾಟೂ ಮತ್ತು ನೀಳ ಕೂದಲು. ಅವನ ಕೂದಲು ನೋಡಿದರೆ ನನಗೂ ಹೊಟ್ಟೆಯುರಿಯುತ್ತಿತ್ತು, ಅಷ್ಟು ಸೊಂಪಾಗಿ ಬೆಳೆದ ಪೋನಿಟೈಲ್. ಒಮ್ಮೊಮ್ಮೆ ತೀರಾ ಸಿಟ್ಟು ಬಂದ ದಿನಾ ನಮ್ಮ ಮನೆಗೆ ಪದ್ಮಳ ಸವಾರಿ ಬಂದು ‘ನೆಂಟರೆಲ್ಲ ಬಂದಾಗ ಎಷ್ಟು ಅವಮಾನವಾಗುತ್ತೆ ಗೊತ್ತಾ, ಒಂದು ಸ್ವಲ್ಪ ಕಟ್ ಮಾಡ್ಕೊಳ್ಳೊ ಅಂದ್ರೂ ಕೇಳಲ್ಲ, ನಾವೆಲ್ಲ ಅಪ್ಪಮ್ಮನಿಗೆ ಎಷ್ಟು ಹೆದರಿಕೊಂಡು ಇರ್ತಿದ್ವಿ ಅಲ್ವಾ – ಎನ್ನುವಾಗ ‘ಸ್ವಲ್ಪ ದಿನ ಪದ್ಮ, ಓದು ಮುಗ್ಸಿ ಕೆಲಸಕ್ಕೇ ಸೇರಿದರೆ ಎಲ್ಲ ಸರಿ ಹೋಗ್ತಾನೆ, ಈಗ ಹುಡುಗಾಟ ಅಲ್ವಾ’ ಎಂದು ಸಮಾಧಾನ ಮಾಡೊದೊಂದೇ ನಂಗಿದ್ದ ದಾರಿ. ಈ ಎರಡೂ ಸನ್ನಿವೇಶಗಳು ಪ್ರತಿಯೊಂದು ಮನೆಯ ದೃಶ್ಯಗಳೇ ಅಲ್ಲವೆ? ಇಂಥ ಪ್ರಸಂಗಗಳು ಜನರೇಶನ್ ಗ್ಯಾಪಿನ ಫಲವೆ?

ಪ್ರಪಂಚವೇ ಸುಂದರವಾಗಿ ಕಾಣುವ ಹೊತ್ತು ಹದಿಹರೆಯ. ನಾವೂ ಪ್ರಪಂಚಕ್ಕೆ ಸುಂದರವಾಗಿ ಕಾಣಬೇಕೆನ್ನುವ ತುಡಿತದ ಹೊತ್ತೂ ಹೌದಲ್ಲವೇ! ಹೆಣ್ಣುಮಕ್ಕಳ ಕತೆ ಒಂದು ರೀತಿಯಾದರೆ ಗಂಡುಮಕ್ಕಳದ್ದೂ ಹೆಣ್ಣುಮಕ್ಕಳಿಗೆ ಕಡಿಮೆ ಇಲ್ಲದಂಥ ಕತೆಗಳು. ಮಕ್ಕಳು ಹದಿಹರೆಯ, ಅದೂ ಹದಿನಾರು ಹದಿನೇಳರ ಏರು ಹದಿಹರೆಯದ ಹಂತದಲ್ಲಿ ಸಾಮಾನ್ಯವಾಗಿ ಅಪ್ಪ ಅಮ್ಮಂದಿರೂ ಅವರ ನಲ್ವತ್ತರ ಆಸುಪಾಸಿನ ಹದವಾದ ಹರೆಯವನ್ನು ಮುಟ್ಟುತ್ತಾರೆ.

ಮಹಿಳೆಯರಿಗಂತೂ ಈ ನಲ್ವತ್ತರ ‘ಹದಹರೆಯ’ ಆತ್ಮವಿಶ್ವಾಸವನ್ನೂ, ಅದುವರೆಗೂ ಇಲ್ಲದ ಮಾನಸಿಕ ಗಟ್ಟಿತನವನ್ನೂ ತಂದುಕೊಟ್ಟರೂ, ದೈಹಿಕವಾಗಿ ಆಕೆ ಮೆನೋಪಾಸ್ ಎದುರಿಸುವ ಹಂತದಲ್ಲಿರುತ್ತಾಳೆ. ಒಂದಷ್ಟು ಹಾರ್ಮೋನುಗಳ ಏರುಪೇರಿನಿಂದಾಗಿ ದೈಹಿಕ ಬಳಲಿಕೆಯನ್ನು ಅದರಿಂದಾಗುವ ಮಾನಸಿಕ ಬಳಲಿಕೆಗೂ ಈಗಿನ ಮಹಿಳೆಯರು ಓದಿ, ತಿಳಿದು ಸಿದ್ಧವಾದರೂ ಒಮ್ಮೊಮ್ಮೆ ಕೈಮೀರುವ ನಡೆಗಳೂ ಆಗುವುದುಂಟು.

ಇದೇ ಹೊತ್ತಿನಲ್ಲಿ ಮಕ್ಕಳು ಹದಿಹರೆಯದ ತುಂಬು ಉತ್ಸಾಹದಲ್ಲಿ ಬದುಕನ್ನೂ ಇನ್ನಿಲ್ಲದಂತೆ ಆನಂದಿಸುವ, ಮತ್ತು ಒಂದೂ ಅವಕಾಶವನ್ನು ಬಿಡದೆ ಸಂತೋಷಿಸುವ ಜೋಶ್‌ನಲ್ಲಿರುತ್ತಾರೆ. ಒಂದು ಏರುವ ಯೌವನವಾದರೆ ಇನ್ನೊಂದು ಜಾರುವ ಯೌವನ. ಈ ಏರು ಜಾರುಗಳ ನಡುವೆ ಒಂದಷ್ಟು ಜಟಾಪಟಿಗಳು ಸಾಮಾನ್ಯವಲ್ಲವೇ? ಈ ಸಾಮಾನ್ಯವೆನಿಸುವ ಜಟಾಪಟಿಗಳಿಂದ ಮುಕ್ತರಾಗುವ ಬಗೆಯನ್ನೂ ನಾವು ಯೋಚಿಸಲೇಬೇಕು. 

ಬಟ್ಟೆಬರೆಗಳನ್ನೂ ಯಾವತ್ತೂ ನೀಟಾಗಿ ಜೋಡಿಸದೇ ಇಡೀ ರೂಮನ್ನು ಕೊಳಕಾಗಿ ಇಟ್ಟುಕೊಳ್ಳುವ ಜಯಂತನಿಗೂ ಅವನಪ್ಪನಿಗೂ ನಿರಂತರ ಯುದ್ಧ. ಹಾವು–ಮುಂಗುಸಿಯಂತೇ ಕಿತ್ತಾಡುವ ಅಪ್ಪ, ಮಗನ ನಡುವೆ ಚಂದನಾ ಮೂಕಪ್ರೇಕ್ಷಕಿ. ರಾತ್ರಿ ಆಫೀಸಿನಿಂದ ಗಂಡ ಬರುತ್ತಿದ್ದಂತೆಯೇ, ‘ನಿನ್ನ ಗಂಡ ಬಂದ, ಬಾಗಿಲು ತೆಗಿ’ ಎನ್ನುತ್ತಾ ರೂಮು ಸೇರುವ ಮಗನ ಮಾತು ಎಲ್ಲಿ ಗಂಡನಿಗೆ ಕೇಳಿ ಮತ್ತೆ ಬೆಳಿಗ್ಗೆ ನಿಂತಿದ್ದ ಜಗಳ ಮುಂದುವರೆಯುತ್ತದೋ ಎನ್ನುವ ಕಾಳಜಿಯಿಂದ ‘ಶ್ಶ್.....ಶ್ ಮೆತ್ತಗೆ ಮಾತಾಡೋ’ ಎಂದೆನ್ನುವಾಗ ಮನದ ತುಂಬ ಸಂಕಟ.

‘ಯಾಕೀ ಮಕ್ಕಳು ಇಷ್ಟು ಒರಟಾಗಿ ಬಿಹೇವ್ ಮಾಡ್ತಾರಪ್ಪ? ಯಾವಾಗ ಇದೆಲ್ಲ ನಿಲ್ಲುತ್ತೋ!’ ಎನ್ನುವ ಯೋಚನೆ. ಗಂಡ ಒಳ ಬಂದೊಡನೇ ಹೇಳುವ ಮಾತು: ‘ಏನಂತೆ ನಿನ್ ಮಗಂದು ಹೊಸ ರಾಮಾಯಣ?’  ‘ಇಲ್ಲಿರುವುದು ನನ್ನ ಗಂಡ ಮತ್ತು ನನ್ನ ಮಗ! ಇಬ್ಬರೂ ಒಂದು ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಂಡ್ರೆ, ಸ್ವಲ್ಪ ಅರ್ಥ ಮಾಡ್ಕೊಂಡ್ರೆ ಈ ರೀತಿಯ ವ್ಯಂಗ್ಯಗಳು ಬೇಕೆ?’ ಎನ್ನುವ ಸಂಕಟ ಯಾವಾಗಲೂ ಚಂದನಾಳಿಗೆ ಕಾಡುತ್ತಿರುತ್ತದೆ.

ಮಗನನ್ನು ಹತ್ತಿರ ಕೂರಿಸಿ ಒಂದೆರಡು ಮಾತುಗಳನ್ನು ಆಡಿದರೆ ಪ್ರಾಯಶಃ ಎಷ್ಟೋ ಸಮಸ್ಯೆಗಳು ಹಗುರವಾಗುತ್ತಿದ್ದವು. ಹಾಗೆಂದು ಚಂದನಾ ಹೇಳಿದಾಗಲೆಲ್ಲ ಅವಳ ಗಂಡ ‘ಅವನ ಕೊಬ್ಬು ಇಳೀಬೇಕು, ಕೂತ ಕಡೆಗೆ ಎಲ್ಲ ವ್ಯವಸ್ಥೆಗಳು ಪುಕ್ಸಟ್ಟೆ ಬರುತ್ತಿದೆ ನೋಡು, ಅದನ್ನು ನಿಲ್ಲಿಸಬೇಕು’ ಎನ್ನುವ ಕೂಗಾಟದ ವರಸೆಗೇ ಮತ್ತೆ ಮಗನಿಗೆ ಕೋಪ.

ಹೀಗೆ ನಿರಂತರವಾಗಿ ಮನೆಗಳಲ್ಲಿ ಕಾಣಿಸಿಕೊಳ್ಳುವ ಇಂಥ ಕೋಪತಾಪಗಳ ಫಲವಾಗಿ ಮಕ್ಕಳ ಕೈಯನ್ನು ಸದಾ ಮೊಬೈಲ್ ಆಕ್ರಮಿಸಿಕೊಂಡಿರುವಂತೆ ಮಾಡಿರಬಹುದೆ? ಅದು ಅವರಿಗೆ ಬೇರೆ ಯಾರದ್ದೂ ಅಗತ್ಯವಿಲ್ಲದಂತೆ ಮಾಡಿದೆ. ಹೀಗಿರುವಾಗ ಹೆತ್ತವರು ತಾವೇ ಮುಂದೆ ಹೋಗಿ ಮಕ್ಕಳ ವಿಶ್ವಾಸ ಗೆಲ್ಲುವುದು ಅಗತ್ಯವಾಗಿದೆಯಲ್ಲವೇ!? ಮಾತುಮಾತಿಗೂ ‘ನಮ್ಮ ಕಾಲದಲ್ಲಿ ಹಾಗಿತ್ತು, ಹೀಗಿತ್ತು’ ಎಂದೆನ್ನುತ್ತಾ ಮಕ್ಕಳಿಗೆ ಸಿಗುತ್ತಿರುವ ಸೌಲಭ್ಯವನ್ನು ಟೀಕಿಸಬೇಕಿಲ್ಲ. ಮಕ್ಕಳಿಗೆ ಕೊಡುತ್ತಿರುವ ಅನೇಕ ಅನಗತ್ಯ ಸೌಲಭ್ಯಗಳು ಹೆತ್ತವರು ಅವರ ಪ್ರತಿಷ್ಠೆಗಾಗಿಯೇ ಮಾಡುತ್ತಿರುವುದು. ಹೀಗಾಗಿ ಮಕ್ಕಳನ್ನು ಜರಿಯುವ ಮುನ್ನ ಯೋಚಿಸಬೇಕಿದೆ.

ಹದಹರೆಯದ ಹೆತ್ತವರು ಮಕ್ಕಳನ್ನು ಸ್ವಲ್ಪ ಪ್ರೀತಿಯಿಂದ ಮಾತಾಡಿಸುವ ಅಭ್ಯಾಸ ಮಾಡಿದರೆ, ಆರಂಭದಿಂದಲೇ ಮಕ್ಕಳೊಂದಿಗಿನ ಮಾತಿನ ಸಂವಹನ ಗಟ್ಟಿಯಾಗಿದ್ದರೆ ಮಕ್ಕಳೂ ಹೆತ್ತವರನ್ನು ಸ್ನೇಹಿತರಂತೆಯೇ ನಂಬುತ್ತಾರೆ. ಹೆತ್ತವರು ಕೂಡ ಆ ಹಂತವನ್ನು ದಾಟಿಯೇ ಬಂದವರಾಗಿರುವುದರಿಂದ ಮಕ್ಕಳ ಆತುರವನ್ನು ಅರ್ಥೈಸಿಕೊಳ್ಳಬೇಕು.

ಕಾಲಕ್ಕೆ ತಕ್ಕ ಸಣ್ಣಪುಟ್ಟ ಅಲಂಕಾರಗಳು, ಟ್ಯಾಟೂ ಮುಂತಾದವುಗಳನ್ನು ಹೆತ್ತವರು ಪ್ರೀತಿಯಿಂದಲೇ ಸ್ವಾಗತಿಸಿದರೆ, ಅಥವಾ ಅದರಿಂದೇನಾದರು ತೊಂದರೆಗಳಿದ್ದರೆ ಅವುಗಳ ಬಗ್ಗೆ ಮನವರಿಕೆ ಮಾಡಿದರೆ, ಮಕ್ಕಳಿಗೂ ನಮ್ಮ ಸ್ವಾತಂತ್ರಕ್ಕೆ ಹೆತ್ತವರು ಅಡ್ಡಿ ಬರುತ್ತಿಲ್ಲವೆಂದು ವಿಶ್ವಾಸ ಒಮ್ಮೆ ಮೂಡಿದರೆ, ಮುಂದೆ ಅಂಥವುಗಳನ್ನು ಮಾಡಿಕೊಳ್ಳುವ ಮೊದಲು ಹೆತ್ತವರಿಗೆ ತಿಳಿಸುತ್ತಾರೆ. ತಂದೆತಾಯಿ ಮುಖ್ಯವಾಗಿ ಮಕ್ಕಳನ್ನು ನಂಬಬೇಕು. ಹಾಗೇ ಅವರ ಚಟುವಟಿಕೆಗಳನ್ನು ಅವರಿಗೆ ತಿಳಿಯದಂತೆ ಗಮನಿಸುತ್ತಿರಬೇಕು. ಮಕ್ಕಳು ತಪ್ಪು ಮಾಡಿದರೆ ಪ್ರೀತಿಯಿಂದ ಅವರಿಗೆ ತಿಳಿ ಹೇಳಬೇಕು. ಹದಿಹರೆಯದ ಮಕ್ಕಳನ್ನು ಸ್ನೇಹಿತರಂತೆ ನೋಡಬೇಕು.

ಹದಿಹರೆಯದಲ್ಲಿ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯಗಳು ಆಕಾಶವನ್ನೇ  ಮುಟ್ಟಬಲ್ಲಂಥವು. ಹೀಗಾಗಿ ಅವುಗಳನ್ನು ಸದುಪಯೋಗ ಮಾಡಿಕೊಳ್ಳಬಲ್ಲಂಥ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಹದಿಹರೆಯದ ಮಕ್ಕಳನ್ನು ತೊಡಗಿಸುವುದರ ಕಡೆಗೆ ಹೆತ್ತವರು ಗಮನವನ್ನು ನೀಡಬೇಕು. ಇದರೊಂದಿಗೆ ಪೂರಕವಾಗಿ ಹೆತ್ತವರ ಪ್ರೀತಿಭರಿತ, ತಕ್ಕ ಮಟ್ಟಿಗೆ ಸ್ವಾತಂತ್ರವನ್ನು ನೀಡುವ ಸ್ನೇಹವೂ ಸಿಕ್ಕರೆ ’ಹದಿಹರೆಯ’ ಅಷ್ಟು ಸಮಸ್ಯೆಯಾಗದು.

ಮತ್ತೆ ಹರೆಯ ಬಾರದಿದ್ದರೂ ಮತ್ತೊಮ್ಮೆ ಕಣ್ಣ ಮುಂದಿರುವ ಪ್ರಪಂಚವನ್ನು ಹೊಸದಾಗಿ ನೋಡಲೂ ಇಂತಹ ಬಂಧ ಮಕ್ಕಳ ಸ್ನೇಹದಿಂದ ಹೆತ್ತವರಿಗೂ ಸಹಕಾರಿಯಾಗುತ್ತದೆ. ‘ಹೆತ್ತವರು ಹೇಳುತ್ತಿರುವುದು ನಮ್ಮ ಒಳ್ಳೆಯ ಭವಿಷ್ಯಕ್ಕೇ ಹೊರತು ಅವರೇನು ವೈರಿಗಳಲ್ಲ’ ಮಕ್ಕಳು ಎಂದು ತಿಳಿದುಕೊಂಡರೆ ಹೊಸ ಸ್ನೇಹವನ್ನು ಹಂಬಲಿಸಿ ಮನೆಯಿಂದ ಹೊರಗೇ ಹುಡುಕಬೇಕೆಂದಿಲ್ಲ. ಅಪ್ಪ, ಅಮ್ಮ ಕೂಡ ಉತ್ತಮ ಸ್ನೇಹಿತರಾಗಬಲ್ಲರು.

ಹೀಗೆಯೇ ‘ಈಗಿನ ಮಕ್ಕಳು ತುಂಬ ಫಾಸ್ಟ್’ ಎಂದು ದೂಷಿಸುವ ಬದಲು ಅವರನ್ನೂ ಅವರ ಜನರೇಷನ್ನಿನ ಧಾವಂತವನ್ನೂ ಸ್ವಲ್ಪ ಅರ್ಥ ಮಾಡಿಕೊಂಡರೆ ಮಕ್ಕಳೂ ಹೆತ್ತವರಿಗೆ ಸ್ನೇಹಿತರಾದಾರು. ನೂರು ಸೆಳೆತಗಳ ನಡುವೆ ಮಕ್ಕಳು ಹರೆಯ ದಾಟುವ ಹೊತ್ತಿನಲ್ಲಿ ಹೆತ್ತವರೇ ಸ್ವಲ್ಪ ಹೆಚ್ಚು ಸಮಾಧಾನ, ತಾಳ್ಮೆಯಿಂದ ನಡೆದುಕೊಂಡರೆ ಒಳಿತೇನೋ! ಹೆತ್ತವರು ಎಂದರೆ ಹೆದರಿ ಕೂರುತ್ತಿದ್ದ ದಿನಗಳು ಈಗಿಲ್ಲ, ಈಗೇನಿದ್ದರೂ ಅಪ್ಪ, ಅಮ್ಮ ಸ್ನೇಹಿತರಾಗಬೇಕಾದ ಹೊತ್ತು. ಹದಿಹರೆಯದ ಮತ್ತು ಹದಹರೆಯದ ದೋಣಿಗಳೆರಡೂ ಜೊತೆಯಲ್ಲಿ ಸಾಗಿದರೆ ಸಂಸಾರಕ್ಕೂ ಸಮಾಜಕ್ಕೂ ಒಳಿತಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT