ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಜ್ಞರ ಅಭಿಪ್ರಾಯ

ಉನ್ನತ ಶಿಕ್ಷಣದಲ್ಲಿ ಕನ್ನಡ: ಸಾಧ್ಯತೆ ಮತ್ತು ಸವಾಲು
Last Updated 30 ಡಿಸೆಂಬರ್ 2016, 20:01 IST
ಅಕ್ಷರ ಗಾತ್ರ

ಅವಕಾಶ ಬೇಕು
‘ನೀಟ್‌’ ಮತ್ತು ಸಿಇಟಿ ಪರೀಕ್ಷೆಗಳಿಗೆ ಅಣಿಯಾಗಲು ಕನ್ನಡದಲ್ಲೇ ತರಬೇತಿ ನೀಡಲು ಕಷ್ಟ ಆಗುತ್ತದೆ ಎಂಬುದರಲ್ಲಿ ಸತ್ಯವಿಲ್ಲ. ನುರಿತ ತಜ್ಞರು ಮತ್ತು ವಿಜ್ಞಾನಿಗಳ ನೆರವಿನಿಂದ ಪಠ್ಯಗಳನ್ನು ರೂಪಿಸಬೇಕು. ಗಮನದಲ್ಲಿ ಇಟ್ಟುಕೊಳ್ಳಬೇಕಾದ ಸಂಗತಿ ಎಂದರೆ, ಪಠ್ಯದಲ್ಲಿ ಎಲ್ಲವನ್ನೂ ಕನ್ನಡೀಕರಿಸಬೇಕಿಲ್ಲ. ಉದಾಹರಣೆಗೆ ಸ್ವಿಚ್‌ ಅನ್ನು ಸ್ವಿಚ್‌ ಎಂದೇ ಬಳಸಬೇಕು. ಅದನ್ನು ಬಿಟ್ಟು, ವಿದ್ಯುತ್‌ ಆಗಮನ ಪಟ್ಟಿ ಎಂದು ಬಳಸಿದರೆ ಆಭಾಸವಾಗುತ್ತದೆ. ಹೈಡ್ರೋಜನ್‌, ಆಕ್ಸಿಜನ್‌ ಇತ್ಯಾದಿ ಪದಗಳನ್ನು ಹಾಗೇ ಬಳಸೋಣ. ಭಾಷಾ ಶುದ್ಧತೆಯ ಮಡಿವಂತಿಕೆ ಬೇಡ.
ರಷ್ಯಾದಲ್ಲಿ ರಷ್ಯನ್‌ ಭಾಷೆಯಲ್ಲಿ ಕಲಿಸುತ್ತಾರೆ. ಸಾಕಷ್ಟು ಇಂಗ್ಲಿಷ್‌ ಪದಗಳು ಅವರ ಭಾಷೆಯಲ್ಲಿ ಸೇರಿ ಹೋಗಿವೆ. ಹಿಂದಿ, ಬಂಗಾಳಿ, ತಮಿಳು, ಮಲಯಾಳಂ, ಗುಜರಾತಿ ಭಾಷೆಗಳಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಾಧ್ಯವಾದರೆ ನಮ್ಮ ಮಕ್ಕಳಿಗೆ ಏಕೆ ಸಾಧ್ಯವಾಗದು?
ಡಾ. ಯು.ಆರ್‌.ರಾವ್‌
ಬಾಹ್ಯಾಕಾಶ ವಿಜ್ಞಾನಿ

ನೆರವು ಪಡೆಯಿರಿ
ವಿಜ್ಞಾನ ಮತ್ತು ಗಣಿತವನ್ನು ಕನ್ನಡ ಮಾಧ್ಯಮದಲ್ಲಿ ಓದಿಯೂ ಪರಿಣಾಮಕಾರಿಯಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದು. ಒಮ್ಮೆ ಅವಕಾಶ ನೀಡಿದರೆ ಸಾಕು, ಕನ್ನಡದಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ವ್ಯವಸ್ಥೆ ತನ್ನಿಂತಾನೇ ಸೃಷ್ಟಿ ಆಗುತ್ತದೆ. ಸ್ಟಡಿ ಮೆಟೀರಿಯಲ್, ಗೈಡ್, ಕೋಚಿಂಗ್ ಸೆಂಟರ್‌ಗಳೂ ಶುರುವಾಗುತ್ತವೆ. ಇವಕ್ಕೆ ಅಗತ್ಯವಿರುವ ವಿಷಯ ಕನ್ನಡದಲ್ಲೇ ತಯಾರಾಗುತ್ತದೆ. ಸಾಕಷ್ಟು ತಜ್ಞರು ಇದರಲ್ಲಿ ತೊಡಗಿಕೊಳ್ಳುತ್ತಾರೆ. ಎರಡು- ಮೂರು ವರ್ಷಗಳಲ್ಲಿ ಪೂರಕ ವ್ಯವಸ್ಥೆ ರೂಪುಗೊಳ್ಳುತ್ತದೆ. ಪ್ರೋತ್ಸಾಹ ನೀಡುವ ಕೆಲಸ ಸರ್ಕಾರದಿಂದ ಆಗಬೇಕಷ್ಟೆ.
ಭೌತ ವಿಜ್ಞಾನವಾಗಲಿ, ರಸಾಯನ ವಿಜ್ಞಾನವಾಗಲಿ, ಎಂಜಿನಿಯರಿಂಗ್ ಆಗಲಿ ಕನ್ನಡದಲ್ಲಿ ಬೋಧಿಸುವುದು ಕಷ್ಟವಲ್ಲ. ನಾನು 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆದಿದ್ದೆ. ಕನ್ನಡ ಮಾಧ್ಯಮದಲ್ಲಿ ಓದಿ ಪ್ರಸಿದ್ಧರಾಗಿರುವ ಬಹಳಷ್ಟು ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳು ನಮ್ಮಲ್ಲಿದ್ದಾರೆ. ಸರ್ಕಾರ ಇವರ ನೆರವು ಪಡೆಯಬೇಕು. ಬ್ರಿಟಿಷರು ಬಿತ್ತಿ ಹೋಗಿರುವ ಇಂಗ್ಲಿಷ್ ಮೇಲರಿಮೆ ಮನಸ್ಥಿತಿಯಿಂದ ಹೊರಬರಬೇಕು.
ಡಾ. ಬಿ.ಎನ್.ಸುರೇಶ್,
ಅಧ್ಯಕ್ಷ, ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಎಂಜಿನಿಯರಿಂಗ್

ಸಮಾನ ಸ್ಪರ್ಧೆ 
ಸಿಇಟಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡುವ ರಾಜ್ಯ ಸರ್ಕಾರದ ನಿರ್ಧಾರದಿಂದ  ಸಮಾನ ಸ್ಪರ್ಧೆ, ಸಮಾನ ಅವಕಾಶ ಮಾಡಿಕೊಟ್ಟಂತಾಗುತ್ತದೆ. ವಿಜ್ಞಾನದ ವಿಷಯವಾಗಲಿ, ತಾಂತ್ರಿಕ ವಿಷಯವೇ ಆಗಲಿ ವಿದ್ಯಾರ್ಥಿಗಳು ತಮ್ಮದೇ ಭಾಷೆಯಲ್ಲಿ ಚೆನ್ನಾಗಿ ಅರ್ಥ ಮಾಡಿಕೊಂಡು ಸ್ಪಷ್ಟವಾಗಿ ಬರೆಯಬಲ್ಲರು. ಇಲ್ಲಿಯ ತನಕ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂಗ್ಲಿಷ್‌ ಪ್ರಶ್ನೆ ಅರ್ಥ ಮಾಡಿಕೊಂಡು ಕಷ್ಟಪಟ್ಟು ಬರೆಯಬೇಕಾಗುತ್ತಿತ್ತು. ಇನ್ನು ಆ ಸಮಸ್ಯೆ ಇರದು.
ಡಾ. ಪಂಡಿತಾರಾಧ್ಯ
ನಿವೃತ್ತ ಕನ್ನಡ ಪ್ರಾಧ್ಯಾಪಕ

ಕನ್ನಡದ ಮಕ್ಕಳ ಹಕ್ಕು
ಎಷ್ಟು ಮಕ್ಕಳು ಇಂಗ್ಲಿಷ್ ಭಾಷೆಯಲ್ಲಿ ಓದಿದ್ದಾರೆ ಎನ್ನುವುದಕ್ಕಿಂತ, ಎಷ್ಟು ಜನ ಕನ್ನಡ ಮಾಧ್ಯಮದಿಂದ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿ ವಿಜ್ಞಾನ ಅಭ್ಯಾಸ ಮಾಡಿದ್ದಾರೆ ಎಂಬುದು ಯೋಚಿಸಬೇಕಾದ ವಿಷಯ. ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶ ಕನ್ನಡ ಮಕ್ಕಳ  ಹಕ್ಕು. ಅದು ಯಾರೋ ದಯಪಾಲಿಸುವಂತಹದ್ದಲ್ಲ. ವಿಜ್ಞಾನ, ಗಣಿತದ ಕನ್ನಡ ಪಠ್ಯ ಪಿಯುಸಿವರೆಗೆ ಚೆನ್ನಾಗಿಯೇ ಇವೆ. ನೀಟ್‌ ಅಥವಾ ಸಿಇಟಿ ಬರೆಯಲು ತೊಡಕಾಗದು. ಪದವಿ ಪುಸ್ತಕ ತರ್ಜುಮೆ ಕಷ್ಟವಾಗಬಹುದು, ಅಸಾಧ್ಯವೇನಲ್ಲ.
ಡಾ. ವೈ.ಸಿ.ಕಮಲಾ,
ಭೌತಶಾಸ್ತ್ರ ಪ್ರಾಧ್ಯಾಪಕಿ

ಅಭಿಪ್ರಾಯ ಸಂಗ್ರಹ: ಎಸ್‌.ರವಿಪ್ರಕಾಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT