ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನದ ಭಾಷೆಗೆ ಬೇಕಿರುವುದು ಪಾರಿಭಾಷಿಕಗಳಲ್ಲ

ಉನ್ನತ ಶಿಕ್ಷಣದಲ್ಲಿ ಕನ್ನಡ: ಸಾಧ್ಯತೆ ಮತ್ತು ಸವಾಲು
Last Updated 30 ಡಿಸೆಂಬರ್ 2016, 20:03 IST
ಅಕ್ಷರ ಗಾತ್ರ

ಕನ್ನಡ ಜ್ಞಾನದ ಭಾಷೆಯಾಗಬೇಕು ಎಂಬುದು ಒಂದು ಆದರ್ಶ. ಈ ಕುರಿತು ಕನಿಷ್ಠ ಆರೂವರೆ ದಶಕಗಳಿಂದ ನಾವು ಬೇರೆ ಬೇರೆ ಬಗೆಯಲ್ಲಿ ಚರ್ಚಿಸುತ್ತಲೇ ಇದ್ದೇವೆ ಹೊರತು ಕನ್ನಡವನ್ನು ಜ್ಞಾನದ ಭಾಷೆಯಾಗಿಸುವ ನಿಟ್ಟಿನಲ್ಲಿ ಹೆಜ್ಜೆಗಳನ್ನಿಡುತ್ತಿಲ್ಲ. ಹೀಗೆ ಹೇಳಿದಾಕ್ಷಣ ಹುಟ್ಟಿಕೊಳ್ಳುವ ಪ್ರಶ್ನೆಯೊಂದಿದೆ: ಮೈಸೂರು ವಿಶ್ವವಿದ್ಯಾಲಯದಿಂದ ತೊಡಗಿ ಕನ್ನಡ ವಿಶ್ವವಿದ್ಯಾಲಯದ ತನಕದ ಎಲ್ಲಾ ವಿಶ್ವವಿದ್ಯಾಲಯಗಳು ಈ ತನಕ ನಡೆಸಿರುವ ಪ್ರಯತ್ನಗಳೆಲ್ಲಾ ಏನು?

ಈ ಪ್ರಯತ್ನಗಳು ಇಂಗ್ಲಿಷ್ ಮತ್ತು ಸಂಸ್ಕೃತದಂಥ ಭಾಷೆಗಳಲ್ಲಿದ್ದ ಜ್ಞಾನವನ್ನು ಕನ್ನಡಕ್ಕೆ ಅನುವಾದಿಸುವ ಕ್ರಿಯೆಯಷ್ಟೇ ಆಗಿದ್ದವು. ಹಾಗಿದ್ದರೆ ಇದೊಂದು ವ್ಯರ್ಥ ದೊಂಬರಾಟವಾಗಿತ್ತೇ ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಈ ಪ್ರಶ್ನೆಗೆ ಸರಳ ಉತ್ತರವಿಲ್ಲ. ಭಾಷೆಯೊಂದು ಜ್ಞಾನದ ಭಾಷೆಯಾಗಿ ಪರಿವರ್ತನೆಯಾಗುವ ಹಂತದಲ್ಲಿ ಈ ಬಗೆಯ ‘ಜ್ಞಾನದ ಅನುವಾದ’ಕ್ಕೂ ಒಂದು ಸ್ಥಾನವಿದೆ. ಆದರೆ ಅದಷ್ಟರಿಂದಲೇ ಭಾಷೆಯೊಂದು ಜ್ಞಾನದ ಅಭಿವ್ಯಕ್ತಿಯ ಭಾಷೆಯಾಗಿ ಮಾರ್ಪಡುವುದಿಲ್ಲ ಎಂಬುದು ವಾಸ್ತವ.

ಉನ್ನತ ಶಿಕ್ಷಣದಲ್ಲಿ ಅದರಲ್ಲೂ ವಿಶೇಷವಾಗಿ ವಿಜ್ಞಾನ ವಿಷಯಗಳ ಉನ್ನತ ಅಧ್ಯಯನದಲ್ಲಿ ಕನ್ನಡ ಇಲ್ಲವಾಗಿರುವುದನ್ನು ಕೇವಲ ಭಾಷೆಯ ಪ್ರಶ್ನೆಯನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೊಂದು ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮವಿದೆ. ನಮ್ಮ ಜ್ಞಾನಕ್ಕೆ ಸಂಬಂಧಿಸಿದ ಪರಿಕಲ್ಪನೆಗಳು ಬಹುಮುಖ್ಯವಾಗಿ ಎರಡು ಅಂಶಗಳಿಂದ ಪ್ರೇರಿತ.

ಮೊದಲನೆಯದ್ದು; ನಮ್ಮ ಜಾತಿ ಆಧಾರಿತ ಸಾಮಾಜಿಕ ಸ್ತರೀಕರಣ, ಎರಡನೆಯದ್ದು; ವಸಾಹತುಶಾಹಿ ನಮ್ಮ ಮೇಲೆ ಹೇರಿದ ‘ಜ್ಞಾನ’ದ ಪರಿಕಲ್ಪನೆಗಳು. ಸ್ವಾತಂತ್ರ್ಯೋತ್ತರ ದಿನಗಳಲ್ಲಿ ನಮ್ಮ ಭಾಷೆಗಳನ್ನು ಜ್ಞಾನದ ಭಾಷೆಗಳನ್ನಾಗಿ ಪರಿವರ್ತಿಸುವ ಪ್ರಯತ್ನವೇನೋ ಆರಂಭವಾಯಿತು. ಆದರೆ ಜಾತೀಯತೆ ಮತ್ತು ವಸಾಹತು ಶಾಹಿಗಳೆರಡೂ ಹೇರಿದ ‘ಜ್ಞಾನ’ ಪರಿಕಲ್ಪನೆಯನ್ನು ಮಾತ್ರ ನಾವು ಬದಲಾಯಿಸಿಕೊಳ್ಳಲೇ ಇಲ್ಲ. ಈಗಲೂ ನಾವು ಭಾರತೀಯವಾದ ವಿಜ್ಞಾನ ಯಾವುದು? ಭಾರತೀಯವಾದ ಸಮಾಜ ವಿಜ್ಞಾನ ಎಂಬುದೊಂದಿದೆಯೇ ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಲೇ ಇದ್ದೇವೆ.

ಲ್ಯಾಟಿನ್‌ ಇಡೀ ಯುರೋಪಿಗೆ ವಿಜ್ಞಾನವೂ ಸೇರಿದಂತೆ ಎಲ್ಲಾ ಬಗೆಯ ಜ್ಞಾನ ಶಾಖೆಗಳ ಭಾಷೆಯಾಗಿತ್ತು. ಇದು ಬದಲಾದದ್ದು ಆನ್ವಯಿಕ ವಿಜ್ಞಾನಕ್ಕೆ ಒತ್ತು ದೊರೆತ ಕಾಲದಲ್ಲಿ. ಚಾರ್ಲ್ಸ್ ಡಾರ್ವಿನ್‌ ವಿಕಾಸವಾದವನ್ನು ವಿವರಿಸುವ ತನ್ನ ಕೃತಿಯನ್ನು ಇಂಗ್ಲಿಷ್‌ನಲ್ಲೇ ಬರೆದದ್ದನ್ನು ಮಹತ್ವದ ತಿರುವು ಎಂದು ಭಾವಿಸಲಾಗುತ್ತದೆ. ಡಾರ್ವಿನ್ ಅದನ್ನೇಕೆ ಇಂಗ್ಲಿಷ್‌ನಲ್ಲೇ ಬರೆದ ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ ಇಂಗ್ಲಿಷ್‌ನ ಪರಿವರ್ತನೆಯ ಕಾರಣಗಳು ಹೆಚ್ಚು ಅರ್ಥವಾಗುತ್ತದೆ. ಡಾರ್ವಿನ್ ತನ್ನ ಸಿದ್ಧಾಂತವನ್ನು ಪ್ರತಿಪಾದಿಸಲು ಮುಖ್ಯವಾಗಿ ಬಳಸಿಕೊಂಡದ್ದು ಕ್ಷೇತ್ರ ಕಾರ್ಯವನ್ನು. ಬೀಗಲ್ ಯಾತ್ರೆ ಕೈಗೊಂಡ ಆತ ಜೀವಿಗಳನ್ನು ಅವುಗಳ ಆವಾಸಸ್ಥಾನಗಳಲ್ಲಿ ಕಂಡು ಅದರ ಕುರಿತ ಟಿಪ್ಪಣಿಗಳನ್ನು ಮಾಡಿಕೊಂಡು ತನ್ನ ಸಿದ್ಧಾಂತವನ್ನು ಮಂಡಿಸಬೇಕಾಗಿತ್ತು. ಸಿದ್ಧಾಂತವನ್ನು ಅನುಭವಜನ್ಯ ಮಾದರಿಯಲ್ಲಿ ಒರೆಗೆ ಹಚ್ಚುವ ಕೆಲಸವನ್ನು ಆತ ಮಾಡುತ್ತಿದ್ದ. ಅನುಭವವನ್ನು ಅಭಿವ್ಯಕ್ತಿಸುವುದಕ್ಕೆ ಹೆಚ್ಚು ಅನುಕೂಲ ಕಲ್ಪಿಸುತ್ತಿದ್ದುದು ಇಂಗ್ಲಿಷ್.

ಯುರೋಪಿನ ವೈಜ್ಞಾನಿಕ ಸಂಶೋಧನೆಗಳ ಇತಿಹಾಸದಲ್ಲಿಯೂ ಇದನ್ನು ಗಮನಿಸಬಹುದು. ಪರಿಕಲ್ಪನಾತ್ಮಕ ಎಂದು ವಿಭಾಗೀಕರಿಸಬಹುದಾದ ಎಲ್ಲ ಜ್ಞಾನವೂ ಲ್ಯಾಟಿನ್ ಭಾಷೆಯಲ್ಲಿ ಅಭಿವ್ಯಕ್ತಗೊಳ್ಳುತ್ತಿತ್ತು. ಈ ಸಿದ್ಧಾಂತಗಳು ಆನ್ವಯಿಕ ಮಟ್ಟಕ್ಕೆ ಬಂದಾಗ ಅದನ್ನು ಅಭಿವ್ಯಕ್ತಿಸುವುದಕ್ಕೆ ಇಂಗ್ಲಿಷ್ ಅನುಕೂಲಕರ ಅನ್ನಿಸಿತು. ಇದರ ಹಿಂದೆಯೂ ಸಾಮಾಜಿಕ ಕಾರಣಗಳಿವೆ. ನಾವೀಗ ಆನ್ವಯಿಕ ವಿಜ್ಞಾನ ಎಂದು ವಿಭಾಗೀಕರಿಸುವ ‘ತಂತ್ರಜ್ಞಾನ’ದ ಕ್ಷೇತ್ರದಲ್ಲಿ ಕೆಲಸ ಮಾಡಿದವರೆಲ್ಲರೂ ಕುಶಲಕರ್ಮಿಗಳು. ರಸಾಯನ ವಿಜ್ಞಾನವನ್ನು ಸಂಪನ್ನಗೊಳಿಸಿದ ‘ರಸ ವಿದ್ಯೆ’ ಅಥವಾ ಲೋಹವನ್ನು ಚಿನ್ನವಾಗಿ ಪರಿವರ್ತಿಸುವ ಉಪಾಯವೊಂದನ್ನು ಹುಡುಕಿದವರಲ್ಲಿ ಹೆಚ್ಚಿನವರು ಚಿನ್ನಾಭರಣಗಳನ್ನು ತಯಾರಿಸುವ ಕುಶಲಕರ್ಮಿಗಳಾಗಿದ್ದರು.

ಯಂತ್ರ ವಿಜ್ಞಾನದಲ್ಲಿ ತೊಡಗಿಸಿಕೊಂಡವರೂ ಅಷ್ಟೇ. ಕಮ್ಮಾರಿಕೆ, ಮರಗೆಲಸ ಮುಂತಾದ ಕೌಶಲಗಳನ್ನು ರೂಢಿಸಿಕೊಂಡಿದ್ದವರೇ ತಂತ್ರಜ್ಞಾನದ ಆವಿಷ್ಕಾರಗಳನ್ನು ಮಾಡಿದರು. ಇವರು ತಮ್ಮ ಆವಿಷ್ಕಾರಗಳನ್ನು ತಮಗೆ ತಿಳಿದಿದ್ದನ್ನು ವಿವರಿಸಿದರು. ನಿಧಾನವಾಗಿ ಪರಿಕಲ್ಪನಾತ್ಮಕ ಜ್ಞಾನದ ಭಾಷೆಯಾಗಿದ್ದ ಲ್ಯಾಟಿನ್ ಬದಿಗೆ ಸರಿದು ಆನ್ವಯಿಕ ತಂತ್ರಜ್ಞಾನದ ಭಾಷೆ ಮುನ್ನೆಲೆಗೆ ಬಂತು. ಒಂದರ್ಥದಲ್ಲಿ ಇಲ್ಲಿ ಜ್ಞಾನದ ಅಭಿವ್ಯಕ್ತಿಯ ಪ್ರಜಾಪ್ರಭುತ್ವೀಕರಣ ನಡೆಯಿತು. ಪರಿಕಲ್ಪನಾತ್ಮಕ ಜ್ಞಾನವೊಂದು ಆನ್ವಯಿಕ ಜ್ಞಾನವಾಗಿ ಪರಿವರ್ತನೆಯಾಗಬೇಕಾದರೆ ಕುಶಲಕರ್ಮಿಗಳ ಭಾಷೆಯಲ್ಲಿರುವುದು ಸೂಕ್ತ ಎಂದಾಯಿತು. ಲ್ಯಾಟಿನ್ ಬದಿಗೆ ಸರಿದು ಯುರೋಪಿನ ಎಲ್ಲಾ ಪ್ರಮುಖ ಭಾಷೆಗಳಲ್ಲೂ ವಿಜ್ಞಾನದ ಅಭಿವ್ಯಕ್ತಿ ಸಾಮಾನ್ಯವಾಯಿತು.

ವಸಾಹತೀಕರಣವಿಲ್ಲದೇ ಇದ್ದಿದ್ದರೆ ಭಾರತದಲ್ಲಿಯೂ ಇಂಥದ್ದೊಂದು ಪ್ರಕ್ರಿಯೆ ನಡೆಯಬಹುದಿತ್ತೇನೋ. ಆದರೆ ವಸಾಹತುಶಾಹಿ ನಮ್ಮ ಜ್ಞಾನದ ಪರಿಕಲ್ಪನೆಗಳನ್ನೇ ಬದಲಾಯಿಸಿಬಿಟ್ಟಿತು. ದುರಂತವೆಂದರೆ ನಮ್ಮ ಸಾಮಾಜಿಕ ಸ್ತರೀಕರಣಗಳೂ ವಸಾಹತುಶಾಹಿ ಹೇರಿದ ಪರಿಕಲ್ಪನೆಗೆ ಪೂರಕವಾಗಿಯೇ ಕೆಲಸ ಮಾಡಿದ್ದು. ಭಾರತದಲ್ಲಿದ್ದ ಆನ್ವಯಿಕ ಜ್ಞಾನವೆಲ್ಲವೂ ಕೌಶಲಗಳ ರೂಪದಲ್ಲಿತ್ತು. ನಮ್ಮ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾಗಿ ಇದು ತಲೆಮಾರಿನಿಂದ ತಲೆಮಾರಿಗೆ ಹರಿಯುತ್ತಾ ತನ್ನದೇ ಆದ ರೀತಿಯಲ್ಲಿ ಸುಧಾರಣೆಗೆ ಒಳಗಾಗುತ್ತಾ ತನ್ನ ಕಾಲಕ್ಕೆ ಪ್ರಸ್ತುತವಾಗುತ್ತಿತ್ತು.

ಈಸ್ಟ್ ಇಂಡಿಯಾ ಕಂಪೆನಿ ತನ್ನ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ಆರಂಭಿಸಿದ ಪ್ರಕ್ರಿಯೆಯಲ್ಲಿ ನಾವು ಕಳೆದುಕೊಂಡದ್ದು ನಮ್ಮ ರಾಜಕೀಯ ಸ್ವಾತಂತ್ರ್ಯವನ್ನಷ್ಟೇ ಅಲ್ಲ. ನಮ್ಮ ಕುಶಲಕರ್ಮಿಗಳು ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುತ್ತಾ ಬಂದಿದ್ದ ಜ್ಞಾನವೂ ಶಿಥಿಲಗೊಂಡಿತು.
ನಮ್ಮ ಪರಿಕಲ್ಪನಾತ್ಮಕ ಜ್ಞಾನದ ಭಾಷೆಯಾಗಿದ್ದದ್ದು ಸಂಸ್ಕೃತ. ಅದು ಪೂರ್ಣವಾಗಿ ಆನ್ವಯಿಕ ಜ್ಞಾನದ ಭಾಷೆಯಾಗುವುದಕ್ಕೆ ನಮ್ಮ ಸಾಮಾಜಿಕ ಸ್ತರೀಕರಣಗಳು ಅಡ್ಡಿಯಾಯಿತು. ಅರ್ಥಾತ್ ನಮ್ಮ ಕುಶಲಕರ್ಮಿಗಳು ಆ ಭಾಷೆಯಲ್ಲಿ ತಮ್ಮ ಜ್ಞಾನವನ್ನು ದಾಖಲಿಸಲಿಲ್ಲ. ಅವರದನ್ನು ಕಾಪಿಟ್ಟದ್ದು ತಮ್ಮ ಕೌಶಲಗಳಲ್ಲಿ ಅರ್ಥಾತ್ ದೇಹದ ಭಾಷೆಯಲ್ಲಿ ಮತ್ತು ಸಂವಹನಕ್ಕೆ ಬಳಸುತ್ತಿದ್ದ ಕನ್ನಡದಂಥ ಭಾಷೆಗಳಲ್ಲಿ. ಇದನ್ನು ಲಿಪಿ ಅಥವಾ ಗಣಿತ ಸೂತ್ರಗಳಲ್ಲಿ ದಾಖಲಿಸುವ ಕೌಶಲ ಅವರಿಗೂ ಇರಲಿಲ್ಲ.

ವಸಾಹತುಶಾಹಿ ರೂಪಿಸಿದ ಶಿಕ್ಷಣ ವ್ಯವಸ್ಥೆ ಹಳೆಯ ಸಾಮಾಜಿಕ ಸ್ತರೀಕರಣಗಳ ಜೊತೆಗೆ ಹೊಸತೊಂದು ಸ್ತರವನ್ನು ಸೃಷ್ಟಿಸಿತೇ ಹೊರತು ಕುಶಲಕರ್ಮಿಗಳ ಕೈಗಳಲ್ಲಿ, ಮೈಯಲ್ಲಿ ಮತ್ತು ಅವರ ಸಂವಹನದ ಭಾಷೆಯಲ್ಲಿ ಇದ್ದ ಜ್ಞಾನವನ್ನು ಜ್ಞಾನ ಎಂದೇ ಪರಿಗಣಿಸಲಿಲ್ಲ. ಅದು ಪಾಶ್ಚಾತ್ಯ ಜ್ಞಾನವನ್ನಷ್ಟೇ ‘ಜ್ಞಾನ–ವಿಜ್ಞಾನ’ವಾಗಿ ಅಂಗೀಕರಿಸಿತು. ವಸಾಹತುಶಾಹಿಯ ಮಾರುಕಟ್ಟೆ ದಾಳಿಯ ಹೊತ್ತಿಗಾಗಲೇ ಶಿಥಿಲವಾಗಿದ್ದ ನಮ್ಮ ಕುಶಲಕರ್ಮಿಗಳ ಜ್ಞಾನ ಪರಂಪರೆ ಕ್ರಮೇಣ ಅಳಿವಿನ ಅಂಚಿಗೆ ಸಾಗಿತು.

ವಿಜ್ಞಾನವನ್ನು ಕನ್ನಡದಲ್ಲಿ ಬೋಧಿಸುವುದು, ಅಭಿವ್ಯಕ್ತಿಸುವುದು ಕಷ್ಟ ಎಂಬ ವಾದಕ್ಕೆ ಪುಷ್ಟಿಕೊಡಲು ಬಳಸುವ ಈ ಸಮರ್ಥನೆಗಳನ್ನು ಗಮನಿಸಿದರೆ ಇದು ಹೆಚ್ಚು ಅರ್ಥವಾಗುತ್ತದೆ. ಕನ್ನಡದ ಉದಾಹರಣೆಯನ್ನೇ ತೆಗೆದುಕೊಂಡರೆ ಮುಖ್ಯವಾಗಿ ಕಾಣಸಿಗುವ ಸಮರ್ಥನೆ ‘ವಿಜ್ಞಾನ ವಿಷಯಗಳನ್ನು ವಿವರಿಸಲು ಬೇಕಾಗಿರುವಷ್ಟು ಪಾರಿಭಾಷಿಕಗಳು ಕನ್ನಡದಲ್ಲಿಲ್ಲ’. ಪಾರಿಭಾಷಿಕಗಳೇಕಿಲ್ಲ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡು ಪಾರಿಭಾಷಿಕಗಳನ್ನು ಸೃಷ್ಟಿಸುವ ಕೆಲಸ ನಡೆಯಬೇಕಿತ್ತು. ಅದರ ಬದಲಿಗೆ ನಾವು ಇಂಗ್ಲಿಷ್‌ನಲ್ಲಿದ್ದ ವಿಜ್ಞಾನ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸುವ ಕೆಲಸ ಆರಂಭಿಸಿದೆವು. ಕನ್ನಡದೊಳಗೇ ಇರಬಹುದಾಗಿದ್ದ ವಿಜ್ಞಾನದ ಭಾಷೆಯನ್ನು ಶೋಧಿಸುವ ಬದಲಿಗೆ ಸಂಸ್ಕೃತ ಪದಗಳನ್ನು ತಂದು ಕನ್ನಡದ ವಿಜ್ಞಾನ ಪಾರಿಭಾಷಿಕವನ್ನು ಸೃಷ್ಟಿಸಿಕೊಂಡೆವು. ಇದನ್ನೇ ಹಟತೊಟ್ಟು ಬಳಸಿದ್ದರೆ ಕನ್ನಡದಲ್ಲಿ ವಿಜ್ಞಾನದ ಅಭಿವ್ಯಕ್ತಿಯ ಭಾಷೆಯೊಂದು ಹುಟ್ಟಿಕೊಳ್ಳುತ್ತಿತ್ತೇನೋ. ಆದರೆ ಜನ ಭಾಷೆಗೆ ಬಹಳ ಅನ್ಯವಾಗಿದ್ದ ಈ ಪದಗಳಿಗೆ ನಿರೀಕ್ಷಿತ ಮಟ್ಟದ ಅಂಗೀಕಾರ ದೊರೆಯಲೇ ಇಲ್ಲ.

ಕನ್ನಡದಲ್ಲಿ ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಿಸಿದ ಪಠ್ಯ ರೂಪಿಸುವುದಕ್ಕೆ ಬೇಕಿರುವ ಪಾರಿಭಾಷಿಕಗಳಿಲ್ಲ ಎಂದು ಅಲವತ್ತುಕೊಳ್ಳುವಾಗಲೇ ನೆನಪಿಸಿಕೊಳ್ಳಬೇಕಾದ ಸಂಗತಿಯೊಂದಿದೆ. ಕನ್ನಡದಲ್ಲಿ ಕಮ್ಮಾರಿಕೆ, ಚಮ್ಮಾರಿಕೆ, ಬಡಗಿ ಕೆಲಸಕ್ಕೆ ಸಂಬಂಧಿಸಿದ ಸಾಹಿತ್ಯವೂ ಇಲ್ಲ. ಇಂಗ್ಲಿಷ್‌ನಲ್ಲಿ ಕಂಪ್ಯೂಟರ್ ವಿಜ್ಞಾನ ವಿವರಿಸುವುದಕ್ಕೆ ಬಳಕೆಯಾಗುವ ಅನೇಕ ಪದಗಳೆಲ್ಲವೂ ಕುಶಲಕರ್ಮಿ ವರ್ಗ ಸೃಷ್ಟಿಸಿದ ‘ಜ್ಞಾನ ಸಾಹಿತ್ಯ’ದ ಕೊಡುಗೆ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು.

ನಮ್ಮ ಸಾಮಾಜಿಕ ಸ್ತರೀಕರಣಗಳು ‘ಜ್ಞಾನ’ವನ್ನು ವಿಭಜಿಸಿದ ಪರಿ, ಎರಡು ಶತಮಾನಗಳ ಅವಧಿಯ ವಸಾಹತುಶಾಹಿ ಆನಂತರದ ಗೊಂದಲಮಯ ಶಿಕ್ಷಣ ನೀತಿಗಳೆಲ್ಲದರ ಪರಿಣಾಮವೂ ನಮ್ಮ ಭಾಷೆಗಳ ಮೇಲಿದೆ. ಇದನ್ನೆಲ್ಲಾ ಮರೆತು ಕೆಲವು ಇಂಗ್ಲಿಷ್ ಪಠ್ಯಗಳ ಅನುವಾದದ ಮೂಲಕ ಕನ್ನಡವನ್ನು ಜ್ಞಾನದ ಭಾಷೆಯಾಗಿಸುವ ಪ್ರಯತ್ನವೇ ಹಾಸ್ಯಾಸ್ಪದ. ಕನ್ನಡದ ಈಗಿನ ಸ್ಥಿತಿಗೆ ಕಾರಣವಾದ ಐತಿಹಾಸಿಕ ಒತ್ತಡಗಳಲ್ಲಿ ಯಾವೊಂದನ್ನೂ ನಾವು ನಿವಾರಿಸಿಕೊಳ್ಳಲು ಸಾಧ್ಯವಿಲ್ಲ.

ಕನ್ನಡ ಜ್ಞಾನದ ಭಾಷೆಯಾಗಿಲ್ಲ ಎಂದು ಅಲವತ್ತುಕೊಳ್ಳುವಾಗಲೆಲ್ಲಾ ಫ್ರೆಂಚ್, ಜರ್ಮನ್‌, ಮ್ಯಾಂಡರಿನ್‌, ಜಪಾನಿಯಂಥ ಭಾಷೆಗಳ ಉದಾಹರಣೆ ಕೊಟ್ಟು ಅಲ್ಲಿ ಆಗಿದೆ ಎನ್ನುತ್ತಿರುತ್ತೇವೆ. ಜಾಗತೀಕರಣದ ಮೂಲಕ ವಿಶ್ವವ್ಯಾಪಿಯಾಗಿ ಹರಡಿಕೊಂಡಿರುವ ಇಂಗ್ಲಿಷ್ ಈಗ ಮೇಲೆ ಹೇಳಿದ ಎಲ್ಲಾ ಭಾಷೆಗಳಲ್ಲಿ ನಡೆಯುತ್ತಿರುವ ಜ್ಞಾನ ಸೃಷ್ಟಿಯ ಮೇಲೂ ಪರಿಣಾಮ ಬೀರುತ್ತಿದೆ. ಅಂದರೆ ಈ ಎಲ್ಲಾ ಭಾಷೆಗಳ ವಿಜ್ಞಾನಿಗಳು ಮತ್ತು ಮಾನವಿಕ ಕ್ಷೇತ್ರಗಳ ತಜ್ಞರು ತಮ್ಮ ಪ್ರಬಂಧಗಳನ್ನು ಇಂಗ್ಲಿಷ್‌ನಲ್ಲಿ ಪ್ರಕಟಿಸುತ್ತಿದ್ದಾರೆ. ಹಾಗಿದ್ದರೆ ನಾವೀಗ ಏನು ಮಾಡಬೇಕು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಬೇಕಿರುವ ಹೊಳಹೊಂದನ್ನು ಯು.ಆರ್.ಅನಂತಮೂರ್ತಿಯವರು 51 ವರ್ಷಗಳ ಹಿಂದೆ ಬರೆದ ‘ಇಂಗ್ಲಿಷ್ ಬ್ರಾಹ್ಮಣ, ಕನ್ನಡ ಶೂದ್ರ’ ಪ್ರಬಂಧದಲ್ಲಿ ನೀಡುತ್ತಾರೆ.

‘ಜಾನಪದ ಸಂಪತ್ತಿನಿಂದ ಭಾಷೆಯ ಕಸುವನ್ನು ಪಡೆದೆವು; ಸಾಹಿತ್ಯಕ್ಕೊಂದು ಭಾಷೆ ಸೃಷ್ಟಿಸಿಕೊಂಡೆವು. ಆದರೆ ಜಾನಪದದಿಂದ ನಾವು ಪಡೆದುದೆಷ್ಟು ?ಕೊಟ್ಟದ್ದೆಷ್ಟು? ಇಂಗ್ಲಿಷ್ ಭಾಷೆಯ ಮೂಲಕ ಹಿಗ್ಗಿದ ನಮ್ಮ ವಿಚಾರಗಳನ್ನು ಜಾನಪದ ಜೀವನಕ್ಕೆ ನಾವು ಒಯ್ಯುತ್ತಿಲ್ಲ; ಅದಕ್ಕೆ ತಕ್ಕ ಭಾಷೆ ನಮ್ಮಲ್ಲಿಲ್ಲ. ಅಂದರೆ ನಮ್ಮ ಬುದ್ಧಿಜೀವಿಗಳು ಬಂಜೆಯರು. ನಾವು ಪರಭಾಷೆಗಳಿಂದ ಪಡೆದದ್ದನ್ನು ನಮ್ಮ ಜನಕ್ಕೆ ಒಯ್ದದ್ದೇ ಆದರೆ ಜಾನಪದ ಜೀವನದಲ್ಲಿ ಅದು ಅನುಭವವಾಗಿ ಹೊಸ ರೂಪ ತಾಳಿ ತಿರುಗಿ ನಮಗೆ ಸಿಕ್ಕುವುದು ಸಾಧ್ಯ. ಆದರೆ ನಮ್ಮ ಜೀವನ, ನಮ್ಮ ವಿಚಾರ, ನಮ್ಮ ಭಾಷೆಗಳ ನಡುವೆ ಯಾವ ಅನ್ಯೋನ್ಯತೆಯೂ ಇಲ್ಲ.

ನಾವು ಪಾಶ್ಚಿಮಾತ್ಯ ಸಂಸ್ಕೃತಿಯ ಸಂಪರ್ಕದಿಂದ ಪಡೆದಷ್ಟನ್ನು ನಮ್ಮ ಜನರ ಜೀವನದ ವಸ್ತುಗಳನ್ನಾಗಿ ಮಾಡಿದ್ದೇವೆ ಎನ್ನುವುದರ ಜೊತೆಗೆ ಕುಮಾರವ್ಯಾಸ, ಪಂಪ, ಬಸವಣ್ಣ ಮುಂತಾದವರು ಸಂಸ್ಕೃತದಲ್ಲಿದ್ದ ವಿಚಾರಗಳನ್ನು, ಕಾವ್ಯವನ್ನು ತಮ್ಮ ಜನರ ನಿತ್ಯಜೀವನದ ಸೊತ್ತಾಗಿ ಹೇಗೆ ಮಾಡಿದರು ಎಂಬುದನ್ನು ಹೋಲಿಸಿ ನೋಡಿದರೆ ನಾವು ತಲೆ ತಗ್ಗಿಸಬೇಕಾಗುತ್ತದೆ. ವೇದಾಧಿಕಾರವೆಲ್ಲ ಬರಿ ಬ್ರಾಹ್ಮಣನದಾದರೂ ನಮ್ಮ ಭಾಷೆಗಳು ಈ ಜಾತಿಭೇದದ ವಿನಾಶಕಾರಿ ಪ್ರವೃತ್ತಿಗಳ ವಿರುದ್ಧ ಕೆಲಸ ಮಾಡಿ ಒಂದು ಸಮಗ್ರ ಸಂಸ್ಕೃತಿಯನ್ನು ಸೃಷ್ಟಿಸಲು ಕಾರಣವಾದವು. ಯಾವುದೋ ಒಂದು ಗಾದೆ ಮಾತಿನಲ್ಲಿ ಉಪನಿಷತ್ತಿನ ತತ್ವ, ಪುರಾಣಕತೆಯೊಂದರಲ್ಲಿ ಗಾಢವಾದ ತತ್ವವಿಚಾರ – ಹೀಗೆ ಜನಪದದ ಸ್ವತ್ತಾದುವು. ನಾವು ಇಂಗ್ಲಿಷ್‌ನಲ್ಲಿ ಓದಿದ ರಾಜಕೀಯ ಶಾಸ್ತ್ರ, ಸಮಾಜಶಾಸ್ತ್ರ, ಮನಃಶಾಸ್ತ್ರ ಎಂದೆಂದಿಗೂ ಹೀಗೆ ಜನರ ಸ್ವತ್ತಾಗಿ, ಭಾಷೆಯ ಸಂಪತ್ತಾಗಿ ಬುದ್ಧಿಜೀವಿಗೆ ಹಿಂದಕ್ಕೆ ಸಿಗುವುದು ಅಸಾಧ್ಯವಾದಂತಹ ಸ್ಥಿತಿಯಲ್ಲಿ ನಾವಿದ್ದೇವೆ.’

ವರ್ತಮಾನದ ಜ್ಞಾನದ ಭಾಷೆಯಾಗಿರುವ ಇಂಗ್ಲಿಷ್‌ನ ಜೊತೆ ಸೆಣಸುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ ಅದರಿಂದ ಪಡೆದದ್ದನ್ನು ಕನ್ನಡದ್ದಾಗಿಸಿಕೊಳ್ಳುವುದು. ಉಪನಿಷತ್ತಿನ ತತ್ವ ಗಾದೆ ಮಾತಾದ ಪ್ರಕ್ರಿಯೆ ನಡೆದರಷ್ಟೇ ಕನ್ನಡವೂ ಜ್ಞಾನದ ಭಾಷೆಯಾಗುತ್ತದೆ. ಹಾಗೆಯೇ ಕನ್ನಡದ ಜ್ಞಾನವನ್ನು ವಿಶ್ವಕ್ಕೆ ಹಂಚಿಕೊಳ್ಳುವುದಕ್ಕೆ ಇಂಗ್ಲಿಷನ್ನು ಪ್ರಭಾವಶಾಲಿಯಾಗಿ ಬಳಸುವುದಕ್ಕೆ ಹಿಂತೆಗೆಯದೇ ಇರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT