ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಕೀ ಕಡೆಗಣನೆಯ ಶಿಕ್ಷೆ?

ಉನ್ನತ ಶಿಕ್ಷಣದಲ್ಲಿ ಕನ್ನಡ: ಸಾಧ್ಯತೆ ಮತ್ತು ಸವಾಲು
Last Updated 30 ಡಿಸೆಂಬರ್ 2016, 20:07 IST
ಅಕ್ಷರ ಗಾತ್ರ

ಕನ್ನಡದಲ್ಲಿ ವಿಜ್ಞಾನ ಶಿಕ್ಷಣಕ್ಕೆ ಎದುರಾಗಿರುವ ಕಂಟಕಗಳ ಬಗ್ಗೆ ವಸ್ತುಸ್ಥಿತಿಯನ್ನು ಮುಂದಿಡುವ ಮುನ್ನ, ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೇಂದ್ರ ತೋರಿದ ಅವಜ್ಞೆಯ ಬಗ್ಗೆ ಒಂದೆರಡು ಅಂಶಗಳು ಪ್ರಸ್ತಾಪಯೋಗ್ಯ. ಸ್ವಾತಂತ್ರ್ಯಾನಂತರ ಭಾರತದ ಪ್ರಾಂತೀಯ ಭಾಷೆಗಳೆಲ್ಲವೂ ದಿಢೀರೆಂದು ಬಿಡುಗಡೆಯ ಸಂಭ್ರಮವನ್ನು ಆಚರಿಸಲಿಲ್ಲ. ಬದಲು ಇಂಗ್ಲಿಷ್ ಶೃಂಖಲೆ ಶಿಕ್ಷಣದಲ್ಲಿ ಇನ್ನೂ ಹೆಚ್ಚಾಗಿಯೇ ಕೈಕಟ್ಟಿಹಾಕಿತು. 1958ರಲ್ಲಿ ರಾಷ್ಟ್ರೀಯ ವೈಜ್ಞಾನಿಕ ನೀತಿಯ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪಬಂತು. ಶಿಕ್ಷಣ ಪರಿಣಾಮಕಾರಿಯಾಗಿ ಇರಬೇಕಾದರೆ ಅದು ಪ್ರಾದೇಶಿಕ ಭಾಷೆಯಲ್ಲೇ ಆಗಬೇಕು ಎಂಬ ಅರಿವು ಮೂಡುವ ಹೊತ್ತಿಗೆ ಮೂರು ಪಂಚವಾರ್ಷಿಕ ಯೋಜನೆಗಳು ಹಿಂದಕ್ಕೆ ಉರುಳಿಹೋಗಿದ್ದವು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂಸತ್ತಿನಲ್ಲಿ ಮಂಡಿಸಿದ್ದು ಚೀನಾ ಯುದ್ಧಾನಂತರ- 1966ರಲ್ಲಿ.

ಆನಂತರ ಸಂಸತ್ತಿನಲ್ಲಿ ಸುದೀರ್ಘ ಚರ್ಚೆಯಾಗಿ ಅದಾದ ನಾಲ್ಕು ವರ್ಷಗಳ ನಂತರ ಸ್ವೀಕೃತವಾಯಿತು. ಇದರ ಅರ್ಥವಿಷ್ಟೆ. ನೀರಾವರಿ ಕಾಮಗಾರಿ ಯೋಜನೆಗಳಿಗೆ ಸಿಕ್ಕ ಪ್ರಾಶಸ್ತ್ಯ ಶಿಕ್ಷಣಕ್ಕೆ ಸಿಕ್ಕಲೇಇಲ್ಲ. ಪಂಡಿತ್ ನೆಹರೂ ಅವರೇನೊ ವಿಜ್ಞಾನ ಕೇಂದ್ರಗಳನ್ನು ‘ಜ್ಞಾನದೇಗುಲ’ ಎಂದು ಕರೆದರು. ಆದರೆ ಅಲ್ಲಿ ಕೇಳಿಸಿದ್ದು ಇಂಗ್ಲಿಷ್ ಗಂಟಾನಾದ. ಪ್ರಾಜ್ಞರು ಎಂದುಕೊಂಡವರ ಆಯ್ಕೆಯೂ ಅದೇ ಆಗಿತ್ತು. ಎಪ್ಪತ್ತು ವರ್ಷಗಳ ನಂತರವೂ ಪರಿಸ್ಥಿತಿಯೇನೂ ಬದಲಾದಂತೆ ಕಾಣದು. ರಾಜ್ಯದ ಶಿಕ್ಷಣದ ವಿವಿಧ ಹಂತಗಳಲ್ಲಿ ಕನ್ನಡದಲ್ಲಿ ವಿಜ್ಞಾನ ಬೋಧನೆ/ ಶಿಕ್ಷಣ ಹೇಗಾಗುತ್ತಿದೆಯೆಂಬುದು ದೊಡ್ಡ ಗುಟ್ಟೇನಲ್ಲ. ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆ  ಬರೆಯುವವರ ಸಂಖ್ಯೆಯಲ್ಲಿ ಹೆಚ್ಚಿನಪಾಲು ಗ್ರಾಮೀಣ ವಿದ್ಯಾರ್ಥಿಗಳೇ ಇದ್ದಾರೆ. ಅಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಜಾಗವಿಲ್ಲ. ಆ ಹಂತದಲ್ಲಿ ವಿಜ್ಞಾನವೂ ಅಧ್ಯಯನದ ಒಂದು ಭಾಗವೇ ಆಗಿ, ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳು ಆ ವಿಭಾಗದಲ್ಲೇ ಹೆಚ್ಚು ಅಂಕ ತೆಗೆದುಕೊಳ್ಳುವುದನ್ನು ಪ್ರತಿವರ್ಷದ ಫಲಿತಾಂಶದಲ್ಲೂ ನೋಡಬಹುದು. ಇಲ್ಲಿ ನಗರ ಕೇಂದ್ರಿತ ಶಿಕ್ಷಣದ ಜಾಡೇ ಬೇರೆ.

ಇಲ್ಲಿಂದ ಮುಂದಿನ ಹಂತದಲ್ಲೇ ಕಂದಕಗಳು ಸೃಷ್ಟಿಯಾಗುತ್ತಾ ಹೋಗುವುದು. ಎಸ್ಸೆಸ್ಸೆಲ್ಸಿ ನಂತರ ವೃತ್ತಿಪರ ಕೋರ್ಸ್‌ಗಳಿಗೆ ಸೇರಲು ಅವಕಾಶವಿದೆ. ಐಐಟಿ ಮತ್ತು ಡಿಪ್ಲೊಮಾ. ಇಲ್ಲೂ ಕನ್ನಡಕ್ಕೆ ಜಾಗವಿಲ್ಲ. ನರ್ಸಿಂಗ್ ಸ್ಕೂಲ್‌ನಲ್ಲಿ ಕನ್ನಡ ಮಾಧ್ಯಮ ಉಂಟು. ಇದರಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೂ ಆಕರ್ಷಣೆ ಇದೆ. ಮತ್ತೆ ಪಿಯುಸಿ ನಂತರ ಇರುವ ನರ್ಸಿಂಗ್ ಕೋರ್ಸ್‌ಗೆ ಅದೇ ಸಮಸ್ಯೆ. ಕನ್ನಡ ಮಾಧ್ಯಮದವರಿಗೆ ಪ್ರವೇಶ ಬಂದ್.
ಪದವಿ ಪೂರ್ವ ಶಿಕ್ಷಣದಲ್ಲೂ ಆಯ್ಕೆ ಇಲ್ಲ. ವಿಜ್ಞಾನ ಓದಬೇಕೆಂದರೆ ಅದು ಇಂಗ್ಲಿಷ್ ಮಾಧ್ಯಮದಲ್ಲಿ ಮಾತ್ರ. ಇದು ಗ್ರಾಮೀಣ ವಿದ್ಯಾರ್ಥಿಗಳಿಗೆ ಸತ್ವಪರೀಕ್ಷೆಯ ಹಂತ. ಮೊದಲ ನಾಲ್ಕೈದು ತಿಂಗಳು ಗ್ರಾಮೀಣ ವಿದ್ಯಾರ್ಥಿಗಳು ಅಪರಿಚಿತ ಪ್ರಪಂಚಕ್ಕೆ ಪ್ರವೇಶಿಸಿದವರಂತೆ ಗೊಂದಲ, ಗಲಿಬಿಲಿಗೆ ಒಳಗಾಗುತ್ತಾರೆ. ಆನಂತರ ನಿಧಾನವಾಗಿ ಒಗ್ಗಿಕೊಳ್ಳಬೇಕು, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು.

ವಿಚಿತ್ರವೆಂದರೆ ಪಿಯುಸಿ ಪರೀಕ್ಷೆಯ ವಿಜ್ಞಾನ ಪ್ರಶ್ನೆಪತ್ರಿಕೆಗಳು ಇಂಗ್ಲಿಷ್ ಹಾಗೂ ಅದೇ ಪುಟದ ಹಿಂಬದಿಯಲ್ಲಿ ಕನ್ನಡದಲ್ಲೂ ಇರುತ್ತವೆ. ಕನ್ನಡದಲ್ಲಿ ವಿಜ್ಞಾನ ಬರೆದರೆ ಮೌಲ್ಯಮಾಪನಕ್ಕೂ ಅವಕಾಶವಿದೆ. ಈ ಹಂತದಲ್ಲಿ ಕನ್ನಡದಲ್ಲಿ ಉತ್ತರ ಬರೆಯುವವರು ವಿರಳ. ಏಕೆಂದರೆ ಎಲ್ಲ ಶಬ್ದಗಳನ್ನೂ ಭಾಷಾಂತರ ಮಾಡಿಕೊಂಡು ಬರೆಯುವ ಸ್ಥಿತಿ ಉಂಟಾಗುತ್ತದೆ. ಹೀಗಾಗಿ ಕಷ್ಟಪಟ್ಟಾದರೂ ಇಂಗ್ಲಿಷ್ ಮಾಧ್ಯಮಕ್ಕೆ ಜೋತುಬೀಳಬೇಕು. ಪ್ರಶ್ನೆಪತ್ರಿಕೆ ಕೊಟ್ಟರೇನುಬಂತು? ಬೋಧನೆಯೇ ಕನ್ನಡ ಮಾಧ್ಯಮದಲ್ಲಿ ಇಲ್ಲದಿದ್ದಾಗ. ಇದು ಶಿಕ್ಷಣ ಇಲಾಖೆಗೆ ತಿಳಿದಿಲ್ಲವೆಂದೇನಲ್ಲ. ಜಾಣಕುರುಡೂ ಅಲ್ಲ, ದಿವ್ಯ ನಿರ್ಲಕ್ಷ್ಯ ಅಷ್ಟೆ. ಪಿಯುಸಿ ನಂತರ ವೈದ್ಯಕೀಯಕ್ಕೆ ಹೋಗಬೇಕೆಂದರೆ ‘ನೀಟ್’ (ಎನ್‌ಇಇಟಿ– ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಬರೆಯಬೇಕು.

ಅದು ಸಿಬಿಎಸ್‌ಇ  (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್) ಆಡಳಿತಕ್ಕೆ ಬರುತ್ತದೆ. ಇಲ್ಲಿ ಸ್ವಲ್ಪ ರಿಯಾಯಿತಿ ತೋರಿಸಿ ಇಂಗ್ಲಿಷ್ ಜೊತೆಗೆ ಎಂಟು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಅಲ್ಲೂ ಒಂದು ಷರತ್ತಿದೆ. ಪ್ರಾದೇಶಿಕ ಭಾಷೆಯಲ್ಲಿ ಕನಿಷ್ಠ ಮೂರು ವರ್ಷಗಳಾದರೂ ಸಿಇಟಿ ಪರೀಕ್ಷೆ ನಡೆಸಿರಬೇಕು. ಈಗ ಕನ್ನಡಕ್ಕೆ ವಂಚನೆಯಾಗಿದೆಯೆಂದು ಬೊಬ್ಬೆ ಎದ್ದಿದೆ. ವಾಸ್ತವವಾಗಿ ಇಲ್ಲೂ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಎದ್ದುಕಾಣುತ್ತದೆ. ಶಿಕ್ಷಣ ಇಲಾಖೆಗೆ ಆದೇಶ ತಲುಪಿದ್ದರೂ ಐಎಎಸ್ ಪ್ರಭುಗಳು ವಿಕಾಸಸೌಧದಲ್ಲೇ ಅದಕ್ಕೆ ಗೋರಿಯ ಮೇಲೆ ಗೋರಿ ಕಟ್ಟುತ್ತ ಬಂದರು.

ಎಂಜಿನಿಯರಿಂಗ್ ಶಿಕ್ಷಣ ಬಯಸುವ ವಿದ್ಯಾರ್ಥಿಗಳು ಜಂಟಿ ಪ್ರವೇಶ ಪರೀಕ್ಷೆ ಬರೆಯಬೇಕು (ಜೆಇಇ), ಮತ್ತೆ ಇಲ್ಲೂ ಅದೇ ನಯವಂಚನೆ. ಕನ್ನಡದಲ್ಲಿ ಬರೆಯಲು ಅವಕಾಶವಿಲ್ಲ. ಇನ್ನೊಂದು ರಾಷ್ಟ್ರೀಯ ಪ್ರತಿಭಾ ಶೋಧ ಪರೀಕ್ಷೆ (ಎನ್‌ಟಿಎಸ್‌ಸಿ) ಎಂಬುದಿದೆ. ಭಾರತದಾದ್ಯಂತ ಏಳು ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳಲ್ಲಿ ಪ್ರತಿಭಾ ಸಂಪನ್ನರನ್ನು ಗುರುತಿಸುವುದು ಇದರ ಗುರಿ. ಅದರಲ್ಲಿ ತೇರ್ಗಡೆಯಾದವರಿಗೆ ಅವರ ಶಿಕ್ಷಣದುದ್ದಕ್ಕೂ ಪೂರ್ಣಕಾಲ ಮಾಸಿಕ ವಿದ್ಯಾರ್ಥಿ ವೇತನ ಸಿಕ್ಕುತ್ತದೆ. ಈ ಪರೀಕ್ಷೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ. ಇಲ್ಲಿ ಗ್ರಾಮೀಣ ಪ್ರತಿಭಾವಂತರಿಗೆ ಭಾರಿ ಹೊಡೆತಬೀಳುತ್ತದೆ. ಈ ಲಾಭವನ್ನು ಪಡೆಯುವವರು ತೀರ ಕಡಿಮೆ. ‘ನೀಟ್’ ಅಥವಾ ಇಂಥದ್ದೇ ಪರೀಕ್ಷೆ ಬರೆಯಲು ಕನ್ನಡದಲ್ಲಿ ಪಠ್ಯಪುಸ್ತಕಗಳಿಲ್ಲ ಎಂದು ಹೇಳುವಾಗ ಒಂದು ನೈಜ ಸಂಗತಿಯನ್ನು ಸರ್ಕಾರ ಮರೆತೇಬಿಟ್ಟಿದೆ.

1969- 70ರ ಅವಧಿಯಲ್ಲಿ ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿ ಯೋಜನೆಗೆ ದೊಡ್ಡ ಪ್ರಮಾಣದ ಪ್ರೋತ್ಸಾಹ ನೀಡಿತು. ಕರ್ನಾಟಕದಲ್ಲಿ ವಿಶ್ವವಿದ್ಯಾಲಯದ ಎಲ್ಲ ಹಂತಗಳಲ್ಲೂ ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ಬಳಸಬೇಕೆಂಬ ಶಿಕ್ಷಣ ನೀತಿಯೇ ರೂಪುಗೊಂಡಿತು. 1971- 72ರಲ್ಲಿ ಎರಡು ವರ್ಷಗಳ ಪದವಿ ಪೂರ್ವ ಶಿಕ್ಷಣ ಜಾರಿಗೆ ಬಂದಿದ್ದರಿಂದ ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿಯವರೆಗೆ ಕೆಲವು ಸ್ವತಂತ್ರ ವಿಜ್ಞಾನ ಗ್ರಂಥಗಳನ್ನು, ಕೆಲವು ಅನುವಾದಗಳನ್ನು ಆದ್ಯತೆಯ ಮೇರೆಗೆ ಮೂರೂ ವಿಶ್ವವಿದ್ಯಾಲಯಗಳು ಕೈಗೆತ್ತಿಕೊಂಡವು. ಆ ಪೈಕಿ ಮೈಸೂರು ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ಸಂಸ್ಥೆಯ ಮೂಲಕ ದೊಡ್ಡ ಪ್ರಮಾಣದಲ್ಲಿ ಗ್ರಂಥಗಳನ್ನು ಹೊರತಂದಿತು. ಇದೊಂದೇ ವಿಶ್ವವಿದ್ಯಾಲಯ ಪಠ್ಯಪುಸ್ತಕ ಯೋಜನೆಯಲ್ಲೇ 72 ಗ್ರಂಥಗಳನ್ನು ತಂದಿದೆ. ಇದರಲ್ಲಿ ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ, ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ, ಭೂವಿಜ್ಞಾನದ ಪಠ್ಯಗಳೂ ಸೇರಿವೆ.

ಅಷ್ಟೇ ಅಲ್ಲ, ಸ್ನಾತಕೋತ್ತರ ಪದವಿಯಲ್ಲಿ ಓದುವ ‘ಪ್ರಿನ್ಸಿಪಲ್ಸ್ ಆಫ್ ಮೆಕ್ಯಾನಿಕ್ಸ್‌ನಂಥ (ಬಲವಿಜ್ಞಾನದ ತತ್ವಗಳು) ಕೃತಿಗಳು ಕನ್ನಡಕ್ಕೆ ಅನುವಾದಗೊಂಡವು. ದೇಜಗೌ, ಹಾ.ಮಾ.ನಾಯಕರು ಉತ್ಸಾಹದಿಂದ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಇದೇ ಅವಧಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ‘ಕನ್ನಡ ವಿಶ್ವಕೋಶ’ವೂ ವಿಜ್ಞಾನಕ್ಕೆ ಆದ್ಯತೆಕೊಟ್ಟು ಬಹುತೇಕ ಎಲ್ಲ ಶಾಖೆಗಳನ್ನೂ ಕನ್ನಡದಲ್ಲಿ ಹಿಡಿದಿಟ್ಟಿತು. ಕನ್ನಡವು ವಿಜ್ಞಾನ ಭಾಷೆಯಾಗಿಯೂ ಬೆಳೆದಿದೆ ಎಂಬುದು ಈ ಮೂಲಕ ಸಾದರಪಟ್ಟಿತು. ಇದೇ ಜಾಡನ್ನು ಅನುಸರಿಸಿ ಉಳಿದ ವಿಶ್ವವಿದ್ಯಾಲಯಗಳು ಬೇರೆ ಬೇರೆ ವಿಜ್ಞಾನ ಗ್ರಂಥಗಳನ್ನು ಪ್ರಕಟಿಸಿದವು. ಆಗಲೂ ಕನಿಷ್ಠ ಪದವಿ ಪೂರ್ವ ಹಂತದಲ್ಲಿ ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಶಿಕ್ಷಣ ಕೊಡಲು ಸರ್ಕಾರ ಆಸಕ್ತಿ ತಳೆಯಲಿಲ್ಲ.

ಹೀಗಾಗಿ ಮೂರೂ ವಿಶ್ವವಿದ್ಯಾಲಯಗಳು ಸಿದ್ಧಪಡಿಸಿದ ವಿವಿಧ ಪಠ್ಯಪುಸ್ತಕಗಳು ಗೋದಾಮಿನಿಂದ ಆಚೆ ಬಂದುದೇ ಕಡಿಮೆ. ಕೆಲವು ಪ್ರತಿಗಳಂತೂ ಸಾದಾ ಪ್ರತಿ ₹ 6.75, ಉತ್ತಮ ಪ್ರತಿ ₹ 12 ಎಂದು ರಿಯಾಯಿತಿ ತೋರಿಸಿದರೂ ತಕ್ಕಡಿ ವಾಲಿದ್ದು ಇಂಗ್ಲಿಷ್ ಮಾಧ್ಯಮಕ್ಕೆ. ದಸರಾ ವಸ್ತುಪ್ರದರ್ಶನದಲ್ಲಿ ಈ ‘ಮುದಿ ಕೃತಿಗಳು’ ಮರುಕಹುಟ್ಟಿಸುವ ರೀತಿಯಲ್ಲಿ ಕಾಣಿಸಿಕೊಳ್ಳುವುದು ಉಂಟು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ. ಎಂ.ಎನ್.ವಿಶ್ವನಾಥಯ್ಯ ಅವರು ಒಮ್ಮೆ ಈ ಸ್ಥಿತಿ ಕುರಿತಂತೆ ‘ಅಡುಗೆ ಬೇಕಾದಷ್ಟಿದೆ, ತಿನ್ನುವವರೇ ಇಲ್ಲವಲ್ಲ’ ಎನ್ನುತ್ತಾ ವಿಷಾದದ ನಗೆ ನಕ್ಕಿದ್ದರು.

ಹಾಗಾದರೆ ಯಾರೂ ಇಂಥ ಕೃತಿಗಳನ್ನು ಮೂಸಿ ನೋಡಲಿಲ್ಲವೆ? ಹಾಗೆಂದರೆ ಅದು ಅರ್ಧ ಸತ್ಯವಾದೀತು. ಹೈಸ್ಕೂಲಿನಲ್ಲಿ ವಿಜ್ಞಾನ ಬೋಧಿಸುವವರು ತಮ್ಮ ತಿಳಿವಿಗಾಗಿ ಕನ್ನಡ ವಿಜ್ಞಾನ ಪುಸ್ತಕಗಳನ್ನು ಪರಾಮರ್ಶೆ ಮಾಡುವ ಪ್ರಸಂಗಗಳೂ ಇವೆ, ಅದೂ ಗ್ರಾಮೀಣ ಪ್ರದೇಶಗಳಲ್ಲಿ. ಹಂಪಿ ಕನ್ನಡ ವಿಶ್ವವಿದ್ಯಾಲಯ ಹೊರತಂದ ಭೌತವಿಜ್ಞಾನ ಮತ್ತು ಖಗೋಳವಿಜ್ಞಾನ ಜನಪ್ರಿಯವಾದವು. ಆದರೆ ಬೇರೆ ವಿಷಯಗಳ ಕೃತಿಗಳು ಬರಲಿಲ್ಲ. ಈಗ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಕನ್ನಡದಲ್ಲಿ ಬರೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ ಇಂಗ್ಲಿಷ್ ವಿಜ್ಞಾನ ಪಠ್ಯಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಿಸಲು ಅವಸರ ತೋರಿಸುತ್ತಿದೆ.

ಬೆಂಕಿಬಿದ್ದಾಗ ಬಾವಿ ತೋಡುವ ಚಾಳಿ. ಅತ್ತ ಸಿಬಿಎಸ್‌ಇ  ಪಠ್ಯಕ್ರಮ ರಾಜ್ಯ ನಿಗದಿಪಡಿಸಿರುವ ಪಠ್ಯಗಳಿಗಿಂತ ಶ್ರೇಷ್ಠ ಮಟ್ಟದ್ದು ಎನ್ನುವ ಹುಸಿನಂಬಿಕೆ ಶಿಕ್ಷಣ ಇಲಾಖೆಗೂ ಇದೆ, ಪೋಷಕರಿಗೂ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ನಮ್ಮ ಪಠ್ಯಗಳು ಸಮರ್ಥವಲ್ಲ ಎಂಬ ಷರಾ ಬೇರೆ ಬರೆಯಲಾಗಿದೆ. ವಸ್ತುಸ್ಥಿತಿ ಹೀಗಿಲ್ಲವೆಂದು ಡಾ. ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ತೌಲನಿಕ ಅಧ್ಯಯನ ಮಾಡಿದ ತಂಡ ವಸ್ತುನಿಷ್ಠ ವರದಿಯನ್ನು ಕೊಟ್ಟಿದೆ. ಅತ್ತ, ಹೈಕೋರ್ಟ್‌ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣವಾಗಬೇಕೆಂದು ಫರ್ಮಾನು ಹೊರಡಿಸಿ ಶಿಕ್ಷಣ ನೀತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಇದನ್ನೇ ರಾಜ್ಯ ಸರ್ಕಾರ ಇನ್ನೂ ಅರಗಿಸಿಕೊಳ್ಳಬೇಕಾಗಿದೆ.
*
ಬಿಕ್ಕಟ್ಟು ಇಲ್ಲ; ಆದರೆ...
ಏಕೋ ಕರ್ನಾಟಕ ಸರ್ಕಾರ ಈ ವರ್ಷ ಕಳೆಯುವುದರಲ್ಲಿ ಎಡವಟ್ಟುಗಳ ಮೇಲೆ ಎಡವಟ್ಟುಗಳನ್ನು ಮಾಡುತ್ತಿದೆ. ಈಗ ಕೊನೆಗೂ ಒಂದು ನಿರಾಳ. ಸಿಇಟಿ ವಿಚಾರದಲ್ಲಿ ಬಿಗಿಧೋರಣೆ ಹೊಂದಿದ್ದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈಗ ಸ್ವಲ್ಪ ಮೃದು ಧೋರಣೆ ತಳೆದಿದೆ. ಜೊತೆಗೆ ಸರ್ಕಾರವನ್ನೂ ಎಚ್ಚರಿಸಿದೆ. ‘ಆಯಾ ರಾಜ್ಯ ಭಾಷೆಯಲ್ಲಿ ‘ನೀಟ್ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಾಗ ಏಳು ರಾಜ್ಯಗಳು ಮುಂದೆಬಂದವು. ವಿಡಿಯೊ ಕಾನ್ಫರೆನ್ಸ್ ಮಾಡಿದಾಗಲೂ ನೀವು ಯಾವ ಪ್ರಶ್ನೆಯನ್ನೂ ಎತ್ತಲಿಲ್ಲ. ನೀವೇನು ನಿದ್ದೆ ಮಾಡುತ್ತಿದ್ದಿರಾ’ ಎಂದು ಕೇಳಿದ್ದಾರೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ. 


2017ರ ಮೇ 2 ಮತ್ತು 3ರಂದು ನಡೆಯುವ ಸಿಇಟಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಒಂದೇ ಪ್ರಶ್ನೆಪತ್ರಿಕೆಯಲ್ಲಿ ಮೊದಲ ಬಾರಿಗೆ ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಪ್ರಶ್ನೆಗಳಿರುತ್ತವೆ. ಇವೇನೂ ಉದ್ದುದ್ದ ಉತ್ತರ ನೀಡಬೇಕಾದ ಪ್ರಶ್ನೆಗಳಲ್ಲ, ಆಬ್ಜೆಕ್ಟಿವ್‌ ಟೈಪ್. ನಿಮಿಷಕ್ಕೆ ಒಂದು ಪ್ರಶ್ನೆಗೆ ಉತ್ತರ ಕೊಡಬಹುದು. ಗ್ರಾಮೀಣ ವಿದ್ಯಾರ್ಥಿಗಳಿಗೆ ಸಿಇಟಿ ಬರೆಯಲು ಇದರಿಂದ ಹೆಚ್ಚಿನ ಪ್ರೋತ್ಸಾಹ ಸಿಗುತ್ತದೆ ಎಂಬುದು ಈ ಬೆಳವಣಿಗೆಯ ನಂತರ ಕೇಳಿಬರುತ್ತಿರುವ ಅಭಿಪ್ರಾಯ.
*
ಹಿನ್ನಡೆ ಬಿಂಬಿಸುವ ಯತ್ನವಿಲ್ಲ
ಕರ್ನಾಟಕದಲ್ಲಿ ವಿಜ್ಞಾನವನ್ನು ಪ್ರಸಾರ ಮಾಡುವ ಅನೇಕ ಸಂಸ್ಥೆಗಳಿವೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಲಿ, ಕರ್ನಾಟಕ ರಾಜ್ಯ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ ಎಲ್ಲವೂ ವಿಜ್ಞಾನ ಕೃತಿಗಳು/ ಪತ್ರಿಕೆಗಳ ಪ್ರಕಟಣೆ, ವಿಜ್ಞಾನ ಬರಹಗಾರರಿಗೆ ಸನ್ಮಾನ, ವಿಚಾರ ಸಂಕಿರಣ  ಮುಂತಾದವನ್ನು ಮಾಡುತ್ತಿವೆ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ವಿಜ್ಞಾನಕ್ಕಾಗಿರುವ ಹಿನ್ನಡೆಯನ್ನು ಬಿಂಬಿಸುವ ಯತ್ನವನ್ನು ಇವು ಕೈಗೆತ್ತಿಕೊಂಡಿಲ್ಲ. ಏಕೆಂದರೆ ಇವೆಲ್ಲ ನಿಂತಿರುವುದು ಸರ್ಕಾರದ ಅನುದಾನದ ಮೇಲೆ. ಶಿಕ್ಷಣ ನೀತಿಗೂ ತಮ್ಮ ಸಂಸ್ಥೆಗಳಿಗೂ ಸಂಬಂಧವಿಲ್ಲವೇನೋ ಎಂಬಷ್ಟು ದೂರವನ್ನಂತೂ ಕಾಪಾಡಿಕೊಂಡು ಬಂದಿವೆ.
*
ಸರ್. ಎಂ. ವಿಜ್ಞಾನ ಪ್ರೀತಿ
ಸರ್ ಎಂ.ವಿಶ್ವೇಶ್ವರಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಲ್ಲಿ (1915) ಪ್ರಮುಖ ಪಾತ್ರ ವಹಿಸಿದವರು. ವೈಜ್ಞಾನಿಕ ಜ್ಞಾನವನ್ನು ಪ್ರಸಾರ ಮಾಡುವುದು ಕೂಡ ಅದರ ಸ್ಥಾಪನೆಯ ಉದ್ದೇಶಗಳಲ್ಲಿ ಒಂದಾಗಿತ್ತು. ಡಾ. ಜಿ.ಎಸ್.ಜಯಪ್ಪಗೌಡ ಅವರು ವಿಶ್ವೇಶ್ವರಯ್ಯನವರ ಕೊಡುಗೆಗಳ ಬಗ್ಗೆ ಸಂಶೋಧಿಸಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ‘ಭಾರತರತ್ನ ಸರ್.ಎಂ.ವಿ.’ (2007) ಕೃತಿಯ ಕೆಲವು ಸಾಲುಗಳು ಹೀಗಿವೆ:

‘ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ಆ ಕಾಲದ ಮಹತ್ವದ ಘಟನೆ. ಏಕೀಕೃತ ಕರ್ನಾಟಕದ ರಚನೆ, ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಸಾರ್ವಜನಿಕರಲ್ಲಿ ಉಂಟಾಗಿದ್ದ ಒಲವನ್ನು ಮನಗಂಡು ಆರ್ಥಿಕ ಪರಿಷತ್ತಿನ ಶಿಕ್ಷಣ ಸಮಿತಿಯು ಕನ್ನಡ ಭಾಷೆ ಬೆಳವಣಿಗೆಗೆ, ಕನ್ನಡದಲ್ಲಿ ಗ್ರಂಥ ಪ್ರಕಟಣೆಗೆ ಸ್ವತಂತ್ರ ಸಂಸ್ಥೆಯೊಂದನ್ನು ಸ್ಥಾಪಿಸುವುದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತು. 1924ರಲ್ಲಿ ಪ್ರಜಾಪ್ರತಿನಿಧಿ ಸಭೆಯ ಅಧಿವೇಶನದಲ್ಲಿ ಮಾತನಾಡುತ್ತ ವಿಶ್ವೇಶ್ವರಯ್ಯ ‘ಕನ್ನಡವು ಜನಸಮೂಹದಲ್ಲಿ ಸಾಮಾನ್ಯ ಮತ್ತು ವೈಜ್ಞಾನಿಕ ಜ್ಞಾನ ಪ್ರಸಾರ ಮಾಡುವ ಮಾಧ್ಯಮವಾಗುವಂತೆ ಮಾಡುವುದು ಸರ್ಕಾರದ ಉದ್ದೇಶ’ ಎಂದು ತಿಳಿಸಿದರು.
*
ಕನ್ನಡ ಮಾಧ್ಯಮದಲ್ಲಿ ಓದಿದವರು
‘ಭಾರತರತ್ನ ಪ್ರೊ. ಸಿ.ಎನ್.ಆರ್.ರಾವ್ ತಮ್ಮ ಪ್ರೌಢಶಾಲಾ ಶಿಕ್ಷಣ ಪಡೆದಿದ್ದು ಕನ್ನಡ ಮಾಧ್ಯಮದಲ್ಲಿ. ಈಗ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ರಸಾಯನ ವಿಜ್ಞಾನಿ. ತಮ್ಮ ಆತ್ಮಚರಿತ್ರೆಯಲ್ಲಿ ಅವರು ಹೀಗೆ ದಾಖಲಿಸಿದ್ದಾರೆ: ‘ನಾನು ಪ್ರೌಢಶಾಲೆಯನ್ನು ಸೇರಿದಾಗ ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿ ಅಧ್ಯಯನ ಮಾಡಬೇಕಿತ್ತು. ಮಾತೃಭಾಷೆಯಲ್ಲಿ ಅಧ್ಯಯನ ಮಾಡಿದಾಗ ಮಾತ್ರ ವಿಷಯಗಳನ್ನು ಅತ್ಯುತ್ತಮವಾಗಿ ಕಲಿಯಲು ಸಾಧ್ಯವಾಗುವುದರಿಂದ ನಾನು ಕನ್ನಡ ಮಾಧ್ಯಮದಲ್ಲಿಯೇ ಕಲಿಯಬೇಕೆಂದು ನನ್ನ ತಂದೆ ತೀರ್ಮಾನಿಸಿದರು. ನಾನು ಕನ್ನಡ ಮಾಧ್ಯಮದ ವಿದ್ಯಾರ್ಥಿಯಾದೆ. ಇಂಗ್ಲಿಷ್ ಭಾಷೆಯಿಂದ ನಾನು ವಂಚಿತನಾಗಬಾರದೆಂಬ ಉದ್ದೇಶದಿಂದ ನನ್ನ ತಂದೆ ಮನೆಯಲ್ಲಿ ನನ್ನೊಡನೆ ಇಂಗ್ಲಿಷಿನಲ್ಲಿಯೇ ಮಾತನಾಡುತ್ತಿದ್ದರು. ಅವರು ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ವಿವಿಧ ಸ್ಥಳಗಳಿಗೆ ವರ್ಗಾವಣೆ ಹೊಂದುತ್ತಿದ್ದರು. ಹಾಗಾಗಿ ನನ್ನ ಪ್ರೌಢಶಾಲಾ ಶಿಕ್ಷಣ ಹಲವು ಶಾಲೆಗಳಲ್ಲಿ ನಡೆಯಿತು. ‌
(ಮಿತಿಯಿಲ್ಲದ ಏಣಿ-ರಸಾಯನ ಶಾಸ್ತ್ರದಲ್ಲಿ ಜೀವನ: ಸಿ.ಎನ್.ಆರ್. ರಾವ್, 2011)
*

ಸಿಇಟಿ ಪ್ರಶ್ನೆಪತ್ರಿಕೆ ಎಸ್ಸೆಸ್ಸೆಲ್ಸಿ ಪಠ್ಯವನ್ನು ಆಧರಿಸಿರುವುದಿಲ್ಲ. ಬದಲು ಪಿಯುಸಿ ಪಠ್ಯಕ್ರಮವನ್ನು ಅನುಸರಿಸಿರುತ್ತದೆ. ಆದರೆ ಈ ಹಂತದಲ್ಲಿ ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಬೋಧನೆ ಇಲ್ಲ ಎಂಬುದನ್ನು ಸರ್ಕಾರ ಮತ್ತೆ ಮತ್ತೆ ನೆನಪಿನಲ್ಲಿಟ್ಟುಕೊಳ್ಳಬೇಕು.
*
ಕನ್ನಡ ಸಾಹಿತ್ಯ ಪರಿಷತ್ತು ಅನೇಕ ವಿಜ್ಞಾನ ಪುಸ್ತಕಗಳನ್ನು ಹೊರತಂದಿದೆ ನಿಜ. ಆದರೆ ಕನ್ನಡದಲ್ಲಿ ವಿಜ್ಞಾನ ಶಿಕ್ಷಣಕ್ಕೊದಗಿರುವ ದುಸ್ಥಿತಿಯನ್ನು ಸರ್ಕಾರಕ್ಕೆ ಮನದಟ್ಟು ಮಾಡಿಕೊಡುವ ಪ್ರಯತ್ನವನ್ನೇನೂ ಮಾಡಿಲ್ಲ. ಇತ್ತೀಚೆಗೆ ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಜ್ಞಾನಕ್ಕೆ ಕನಿಷ್ಠ ಸಮಾನಾಂತರ ಗೋಷ್ಠಿಯಲ್ಲೂ ಜಾಗ ಕೊಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT