ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ತೊಟ್ಟಿಯೂ , ಹಂದಿಗಳ ಸಂಸಾರವೂ

28ನೇ ವಾರ್ಡ್‌ನ ವ್ಯಾಪ್ತಿಯಲ್ಲಿ ನಿಯಮಿತವಾಗಿ ಕಸ ವಿಲೇವಾರಿ ಮಾಡದ ಹಿನ್ನೆಲೆ; ಹೆಚ್ಚಿದ ವರಾಹಗಳ ಹಾವಳಿ
Last Updated 31 ಡಿಸೆಂಬರ್ 2016, 4:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಾಜಿ ಸಂಸದ ಐ.ಜಿ. ಸನದಿ, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಸೇರಿದಂತೆ ಹಲವು ಖ್ಯಾತನಾಮರು ವಾಸಿಸುವ ಅಶೋಕ ನಗರ, ವಿಶ್ವೇಶ್ವರ ನಗರ, ರಾಜನಗರ ಸೇರಿದಂತೆ ಹಲವು ಬಡಾವಣೆಗಳು 28ನೇ ವಾರ್ಡ್‌ ವ್ಯಾಪ್ತಿ­ಯಲ್ಲಿವೆ. ರಾಜನಗರ ಹಾಗೂ ಗುರು­ದೇವ ನಗರದಲ್ಲಿ ಖಾಲಿ ಜಾಗದಲ್ಲಿ ಕಸ ಹಾಕುವುದರಿಂದ ಹಂದಿಗಳ ಸಾಮ್ರಾಜ್ಯವೇ ಇಲ್ಲಿ ನೆಲೆಗೊಂಡಿದೆ.

ಕೇಂದ್ರೀಯ ವಿದ್ಯಾಲಯ, ಕೆಎಸ್‌­ಸಿಎ ಕ್ರೀಡಾಂಗಣದ ಸುತ್ತ­ಮುತ್ತಲೂ ಕಸ ಹಾಗೂ ಒಳಚರಂಡಿ ನೀರು ಚರಂಡಿಯಲ್ಲಿ ಹರಿಯುವ ಮೂಲಕ ನಿವಾಸಿಗಳ ನಿದ್ದೆಗೆಡಿಸಿದೆ. 25 ಸಾವಿರ ಜನಸಂಖ್ಯೆಯುಳ್ಳ ಈ ವಾರ್ಡ್‌ನಲ್ಲಿ 26 ಬಡಾವಣೆಗಳು ಬರುತ್ತವೆ. ಇಷ್ಟೊಂದು ಬೃಹತ್‌ ವಾರ್ಡಿನ ಕಸವನ್ನು ನಿರ್ವಹಿಸಲು ಗುತ್ತಿಗೆ­­ದಾ­ರರು ಒಂದೇ ಟ್ರ್ಯಾಕ್ಟರ್‌ ಬಳಸುತ್ತಿದ್ದಾರೆ. ಅದೇ ಟ್ರ್ಯಾಕ್ಟರ್‌ ಬೆಳಿಗ್ಗೆ 9, 11ಕ್ಕೆ ಮತ್ತು ಮಧ್ಯಾಹ್ನ 3ಕ್ಕೊಂದರಂತೆ ಮೂರು ಟ್ರಿಪ್‌ ಓಡಾಡುತ್ತದೆ.

ಈ ವಾರ್ಡ್‌ನಲ್ಲಿಯ ಪ್ರಮುಖ ಸಮಸ್ಯೆಯೆಂದರೆ ಖಾಲಿ ನಿವೇಶನ­ಗಳನ್ನು ಕಸದ ತೊಟ್ಟಿಗಳನ್ನಾಗಿ ಮಾಡಿ­ಕೊಂಡಿದ್ದು. ಒಮ್ಮೊಮ್ಮೆ ಖಾಸಗಿ­ಯವರ ಖಾಲಿ ನಿವೇಶನಗಳಲ್ಲೂ ಅಕ್ಕ ಪಕ್ಕದ ಮನೆಯವರು ತ್ಯಾಜ್ಯವನ್ನು ಚೆಲ್ಲುವು­ದರಿಂದ ಅದನ್ನು ಪೌರಕಾರ್ಮಿಕರು ಗಮನಿಸುವುದಿಲ್ಲ. ಹೀಗಾಗಿ ಹಲವು ದಿನಗಳವರೆಗೂ ಟನ್ನುಗಟ್ಟಲೇ ಕಸ ಅಲ್ಲೇ ಬಿದ್ದಿರುತ್ತದೆ.

‘ನಿಯಮಿತವಾಗಿ ಕಸದ ತೊಟ್ಟಿ ಸ್ವಚ್ಛ ಮಾಡುತ್ತಾ ಇದ್ದರೆ ಎಲ್ಲರೂ ನೆಮ್ಮದಿಯಿಂದ ಇರಬಹುದು. ಆದರೆ, ಇದರಲ್ಲಿ ಅಸ್ತವ್ಯಸ್ತವಾಗಿ­ರುವುದರಿಂದ ಹಂದಿಗಳು ದಾಳಿ ಮಾಡುತ್ತಿವೆ. ಅವುಗಳ ಹಾವಳಿ­ಯಿಂದಾಗಿ ಕಸ ರಸ್ತೆ ಮೇಲೆಲ್ಲಾ ಬಿದ್ದಿರುತ್ತದೆ’ ಎಂದು ಗುರು­ದೇವನಗರದ ಕೃಷ್ಣ ಜೋಶಿ ಹೇಳಿದರು.

‘ಬಾಪೂಜಿ ನಗರದ ನಿವಾಸಿಗಳೂ ನಮ್ಮ ಮನೆ ಬಳಿ ಇರುವ ಖಾಲಿ ಜಾಗದಲ್ಲಿ ಕಸ ಚೆಲ್ಲುತ್ತಾರೆ. ಪಾಲಿಕೆ­ಯವರು ಒಂದು ತಿಂಗಳಿಗೊಮ್ಮೆ ಸ್ವಚ್ಛ ಮಾಡುತ್ತಾರೆ. ದೂರು ನೀಡಿದರೂ ಸ್ಪಂದನೆ ಇಲ್ಲ’

ಒಳಚರಂಡಿ ನೀರು ಗಟಾರಕ್ಕೆ...
ಗುರುದೇವ ನಗರದಿಂದ ರಾಜನ­ಗರಕ್ಕೆ ಒಳಚರಂಡಿ ಸಂಪರ್ಕ ಕಲ್ಪಿಸುವ ಪೈಪ್‌ಲೈನ್‌ನ ಸಾಮರ್ಥ್ಯ ಮೀರಿ ನೀರು ಹರಿಯುವುದರಿಂದ ಒಂದಷ್ಟು ಪ್ರಮಾಣದ ನೀರು ತೆರೆದ ಗಟಾರವನ್ನು ಸೇರುತ್ತದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳು ‘ವಾಸನೆ ಸಂಕಟ’ ಅನುಭವಿಸುತ್ತಿದ್ದಾರೆ. ಪಾಲಿಕೆಯ ಸಹಾಯಕ ಆಯುಕ್ತರೇ ಬಂದು ಪರಿಶೀಲನೆ ಮಾಡಿಕೊಂಡು ಹೋಗಿ­ದ್ದಾರೆ. ಆದರೂ ಸಮಸ್ಯೆ ಬಗೆಹರಿದಿಲ್ಲ ಎಂಬುದು ಇಲ್ಲಿನ ನಿವಾಸಿಗಳ ಆರೋಪ. ಇದಕ್ಕೆ ಪ್ರತಿಕ್ರಿಯೆ ನೀಡಿದ ಪಾಲಿಕೆ ಸದಸ್ಯೆ ರತ್ನಾ ಪಾಟೀಲ, ‘ಮೂರ್ನಾಲ್ಕು ತಿಂಗಳಲ್ಲಿ ದೊಡ್ಡ ಪೈಪ್‌ ಅಳವಡಿಕೆ­ಯಾಗಲಿದ್ದು, ಸಮಸ್ಯೆ ಬಗೆಹರಿಯಲಿದೆ’ ಎಂದರು.

‘ವಾರ್ಡ್‌ ವ್ಯಾಪ್ತಿ ದೊಡ್ಡದು’
ನಮ್ಮ ವಾರ್ಡ್‌­ನಲ್ಲಿ 26 ದೊಡ್ಡ ಬಡಾವಣೆಗಳು ಬರುವುದ­ರಿಂದ ಕಸ ವಿಲೇವಾರಿ ಕೆಲಸವೇ ದೊಡ್ಡ ಸವಾಲಾಗಿದೆ. ಆದರೂ, ಗುತ್ತಿಗೆದಾರರ ಬೆನ್ನು ಹತ್ತಿ ಕೆಲಸ ಮಾಡಿಸಿಕೊಳ್ಳುತ್ತೇವೆ ಎನ್ನುತ್ತಾರೆ 28ನೇ ವಾರ್ಡ್‌ ಪ್ರತಿನಿಧಿಸುವ ರತ್ನಾ ಪಾಟೀಲ. ಬೆಳಿಗ್ಗೆ 7ರಿಂದ 11­ರವರೆಗೂ ಹಲವು ಬಡಾವಣೆ­ಗಳಿಗೆ ತೆರಳಿ ಖುದ್ದು ಪರಿಶೀಲನೆ ನಡೆಸುತ್ತೇವೆ. ಮಾಜಿ ಸಂಸದ ಐ.ಜಿ. ಸನದಿ ಅವರ ಮನೆಗೆ ಕೆಲವು ನಿವಾಸಿಗಳು ಬಂದು ಸಮಸ್ಯೆ ಹೇಳಿಕೊಳ್ಳುವು­ದರಿಂದ ಅವರ ಮನೆ ಸಮೀಪವೂ ಇರುತ್ತೇವೆ ಎಂದರು.

ಅಲ್ಲಲ್ಲಿ ಒಂದಷ್ಟು ಕಸ ಬಿದ್ದಿರುತ್ತದೆ. ಆ ಬಗ್ಗೆ ನಿವಾಸಿಗಳು ಮಾಹಿತಿ ನೀಡಿದರೆ ಅಲ್ಲಿಂದಲೂ ಕಸ ತೆರವು ಮಾಡಿಸುತ್ತೇನೆ. ಪ್ರಮುಖವಾಗಿ ಛೇಡಾ ಕಾಲೇಜಿ­ನಲ್ಲಿ ವಿದ್ಯಾರ್ಥಿ­ಗಳ ಸಂಖ್ಯೆ ಹೆಚ್ಚಿರುವುದರಿಂದ ಅವರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ವಿಶೇಷ ಗಮನವಿಟ್ಟು ಅಲ್ಲಿನ ಕಂಟೇನ­ರ್‌ನಲ್ಲಿ ಸಂಗ್ರಹವಾದ ಕಸ ನಿತ್ಯವೂ ವಿಲೇವಾರಿ ಮಾಡಿಸುವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT