ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿನಿತ್ಯ 200 ಟ್ಯಾಂಕರ್‌ ನೀರು ಪೂರೈಕೆ

Last Updated 31 ಡಿಸೆಂಬರ್ 2016, 4:07 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗತೊಡಗಿದೆ. ಸದ್ಯ ಐದು ಮತ್ತು ಆರು ದಿನಕ್ಕೊಮ್ಮೆ ವಿವಿಧ ವಾರ್ಡ್‌ಗಳಿಗೆ ಜಲಮಂಡಳಿ ನೀರು ಪೂರೈಕೆ ಮಾಡುತ್ತಿದೆ. ಆದರೂ ಕೆಲ ಪ್ರದೇಶಗಳಿಗೆ ವಾರಕ್ಕೊಮ್ಮೆಯೂ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇಂತಹ ಪ್ರದೇಶಗಳಿಗೆ ಪ್ರತಿನಿತ್ಯ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

ಇಲ್ಲಿನ ನೃಪತುಂಗ ಬೆಟ್ಟದಲ್ಲಿರುವ ಜಲ ಸಂಗ್ರಹಗಾರ ಹಾಗೂ ನೆಹರೂ ನಗರದ ಜಲಸಂಗ್ರಹಗಾರದಿಂದ ಪ್ರತಿ ದಿನ ಟ್ಯಾಂಕರ್‌ಗಳ ಮೂಲಕ 200ಕ್ಕೂ ಅಧಿಕ ಟ್ರಿಪ್‌ ನೀರನ್ನು ಹುಬ್ಬಳ್ಳಿ ನಗರ ಹಾಗೂ ಹುಬ್ಬಳ್ಳಿ ಮತ್ತು ಕುಂದಗೋಳ ತಾಲ್ಲೂಕಿನ ಹಳ್ಳಿಗಳಿಗೆ ಜಲಮಂಡಳಿ ಪೂರೈಕೆ ಮಾಡುತ್ತಿದೆ.

ಜಲಮಂಡಳಿಯ 21 ಟ್ಯಾಂಕರ್‌ಗಳು ಪ್ರತಿ ದಿನ 100 ಟ್ರಿಪ್‌ ನೀರನ್ನು ನಗರದ ವಿವಿಧೆಡೆ ಪೂರೈಸುತ್ತಿವೆ. ಜೊತೆಗೆ ಕುಂದಗೋಳ ತಾಲ್ಲೂಕಿನಲ್ಲಿ ನೀರಿನ ಕೊರತೆ ಅನುಭವಿಸುತ್ತಿರುವ ಹಳ್ಳಿಗಳಿಗೂ ಟ್ಯಾಂಕರ್‌ಗಳ ಮೂಲಕ ಪ್ರತಿ ದಿನ 100 ಟ್ರಿಪ್‌ ಪೂರೈಕೆ ಮಾಡಲಾಗುತ್ತಿದೆ ಎಂದು ಜಲಮಂಡಲಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಅಶೋಕ ಮಾಡ್ಯಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಸುವ ‘ನೀರಸಾಗರ’ ಜಲಾಶಯ ಬರಿದಾದ ಬಳಿಕ ಸದ್ಯ ಮಲಪ್ರಭಾದಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಜೊತೆಗೆ ನಗರದಲ್ಲಿ ಸುಮಾರು 745 ಕೊಳವೆಬಾವಿಗಳಿದ್ದು, ಇವುಗಳಿಂದ ಲಭಿಸುವ ನೀರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಪೈಪ್‌ಲೈನ್‌ ವ್ಯವಸ್ಥೆ ಎಲ್ಲಿಯಾದರು ಕೈಕೊಟ್ಟರೆ ಆ ಪ್ರದೇಶಗಳಿಗೂ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಅಲ್ಲದೇ, ಮನೆಗಳಲ್ಲಿ ನಡೆಯುವ ವಿಶೇಷ ಕಾರ್ಯಕ್ರಮ, ಸಮಾರಂಭಗಳಿಗಾಗಿ ಹೆಚ್ಚಿನ ನೀರು ಬೇಕೆಂದು ಬೇಡಿಕೆ ಬಂದರೆ ಅವರಿಗೂ ನಿಗದಿತ ಶುಲ್ಕ ಭರಿಸಿ, ಅಗತ್ಯ ನೀರು ಪೂರೈಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ನವಿಲುತೀರ್ಥವೇ ಆಸರೆ
ಹುಬ್ಬಳ್ಳಿ– ಧಾರವಾಡ ಅವಳಿ ನಗರದಲ್ಲಿ ಪ್ರಸ್ತುತ 10.50 ಲಕ್ಷ ಜನಸಂಖ್ಯೆ ಇದೆ. 1.40 ಲಕ್ಷ ನಳಗಳ ಸಂಪರ್ಕಗಳಿವೆ. ಪ್ರತಿ ದಿನ 172.30 ದಶ ಲಕ್ಷ ಲೀಟರ್‌ ನೀರಿಗೆ ಬೇಡಿಕೆ ಇದೆ. ಮಲಪ್ರಭಾದಿಂದ 155 ದಶಲಕ್ಷ ಲೀಟರ್‌ ಪೂರೈಕೆಯಾಗುತ್ತಿದೆ. ನೀರಸಾಗರ ಜಲಾ­ಶಯ ಮಳೆ ಇಲ್ಲದೇ ಖಾಲಿಯಾಗಿ­ರುವು­ದರಿಂದ ಅವಳಿ ನಗರಕ್ಕೆ ಮಲಪ್ರಭಾದಿಂದ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ. ಜಲಾಶ­ಯದಲ್ಲಿ ಇರುವ ನೀರು ಜೂನ್ ತಿಂಗಳವರೆಗೆ ಬರು­ತ್ತದೆ.  ನೀರನ್ನು ಅನಗತ್ಯ­ವಾಗಿ ಪೊಲು ಮಾಡದೇ ಹಿತಮಿತವಾಗಿ ಬಳಕೆ ಮಾಡಬೇಕು  ಎಂದು ಜಲಮಂಡಳಿಯ ಕಾರ್ಯ­ನಿರ್ವಾಹಕ ಎಂಜಿನಿಯರ್‌  ಅಶೋಕ ಮಾಡ್ಯಾಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT