ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ಕೆಲಸಕ್ಕೆ ಅಧಿಕ ಅನುದಾನದ ಬೇಡಿಕೆ

Last Updated 31 ಡಿಸೆಂಬರ್ 2016, 4:09 IST
ಅಕ್ಷರ ಗಾತ್ರ

ಧಾರವಾಡ: ‘ಜಿಲ್ಲಾ ಪಂಚಾಯ್ತಿಗೆ ಪ್ರತಿ ವರ್ಷ ನೀಡಲಾಗುವ ಅನುದಾನದ ಬಹುಪಾಲ ಸಿಬ್ಬಂದಿ ವೇತನ ಹಾಗೂ ನಿರ್ವಹಣೆಗೆ ವ್ಯಯವಾಗುತ್ತಿದೆ. ಹೀಗಾಗಿ ಎಲ್ಲಾ ಇಲಾಖೆಗಳೂ ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕಾರ್ಯಗಳಿಗೆ ಹೆಚ್ಚಿನ ಅನುದಾನ ಕೇಳಬೇಕು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರ ಮಾತನಾಡಿದರು. ‘ಅಧಿಕಾರಿಗಳು ದುಡಿಯುತ್ತಾರೆ, ಅದಕ್ಕೆ ತಕ್ಕಂತೆ ಸಂಬಳ ಪಡೆಯುತ್ತಾರೆ. ಜತೆಗೆ ಕೆಲವೊಂದು ಘಟಕಗಳ ನಿರ್ವಹ­ಣೆಗೂ ಹಣದ ಅಗತ್ಯವಿದೆ. ಉಳಿದಂತೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಯೋಜನೆ ಕೈಗೊಳ್ಳಲು ಹಣವೇ ಇಲ್ಲ­ದಂತಾಗಿದೆ. ಹೀಗಾಗಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಜಿಲ್ಲಾ ಪಂಚಾಯ್ತಿ ಕಾರ್ಯವ್ಯಾಪ್ತಿಯಲ್ಲಿ ಕೈಗೊಳ್ಳಬ­ಹುದಾದ ಕೆಲಸಗಳಿಗೆ ಹೆಚ್ಚಿನ ಅನುದಾನ ಕೇಳಬೇಕು. ಅಧಿಕಾರಿಗಳು ಸಿದ್ಧಪಡಿಸಿದ ಕರಡು ಯೋಜನೆಯಲ್ಲಿ ಸೇರಿಸಲು ಈಗಲೂ ಅವಕಾಶ ಇರುವುದರಿಂದ ಅಧಿಕಾ­ರಿಗಳು ತಮ್ಮ ಬೇಡಿಕೆಯನ್ನು ಮತ್ತೊಮ್ಮೆ ಪರಿಷ್ಕರಿಸಬೇಕು’ ಎಂದರು.

ಇದಕ್ಕೂ ಮೊದಲು ಜಿಲ್ಲಾ ಪಂಚಾಯ್ತಿ ಯೋಜನಾಧಿಕಾರಿ ಕಿಶೋರ ಕುಮಾರ್‌ ದುಬೆ ವಾರ್ಷಿಕ ಕರಡು ಯೋಜನೆಯನ್ನು ಸಭೆಯಲ್ಲಿ ಓದಿದರು. ಈ ಬಾರಿ ಹೆಚ್ಚುವರಿ ₹30.87 ಕೋಟಿ ಕೇಳಲಾಗಿದೆ. ಒಟ್ಟು ₹265.98 ಕೋಟಿ ಬೇಡಿಕೆಯ ಕರಡು ಸಿದ್ಧಪಡಿಸಲಾಗಿದೆ. ಇದರಲ್ಲಿ ₹90.47 ಕೋಟಿ ಸಿಬ್ಬಂದಿಯ ವೇತನ ಸೇರಿದೆ’ ಎಂದು ಸಭೆಗೆ ಮಾಹಿತಿ ನೀಡಿದರು. ‘ಈಗಾಗಲೇ ಈ ಕರಡು ಮಾಹಿತಿಯನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ. ಇದಕ್ಕೆ ಸಭೆಯ ಒಪ್ಪಿಗೆ ದೊರೆತರೆ ಹಣ ಮಂಜೂರು ಮಾಡಲು ಸರ್ಕಾರವನ್ನು ಕೋರಲಾಗುವುದು. ಮತ್ತೇನಾದರೂ ಬದಲಾವಣೆ ಇದ್ದಲ್ಲಿ ಒಂದೆರೆಡು ದಿನಗಳ ಒಳಗಾಗಿ ಅಧಿಕಾ­ರಿಗಳು ಮಾಹಿತಿ ನೀಡಬೇಕು’ ಎಂದರು.

ಶಿಕ್ಷಣ ಸಂಯೋಜಕರ ಅಮಾನತು ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿನ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಎಸ್‌.ಎಂ.ದೊಡಮನಿ ಅವರು ಮೂರು ವರ್ಷದ ಹಿಂದೆ ಶಾಲೆಯ ಬ್ಯಾಂಕ್‌ ಖಾತೆಯಲ್ಲಿದ್ದ ₹1 ಲಕ್ಷ ಹಣ ಪಡೆದಿದ್ದರು. ಇದನ್ನು ಈವರೆಗೂ ಕೊಡದಿರುವ ಕ್ರಮವನ್ನು ಸದಸ್ಯರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್‌.ಎಚ್‌.ನಾಗೂರ, ‘ಹಣ ಕಟ್ಟಲು ಹಲವು ಬಾರಿ ಅವರಿಗೆ ಲಿಖಿತ ರೂಪದಲ್ಲಿ ಸೂಚನೆ ನೀಡಿದರೂ ಹಣ ತುಂಬಿಲ್ಲ’ ಎಂದು ಮಾಹಿತಿ ನೀಡಿದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಭಾರ ಸಿಇಓ ಆಗಿರುವ ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ, ‘ಕಳೆದ ಮೂರು ವರ್ಷಗಳಿಂದ ಸರ್ಕಾರದ ಹಣವನ್ನು ಇಟ್ಟುಕೊಂಡಿರುವವರ ಮೇಲೆ ಕರುಣೆ ಏಕೆ? ತಕ್ಷಣವೇ ಅವರನ್ನು ಅಮಾನತು ಮಾಡಿ’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಜತೆಗೆ ಅಮಾನತು ಮಾಡಿದ ವರದಿಯನ್ನು ಜಿಲ್ಲಾ ಪಂಚಾಯ್ತಿಗೆ ಸಲ್ಲಿಸಬೇಕು ಎಂದು ಅಧ್ಯಕ್ಷೆ ಚೈತ್ರಾ ಶಿರೂರು ಸೂಚನೆ ನೀಡಿದರು.

ಸದ್ಯ ಹುಬ್ಬಳ್ಳಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಶಿಕ್ಷಣ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿರುವ ದೊಡಮನಿ ಅವರನ್ನು ಮಧ್ಯಾಹ್ನವೇ ಅಮಾನತು ಮಾಡಿ ಡಿಡಿಪಿಐ ಆದೇಶ ಹೊರಡಿಸಿದರು.

ಕೆಲವು ಬಾಲಕಿಯರ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವ ಕುರಿತು ನವಲಗುಂದ ಹಾಗೂ ಕುಂದಗೋಳ ಭಾಗದ ಸದಸ್ಯರು ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮನಹಳ್ಳಿ, ‘14ನೇ ಹಣಕಾಸು ಯೋಜನೆಯ ಅನುದಾನವನ್ನು ಶೌಚಾಲಯ ನಿರ್ಮಾಣ ಅಥವಾ ದುರಸ್ತಿಗೆ ಬಳಸಿಕೊಳ್ಳಿ’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT