ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಿ ಎತ್ತಿ ಬಾಕಿ ಹಣ ಕೊಡಬೇಕಾ?

Last Updated 31 ಡಿಸೆಂಬರ್ 2016, 4:30 IST
ಅಕ್ಷರ ಗಾತ್ರ

ಹಾವೇರಿ:  ‘ನಾವೇನು ಪಟ್ಟಿ ಎತ್ತಿ ಬಾಕಿ ಹಣ ಕೊಡಬೇಕಾ? ಇಲ್ಲಾ, ಭಿಕ್ಷೆ ಬೇಡಿ ಬಂದು ಕೆಲಸ ಮಾಡಿಸಬೇಕಾ?’
–ಹಾವೇರಿ ನಗರಸಭೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅಧಿಕಾರಿಗಳನ್ನು ಪ್ರಶ್ನಿಸಿದ್ದು ಹೀಗೆ. ಸಭೆಯಲ್ಲಿ ‘ಅಣ್ಣಾ, ಅಣ್ಣಾ...’ ಸಂಬೋಧಿಸುತ್ತಲೇ ಮಾತನಾಡುತ್ತಿದ್ದ ಸಚಿವರು, ಅಧಿಕಾರಿಗಳ ವಿರುದ್ಧ ಸತತ ಆರೋಪಗಳು ಕೇಳಿಬಂದಾಗ ಗರಂ ಆಗಿ ಪ್ರಶ್ನಿಸಿದರು.

‘ಹಳೇ ಬಿಲ್‌ಗಳನ್ನು ಹೊಸದಾಗಿ ಬಂದ ಅಧಿಕಾರಿಗಳು ಮಂಜೂರು ಮಾಡುತ್ತಿಲ್ಲ. ಇದರಿಂದಾಗಿ  ಒಂದು ಬಾರಿ ಕಾಮಗಾರಿ ಮಾಡಿದ ಗುತ್ತಿಗೆದಾರರು ಮತ್ತೆ ಯಾವುದೇ ಕೆಲಸ ಮಾಡುತ್ತಿಲ್ಲ’ ಎಂದು ಸದಸ್ಯ ಐ.ಯು ಪಠಾಣ್, ಜಗದೀಶ ಮಲಗೋಡ, ಸಂಜೀವಕುಮಾರ ನೀರಲಗಿ, ಕರಬಸಪ್ಪ ಹಳದೂರ, ಅಬ್ದುಲ್ ರಜಾಕ್ ಜಮಾದಾರ್, ಸುರೇಶ ದೊಡ್ಮನಿ, ಮಂಜುಳಾ ಕರಬಸಮ್ಮನವರ, ಶಿವಬಸವ ವನ್ನಳ್ಳಿ ಮತ್ತಿತರರು ದೂರಿದರು. ಇದರಿಂದ ಗರಂ ಆದ ಸಚಿವರು, ‘ಕಾಮಗಾರಿ ಸಮಪರ್ಕವಾಗಿ ನಡೆದ ಯಾವುದೇ ಹಳೇ ಬಿಲ್‌ಗಳನ್ನು ಬಾಕಿ ಇಡಬೇಡಿ. ಕಾನೂನು ಪ್ರಕಾರ ಕ್ರಮಕೈಗೊಂಡು ಮಂಜೂರು ಮಾಡಿ. ಇಲ್ಲದಿದ್ದರೆ, ಸಕಾರಣವನ್ನು ತಿಳಿಸಿ. ಅದರ ಬಗ್ಗೆ ಕ್ರಮಕೈಗೊಳ್ಳಲಾಗುವುದು’ ಎಂದರು.

ತ್ಯಾಜ್ಯ:‘ನಗರದಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ನಡೆಯುತ್ತಿಲ್ಲ. ತಹಶೀಲ್ದಾರ್ ನಿವಾಸದಿಂದ ಇಜಾರಿಲಕ್ಮಾಪುರ ತನಕದ ರಸ್ತೆಯ ಚರಂಡಿಯ ತ್ಯಾಜ್ಯವನ್ನು ಒಂದು ಬಾರಿಯೂ ತೆಗೆದಿಲ್ಲ’ ಎಂದು ಸದಸ್ಯ ಜಗದೀಶ ಮಲಗೋಡ ದೂರಿದರು. ನಗರದ ತ್ಯಾಜ್ಯ ವಿಲೇವಾರಿ ಅಸಮರ್ಪಕತೆಗೆ ಕುರಿತು ಎಲ್ಲ ಸದಸ್ಯರು ಒಕ್ಕೊರಲಿನಿಂದ ದೂರಿದರು. ‘ಸಿಬ್ಬಂದಿ ಹೆಚ್ಚಳ ಮಾಡಿದರೂ, ಏಕೆ ಕೆಲಸ ಮಾಡುತ್ತಿಲ್ಲ. ದೂರುಗಳು ಬಾರದಂತೆ ಕೆಲಸ ನಿರ್ವಹಿಸಿ’ ಎಂದು ಸಚಿವರು ಸೂಚಿಸಿದರು.

ಅಂಬೇಡ್ಕರ್: ಅಂಬೇಡ್ಕರ್ ಭವನವು ಅನೈತಿಕ ಚುಟುವಟಿಕೆಯ ತಾಣವಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸದಸ್ಯ ಗುಡ್ಡನಗೌಡ ಅಂದಾನಿಗೌಡ್ರ ದೂರಿದರು. ‘ಅಂಬೇಡ್ಕರ್ ಭವನಕ್ಕೆ ₹1.75 ಕೋಟಿ ಮಂಜೂರಾಗಿದ್ದು, ಮುಂದಿನ ವಾರದಲ್ಲೇ ಕಾಮಗಾರಿ ಆರಂಭಿಸಲಾಗುವುದು’ ಎಂದು ಸಚಿವರು ತಿಳಿಸಿದರು.
‘ನಗರಸಭೆಯ ಕಂದಾಯ ವಿಭಾಗದಲ್ಲಿ ಹಣ ಕೊಟ್ಟವರ ಕೆಲಸ ಮಾತ್ರ ನಡೆಯುತ್ತಿದೆ. ಸಾಮಾನ್ಯ ಜನತೆ ಹೈರಾಣ ಆಗಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳಬೇಕು’ ಎಂದು ಸದಸ್ಯ ಹನುಮಂತ ಶರಸೂರಿ ಆಗ್ರಹಿಸಿದರು.

‘ನಗರಸಭೆಯ 253 ಮಳಿಗೆಗಳ ಬಾಡಿಗೆ ಬಾಕಿ ಇದ್ದು, ಈ ಬಗ್ಗೆ ಕ್ರಮಕೈಗೊಳ್ಳಬೇಕು. ಮಟನ್‌ ಮಾರುಕಟ್ಟೆಯಲ್ಲಿ ಕಾನೂನು ಪ್ರಕಾರವಾಗಿ ಹಣ ತುಂಬಿಸಿಕೊಂಡು ಮಳಿಗೆಗಳನ್ನು ನೀಡಬೇಕು’ ಎಂದು ಸದಸ್ಯ ಶಿವಬಸವ ವನ್ನಳ್ಳಿ ಆಗ್ರಹಿಸಿದರು.

‘ನಗರದಲ್ಲಿ ತ್ಯಾಜ್ಯವಿಲೇವಾರಿ, ದುರಸ್ತಿ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಅಧ್ಯಕ್ಷರು ಪ್ರತಿನಿತ್ಯ ಮುಂಜಾನೆ ಪರಿಶೀಲನೆ ನಡೆಸಬೇಕು’ ಎಂದು ಸದಸ್ಯ ಶಿವಬಸವ ವನ್ನಳ್ಳಿ ಹಾಗೂ ಜಗದೀಶ ಮಲಗೋಡ ಆಗ್ರಹಿಸಿದರು.

‘ಐ.ಯು. ಪಠಾಣ್ ಅಧ್ಯಕ್ಷರಾಗಿದ್ದಾಗ 72 ಕಂಟೈನರ್‌ಗಳನ್ನು ನಗರಸಭೆಗೆ ತರಲಾಗಿತ್ತು. ಈ ಒಂದೊಂದು ವಾರ್ಡ್‌ಗಳಲ್ಲಿ ಒಂದೊಂದು ಕಂಟೈನರ್ ಇವೆ. ಉಳಿದವು ಎಲ್ಲಿವೆ?’ ಎಂದು ಗುಡ್ಡನಗೌಡ ಅಂದಾನಿ ಗೌಡ ಪ್ರಶ್ನಿಸಿದರು. ಹದಗೆಟ್ಟ ರಸ್ತೆಗಳ ಬಗ್ಗೆ ಲಲಿತಾ ಗುಂಡೇನಹಳ್ಳಿ ಮತ್ತು ಕರಬಸಪ್ಪ ಹಳದೂರ ಗಮನಸೆಳೆದರು. ‘ಒತ್ತುವರಿ ತೆರವುಗೊಳಿಸಿ, ನಿವೇಶನ ರಹಿತರಿಗೆ ವಸತಿ ಸಹಿತ ನಿವೇಶನ ನೀಡಬೇಕು’ ಎಂದು ಸತೀಶ ಹಾವೇರಿ ಒತ್ತಾಯಿಸಿದರು.

‘ಮುಖ್ಯಮಂತ್ರಿಗಳಿಗೆ ನೀಡಿದ ಖಡ್ಗ ಹಾಗೂ ಪೈಕಾ ಕ್ರೀಡಾಕೂಟದಲ್ಲಿ ನೀಡಿದ ನೆನಪಿನ ಕಾಣಿಕೆಗಳ ಹಣವನ್ನು ಕೂಡಲೇ ಬಿಡುಗಡೆ ಮಾಡಿ’ ಎಂದು ಗಣೇಶ ಬಿಷ್ಟಣ್ಣನವರ ಆಗ್ರಹಿಸಿದರು.

‘ಪಂಪ್‌ ಖರೀದಿ ಕುರಿತು ನಗರಸಭೆಯ ಅಧಿಕಾರಿಗಳು ಜಿಲ್ಲಾಧಿಕಾರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಒಂದು ಪಂಪ್‌ಗೆ ₹38 ಲಕ್ಷ ಖರ್ಚು ಯಾಕೆ? ಎಂಬ ಗೊಂದಲ ಅವರಿಗೆ ಮೂಡಿದೆ. ಹೀಗಾಗಿ ಕೇವಲ ಪಂಪ್ ಮಾತ್ರವಲ್ಲ, ಅದರ ಜೊತೆ ಖರೀದಿಸಲಾಗುವ ಇತರ ಸಲಕರಣೆಗಳ ಬಗ್ಗೆ ಮಾಹಿತಿ ನೀಡಿ. ಆ ಮೂಲಕ ಗೊಂದಲ ಬಗೆಹರಿಸಿ’ ಎಂದು ಐ.ಯು. ಪಠಾಣ್‌ ಒತ್ತಾಯಿಸಿದರು.

ನಗರಸಭೆ ಅಧ್ಯಕ್ಷೆ ಪಾರ್ವತೆವ್ವ ಹಲಗಣ್ಣನವರ, ಉಪಾಧ್ಯಕ್ಷ ಇರ್ಫಾನ್ ಖಾನ್ ಪಠಾಣ್, ಪೌರಾಯುಕ್ತ ಶಂಕ್ರಪ್ಪ ಬಾರ್ಕಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT