ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತು’

Last Updated 31 ಡಿಸೆಂಬರ್ 2016, 5:03 IST
ಅಕ್ಷರ ಗಾತ್ರ

ಕೊಟ್ಟೂರು: ನಗರೋತ್ಥಾನ ಯೋಜನೆಯಡಿ ಪಟ್ಟಣಕ್ಕೆ ₹ 2 ಕೋಟಿ ಹಣವನ್ನು ನೀಡಲಾಗಿದೆ ಎಂದು ಶಾಸಕ ಎಸ್.ಭೀಮನಾಯ್ಕ್‌ ತಿಳಿಸಿದರು. ಪಟ್ಟಣದ ಪಟ್ಟಣ ಪಂಚಾಯ್ತಿ ಸಭಾ ಭವನದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ನಂತರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರೋತ್ಥಾನ ಯೋಜನೆ­ಯಡಿ­ ಮುಖ್ಯವಾಗಿ ಕುಡಿಯುವ ನೀರಿಗೆ ಆದ್ಯತೆ ನೀಡಿ ಉಳಿದ ಅನುದಾನದಲ್ಲಿ ಪಟ್ಟಣದ ಎಲ್ಲಾ ವಾರ್ಡಗಳಿಗೂ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗುವುದಾಗಿ ತಿಳಿಸಿದರು.

ಬರುವ ಜ. 2 ರಂದು ಎಸ್.ಎಸ್.­ಡಿ.ಪಿ. ಯೋಜನೆಯಡಿಯಲ್ಲಿ 5 ಕೋಟಿ ವೆಚ್ಚದಲ್ಲಿ ಹರಾಳು ಕ್ರಾಸಿನಿಂದ ಮಲ್ಲನಾಯಕನಹಳ್ಳಿ ಕ್ರಾಸ್‌ವರೆಗೂ ನಡೆಯುವ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು. ಈ ಸಂದರ್ಭದಲ್ಲಿ ಪಟ್ಟಣದಲ್ಲೇ ವಾಸ್ತವ್ಯ ಮಾಡಿ ಪಟ್ಟಣದಲ್ಲಿಯೆಡೆ ಸಂಚರಿಸಿ ವಾರ್ಡಗಳಲ್ಲಿರುವ ಕುಂದು ಕೊರತೆಗಳನ್ನು ಪರಿಶೀಲಿಸಿ ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಪೂರೈಸುವಂತೆ ನಿರ್ದೇಶಿಸಲಾಗುವುದು.

ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರತಿಯೊಂದು ವಾರ್ಡಗಳಲ್ಲಿ ನಿರ್ಮಿಸಲು ಮುಂದಾ­ಗುವೆ. ಮುಂಬರುವ ಬೇಸಿಗೆ­ಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗ­ದಂತೆ ಮುಂಜಾಗೃತ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಒತ್ತಡ ತರಲಾಗುವುದು ಎಂದರು.

ಪಟ್ಟಣ ಪಂಚಾಯ್ತಿಯನ್ನು ಪುರಸಭೆ ದರ್ಜೆಗೇರಿಸಲು ಶೀಘ್ರ ಕ್ರಮಕೈಗೊಳ್ಳು­ವಂತೆ ಸರ್ಕಾರಕ್ಕೆ ಒತ್ತಡ ಹಾಕುವುದಾಗಿ ತಿಳಿಸಿದರಲ್ಲದೇ ವಿವಾದಕ್ಕೊಳಪಟ್ಟಿರುವ ಪ.ಪಂ. ನೂತನ ಕಟ್ಟಡವನ್ನು ಹೊರ ವಲಯದ ವಿಶಾಲವಾದ ಪ್ರದೇಶದಲ್ಲಿ ನಿರ್ಮಿಸಲು ಈ ಹಿಂದೆ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿ ಅನುಮೋದನೆಗೆ ಕಳುಹಿಸ­ಲಾಗಿತ್ತು. ಈಗ ಉಂಟಾಗಿರುವ ವಿವಾದ ಹಿನ್ನೆಲೆಯಲ್ಲಿ ಪುನಃ ನಾಗರಿಕರ ಅಭಿಪ್ರಾಯಗಳನ್ನು ಪಡೆದು ಅಂತಿಮವಾಗಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ನಿಮ್ಮ ರಾಜಕೀಯ ಮುಂದಿನ ನಡೆ ಏನು? ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕರು ಯಾವುದೇ ಕಾರಣಕ್ಕೂ ಪುನಃ ಜೆ.ಡಿ.ಎಸ್. ಪಕ್ಷಕ್ಕೆ ಹಿಂತಿರುಗುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂಬುದನ್ನು ಸೂಕ್ತ  ಸಮಯದಲ್ಲಿ ತಿಳಿಸುತ್ತೇನೆ. ಇತ್ತೀಚೆಗೆ ನಡೆದ ಮರಿಯಮ್ಮಹಳ್ಳಿ ಪ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ನಿಮಗೆ ಮುಖಭಂಗ­ವಾಯಿತಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕರು ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ ಹಾಗಾಗಿ ಮುಜುಗರ­ಕ್ಕೊಳ­ಗಾಗುವಂತಹ ಪ್ರಶ್ನೆಯೇ ಇಲ್ಲ ಎಂದರು.

ಇತ್ತೀಚೆಗೆ ಪಟ್ಟಣಕ್ಕೆ ಭೇಟಿ ನೀಡಿದ ಸಂಸದ ಶ್ರೀರಾಮುಲು ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಹಿನ್ನಡೆಯಾಗಿವೆ ಎಂದು ಹೇಳಿದರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕರು ತಂಬ್ರಳ್ಳಿ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಆಯ್ಕೆ ಮಾಡಿಕೊಂಡ ಸಂಸದರು ಇದುವರೆಗೂ ನಯಾ ಪೈಸೆ ಅನುದಾನವನ್ನು ಮುಂಜೂರು ಮಾಡದ ಅವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರಲ್ಲದೇ ಕ್ಷೇತ್ರದಲ್ಲಿ ಸಾಕಾಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ ಎಂಬ ವಿಷಯ ಅವರ ಗಮನಕ್ಕೆ ಬರದಿರುವುದು ಆಶ್ಚರ್ಯಕರ ಸಂಗತಿ ಎಂದರು.

ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿರುವ ಕ್ರೀಡಾಂಗಣ, ಬಾಲಭವನ ಉದ್ಘಾಟನೆ, ನೂತನ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಯಾವ ಕ್ರಮ ಕೈಗೊಳ್ಳುವುವಿರಿ ಎಂಬ ಪ್ರಶ್ನೆಗೆ ಪರಿಶೀಲನೆ ಮಾಡಿ ಶೀಘ್ರದಲ್ಲಿಯೇ ಕ್ರಮಕೈಗೊಳ್ಳ­ಲಾಗುವುದು ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಧ್ಯಕ್ಷ ಅನಿಲ್ ಹೊಸಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ಬುಗ್ಗಳ್ಳಿ ಕೊಟ್ರೇಶ್, ಪ.ಪಂ. ಸದಸ್ಯರು, ತಹಶೀಲ್ದಾರ್‌ ಕೃಷ್ಣಮೂರ್ತಿ, ಮುಖ್ಯಾಧಿಕಾರಿ ಎಚ್.ಎಫ್. ಬಿದರಿ ಹಾಗೂ ಪಿ.ಎಚ್. ದೊಡ್ಡರಾಮಣ್ಣ, ದೇವರಮನಿ ಶಿವಚರಣ, ಗೊಳಿ ಮಲ್ಲಿಕಾರ್ಜುನ್, ರಾಂಪುರ ವಿವೇಕಾನಂದ, ಹರಾಳು ನಂಜಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT