ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷ ಬದಲಾದರೂ ಕಾಣದ ಹರ್ಷ

Last Updated 31 ಡಿಸೆಂಬರ್ 2016, 5:08 IST
ಅಕ್ಷರ ಗಾತ್ರ

ಕೊಟ್ಟೂರು: ಪಟ್ಟಣದ ಸಮಗ್ರ ಅಭಿವೃದ್ದಿಗೆ ಪೂರಕವಾಗ ಬೇಕಿದ್ದ 2016 ನೇ ವರ್ಷವು ಆರಕ್ಕೇರದೇ– ಮೂರಕ್ಕಿಳಿಯದೇ ಅತಂತ್ರ ಸ್ಥಿತಿಯಲ್ಲಿ ಕಾಲಗರ್ಭ ಸೇರುತ್ತಿದೆ.
ಅಭಿವೃದ್ಧಿ ಕುರಿತು ಬಹು ನಿರೀಕ್ಷೆ ಇಟ್ಟುಕೊಂಡಿದ್ದ ಪಟ್ಟಣದ ನಾಗರಿಕರು ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ, ಉದಾಸೀನ ಮನೋಭಾವ, ಸ್ಥಳೀಯ ಆಡಳಿತದ ನಿಧಾನ ಪ್ರವೃತ್ತಿಯಿಂದ ಬೇಸತ್ತಿದ್ದಾರೆ. ಸರ್ಕಾರದಿಂದ ಕೋಟಿಗಟ್ಟಲೇ ಅನುದಾನ ಮಂಜೂರಾದರೂ ಜನ ಹಿತಕ್ಕಿಂತ ಸ್ವಹಿತಾಸಕ್ತಿಯೇ ಮುಖ್ಯ ವಾಗಿ  ಅಭಿವೃದ್ಧಿ ಎಂಬುದು ಪಟ್ಟಣದಲ್ಲಿ ಮರೀಚಿಕೆಯಾಗಿದೆ.

ಜನಪ್ರತಿನಿಧಿಗಳು ಸಾರ್ವಜನಿಕ ಹಿತಾಸಕ್ತಿಗೆ ಸ್ಪಂದಿಸದೇ ಇರುವುದರಿಂದ ಇದುವರೆಗೂ ಕೊಟ್ಟೂರು ತಾಲ್ಲೂಕು ರಚನೆ ಕೈಗೂಡಲಿಲ್ಲ. ಶಿಥಿಲಾವಸ್ಥೆಯಲ್ಲಿರುವ ಪ.ಪಂ.ಕಛೇರಿ ನೂತನ ಕಟ್ಟಡ ನಿರ್ಮಾಣಕ್ಕೆ ಸೂಕ್ತ ನಿವೇಶನ ಆಯ್ಕೆ ಮಾಡಲು ಸಾದ್ಯವಾಗಿಲ್ಲ, ಸುಸಜ್ಜಿತ ನಾಡ ಕಚೇರಿ ನಿರ್ಮಾಣವಾಗಲಿಲ್ಲ. ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಲಿಲ್ಲ. ಪದವಿ ಕಾಲೇಜು ಮಂಜೂರಾಗಲಿಲ್ಲ.

ಬಾಲಭವನ ಉದ್ಘಾಟನೆಯ ಬಾಗ್ಯ ಕಾಣಲಿಲ್ಲ. ರಂಗ ಮಂದಿರ ರಂಗೇರಲಿಲ್ಲ. ಸರ್ಕಾರಿ ಪದವಿಪೂರ್ವ ಕಾಲೇಜ್‌ಗೆ ಮೂಲಸೌಲಭ್ಯ ದೊರೆಯಲಿಲ್ಲ. ಉಪ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪ್ರಾರಂಭವಾಗಲಿಲ್ಲ. ಹರಭಾವಿ– ಚಳ್ಳಕೆರೆ ಹೆದ್ದಾರಿ ನಿರ್ಮಾಣ ಸಮರ್ಪಕಗೊಳ್ಳಲಿಲ್ಲ. ಕೃಷಿ ಮಾರುಕಟ್ಟೆಯಲ್ಲಿ ರೈತ ಭವನ ನಿರ್ಮಾಣಕ್ಕೆ ಚಾಲನೆ ದೊರೆಯಲಿಲ್ಲ. ಸುಸಜ್ಜಿತ ಸಂತೆ ಮಾರುಕಟ್ಟೆ ನಿರ್ಮಾಣವಾಗಲಿಲ್ಲ. ಮುಖ್ಯರಸ್ತೆಯಲ್ಲಿ ಮಿತಿ ಮೀರಿದ ಬಿಡಾಡಿ ದನಕರುಗಳ ಹಾವಳಿ, ಟ್ರಾಫಿಕ್ ಕಿರಿಕಿರಿ ಹೀಗೆ ಸಮಸ್ಯೆಗಳೊಂದಿಗೆ ಪಟ್ಟಣದ ನಾಗರಿಕರು ದೈನಂದಿನ ಬದುಕು ಸಾಗಿಸುತ್ತಿದ್ದಾರೆ.

ಎರಡು ದಶಕಗಳ ಹಿಂದೆ ಪುರಸಭೆಯಾಗಿದ್ದ ಕೊಟ್ಟೂರು ಪಟ್ಟಣ ಪಂಚಾಯ್ತಿ ದರ್ಜೆಗಿಳಿದಿದ್ದು ಮೇಲೆರಲಿಲ್ಲ. ಪಟ್ಟಣದ 20 ವಾರ್ಡಗಳಲ್ಲಿ ಜನರು ಸಮಸ್ಯೆಗಳ ನಡುವೆ ಬಳಲುತ್ತಿದ್ದರೂ ಯಾರೂ ಅತ್ತ ಕಿವಿಗೊಡುತ್ತಿಲ್ಲ. ಅಲ್ಲಲ್ಲಿ ಸಿಸಿ ರಸ್ತೆ, ಚರಂಡಿಗಳು, ನಿರ್ಮಾಣವಾಗಿದೆಯಾದರೂ ಸಮಸ್ಯೆಗಳು ಸಂಪೂರ್ಣ ನಿವಾರಣೆಯಾಗಿಲ್ಲ.

ವಿವಿಧ ಬಡಾವಣೆಗಳಲ್ಲಿ ಉದ್ಯಾನಕ್ಕಾಗಿ ಸ್ಥಳ ಮೀಸಲು ಇಟ್ಟಿದ್ದರೂ ಉದ್ಯಾನಗಳಲ್ಲಿ ಹಸಿರು ಎಂಬುದು ಕಾಣದಾಗಿದೆ. ಕಾಲೇಜು ರಸ್ತೆ, ಕೆಳಗೇರಿ, ಮುದುಕನಕಟ್ಟೆ, ಬಸವನಬಾವಿ, ನೇಕಾರ ಓಣಿ, ಇತರೆಡೆಗಳಲ್ಲಿನ ಮಹಿಳಾ ಶೌಚಾಲಯಗಳು ಅಗತ್ಯ ಸೌಲಭ್ಯವಿಲ್ಲದೇ ಗಬ್ಬೆದ್ದು ನಾರುತ್ತಿವೆ. ಜೆಪಿ ನಗರ, ರಾಜೀವ ನಗರದಲ್ಲಿನ ಆಶ್ರಯ ಬಡಾವಣೆಗಳು ಮೂಲ ಸೌಲಭ್ಯಗಳನ್ನು ಕಾಣಬೇಕಾಗಿವೆ. ಕಸ, ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡದೇ ಚರಂಡಿಯ ಹೂಳು ಸ್ವಚ್ಛಗೊಳಿಸದೇ ಇರುವುದರಿಂದ ನಾಗರಿಕರ ಆನಾರೋಗ್ಯಕ್ಕೆ ಕಾರಣವಾಗಿದೆ. ಬಯಲು ಪ್ರದೇಶಗಳು ಶೌಚಾಲಯಗಳಾಗಿ ನಿರ್ಮಾಣವಾಗಿವೆ. ಪಟ್ಟಣದ ಬಹುತೇಕ ರಸ್ತೆಗಳು ಆಳವಾದ ತಗ್ಗು ಗುಂಡಿಗಳಿಂದ ಕೂಡಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.


ಇಷ್ಟೆಲ್ಲಾ ಸಮಸ್ಯೆಗಳ ಆಗರವಾಗಿರುವ ಪಟ್ಟಣ ಅಭಿವೃದ್ಧಿಯ ಪಥದತ್ತ ಸಾಗುವುದು ಯಾವಾಗ ? ಎಂಬ ಪ್ರಶ್ನೆಗೆ ವರ್ಷ ಕಳೆದರೂ ಉತ್ತರ ದೊರಕದಿರುವುದು ನಾಗರಿಕರ ದೌರ್ಭಾಗ್ಯ. ಇನ್ನಾದರೂ ಮುಂದಿನ ದಿನಗಳಲ್ಲಿ ಜನ ಪ್ರತಿನಿಧಿಗಳು ಇತ್ತ ಗಮನ ಹರಿಸುವರೇ ಎಂಬುದು ಪಟ್ಟಣದ ಜನರ ಪ್ರಶ್ನೆ...
- ಗುರುಪ್ರಸಾದ್. ಎಸ್.ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT