ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವವಿದ್ಯಾಲಯಕ್ಕೆ ಜಕಣಾಚಾರಿ ಹೆಸರಿಡಲು ಆಗ್ರಹ

Last Updated 31 ಡಿಸೆಂಬರ್ 2016, 5:47 IST
ಅಕ್ಷರ ಗಾತ್ರ

ಬೇಲೂರು: ಅಮರಶಿಲ್ಪಿ ಜಕಣಾಚಾರಿ ಇದ್ದಿದ್ದನ್ನು ಸಾಬೀತುಪಡಿಸುವ ಪುರಾವೆ ಗಳು ತಮ್ಮ ಬಳಿ ಇವೆ ಎಂದು ಹೇಳಿದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ, ರಾಜ್ಯದ ಯಾವುದಾದರೂ ವಿಶ್ವವಿದ್ಯಾ ಲಯಕ್ಕೆ ಜಕಣಾಚಾರಿ ಅವರ ಹೆಸರನ್ನು ಇಡಬೇಕು ಎಂದು ಆಗ್ರಹಿಸಿದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ವತಿಯಿಂದ ಬೇಲೂರು ಚನ್ನಕೇಶವ ದೇವಾಲಯದಲ್ಲಿ ಅಮರಶಿಲ್ಪಿ ಜಕಣಾಚಾರಿ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯಿಸಿ ಹಾಸನದಿಂದ ಬೇಲೂರಿನವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಶುಕ್ರವಾರ ಹಗರೆ ಗ್ರಾಮಕ್ಕೆ ಬಂದ ಸಂದರ್ಭದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಜಕಣಾಚಾರಿ ಅವರನ್ನು ಕೆಲವರು ಕಾಲ್ಪನಿಕ ವ್ಯಕ್ತಿ ಅವರು ಇರಲಿಲ್ಲ ಎಂದು ಹೇಳುತ್ತಾರೆ. ಆದರೆ, ವಾಸ್ತವದಲ್ಲಿ ಬೇಲೂರು ಚನ್ನಕೇಶವ ದೇಗುಲ ನಿರ್ಮಾಣ ಮಾಡಿದವರೇ ಜಕಣಾಚಾರಿ. ಬೇರೆ ಜನಾಂಗಗಳಂತೆ ನಮಗೂ ರಾಜಕೀಯ ಶಕ್ತಿ ಇದ್ದಿದ್ದರೆ, ಈ ಮಾತುಗಳು ಕೇಳಿ ಬರುತ್ತಿರಲಿಲ್ಲ. ಜಕಣಾಚಾರಿ ಇಲ್ಲ ಎನ್ನುವುದಕ್ಕೆ ದಾಖಲೆಗಳನ್ನು ನೀಡಲಿ ಎಂದು ಸವಾಲು ಒಡ್ಡಿದರು.

ವಿಶ್ವಕರ್ಮರನ್ನು ಗೌರವದಿಂದ ಕಾಣಬೇಕು. ಇದರಿಂದ ಮತ್ತಷ್ಟು ಜಕಣಾಚಾರಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಬಹುದು. ಪ್ರತಿಮೆ ಸ್ಥಾಪನೆಯಾಗುವವರೆಗೂ ನಾವು ಹೋರಾಟ ಮಾಡುತ್ತೇವೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಭಾರತೀಯ ಸರ್ವೇಕ್ಷಣಾ ಇಲಾಖೆಯ ಅನುಮತಿ ಪಡೆಯಬೇಕು ಎಂದು ಒತ್ತಾಯಿಸಿದರು.

3ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಂಸದ ಎಚ್‌.ಕೆ.ಜವರೇಗೌಡ ‘ದೇವಾಲಯ ಕಟ್ಟಿದಾಗಿನಿಂದ ಇಲ್ಲಿಯವರೆಗೆ ಜಕಣಾಚಾರಿ ಅವರ ಹೆಸರು ನಿರಂತರವಾಗಿ ಬಾಯಿಂದ ಬಾಯಿಗೆ ಹರಡಿ ಅವರ ಹೆಸರನ್ನು ಜೀವಂತವಾಗಿಟ್ಟಿದೆ. ಇದಕ್ಕೆ ಯಾವುದೇ ದಾಖಲೆ ಅಗತ್ಯವಿಲ್ಲ. ನಾವು ಇಂದು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದಿದ್ದರೂ ಬೇಲೂರಿನಂತಹ ಚನ್ನಕೇಶವ ದೇವಾಲಯ ನಿರ್ಮಾಣ ಮಾಡಲು ಸಾಧ್ಯವಿಲ್ಲ. ವಿಶ್ವಕರ್ಮ ಜನಾಂಗದವರಿಗೆ ಸಾಮಾಜಿಕ ಸ್ಥಾನಮಾನ ನೀಡಬೇಕು. ಸರ್ಕಾರದ ಸವಲತ್ತುಗಳು ಅವರಿಗೆ ದೊರಕಬೇಕು’ ಎಂದು ಹೇಳಿದರು.

ಪಾದಯಾತ್ರೆಯಲ್ಲಿ ಅರೇಮಾದನಹಳ್ಳಿ ಮಠದ ಶಿವಸುಜ್ಞಾನತೀರ್ಥ ಸ್ವಾಮೀಜಿ, ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಕಾಳಹಸ್ತೇಂದ್ರ ಸ್ವಾಮೀಜಿ, ವಿಶ್ವಕರ್ಮ ಸಮಾಜದ ಮುಖಂಡ ಎಚ್‌.ವಿ.ಹರೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT