ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಡಕಟ್ಟು ಜನರಿಗೆ ದೂರವಾದ ಸರ್ಕಾರಿ ಸವಲತ್ತು

ಅನುಷ್ಠಾನಕ್ಕೆ ಬಾರದ ಗಿರಿಜನ ಸಮಗ್ರ ಅಭಿವೃದ್ಧಿ ಇಲಾಖೆ
Last Updated 31 ಡಿಸೆಂಬರ್ 2016, 5:57 IST
ಅಕ್ಷರ ಗಾತ್ರ

ಹಾಸನ: ನಾಗರಿಕ ಸಮಾಜ ದಿನಕ್ಕೊಂದು ಆವಿಷ್ಕಾರದ ಜತೆಗೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದರೆ, ಮತ್ತೊಂದೆಡೆ ವಾಸಿಸಲು ಆಶ್ರಯವಿಲ್ಲದೆ ಹೀನಾಯ ಬದುಕು ಸವೆಸುತ್ತಿರುವವರ ದೃಶ್ಯ ಅಂಗಡಿಹಳ್ಳಿಯ ಬಯಲು ಪ್ರದೇಶದಲ್ಲಿ ಕಂಡು ಬರುತ್ತಿದೆ.

ಜಿಲ್ಲೆಯ ಬೇಲೂರು, ಅರಸೀಕೆರೆ, ಚನ್ನರಾಯಪಟ್ಟಣ ಹಾಗೂ ಇತರ ಕಡೆಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು, ಶಿಳ್ಳೆಕ್ಯಾತ, ಅಸಲರು, ಮೊದಲರು, ಸೋಲಿಗರು, ಹಕ್ಕಿಪಿಕ್ಕಿ, ಗೌಂಡಳ್ಳಿ ಜನರು ಇಂದಿಗೂ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಹೊಟ್ಟೆ ಪಾಡಿಗಾಗಿ ಬೇಟೆಯಾಡುವುದು, ಗಿಡಮೂಲಿಕೆಗಳ ವ್ಯಾಪಾರ, ಸೂಜಿ, ಪಿನ್ನು, ದಬ್ಬಣ ಮಾರಾಟ, ನೋವಿನ ಎಣ್ಣೆಗಳ ವ್ಯಾಪಾರ, ಕೀಲು ನೋವಿಗೆ ಎಣ್ಣೆ ತಿಕ್ಕುವುದು ಮೊದಲಾದ ಕಾಯಕದಲ್ಲಿ ತೊಡಗಿರುವ ಬುಡಕಟ್ಟು ಸಮುದಾಯದವರು ಅನುಭವಿಸು ತ್ತಿರುವ ನೋವು ಬೆಟ್ಟದಷ್ಟಿದೆ.

ಈ ಸಮುದಾಯದ ಅಭಿವೃದ್ಧಿಗಾಗಿ ಜಾರಿಗೆ ಬಂದಿರುವ ‘ಗಿರಿಜನ ಸಮಗ್ರ ಅಭಿವೃದ್ಧಿ ಇಲಾಖೆ’ ಹಾಸನದಲ್ಲಿ ಈವರೆಗೆ ಅನುಷ್ಠಾನಕ್ಕೆ ಬಂದಿಲ್ಲ.  ಬುಡಕಟ್ಟು ಜನಾಂಗದವರಿಗೆ ಶೇ 100ರಷ್ಟು ಸರ್ಕಾರಿ ಅನುದಾನದಲ್ಲಿ ಭೂಮಿ ನೀಡುವುದು, ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬಾವಿ ನಿರ್ಮಿಸುವುದು, ಸೋಲಾರ್ ದೀಪ, ಗ್ಯಾಸ್ ಸಿಲಿಂಡರ್ ಒದಗಿಸುವುದು, ಪಡಿತರ ವಿತರಣೆ ಮಾದರಿಯಲ್ಲಿ ವರ್ಷದ ಆರು ತಿಂಗಳು ಒಂದು ಕುಟುಂಬಕ್ಕೆ ಪ್ರತಿ ತಿಂಗಳು ₹ 1,500 ಮೌಲ್ಯದ ಆಹಾರ ಪದಾರ್ಥ ವಿತರಣೆ ಹೀಗೆ ಅನೇಕ ಯೋಜನೆಗಳನ್ನು ಇಲಾಖೆ  ಜಾರಿಗೆ ತಂದಿದ್ದರೂ ಇಲ್ಲಿಯವರಿಗೆ ಅದು ತಲುಪುತ್ತಿಲ್ಲ.

ಬುಡಕಟ್ಟು ಹಕ್ಕಿಪಿಕ್ಕಿ ಜನಾಂಗ ದವರು ಬೇಲೂರು ತಾಲ್ಲೂಕಿನ ಅಂಗಡಿಹಳ್ಳಿಯಲ್ಲಿ ವಾಸವಿದ್ದು, ಒಟ್ಟು 2,500 ಜನಸಂಖ್ಯೆ ಇದೆ. ಇದೇ ಅಂಗಡಿಹಳ್ಳಿಯಲ್ಲಿ ಶಿಳ್ಳೆಕ್ಯಾತ ಜನಾಂಗದ 100 ಮನೆಗಳಿವೆ. ಈ ಗ್ರಾಮದಲ್ಲಿ ಸುಮಾರು ಒಂದು ಸಾವಿರ ಮಂದಿ ವಾಸ ಮಾಡುತ್ತಾರೆ. ಹಕ್ಕಿಪಿಕ್ಕಿ ಜನಾಂಗದಲ್ಲಿ ಪದವಿ ಪಡೆದವರ ಸಂಖ್ಯೆ ಕೇವಲ 8-10 ಮಾತ್ರ. ಈಚಿನ ದಿನಗಳಲ್ಲಿ 1,300 ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯ ಅಂಗಡಿಹಳ್ಳಿಯಲ್ಲಿ ಹಕ್ಕಿಪಿಕ್ಕಿ ಜನಾಂಗದವರಿಗಾಗಿ ₹ 1.50 ಕೋಟಿ ವೆಚ್ಚದಲ್ಲಿ ಶಾಲೆ ನಿರ್ಮಿಸಲಾಗಿದೆ. ಇಲ್ಲಿ ಪ್ರಸ್ತುತ 20 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 

ಶಿಳ್ಳೆಕ್ಯಾತರ ಪ್ರಮುಖ ಬೇಡಿಕೆಗಳು
ಹಾಸನ: ಭೂಮಿ, ವಸತಿ ನಿವೇಶನ, ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕ ಆಹಾರ ಇವರ ಮುಖ್ಯ ಬೇಡಿಕೆಗಳಾಗಿವೆ. ಈ ಹಿಂದೆ ಅಂಗಡಿಹಳ್ಳಿಯಲ್ಲಿ 60 ನಿವೇಶನಗಳನ್ನು ಹಂಚಲಾಗಿತ್ತು. ಅದರಲ್ಲಿ 30 ಮನೆಗಳನ್ನು ಮಾತ್ರ ನಿರ್ಮಿಸಲಾಗಿದೆ.  ವಾಸಿಸಲು ಯೋಗ್ಯ ಮನೆಯಿಲ್ಲದೇ ಗುಡಿಸಲಿನಲ್ಲಿ 15ರಿಂದ 20 ಮಂದಿ ವಾಸಿಸುವಂತಾಗಿದೆ. 

ಅಂಗಡಿಹಳ್ಳಿ ಗ್ರಾಮದ ಸರ್ವೆ ನಂ 100 ಮತ್ತು 102ರಲ್ಲಿ ಸುಮಾರು 75 ಎಕರೆ ಗೋಮಾಳದಲ್ಲಿ 3 ಎಕರೆ 26 ಗುಂಟೆ ಭೂಮಿಯನ್ನು ಮೀಸಲಿರಿಸಲಾಗಿದೆ. ಅದೇ ಗ್ರಾಮದಲ್ಲಿ 12 ಎಕರೆ ರುದ್ರಭೂಮಿಗೆ ಮೀಸಲಿದೆ. ಈ ಜಾಗವೆಲ್ಲ  ಖಾಸಗಿ ವ್ಯಕ್ತಿಗಳು ಮತ್ತು ರಿಯಲ್ ಎಸ್ಟೇಟ್‌ ದಂಧೆಕೋರರ ಹಿಡಿತದಲ್ಲಿದೆ. ಈ ಬಗ್ಗೆ ತಹಶೀಲ್ದಾರ್, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಜಿಲ್ಲಾ ಪಂಚಾಯಿತಿಗೆ ಮನವಿ ಸಲ್ಲಿಸಿದರೂ  ಜಾಗವನ್ನು ಬಿಡಿಸಿಕೊಟ್ಟಿಲ್ಲ ಎಂಬುದು ಗ್ರಾಮದ ಶಿಳ್ಳೆಕ್ಯಾತ ಮತ್ತು ಹಕ್ಕಿಪಿಕ್ಕಿಗಳ ಅಳಲು.
ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ 360 ಅರ್ಜಿಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಅರಣ್ಯ ಕಾಯ್ದೆ-2006ರ ಪ್ರಕಾರ ಅರಣ್ಯವನ್ನೇ ಅವಲಂಬಿಸಿ ಜೀವನ ನಡೆಸುವ ಬುಡಕಟ್ಟು ಜನಾಂಗದವರಿಗೆ 5 ಎಕರೆ ಭೂಮಿ ಮಂಜೂರು ಮಾಡಬೇಕು.
ಆದರೆ, ಈವರೆಗೂ ಅದು ಜಾರಿಯಾಗಿಲ್ಲ, ಇಡೀ ಜಿಲ್ಲೆಯಲ್ಲಿ  ಇಲ್ಲಿಯವರೆಗೂ ಒಂದು ಎಕರೆ ಭೂಮಿಯನ್ನೂ ನೀಡಿಲ್ಲ.
- ಮಲ್ಲಿಕಾರ್ಜುನ ಕೊಚ್ಚರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT