ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇವರು,ದೊರೆಗಳನ್ನು ಧಿಕ್ಕರಿಸಿದ ಕುವೆಂಪು’

Last Updated 31 ಡಿಸೆಂಬರ್ 2016, 6:46 IST
ಅಕ್ಷರ ಗಾತ್ರ

ಚನ್ನಪಟ್ಟಣ: ದೇವರು ಮತ್ತು ದೊರೆಗಳನ್ನು ಧಿಕ್ಕರಿಸಿ ದಿಟ್ಟತನದಿಂದ ಸಾಹಿತ್ಯ ರಚಿಸಿ, ಮೊಟ್ಟಮೊದಲ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಕುವೆಂಪು ಅವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಬೆಳಗಿದರು ಎಂದು ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ ಬಣ್ಣಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಮನಗರ ಜಿಲ್ಲೆ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ವಿಶ್ವಮಾನವ ದಿನಾಚರಣೆ’ ಸಮಾರಂಭದಲ್ಲಿ ರಾಷ್ಟ್ರಕವಿ ಕುವೆಂಪು ಜೀವನ ಮತ್ತು ಸಾಹಿತ್ಯ ಕುರಿತು ಮಾತನಾಡಿದರು.

ದೇವರು ಕಸ ಗುಡಿಸುವ, ಹೊಲ ಉಳುವ, ಕುರುಡ, ಕುಂಟರನ್ನು ಹಾರೈಕೆ ಮಾಡುವವರ ಎದೆಯಲ್ಲಿದ್ದಾನೆ, ಗುಡಿಯಲ್ಲಿ ಬಂಧಿಯಾಗಿಲ್ಲ ಎಂದು ವೈಚಾರಿಕತೆ ಬಿರುಗಾಳಿ ಎಬ್ಬಿಸಿದವರು ಎಂದರು.ಉದ್ಘಾಟನೆ ಮಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಪುಟ್ಟಲಿಂಗಯ್ಯ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ಮಾಡಿದ ಕಲ್ಯಾಣ ಕ್ರಾಂತಿಯಂತೆ 20ನೇ ಶತಮಾನದಲ್ಲಿ ಕುವೆಂಪು ವಿಚಾರ ಕ್ರಾಂತಿ ಎಬ್ಬಿಸಿದ್ದರು.

ಪುರೋಹಿತಶಾಹಿಗಳು ದೇವರನ್ನು ಮುಂದಿಟ್ಟುಕೊಂಡು ಜೀವಭಯ ಹುಟ್ಟಿಸಿ ಶ್ರೀಸಾಮಾನ್ಯರನ್ನು ಶೋಷಣೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಶೂದ್ರ ವಿಮೋಚನೆಗೆ ಸಾಹಿತ್ಯಕ ಕ್ರಾಂತಿಯಿಂದ ಪ್ರಯತ್ನಿಸಿದವರು ಕುವೆಂಪು ಎಂದರು.

ಬಸವೇಶ್ವರ ಕಾಲೇಜಿನ ಪ್ರಾಚಾರ್ಯ ಗೌರಿಶಂಕರ ಸ್ವಾಮಿ ಮಾತನಾಡಿ, ಜಾತಿ ಧರ್ಮದ ಸಂಕೋಲೆಯಿಂದ ಮುಕ್ತರಾಗಿ ಮನುಷ್ಯರೆಲ್ಲಾ ಒಂದೇ ಮತ ಎನ್ನುವ ಬೀಜಮಂತ್ರವನ್ನು ಕೊಟ್ಟ ಕುವೆಂಪು ಅವರ ವಿಶ್ವಮಾನವತಾವಾದವನ್ನು ಅನುಸರಿಸಿದಾಗ ಭಯೋತ್ಪಾದನೆ, ಭ್ರಷ್ಟಾಚಾರ, ಕಾಳಧನ ಮುಂತಾದ ಸಮಸ್ಯೆಗಳು ಅಳಿದು ಮಾನವತೆ ಉಳಿಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕುವೆಂಪು ಅವರ 'ಜಲಗಾರ' ನಾಟಕ ಪ್ರದರ್ಶಿಸಿದರು. ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಪ್ರಾಚಾರ್ಯ ಎಸ್.ಟಿ.ತಿಮ್ಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಜಿ.ಶಿವಣ್ಣ ಕೊತ್ತೀಪುರ, ಜ್ಞಾನ ಸರೋವರ ಕಾಲೇಜಿನ ಪ್ರಾಚಾರ್ಯ ಜಯರಾಮೇಗೌಡ, ಉಪನ್ಯಾಸಕರಾದ ನಾಗೇಶ್, ರಾಧಾಕೃಷ್ಣ, ಶೈಲಜಾ, ಮಮತಾ, ಶ್ವೇತಾಮಣಿ, ಅರ್ಪಿತಾ  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT