ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದನಗಳಿಗೆ ಮೇವಿಲ್ಲ, ಕೂಲಿಗೆ ಕರೆಯುವವರಿಲ್ಲ’

ಬರ ಕಾಮಗಾರಿ ಪರಿಶೀಲನೆ: ಉಪಸಮಿತಿ ತಂಡದೆದುರು ರೈತರ ಅಳಲು
Last Updated 31 ಡಿಸೆಂಬರ್ 2016, 7:00 IST
ಅಕ್ಷರ ಗಾತ್ರ

ರಾಮನಗರ: ‘ಮಳೆಯಿಲ್ಲದೆ ಬೆಳೆಯಿಲ್ಲ. ನಮಗೆ ಕುಡಿಯಲು ನೀರಿಲ್ಲ, ದನಗಳಿಗೆ ಮೇವು ಸಿಗುತ್ತಿಲ್ಲ. ಹಳೆಯ ನೋಟು ಬಂದ್‌ ಆದ ಬಳಿಕ ಕೂಲಿಗೆ ಕರೆಯುವವರೂ ಇಲ್ಲ..

ಬರ ಕಾಮಗಾರಿ ಪರಿಶೀಲನೆಗೆಂದು ಬಂದ ಸಚಿವ ಸಂಪುಟ ಉಪ ಸಮಿತಿಯ ಮುಂದೆ ಹೀಗೆಂದು ರೈತರು ಅಹವಾಲು ಸಲ್ಲಿಸಿದರು. ಏನಾದರೂ ಮಾಡಿ ದನಗಳಿಗೆ ಮೇವಿನ ವ್ಯವಸ್ಥೆ ಮಾಡಿ, ನಮಗೆ ಕೂಲಿ ಕೊಡಿಸಿ... ಎಂದು ಬೇಡಿಕೆ ಇಟ್ಟರು.

ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದ ತಂಡವು ಶುಕ್ರವಾರ ರಾಮನಗರ ಹಾಗೂ ಕನಕಪುರ ತಾಲ್ಲೂಕುಗಳ ಹಳ್ಳಿಗಳನ್ನು ಸುತ್ತಿ ರೈತರಿಂದ ಮಾಹಿತಿ ಕಲೆ ಹಾಕಿತು. ಅಗತ್ಯವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸಲಹೆ–ಸೂಚನೆ ನೀಡಿತು.

ಮೊದಲಿಗೆ ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಹೆಗ್ಗಡಗೆರೆಯಲ್ಲಿ ಕೆರೆ ವೀಕ್ಷಣೆ ಮಾಡಿದ ತಂಡವು ಹುಚ್ಚಮ್ಮನದೊಡ್ಡಿಯಲ್ಲಿ ಹುರುಳಿ ಬೆಳೆ ಹಾನಿಯನ್ನು ಕಂಡಿತು.

ಕನಕಪುರ ತಾಲ್ಲೂಕಿನ ಮರಳವಾಡಿ ಹೋಬಳಿಯ ಕಾಳೇಗೌಡನದೊಡ್ಡಿ ಗ್ರಾಮದಲ್ಲಿ ರೋಗಬಾಧೆಗೆ ತುತ್ತಾದ ತೆಂಗಿನ ತೋಟ, ಹಾರೋಹಳ್ಳಿ ಹೋಬಳಿಯ ನೇರಳೆಕೆರೆದೊಡ್ಡಿ ಗ್ರಾಮ ಕುಡಿಯುವ ನೀರಿನ ಸಮಸ್ಯೆ, ಆನೆಹೊಸಹಳ್ಳಿಯಲ್ಲಿ ಕೃಷಿ ಹೊಂಡ ಪರಿಶೀಲನೆ, ಮೇವಿನ ಮಿನಿಕಿಟ್ ಬೆಳೆ ವೀಕ್ಷಣೆ, ದೊಡ್ಡಮರಳವಾಡಿ ಗ್ರಾಮದಲ್ಲಿ ಚೆಕ್ ಡ್ಯಾಂ ಕಾಮಗಾರಿ ಪರಿಶೀಲನೆ, ಮೇವಿನ ಮಿನಿಕಿಟ್ ಬೆಳೆ ವೀಕ್ಷಣೆ ನಡೆಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿತು.

ಲಿಂಗನಾಪುರ ಗ್ರಾಮದಲ್ಲಿ ರಾಗಿ ಬೆಳೆ ನಷ್ಟ ವೀಕ್ಷಿಸಿದ ಸಮಿತಿಯ ಸದಸ್ಯರು ಹುಣಸನಹಳ್ಳಿ ಗ್ರಾಮದಲ್ಲಿ ಸ್ಮಶಾನ ಅಭಿವೃದ್ಧಿ ಕಾಮಗಾರಿ, ತಡೆಗೋಡೆ ರಕ್ಷಣಾ ಕಾಮಗಾರಿ, ಪ್ರವಾಹ ನಿಯಂತ್ರಣ ಮತ್ತು ಸಂರಕ್ಷಣಾ ಕಾಮಗಾರಿ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿಯ ಕಾಮಗಾರಿ, ನೇರಳೆಹಟ್ಟಿ ಗ್ರಾಮದಲ್ಲಿ ಚೆಕ್‌ಡ್ಯಾಂ ಕಾಮಗಾರಿ, ಕೆಂಚೇಗೌಡನದೊಡ್ಡಿ ಗ್ರಾಮದಲ್ಲಿ ದನದ ಕೊಟ್ಟಿಗೆ ಕಾಮಗಾರಿ, ರೇಷ್ಮೆ ನರ್ಸರಿ ಕಾಮಗಾರಿ, ಶೌಚಾಲಯ ನಿರ್ಮಾಣ ಕಾಮಗಾರಿಗಳು. ಕೋಡಿಹಳ್ಳಿ ಗ್ರಾಮದಲ್ಲಿ ಗೋಶಾಲೆ ಪರಿಶೀಲನೆ ಮಾಡಿದರು.

ಹುಚ್ಚಮ್ಮನದೊಡ್ಡಿಯಲ್ಲಿ ಮುಸುಕಿನ ಜೋಳ ವೀಕ್ಷಿಸಿದ ಸಚಿವರು ಮೇವಿಗೆ ಸಿಗುವ ದರದ ಕುರಿತು ವಿಚಾರಿಸಿದರು.  ‘ಒಂದು ಟನ್‌ಗೆ ಹಸಿ ಮೇವಿಗೆ ₹2,800 ದರ ಇದೆ. ಸಿಪ್ಪೆ ಬಿಡಿಸದ ಜೋಳಕ್ಕೆ ಪ್ರತಿ ಕೆಜಿಗೆ ಕೇವಲ ₹8 ನೀಡಲಾಗುತ್ತಿದೆ. ನೀರಿನ ಕೊರತೆ ಹೀಗೆಯೇ ಮುಂದುವರಿದರೆ ಬೆಳೆಯುವುದು ಕಷ್ಟ’ ಎಂದು ರೈತರು ಅಲವತ್ತುಗೊಂಡರು.

ಸಂಸದ ಡಿ.ಕೆ. ಸುರೇಶ್‌, ವಿಧಾನ ಪರಿಷತ್ತು ಸದಸ್ಯ ಎಸ್‌. ರವಿ. ಜಿಲ್ಲಾಧಿಕಾರಿ ಡಾ.ಬಿ.ಆರ್.ಮಮತಾ, ಉಪವಿಭಾಗಾಧಿಕಾರಿ ಡಾ.ರಾಜೇಂದ್ರ ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪ್ರಶಾಂತ್, ರಾಮನಗರ ತಹಶೀಲ್ದಾರ್ ರಘುಮೂರ್ತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ದೀಪಾಜಾ, ಸಿಎಒ ಶೈಲಜಾ, ತೋಟಗಾರಿಕೆ ಇಲಾಖೆ ರೂಪಶ್ರೀ ,ಇತರ ಅಧಿಕಾರಿಗಳು ಭಾಗವಹಿಸಿದ್ದರು.

ಆಹಾ ಎಂಥಾ ರುಚಿ!
ಹುಚ್ಚಮ್ಮನದೊಡ್ಡಿಯಲ್ಲಿ ಮುಸುಕಿನ ಜೋಳ ಬೆಳೆ ಕಂಡ ಸಚಿವರಿಗೆ ರೈತರು ಎಳೆಯ ಜೋಳವೊಂದನ್ನು ಬಿಡಿಸಿ ಕೈಗಿಟ್ಟರು. ಅದನ್ನು ಎರಡು ತುಂಡು ಮಾಡಿದ ಸಚಿವ ಶಿವಕುಮಾರ್‌, ಸಚಿವ ಜಯಚಂದ್ರರಿಗೆ ನೀಡಿದರು. ಆಹಾ! ಏನು ರುಚಿ ಎಂದು ಚಪ್ಪರಿಸುತ್ತಲೇ ಅವರು ಅದನ್ನು ಚಪ್ಪರಿಸಿದರು.

‘ ಇಡೀ ಬೆಂಗಳೂರಿಗೆ ಬೇಬಿಕಾರ್ನ್ ಪೂರೈಕೆ ಆಗುವುದು ಇಲ್ಲಿಂದಲೇ. ಅವರದ್ದೇ ಕೊಳಚೆ ನೀರಿನಲ್ಲಿ ಬೆಳೆಯುವ ಕಾರಣ ರುಚಿಯೂ ಹೆಚ್ಚು’ ಎಂದು ಡಿಕೆಶಿ ವಿವರಣೆ ನೀಡಿದರು.

ನೋಟಕ್ಕಿಂತ ಸುತ್ತಿದ್ದೇ ಹೆಚ್ಚು!
ರಾಮನಗರದ ಕೆಲವೇ ಹಳ್ಳಿಗಳಿಗೆ ಭೇಟಿ ನೀಡಿದ ಸಚಿವರ ತಂಡವು ಕನಕಪುರದ ಹತ್ತಾರು ಹಳ್ಳಿಗಳನ್ನು ತಿರುಗಿ ಸುಸ್ತಾಯಿತು. ರೈತರ ಅಹವಾಲು ಆಲಿಸಿದ್ದಕ್ಕಿಂತ ಪ್ರಯಾಣ ಮಾಡಿದ ಅವಧಿಯೇ ದುಪ್ಪಟ್ಟಾಗಿತ್ತು. ಬರ ಕಾಮಗಾರಿ ನೋಡಲೆಂದು ಬಂದವರಿಗೆ ಜನರು ಫ್ಲೆಕ್ಸುಗಳನ್ನು ಹಾಕಿಸಿ ಶುಭ ಕೋರಿದ್ದರು. ಅಲ್ಲಲ್ಲಿ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು!

ಮಾರ್ಗದಲ್ಲಿ ಅಲ್ಲಲ್ಲಿ ರಸ್ತೆ ಹಾಳಾಗಿದ್ದು, ಬಸ್ಸಿನ ಕುಲುಕಾಟಕ್ಕೆ ಬೇಸತ್ತು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಕೆಳಗಿಳಿದ ಪ್ರಸಂಗವೂ ನಡೆಯಿತುನೀಡಿದರು.

*
ಕಳೆದ 50 ವರ್ಷಗಳಲ್ಲಿ ಕಂಡರಿಯದಂತಹ ಬರ ಎದುರಾಗಿದೆ. ಜಿಲ್ಲೆಯ ಜನರು ಇದರಿಂದ ತೊಂದರೆ ಅನುಭವಿಸುತ್ತಿರುವುದು ನಮ್ಮ ಗಮನಕ್ಕೆ ಬಂತು.
-ಟಿ.ಬಿ. ಜಯಚಂದ್ರ,
ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT