ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಮೀಸಲಾತಿ ವಿರೋಧಿಸಿದವರಿಗೆ ಪಾಠ

Last Updated 31 ಡಿಸೆಂಬರ್ 2016, 8:54 IST
ಅಕ್ಷರ ಗಾತ್ರ

ರಾಯಚೂರು: ಪರಿಶಿಷ್ಟ ಜಾತಿ ಒಳಮೀಸಲಾತಿಗೆ ವಿರೋಧ ಪಡಿಸಿದವರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎನ್‌.ಮೂರ್ತಿ ಎಚ್ಚರಿಕೆ ನೀಡಿದರು.

ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಕಲಬುರ್ಗಿ ವಿಭಾಗೀಯ ಸಮಿತಿಯಿಂದ ಡಾ.ಅಂಬೇಡ್ಕರ್‌ ಮಹಾ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಸಮತಾ ಭಾರತದ ಸಮಾನತೆ ಮೀಸಲಾತಿ ನಿಷ್ಕರ್ಷೆ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಮೀಸಲಾತಿ ಸಂವಿಧಾನ ಬದ್ಧ ಹಕ್ಕು. ಇದು ಯಾರ ಭಿಕ್ಷೆ ಅಥವಾ ಕರುಣೆ ಅಲ್ಲ. ಶಾಸಕ ಮಾನಪ್ಪ ವಜ್ಜಲ್ ಸೇರಿದಂತೆ ಒಳಮೀಸಲಾತಿಗೆ ವಿರೋಧಿಸುವವರು ಒಂದೇ ಜಾತಿಯ ಮತಗಳಿಂದ ಗೆದ್ದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಬೆಲೆ ತೆರಬೇಕಾಗುತ್ತದೆ ಎಂದರು.

ಮೀಸಲಾತಿ ಹುಟ್ಟಿಕೊಂಡಿದ್ದು ಕೂಡ ಸಮಾಜದ ಮೇಲ್ವರ್ಗಗಳಿಂದ ಬ್ರಾಹ್ಮಣರಿಗೆ ಶಿಕ್ಷಣ, ಕ್ಷತ್ರೀಯರಿಗೆ ಯುದ್ಧ ಹಾಗೂ ಸಂಪತ್ತು ಹಾಗೂ ವೈಶ್ಯರಿಗೆ ವ್ಯಾಪಾರ ಮೀಸಲಾಗಿತ್ತು.  ಕೆಳ ವರ್ಗದವರಿಗೆ ಅವಕಾಶ ಇರಲಿಲ್ಲ. ದೇಶವನ್ನು ಆಳುವವರು ದಲಿತರಾಗಬೇಕು ಎಂಬುದನ್ನು ಅಂಬೇಡ್ಕರ ಅವರು ಹೇಳಿದ್ದರು. ಆದರೆ ಇಂದಿಗೂ ದಲಿತರು ಮುಖ್ಯಮಂತ್ರಿ ಆಗದಿರುವುದು ನಾಡಿನ ದುರಂತ ಎಂದು ವ್ಯಾಖ್ಯಾನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರಿಗೆ 2 ಎಕರೆ ಭೂಮಿ, ಉದ್ಯೋಗ ಹಾಗೂ ಪರಿಹಾರ ನೀಡಬೇಕು. ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕು. ಕಾಲಹರಣ ಮಾಡುತ್ತ ಸಮಾಜದಲ್ಲಿ ಗೊಂದಲ ಸೃಷ್ಟಿಸಬಾರದು ಎಂದು ಒತ್ತಾಯಿಸಲಾಗಿತ್ತು ಎಂದರು.

ಮುಖಂಡ ಆನಂದ ಭಂಡಾರಿ ಮಾತನಾಡಿ, ಜಾತಿ, ಧರ್ಮ ಹಾಗೂ ದೇವರು ಕೂಡ ದಲಿತರನ್ನು ತುಳಿತಕ್ಕೆ ದೂಡಿವೆ. ಇವುಗಳಲ್ಲಿ ಯಾವುದೊಂದು ದಲಿತರಿಗೆ ಒಳ್ಳೆಯದನ್ನು ಮಾಡಿಲ್ಲ. ಇನ್ನಾದರೂ ಮೌಢ್ಯದಿಂದ ಹೊರಬಂದು, ಶಿಕ್ಷಣ ಪಡೆದು ಉತ್ತಮ ಬದಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು
.
ಮುಖಂಡ ನೇಹಾ ಮಲ್ಲೇಶ ಮಾತನಾಡಿ, ಬುದ್ಧ, ಬಸವ ಹಾಗೂ ಅಂಬೇಡ್ಕರ ಅವರ ಆದರ್ಶಗಳು ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಲಬುರ್ಗಿ ವಿಭಾಗೀಯ ಅಧ್ಯಕ್ಷ ಬಸವರಾಜ ಸಾಸಲಮರಿ ಮಾತನಾಡಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹೆಬೂಬ ಪಾಷ ಮೂಲಿಮನಿ ವಿಷಯ ಮಂಡನೆ ಮಾಡಿದರು.

ರಾಜ್ಯ ಸಮಿತಿ ನಿರ್ದೇಶಕ ಜೆ.ಲಿಂಗಯ್ಯ, ರಂಗರಾಜು, ಜೆ.ಬಿ.ರಾಜು, ಪ್ರಭುರಾಜು, ನಾಗಪ್ಪ ಟೈಗರ್, ರುದ್ರಪ್ಪ ವರೆಗೋಡದಿನ್ನಿ, ಉದಯ ಕುಮಾರ, ದುರ್ಗಪ್ಪ ಕಟ್ಟಿಮನಿ, ರಾಜು, ಮೌನೇಶ ಗಾಣಧಾಳ, ಹನುಮಂತ ಶೀಲಹಳ್ಳಿ, ಸಚ್ಚಿನ್‌ ಅತ್ತನೂರು, ಹನುಮಂತಪ್ಪ ಇತರರು ಉಪಸ್ಥಿತರಿದ್ದರು. ಉಪನ್ಯಾಸಕ ಬಸವರಾಜ ಬ್ಯಾಗವಾಟ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT