ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿ ಮಣಿ ದಣಿ...

Last Updated 31 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಲಿಗಾಗಿ ರಂಪ ಮಾಡುತ್ತ ಕೈಕಾಲು ಬಡಿಯುವ ತೊಟ್ಟಿಲ ಕಂದಮ್ಮ; ಕುಕ್ಕರ್‌ ಸೀಟಿಗೆ ಓಗೊಟ್ಟು ದಾಪುಗಾಲಿನಲ್ಲಿ ಅಡುಗೆಕೋಣೆಗೆ ಧಾವಿಸುವ ಅಮ್ಮ; ಮಾಲ್‌ ಮಲ್ಟಿಪ್ಲೆಕ್ಸ್‌ಗಳಲ್ಲಿ ಕೈಕೈ ಹೆಣೆದುಕೊಂಡು ಸುಳಿದಾಡುವ ತರುಣ ತರುಣಿ; ಇಯರ್ ಫೋನ್‌ ಕಿವಿಗೆ ತಗುಲಿಸಿಕೊಂಡು ಮೈ ಮರೆಯುವ ಪುಟಾಣಿ – ಗಮನಿಸಿ ನೋಡಿ, ಈ ಚಲನೆಗಳಲ್ಲಿ ನೃತ್ಯದ ಒಂದು ಕ್ಷಣವಿದ್ದಂತಿದೆ. ಮತ್ತೂ ಸೂಕ್ಷ್ಮವಾಗಿ ನೋಡಿದರೆ, ನಾವೂ ಸೇರಿದಂತೆ ಇಡೀ ಜಗತ್ತು ಯಾವುದೋ ಸ್ವರಕ್ಕೆ ಓಗೊಟ್ಟಂತೆ, ‘ಇದ್ದದ್ದು ಮರೆಯೋಣ /  ಇಲ್ಲದ್ದು ತೆರೆಯೋಣ’ ಎನ್ನುವಂತೆ ಹೆಜ್ಜೆಹಾಕುತ್ತಿದೆ, ‘ಕುಣಿಯೋಣು ಬಾರಾ’ ಎನ್ನುವಂತಿದೆ. ಹಾಗಾದರೆ, ಕುಣಿಯುವುದು ಈ ಯುಗದ ಲಕ್ಷಣವಾ? 
 
‘ಯಾರೂ ನಿನ್ನನ್ನು ಗಮನಿಸುತ್ತಿಲ್ಲ ಎಂದುಕೊಂಡು ನರ್ತಿಸು, ಯಾರೂ ನಿನ್ನನ್ನು ಕೇಳಿಸಿಕೊಳ್ಳುತ್ತಿಲ್ಲ ಎಂಬಂತೆ ಹಾಡು’ ಎನ್ನುವುದು ಇಂಗ್ಲಿಷ್‌ನ ಜನಪ್ರಿಯ ಉಕ್ತಿ. ಅದನ್ನು ಈಗಿನ ಕಾಲಘಟ್ಟಕ್ಕೆ ಬದಲಿಸುವುದಾದರೆ – ‘ಎಲ್ಲರೂ ನೋಡುವಂತೆ ನರ್ತಿಸು; ಎಲ್ಲರೂ ಕೇಳುವಂತೆ ಹಾಡು’. 
 
ನೃತ್ಯ ಎನ್ನುವುದು ಮುಚ್ಚಟೆಯಾಗಿ, ಮುಜುಗರದ ಸಂಗತಿಯಾಗಿ ಈಗ ಉಳಿದಿಲ್ಲ. ಪ್ರತಿಯೊಬ್ಬರಲ್ಲೂ ಇರಬಹುದಾದ ಕುಣಿಯುವ ಆಸೆಗೆ ಮಾಧ್ಯಮಗಳು ಇಂಬುನೀಡುತ್ತಿವೆ. ಸುಪ್ತ ಬಯಕೆಗಳನ್ನು ಹಿಂಜರಿಕೆಯಿಲ್ಲದೆ ವ್ಯಕ್ತಪಡಿಸಲು ವೇದಿಕೆ ನಿರ್ಮಿಸಿಕೊಡುತ್ತಿವೆ. ರಿಯಾಲಿಟಿ ಷೋಗಳು ಸ್ಪರ್ಧೆಯ ಹೆಸರಿನಲ್ಲಿ ಅವಕಾಶಗಳನ್ನು ಕಲ್ಪಿಸಿದರೆ, ಕಾರ್ಪೊರೇಟ್‌ ವಲಯಗಳು ಮನರಂಜನೆಯಾಗಿ ವೃತ್ತಿಪರ ನೃತ್ಯ ತಂಡಗಳಿಗೆ ಜಾಗ ನೀಡುತ್ತಿವೆ. ಟೀವಿ ಕಾರ್ಯಕ್ರಮಗಳಲ್ಲಿ ಗಂಡ–ಹೆಂಡತಿಯರು ತುಸು ನಾಚುತ್ತಲೇ ಹಾಡಿಗೆ ಹೆಜ್ಜೆ ಹಾಕುತ್ತಾರೆ. ಅತಿಥಿಗಳಾಗಿ ಬರುವ ತಾರೆಯರೂ ನರ್ತಿಸದೆ ಹೋಗುವುದಿಲ್ಲ. ಇಲ್ಲಿ ನೃತ್ಯಶಾಸ್ತ್ರದ ಕಟ್ಟುಪಾಡುಗಳಿಲ್ಲ. ಸಾಮಾಜಿಕ ಅಥವಾ ಕೌಟುಂಬಿಕ ನಿರ್ಬಂಧದ ಭಯವಿಲ್ಲ. ವಯಸ್ಸು, ಲಿಂಗದ ಮಿತಿಯಂತೂ ನಗಣ್ಯ. 
 
ಇನ್ನೇನು ಕಾಲಗರ್ಭಕ್ಕೆ ಸಲ್ಲುವಂತಿದ್ದ ಹಲವು ಜಾನಪದ ನೃತ್ಯ ಪ್ರಕಾರಗಳು ಆಧುನಿಕ ಸಂದರ್ಭದಲ್ಲಿ ಮತ್ತೆ ನಳನಳಿಸುತ್ತಿವೆ; ಜನರಲ್ಲಿ ಒಂದಾಗಿ ಸಾಗುತ್ತಿವೆ. ಆದರೆ, ಶಾಸ್ತ್ರೀಯ ಮತ್ತು ಜಾನಪದ ನೃತ್ಯಪ್ರಕಾರಗಳಿಗಿಂತಲೂ ಹೆಚ್ಚು ಸುಲಭವಾಗಿ ರಸಿಕರಿಗೆ ಆಪ್ತವೆನ್ನಿಸುವುದು ‘ಸಮಕಾಲೀನ ನೃತ್ಯ’ (ಕಂಟೆಂಪೊರೆರಿ). 20ನೇ ಶತಮಾನದ ಮಧ್ಯಭಾಗದಲ್ಲಿ ಅಮೆರಿಕ ಮತ್ತು ಯುರೋಪ್‌ಗಳಲ್ಲಿ ಜನಪ್ರಿಯವಾಗಿದ್ದ ಸಮಕಾಲೀನ ನೃತ್ಯ, ಈಗ ನಮ್ಮ ನೆಲದಲ್ಲೂ ನೃತ್ಯಪ್ರಿಯರಿಗೆ ಅಚ್ಚುಮೆಚ್ಚು. ವರ್ಷಗಟ್ಟಲೆ ತರಗತಿಗೆ ಹೋಗಬೇಕಿಲ್ಲ. ದೇಹ ಮತ್ತು ಹಾವಭಾವ ಹೀಗೆಯೇ ಇರಬೇಕೆಂದಿಲ್ಲ. ಯಾವ ನಿಯಮಗಳೂ ಅಡ್ಡಬರುವುದಿಲ್ಲ – ಇವೆಲ್ಲ ನಂಬಿಕೆಗಳು ಸಮಕಾಲೀನ ನೃತ್ಯದ ಜನಪ್ರಿಯತೆಗೆ ಕಾರಣವಾಗಿದೆ. ಆದರೆ, ಕಸುಬುದಾರ ನೃತ್ಯಪಟುಗಳ ಹಿನ್ನೆಲೆ ಕೆದಕಿದರೆ, ವರ್ಷಗಟ್ಟಲೆ ಅವರು ಪಟ್ಟ ಶ್ರಮದ ಕಥನಗಳು ಎದುರಾಗುತ್ತವೆ. ‘ಕಂಟೆಂಪೊರರಿ ಡಾನ್ಸ್‌’ ಕಲಿಸುವ ಅಂತರರಾಷ್ಟ್ರೀಯ ಸಂಸ್ಥೆಗಳೂ ಇವೆ ಎನ್ನುವುದನ್ನು ಗಮನಿಸಬೇಕು. 
 
ಸಾಂಪ್ರದಾಯಿಕ ನೃತ್ಯಪ್ರಕಾರದ ನಿಯಮಗಳಿಗೆ ಸೆಡ್ಡು ಹೊಡೆಯುವ ಉದ್ದೇಶ ಸಮಕಾಲೀನ ನೃತ್ಯದ ಮುಕ್ತಛಂದದಲ್ಲಿ ಇರುವಂತಿದೆ. ಭಾರತದ ಸನ್ನಿವೇಶದಲ್ಲಿ ಸಮಕಾಲೀನ ನೃತ್ಯ ಪ್ರಕಾರವನ್ನು ಒಪ್ಪಿಕೊಳ್ಳುವವರಲ್ಲಿ ಶಾಸ್ತ್ರೀಯವಾಗಿ ನೃತ್ಯ ಅಭ್ಯಾಸ ಮಾಡಿದವರೂ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ ಎಂಬುದೂ ವಿಶೇಷ. ಶಾಸ್ತ್ರೀಯ ಮತ್ತು ಸಮಕಾಲೀನ ನೃತ್ಯ ಪ್ರಕಾರಗಳ ನಡುವಣ ಕೊಡು–ಕೊಳ್ಳುವಿಕೆಯ ಪ್ರಕ್ರಿಯೆಯನ್ನು ವಿರೋಧಿಸುವವರು ಇರುವಂತೆಯೇ, ಅವುಗಳನ್ನು ಒಪ್ಪಿಕೊಳ್ಳುವವರೂ ಇದ್ದಾರೆ. ಸಮಕಾಲೀನಕ್ಕೂ ಪೂರ್ವದಲ್ಲಿ ಪಶ್ಚಿಮದಲ್ಲಿ ‘ಮಾಡ್ರರ್ನ್‌ ಡ್ಯಾನ್ಸ್‌’ ಚಾಲ್ತಿಗೆ ಬಂದಿತ್ತು. ಇದು ಸಾಂಪ್ರದಾಯಿಕ ‘ಬ್ಯಾಲೆ’ ಶೈಲಿಗೆ ವಿರುದ್ಧವಾಗಿ, ಅದರಿಂದಲೇ ಸ್ಫೂರ್ತಿಗೊಂಡು ಹುಟ್ಟಿದ ಶೈಲಿ. ಇದಕ್ಕೆ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅಂಶಗಳೂ ಕಾರಣವಾಗಿದ್ದವು. ಈ ಶೈಲಿಗೆ ‘ಫ್ರೀ ಡಾನ್ಸ್‌’ ಅಥವಾ ‘ಈಸ್ತೆಟಿಕ್‌ ಡಾನ್ಸ್‌’ ಎಂಬ ಹೆಸರೂ ಇದೆ. 
 
ಮಾಧ್ಯಮಗಳ ಪ್ರಭಾವಳಿ
ನೃತ್ಯ ಹೊಸ ಸ್ವರೂಪ, ದಿಢೀರ್ ಜನಪ್ರಿಯತೆ ಪಡೆದುಕೊಂಡು, ಚೌಕಟ್ಟು–ಸಂಪ್ರದಾಯಗಳನ್ನು ಮೀರುತ್ತಿರುವುದಕ್ಕೆ ಮಾಧ್ಯಮಗಳೇ ಕಾರಣ ಎನ್ನುವುದು ನೃತ್ಯ ಸಂಯೋಜಕ ಹಾಗೂ ಸಿನಿಮಾ ನಿರ್ದೇಶಕ ಹರ್ಷ ಅವರ ಅಭಿಪ್ರಾಯ. ‘‘ಸಿನಿಮಾಗಳನ್ನು ನೋಡಿದ ಮಕ್ಕಳು ತಾರೆಯರ ನೃತ್ಯವನ್ನು ಅನುಕರಿಸುವುದು ಸಹಜ. ಅದಕ್ಕೂ ಮಿಗಿಲಾಗಿ ಟೆಲಿವಿಷನ್ ಕಾರ್ಯಕ್ರಮಗಳು ಪ್ರಭಾವ ಬೀರುತ್ತವೆ’’ ಎಂದವರು ವಿಶ್ಲೇಷಿಸುತ್ತಾರೆ. ‘‘ನಮ್ಮಲ್ಲಿ ರಸ್ತೆಯಲ್ಲಿ ಕುಣಿಯುವ ಪ್ರಕಾರವಿದೆ. ಅದು ಹೊಟ್ಟೆಪಾಡಿಗಾಗಿ ನಡೆಯುವ ‘ದೊಂಬರಾಟ’. ಅದೇ ಅಮೆರಿಕದಲ್ಲಿ ‘ಸ್ಟ್ರೀಟ್‌ ಡಾನ್ಸ್‌’ ಬಲು ಜನಪ್ರಿಯ. ತಲೆಯನ್ನು ನೆಲಕ್ಕೆ ಊರಿ ತಿರುಗುವ, ಚಿಮ್ಮುವ ಅವರ ಶೈಲಿಯನ್ನು ನಾವೂ ಈಗ ಅಳವಡಿಸಿಕೊಂಡಿದ್ದೇವೆ’’ ಎನ್ನುವ ಹರ್ಷ ಅವರ ಮಾತಿನಲ್ಲಿ, ನೃತ್ಯ ವೇದಿಕೆಯಿಂದ ಬಯಲಿಗೆ ಬಂದಿರುವ ಸೂಚನೆಯಿದೆ. 
 
ಒಂದಂತೂ ನಿಜ, ಜನ ನೃತ್ಯವನ್ನು ನೋಡುವ ಬಗೆ ಬದಲಾಗಿದೆ. ‘‘ನೃತ್ಯ ಮಾಡುತ್ತೇನೆ ಎಂದರೆ – ‘ಬದುಕಿಗೆ ಏನು ಮಾಡಿಕೊಳ್ಳುತ್ತಿ?’ ಎಂದು ಕೇಳುವ ಕಾಲವಿತ್ತು. ‘ಈಗ ಕೊರಿಯೊಗ್ರಾಫರ್ ಆಗುತ್ತೀಯಾ?’ ಎಂದು ಕೇಳುವ ಕುತೂಹಲ ಬೆಳೆದಿದೆ. ಮಾತಿನಲ್ಲೂ ನೃತ್ಯ ಅಪ್‌ಗ್ರೇಡ್‌ ಆಗಿದೆ. ಮಿಗಿಲಾಗಿ ನೃತ್ಯವೇ ಒಂದು ಧರ್ಮವಾಗಿ ಬೆಳೆದಿದೆ’ ಎನ್ನುತ್ತಾರೆ ಅವರು.
 
ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಶ್ರುತಿ ಹರಿಹರನ್ ಅವರ ಅನುಭವವೂ ವಿಭಿನ್ನವಲ್ಲ. ‘‘ಓದು ಮುಗಿಸಿದ ಬಳಿಕ ಕಾರ್ಪೊರೇಟ್‌ ಕಂಪೆನಿಯ ಉದ್ಯೋಗಕ್ಕೆ ಸೇರಿಕೊಳ್ಳುವುದಿಲ್ಲ, ಡಾನ್ಸ್‌ ಮಾಡುತ್ತೇನೆ ಎಂದಾಗ ಎಲ್ಲರೂ ಹುಬ್ಬೇರಿಸಿದ್ದರು. ಅದೊಂದು ಉದ್ಯೋಗವೇ ಎನ್ನುವುದು ಅವರ ಪ್ರಶ್ನೆಯಾಗಿತ್ತು. ಈಗಲೂ ನನ್ನ ಅಜ್ಜಿ ಭಾವಿಸಿರುವುದು ನಾನು ಕೆಲಸವಿಲ್ಲದ ವ್ಯಕ್ತಿ ಎಂದೇ. ‘ಸುಮ್ಮನೆ ಒಂದು ಒಳ್ಳೆಯ ಕೆಲಸ ಹುಡುಕಿಕೊಳ್ಳಬಾರದೆ’ ಎಂದು ಆಗಾಗ ಕೇಳುತ್ತಿರುತ್ತಾರೆ’’ ಎನ್ನುವ ಅವರು, ನೃತ್ಯವನ್ನು ಒಂದು ವೃತ್ತಿ ಎಂದು ಒಪ್ಪಿಕೊಳ್ಳುವ ದಿನಗಳು ಬರುತ್ತಿವೆ ಎಂಬುದನ್ನು ಒತ್ತಿಹೇಳುತ್ತಾರೆ. 
 
ಚೌಕಟ್ಟಿನಾಚೆಯ ಚಿತ್ರಗಳು
ಸಮಾಜದ ವಿವಿಧ ವರ್ಗಗಳ ಮೇಲೆ ಜಾನಪದ–ಶಾಸ್ತ್ರೀಯ–ಸಮಕಾಲೀನ ನೃತ್ಯಗಳು ತಮ್ಮದೇ ಪ್ರಭಾವ ಬೀರುವ ಮೂಲಕ ನೃತ್ಯದ ಕುರಿತ ಮಡಿವಂತಿಕೆಯ ಮನೋಭಾವವನ್ನು ಸಡಿಲ ಮಾಡುವಲ್ಲಿ ಯಶಸ್ವಿಯಾಗಿವೆ, ಹೀಗಿದ್ದರೂ, ಭಾರತದಂತಹ ದೇಶದಲ್ಲಿ ನೃತ್ಯವನ್ನು ಪರಿಪೂರ್ಣ ಉದ್ಯೋಗವನ್ನಾಗಿ ಪರಿಗಣಿಸುವ, ನೃತ್ಯ ಕಲಾವಿದರನ್ನು ಗೌರವಿಸುವ ಪರಿಪಾಠ ಬೆಳೆದಿಲ್ಲ ಎನ್ನುವ ಬೇಸರ ಅನೇಕರಲ್ಲಿದೆ. ನೃತ್ಯಕಲೆಯ ಬಗೆಗೆ, ‘ಕುಣಿಯುವುದು’ ಎಂಬ ಅಸಡ್ಡೆಯ ಭಾವ ಕೆಲವರಲ್ಲಿದೆ. ‘ನೃತ್ಯ’ ಎಂಬ ಗೌರವ ‘ಕುಣಿಯುವುದು’ ಪದಕ್ಕೆ ದಕ್ಕುವುದಿಲ್ಲ. ಈ ಅನಿಸಿಕೆ ರೂಪುಗೊಳ್ಳುವಲ್ಲಿ ಸಿನಿಮಾಗಳ ಕಾಣಿಕೆಯೂ ಇದೆ. ‘ಈಸ್ಟ್‌ಮನ್‌ ಕಲ್ಲರ್‌’ ದಿನಗಳ ಕ್ಯಾಬರೆ ಹಾಗೂ ಈಗಿನ ‘ಐಟಂ ಡಾನ್ಸ್‌’ಗಳನ್ನು ಕೌಟುಂಬಿಕ ವಾತಾವರಣದಲ್ಲಿ ಒಪ್ಪುವುದು ಕಷ್ಟ. ಕ್ಯಾಬರೆಯಿಂದಾಗಿಯೇ ಹೆಸರು ಮಾಡಿದ್ದ ಸಿಲ್ಕ್‌ ಸ್ಮಿತಾ, ಡಿಸ್ಕೊ ಶಾಂತಿ, ಜಯಮಾಲಿನಿ ಮುಂತಾದ ಅಪ್ಸರೆಯರು ಒಂದು ತಲೆಮಾರಿನ ತರುಣರನ್ನು ಕುಣಿಸಿದ್ದರು. ಈಗ ನಾಯಕಿಯಾಗಿ ಹೆಸರು ಮಾಡಿದವರೇ ‘ಐಟಂ ಸಾಂಗ್‌’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ನಟಿಯರಿಗೆ ಮತ್ತು ನಿರ್ದೇಶಕರಿಗೆ ಹೆಮ್ಮೆಯ ಸಂಗತಿಯೂ ಹೌದು. 
 
‘ಸಿನಿಮಾಗಳ ಹಾವಳಿಯಲ್ಲಿ ಶಾಸ್ತ್ರೀಯ ನೃತ್ಯಗಳ ಮಹತ್ವ ಕಡಿಮೆಯಾಗಿದೆ’ ಎಂಬ ವಾದವನ್ನು ಹರ್ಷ ಒಪ್ಪಿಕೊಳ್ಳುವುದಿಲ್ಲ. ಯಾವತ್ತಿಗೂ ಶಾಸ್ತ್ರೀಯ ಪ್ರಕಾರವೇ ತಾಯಿ ಸ್ಥಾನದಲ್ಲಿರುತ್ತದೆ. ಅದರ ಶಿಸ್ತು, ಬದ್ಧತೆಗಳು ಯಾವ ಪ್ರಕಾರದಲ್ಲಿಯೂ ಕಾಣಿಸಲು ಸಾಧ್ಯವಿಲ್ಲ. ಸಿನಿಮಾಗಳಲ್ಲಿ ಶಾಸ್ತ್ರೀಯದ ಬಳಕೆ ಕಡಿಮೆಯಾಗಿದೆ ನಿಜ. ಆದರೆ, ಅವುಗಳ ಜನಪ್ರಿಯತೆ ಕುಂದಿಲ್ಲ. ಶಾಸ್ತ್ರೀಯ ನೃತ್ಯವನ್ನು ಸಮರ್ಪಕವಾಗಿ ಅಳವಡಿಸಿದರೆ ಸಿನಿಮಾದಲ್ಲಿಯೂ ಅದು ಗೆಲ್ಲುತ್ತದೆ ಎನ್ನುವ ಅವರು, ತಮ್ಮ ಮಾತಿಗೆ ಉದಾಹರಣೆಯಾಗಿ ‘ಆಪ್ತಮಿತ್ರ’ ಚಿತ್ರದ ‘ರಾರಾ...’ ಮತ್ತು ತಮ್ಮದೇ ನಿರ್ದೇಶನದ ‘ವಜ್ರಕಾಯ’ ಚಿತ್ರದ ‘ಶ್ರೀಕೃಷ್ಣ...’ ಹಾಡುಗಳನ್ನು ಉದಾಹರಿಸುತ್ತಾರೆ.  ನೃತ್ಯ ಕಾರ್ಯಕ್ರಮದ ರಿಯಾಲಿಟಿ ಷೋಗಳಿಗೆ ಸೆನ್ಸಾರ್‌ ನಿಯಂತ್ರಣ ಇಲ್ಲದಿರುವುದರ ಅಪಾಯವನ್ನು ಗಾಯಕಿ ಶಮಿತಾ ಮಲ್ನಾಡ್‌ ಗ್ರಹಿಸಿದ್ದಾರೆ.
 
‘‘ಮಕ್ಕಳಿಂದ ವಯಸ್ಸಿಗೆ ಮೀರಿದ ಚಲನೆ, ಹಾವಭಾವಗಳನ್ನು ತೋರಿಸುವ ಪ್ರಯತ್ನಗಳು ನಡೆಯುತ್ತವೆ. ಇದರಿಂದ ಮಕ್ಕಳು ದೊಡ್ಡವರಂತೆ ವರ್ತಿಸಲು ಹೋಗಿ ಮುಗ್ಧತೆ ಕಳೆದುಕೊಳ್ಳುತ್ತಾರೆ. ಕೆಲವು ಸಭ್ಯತೆ ಎಲ್ಲೆ ಮೀರಿದ ಹಾಡುಗಳಿಗೆ ಅಷ್ಟೇ ಅಶ್ಲೀಲ ನೃತ್ಯ ಮಾಡಿಸುತ್ತಾರೆ. ಇವು ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇರುತ್ತವೆ. ಇಂತಹ ಸಂದರ್ಭಗಳಲ್ಲಿ ವಿವೇಚನೆಯಿಂದ ನೃತ್ಯದ ಪಟ್ಟುಗಳನ್ನು ಆಯ್ಕೆ ಮಾಡಿಕೊಳ್ಳಬೇಕು’’ ಎನ್ನುವ ಕಿವಿಮಾತು ಅವರದು. ಮಕ್ಕಳ ನೃತ್ಯ ರಿಯಾಲಿಟಿ ಷೋದಲ್ಲಿ ಮೆಂಟರ್‌ ಆಗಿಯೂ ಜವಾಬ್ದಾರಿ ನಿರ್ವಹಿಸಿದ್ದ ಅವರು, ಇಂತಹ ತಪ್ಪುಗಳು ತಮ್ಮಿಂದ ಆಗದಂತೆ ಎಚ್ಚರವಹಿಸಿದ್ದಾಗಿ ಹೇಳುತ್ತಾರೆ.
 
ಬಿಡುಗಡೆಯ ದಾರಿ
‘‘ಶಾಸ್ತ್ರೀಯ ಮತ್ತು ಜಾನಪದ ನೃತ್ಯಕ್ಕೆ ಅದರದ್ದೇ ಆದ ಶಿಸ್ತಿದೆ. ಆ ಶಿಸ್ತನ್ನು ಮೀರುವ ಜನರು ಸಮಕಾಲೀನ ನೃತ್ಯವನ್ನು ಪರಿಗಣಿಸಿರುವುದು ಮನರಂಜನೆ, ಒತ್ತಡ ನಿಯಂತ್ರಿಸುವ ಮತ್ತು ದೇಹದ ಫಿಟ್‌ನೆಸ್‌ ಕಾಪಾಡುವ ಸಾಧನವಾಗಿ. 
 
ಒತ್ತಡದ ಬದುಕಿನಲ್ಲಿ ನಮಗೆ ಹೆಚ್ಚು ಮನರಂಜನೆ ನೀಡುವ, ಜೀವನೋತ್ಸಾಹ ತುಂಬುವ ಮಾರ್ಗ ಬೇಕು. ಹಾಡು, ಕುಣಿ, ನಗು, ಎಂಜಾಯ್ ಮಾಡು ಎಂಬ ಮನೋಭಾವ ನೃತ್ಯದ ವಿಕಸನಕ್ಕೆ ಕಾರಣ. ನಾವು ಎಲ್ಲದಕ್ಕೂ ಸುಲಭದ ಶಾರ್ಟ್‌ಕಟ್‌ ಹುಡುಕುತ್ತೇವೆ. ಈಗ ನೃತ್ಯದಲ್ಲಿಯೂ ಕಿರುದಾರಿಗಳಿವೆ. ಮುಂಚೆ ನೃತ್ಯ ಫಿಟ್‌ನೆಸ್‌ ರೂಪದಲ್ಲಿ ಇರಲಿಲ್ಲ. ಅದು ಬದುಕಾಗಿತ್ತು. ಅದರ ಮಹತ್ವ ಈಗ ಬದಲಾಗಿದೆ’ ಎನ್ನುತ್ತಾರೆ ಶ್ರುತಿ. 
 
ನೃತ್ಯದ ಹಾದಿಯಲ್ಲಿನ ಬದಲಾವಣೆಯನ್ನು ಅವರು ವಯಸ್ಸು ಮತ್ತು ಲಿಂಗಭೇದವಿಲ್ಲದೆ ಗುರುತಿಸುತ್ತಾರೆ. ‘‘ಗಂಟೆಗಟ್ಟಲೆ ಪ್ರಸಾಧನದ ಶಿಸ್ತನ್ನು ಬೇಡುವ ಯಕ್ಷಗಾನ, ಕಥಕ್ಕಳಿಯಲ್ಲಿ ಹೆಣ್ಣುಮಕ್ಕಳಿಗೆ ಅವಕಾಶವೇ ಇರಲಿಲ್ಲ. ಈಗ ಮಹಿಳೆಯರು ವೇಷ ತೊಟ್ಟು ಸೈ ಎನ್ನಿಸಿಕೊಂಡಿದ್ದಾರೆ. ದೇಶ ವಿದೇಶಗಳಲ್ಲಿ ಹೆಸರು ಮಾಡಿರುವ ವೈಜಯಂತಿ ಕಾಶಿ ಬಾಲ್ಯದಲ್ಲಿಯೇ ನೃತ್ಯರಂಗಕ್ಕೆ ಕಾಲಿಟ್ಟವರಲ್ಲ. ಆದರೂ ಸಾಧನೆಗೆ ಯಾವ ತೊಡಕೂ ಆಗಲಿಲ್ಲ’’ ಎಂದು ಶ್ರುತಿ ವಿಶ್ಲೇಷಿಸುತ್ತಾರೆ.
 
ಐವತ್ತು ವರ್ಷ ದಾಟಿದ ಪುರುಷ ಮತ್ತು ಮಹಿಳೆ ಹಿಂಜರಿಕೆಯಿಲ್ಲದ ಸಂಭ್ರಮದಿಂದ ಕುಣಿಯುವ, ವಿದೇಶದ ಅಜ್ಜನೊಬ್ಬ ತನ್ನ ಊರುಗೋಲನ್ನು ಎಸೆದು ಜೀವನೋತ್ಸಾಹದಿಂದ ನರ್ತಿಸುವ, ಮದುವೆ ಮನೆಯಲ್ಲಿ ಅಜ್ಜಿಯೊಬ್ಬಳು ಎಗ್ಗಿಲ್ಲದೆ ಕುಣಿಯುವಂತಹ ವಿಡಿಯೊಗಳು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತವೆ. ನೃತ್ಯಕ್ಕೆ ವಯಸ್ಸು ನಗಣ್ಯ ಎನ್ನುವುದಕ್ಕೆ ಉದಾಹರಣೆಗಳಿವು. ಕುಣಿಯುವುದು ಒಂದು ಕಲೆ ಎಂದು ಪರಿಗಣಿಸಲಾಗಿದ್ದರೂ, ಕಲೆಯಲ್ಲಿನ ನಾಜೂಕುತನ ನಿರ್ದಿಷ್ಟ ಪ್ರಕಾರಗಳಿಗೆ ಸೀಮಿತ. ಗಣೇಶ ಉತ್ಸವದಲ್ಲಿ ಮಾಡುವ ಕುಣಿತದ ಪ್ರಕಾರವೇ ಬೇರೆ; ಮೋಹಿನಿಯಾಟ್ಟಂನ ಸೊಗಸೇ ಬೇರೆ. ಪಾಶ್ಚಿಮಾತ್ಯ, ಚೀನಿ, ಬ್ಯಾಲೆ, ಬೆಲ್ಲಿ, ಬಾಲಿವುಡ್‌ – ಹೀಗೆ ನೃತ್ಯದ ಹತ್ತಾರು ಶೈಲಿಗಳು ಕಾಲ ಕಾಲಕ್ಕೆ ಹೊಸತನವನ್ನು ಅಳವಡಿಸಿಕೊಳ್ಳುತ್ತಾ ತೆರೆದುಕೊಳ್ಳುತ್ತಿವೆ. 
 
ರೂಪಾಂತರವೂ ಕಲಬೆರಕೆಯೂ
‘‘ಶಾಸ್ತ್ರೀಯ ನೃತ್ಯವೂ ರೂಪಾಂತರಕ್ಕೆ ಹೊರತಾಗಿಲ್ಲ’’ ಎನ್ನುತ್ತಾರೆ ಭರತನಾಟ್ಯ ಹಿರಿಯ ನೃತ್ಯಪಟು ಡಾ. ವಸುಂಧರಾ ದೊರೆಸ್ವಾಮಿ. ಶಾಸ್ತ್ರೀಯದಲ್ಲಿ ನಿಯಮಗಳನ್ನು ಮೀರುವ ಪ್ರಯೋಗಗಳು ನಿಷಿದ್ಧ ಎಂಬ ಕಟ್ಟುಪಾಡನ್ನು ಮೀರಲೇಕೂಡದು ಎನ್ನುವುದು ಅವರ ನೀತಿ. ಆದರೆ ಚೌಕಟ್ಟಿನೊಳಗೇ ಪ್ರಯೋಗಗಳಿಗೆ ಸಾಕಷ್ಟು ಅವಕಾಶಗಳಿವೆ ಎನ್ನುವುದನ್ನೂ ಅವರು ಹೇಳುತ್ತಾರೆ. ಅದಕ್ಕೆ ತಮ್ಮದೇ ಪರಿಕಲ್ಪನೆಯ ಮತ್ಸ್ಯ, ಕೂರ್ಮಾವತಾರ ಶೈಲಿಯಂತಹ ಸೃಷ್ಟಿಗಳನ್ನು ಉದಾಹರಿಸುತ್ತಾರೆ. ಸಮಕಾಲೀನ ನೃತ್ಯದೊಂದಿಗೆ ಶಾಸ್ತ್ರೀಯವನ್ನು ಬೆರೆಸುವ ಪರಿಕಲ್ಪನೆಯನ್ನು ಅವರು ಒಪ್ಪಿಕೊಳ್ಳುವುದಿಲ್ಲ. ‘‘ಶಾಸ್ತ್ರೀಯಕ್ಕೆ ಅದರದ್ದೇ ವಿಶಿಷ್ಟ ಮಹತ್ವ, ಗುಣಗಳಿವೆ. ಅದರಲ್ಲೊಂದು ದೈವಿಕ ಗುಣವಿದೆ. ಆ ಗುಣವನ್ನು ಸಮಕಾಲೀನ ನೃತ್ಯಗಳಲ್ಲಿ ಕಾಣಲಾರದು. ದೈವಿಕ ಗುಣ ಕಳೆದುಕೊಂಡರೆ ನೃತ್ಯವೇ ಉಳಿಯಲಾರದು’’ ಎನ್ನುವ ಅನಿಸಿಕೆ ಅವರದು. 
 
‘‘ಶಾಸ್ತ್ರೀಯದಲ್ಲಿ ಅನೇಕ ನಿಯಮಗಳಿವೆ. ಈ ನಿಯಮಗಳು ನಮ್ಮ ದೇಹ ಶೈಲಿಗೆ ಸಹಜವೆನಿಸುವುದಿಲ್ಲ. ಸಮಕಾಲೀನ ನೃತ್ಯ ದೇಹಕ್ಕೆ ಹೊಂದಿಕೊಳ್ಳುವಂಥದ್ದು. ಅದರಲ್ಲಿನ ಪುಷಸ್‌ಗಳು ನಮ್ಮ ದೇಹದ ಶಕ್ತಿಯನ್ನು ಹೊರದೂಡುತ್ತದೆ. ಇದು ಅಭಿನಯ ಹಾಗೂ ಕಥೆಯನ್ನು ಹೇಳುವ ಪ್ರಕಾರ ಅಲ್ಲ. ದೇಹವನ್ನು ಪ್ರಯೋಗಿಸಲು ಅವಕಾಶವಿದೆ. ನನ್ನ ಪ್ರಕಾರ ಇದು ಒಳ್ಳೆಯ ಎವೊಲ್ಯೂಷನ್’’ ಎನ್ನುವ ಶ್ರುತಿ, ತಮಗೆ ಅತಿ ಶಿಸ್ತಿನಿಂದ ಭರತನಾಟ್ಯ ಕಲಿಸಿದ ಗುರುಗಳನ್ನೂ ವೇದಿಕೆ ಕೊಟ್ಟ ಸಮಕಾಲೀನ ನೃತ್ಯತಂಡವನ್ನೂ ನೆನಪಿಸಿಕೊಳ್ಳುತ್ತಾರೆ.
 
‘‘ನೃತ್ಯ ಮುಖ್ಯವಾಗಿ ಪ್ಯಾಷನ್‌. ಬಳಿಕವೇ ಅದು ಮನರಂಜನೆ, ವೃತ್ತಿಯ ಸ್ಥಾನಗಳನ್ನು ಪಡೆದುಕೊಳ್ಳುತ್ತದೆ’’ ಎನ್ನುವುದು ಶ್ರುತಿ ಹರಿಹರನ್ ಅಭಿಪ್ರಾಯ. ‘ಡಾನ್ಸ್‌ ಲೈಕ್ ನೋ ಒನ್‌ ಎಲ್ಸ್ ವಾಚಿಂಗ್ ಯೂ’ ಎಂಬಂತೆ ನೃತ್ಯ ಕಲಿತರೆ ಜೀವನವನ್ನು ಅನುಭವಿಸುವ ರೀತಿಯೇ ಬದಲಾಗುತ್ತದೆ ಎನ್ನುತ್ತಾರೆ.
 
‘‘ಶಾಸ್ತ್ರೀಯ ನೃತ್ಯವೂ ಕಟ್ಟುಪಾಡುಗಳಿಗೆ ಒಳಗಾಗಿತ್ತು. ದೇವದಾಸಿಯರಿಗೆ ಸೀಮಿತವಾಗಿದ್ದ ಭರತನಾಟ್ಯದ ಮೂಲ – ‘ಸಾದಿರ್‌’ ಎಂದು ಕರೆಯಲಾಗುತ್ತಿದ್ದ ನೃತ್ಯಪ್ರಕಾರಕ್ಕೆ ಮರುಜೀವ ನೀಡಿದವರು ರುಕ್ಮಿಣಿದೇವಿ ಅರುಂಡೇಲ್‌. ಸ್ವಾತಂತ್ರ್ಯಪೂರ್ವದಲ್ಲಿ ನೃತ್ಯವೆಂದರೆ ‘ಅಶ್ಲೀಲ’, ‘ಕೆಟ್ಟದ್ದು’ ಎಂದು ಭಾವಿಸಿದ್ದ ಮೇಲ್ಜಾತಿಗಳ ಮನೆಗಳಿಗೆ ನೃತ್ಯವನ್ನು ತಂದಿದ್ದಲ್ಲದೆ, ಅದರೊಳಗಿನ ಸೂತ್ರಗಳನ್ನು ಮುರಿಯುವ ಸಾಹಸವನ್ನು ಪ್ರದರ್ಶಿಸಿದ ಮತ್ತು ತಮ್ಮದೇ ‘ಕಲಾಕ್ಷೇತ್ರ’ ಶೈಲಿ ಹುಟ್ಟುಹಾಕಿ ಜನಪ್ರಿಯಗೊಳಿಸಿದ ರುಕ್ಮಿಣಿದೇವಿ ಅವರ ಸಾಹಸ  ಹೊಸತನ್ನು ಸೃಷ್ಟಿಸುವ ಮನಸುಗಳಿಗೆ ನಿಜವಾದ ಸ್ಫೂರ್ತಿ’’ ಎನ್ನುತ್ತಾರೆ ಶ್ರುತಿ. ಬ್ಯಾಲೆಯನ್ನು ಶಾಸ್ತ್ರೀಯದೊಳಗೆ ಬೆರೆಸಿದ ರುಕ್ಮಿಣಿ ವಿಜಯಕುಮಾರ್ ಪ್ರಯೋಗವನ್ನೂ ಅವರು ಮೆಚ್ಚಿಕೊಳ್ಳುತ್ತಾರೆ. 
 
‘ನೃತ್ಯ ಹೊಟ್ಟೆಪಾಡಿನ ಮೂಲವೂ ಹೌದು’ ಎನ್ನುವ ಶ್ರುತಿ – ಸಿನಿಮಾ, ಕಾರ್ಪೊರೇಟ್‌ ಕಂಪೆನಿಗಳು ಹಾಗೂ ಮದುವೆ ಕಾರ್ಯಕ್ರಮಗಳು ವೃತ್ತಿಪರ ನೃತ್ಯ ತಂಡಗಳಿಗೆ ದೊಡ್ಡ ಮಾರುಕಟ್ಟೆ ತೆರೆದಿರುವುದನ್ನು ಉದಾಹರಿಸುತ್ತಾರೆ. ಗುಜರಾತ್, ಪಂಜಾಬ್‌ ಮದುವೆಗಳಲ್ಲಿ ನರ್ತಿಸುವುದಕ್ಕಾಗಿಯೇ ಒಂದು ತಿಂಗಳು ಅಭ್ಯಾಸ ಮಾಡುತ್ತಾರೆ. ಇಲ್ಲಿ ನೃತ್ಯ ಸಂಯೋಜನೆ ಕೂಡ ದೊಡ್ಡ ಬ್ಯುಸಿನೆಸ್‌ ಎನ್ನುವುದನ್ನು ಅವರು ಗುರುತಿಸಿದ್ದಾರೆ. 
 
ಒಂದಂತೂ ನಿಜ, ಆಧುನಿಕ ಸಂದರ್ಭದಲ್ಲಿ ನೃತ್ಯದಷ್ಟು ವ್ಯಾಪಕವಾಗಿ ಜನಸಮೂಹವನ್ನು ಆವರಿಸಿರುವ ಕಲೆ ಮತ್ತೊಂದಿಲ್ಲ. ಕವಿ ಬೇಂದ್ರೆಯವರ ‘ಕುಣಿಯೋಣು ಬಾರಾ ಕುಣಿಯೋಣು ಬಾ’ ಎಂಬ ಸಾಲು ಹೊಸ ತಲೆಮಾರಿನ ಮಂತ್ರವಾದಂತಿದೆ. ಕುಣಿಯುವ ಮೂಲಕ ಸಮಾಜದ ಕಟ್ಟುಪಾಡುಗಳು ಸಡಿಲಾಗುತ್ತ, ಸಾಮರಸ್ಯ ಸಾಧ್ಯವಾಗುವುದು ಒಂದು ಬೆರಗಿನಂತೆ ಕಾಣಿಸುತ್ತದೆ.
 
**
ನೃತ್ಯ ಏಕೆ ಬೇಕು?
ಫಿಟ್‌ನೆಸ್‌ಗೆ ನೃತ್ಯ ನೆರವಾಗುವ ಅತ್ಯಂತ ಸರಳ ಮಾರ್ಗ ಎನ್ನುವುದು ಗಾಯಕಿ ಶಮಿತಾ ಮಲ್ನಾಡ್‌ ತಾವು ಸ್ವತಃ ಕಂಡುಕೊಂಡಿರುವ ಸತ್ಯ. ಕಿರುತೆರೆಯ ರಿಯಾಲಿಟಿ ಷೋ ಒಂದರಲ್ಲಿ ಮೈನವಿರೇಳಿಸುವ ಪ್ರಯೋಗಗಳನ್ನು ನಡೆಸಿ ಮೆಚ್ಚುಗೆ ಗಳಿಸಿದ್ದ ಶಮಿತಾ, ‘‘ಯಾವ ಜಿಮ್‌ನಲ್ಲಿ ಎಷ್ಟು ಕಾಲ ಬೆವರಿಳಿಸಿದರೂ ಸಿಗದ ವ್ಯಾಯಾಮ ನೃತ್ಯದಿಂದ ಸಿಗುತ್ತದೆ. ಪ್ರಯಾಸದಿಂದ ಮಾಡುವ ವ್ಯಾಯಾಮ ನಮಗೆ ನೆಮ್ಮದಿ ನೀಡುವುದಿಲ್ಲ. ನೃತ್ಯ ಖುಷಿ ಕೊಡುತ್ತಲೇ ದೇಹದ ಭಾರ ಇಳಿಸುತ್ತದೆ’’ ಎನ್ನುತ್ತಾರೆ. 
 
‘‘ಈಗ ನಮ್ಮದು ಒತ್ತಡದ ಬದುಕು. ಒತ್ತಡವನ್ನು ಶಮನ ಮಾಡಿಕೊಳ್ಳಲು ಒಬ್ಬೊಬ್ಬರು ಒಂದೊಂದು ಮಾರ್ಗದ ಮೊರೆ ಹೋಗುತ್ತಾರೆ. ಇವುಗಳಲ್ಲಿ ನೃತ್ಯ ಅತ್ಯಂತ ಸುಲಭ ಮತ್ತು ಹೆಚ್ಚು ಆಹ್ಲಾದಕರ ಶ್ರಮ. ಮಕ್ಕಳಿಂದ ದೊಡ್ಡವರವರೆಗೂ ಅತ್ಯಂತ ಉತ್ತಮ ವ್ಯಾಯಾಮ ನೃತ್ಯ’’ ಎನ್ನುವುದು ಅವರ ಅನಿಸಿಕೆ. ಶಾಲೆಗಳಲ್ಲಿ ನೃತ್ಯವನ್ನೂ ಒಂದು ಕಲಿಕೆಯ ವಿಷಯವನ್ನಾಗಿಸಬೇಕು ಎನ್ನುವುದು ಅವರ ಒತ್ತಾಯ. 
 
ವಸುಂಧರಾ ದೊರೆಸ್ವಾಮಿ ಅವರೂ ಪಠ್ಯದಲ್ಲಿ ನೃತ್ಯವನ್ನು ಕಡ್ಡಾಯಗೊಳಿಸುವ ಅಗತ್ಯವನ್ನು ಪ್ರತಿಪಾದಿಸುತ್ತಾರೆ. ‘‘ಕೇರಳದ ಶಾಲೆಗಳಲ್ಲಿ 10ನೇ ತರಗತಿವರೆಗೂ ನೃತ್ಯವೂ ಒಂದು ವಿಷಯ. ಚೆನ್ನಾಗಿ ನರ್ತಿಸುವವರಿಗೆ ಪರೀಕ್ಷೆಯಲ್ಲಿ ‘ಗ್ರೇಸ್‌ ಮಾರ್ಕ್ಸ್‌’ ಸಿಗುತ್ತದೆ. ಈ ಕಾರಣಕ್ಕಾಗಿ ಎಲ್ಲರೂ ನೃತ್ಯ ಕಲಿಯುತ್ತಾರೆ‘’ ಎನ್ನುತ್ತಾರೆ.
 
**
ಆಳ್ವಾಸ್ ‘ನೃತ್ಯಸಿರಿ’
ದಕ್ಷಿಣ ಕನ್ನಡದ ಮೂಡುಬಿದಿರೆಯ ‘ಆಳ್ವಾಸ್‌ ವಿದ್ಯಾಸಂಸ್ಥೆ’ ನೃತ್ಯಪ್ರಕಾರದಲ್ಲೂ ಗಮನಸೆಳೆದಿರುವ ವೇದಿಕೆ. ದೇಶದ ಎಂಟು ಶಾಸ್ತ್ರೀಯ ನೃತ್ಯ ಪ್ರಕಾರಗಳ ಪೈಕಿ ಆರು ನೃತ್ಯಪ್ರಕಾರಗಳನ್ನು ‘ಆಳ್ವಾಸ್‌’ನಲ್ಲಿ ನೋಡಬಹುದು. ಆಯಾ ನೃತ್ಯ ಶೈಲಿಗಳಲ್ಲಿ ಪರಿಣತರಾದ ನೃತ್ಯ ಗುರುಗಳು ಆಳ್ವಾಸ್‌ ಕಾಲೇಜಿಗೆ ಬಂದು ದೀರ್ಘ ಕಾರ್ಯಾಗಾರಗಳನ್ನು ನಡೆಸಿ ಕಲಾಪ್ರಕಾರವನ್ನು ಹೇಳಿಕೊಡುತ್ತಿದ್ದಾರೆ. ಈ ಕಾರ್ಯಾಗಾರದಲ್ಲಿ ಕಲಿತ ನೃತ್ಯ ಪ್ರಕಾರವನ್ನು ವಿದ್ಯಾರ್ಥಿಗಳು ವರ್ಷಪೂರ್ತಿ ಅಭ್ಯಾಸ ಮಾಡುತ್ತಾರೆ. ಭರತನಾಟ್ಯ, ಮೋಹಿನಿಯಾಟ್ಟಂ, ಕಥಕ್‌, ಒಡಿಸ್ಸಿ, ಮಣಿಪುರಿ, ಕೂಚಿಪುಡಿ ನೃತ್ಯಪ್ರಕಾರಗಳನ್ನು ಕಲಿಯುವ ವಿದ್ಯಾರ್ಥಿಗಳಿಗೆ ಪ್ರತಿವರ್ಷ ನಡೆಯುವ ‘ಆಳ್ವಾಸ್‌ ವಿರಾಸತ್‌’ ಹಬ್ಬವೇ ಸರಿ. ದೇಶ ವಿದೇಶದ ನೃತ್ಯ ಕಲಾ ಪ್ರಕಾರಗಳನ್ನು ನೋಡುವ ಅವಕಾಶ ಕಾಲೇಜು ಅಂಗಳಕ್ಕೇ ಬರುವುದರಿಂದ ತಮ್ಮ ಕಲಿಯುವಿಕೆಗೆ ಮತ್ತಷ್ಟು ಸ್ಫೂರ್ತಿ ದೊರೆಯುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು. 
 
ಶಾಸ್ತ್ರೀಯ ಕಲೆಗಳಷ್ಟೇ ಅಲ್ಲದೆ, ನಮ್ಮ ದೇಶದ ಜನಪದ ಕಲೆಗಳತ್ತಲೂ ‘ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ’ ಗಮನ ಹರಿಸಿದೆ. ಮಹಾರಾಷ್ಟ್ರದ ಲಾವಣಿ, ಆಂಧ್ರಪ್ರದೇಶದ ಬಂಜಾರ, ಗುಜರಾತ್‌ನ ದಾಂಡಿಯಾ, ಹುಡೋ ಮತ್ತು ರಾಸ್‌, ಮಣಿಪುರದ ಧೋಲ್‌ಚಲಮ್‌, ಸ್ಟಿಕ್‌ ಡಾನ್ಸ್‌, ಉಜ್ಜಯಿನಿಯ ಮಲ್ಲಕಂಬ, ಪಶ್ಚಿಮ ಬಂಗಾಳದ ಪುರುಲಿಯಾ ಚಾವೋ ನೃತ್ಯ, ಒರಿಸ್ಸಾದ ಗೊಟ್ಟಿಪೂವಾ ನೃತ್ಯ ಕಲಿಕೆಯನ್ನೂ ಆಳ್ವಾಸ್ ವಿದ್ಯಾರ್ಥಿಗಳು ಮುತುವರ್ಜಿಯಿಂದ ಮಾಡುತ್ತಾರೆ. ಇದರೊಂದಿಗೆ ಕರ್ನಾಟಕದ ತೆಂಕು ಮತ್ತು ಬಡಗು ತಿಟ್ಟಿನ ಯಕ್ಷಗಾನದ ಕಲಿಕೆಯೂ ನಿರಂತರ ಸಾಗಿದೆ. ‘ರಂಗ ಅಧ್ಯಯನ ಕೇಂದ್ರ’, ‘ಜನಪದ ಅಧ್ಯಯನ ಕೇಂದ್ರ’ ಮತ್ತು ‘ಧೀಂಕಿಟ ಯಕ್ಷ ಅಧ್ಯಯನ ಕೇಂದ್ರ’ಗಳು ಈ ಎಲ್ಲ ಕಲಾ ಪ್ರಕಾರಗಳ ಕಲಿಕೆಯ ಉಸ್ತುವಾರಿ ನೋಡಿಕೊಳ್ಳುತ್ತವೆ.
 
ವಿರಾಸತ್‌ಗಾಗಿ ದೇಶ ವಿದೇಶದಿಂದ ಬರುವ ಕಲಾತಂಡಗಳ ಪೈಕಿ ಆಳ್ವಾಸ್‌ ಕಾಲೇಜು ವಿದ್ಯಾರ್ಥಿಗಳಿಗೂ ಕೆಲವೊಮ್ಮೆ ಅವಕಾಶ ಸಿಗುವುದುಂಟು. ಆಳ್ವಾಸ್‌ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ತಂಡ ರಾಜ್ಯ, ಹೊರ ರಾಜ್ಯಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವಷ್ಟು ಸಮರ್ಥವಾಗಿ ಬೆಳೆದಿದೆ. 
–ಕೋಡಿಬೆಟ್ಟು ರಾಜಲಕ್ಷ್ಮಿ
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT