ಸೌಂದರ್ಯದ ಮಗ್ಗುಲು

ಚೆಲುವಿನ ಚಿತ್ತಾರ ‘ಇಗತ್ಪುರಿ’

ಕಾಡು, ಕಣಿವೆ, ನದಿ, ಜಲಾಶಯ, ಜಲಪಾತ – ಹೀಗೆ ಪ್ರಕೃತಿ ಸೌಂದರ್ಯದ ಹಲವು ಮಗ್ಗುಲುಗಳನ್ನು ಮಹಾರಾಷ್ಟ್ರದ ಇಗತ್ಪುರಿ ಗಿರಿಧಾಮದಲ್ಲಿ ಕಾಣಬಹುದು.

ಇಗತ್ಪುರಿಯ ಆವರಣದಲ್ಲಿರುವ ಮಂದಿರ
ಪ್ರಕೃತಿ ಸೌಂದರ್ಯದ ಜೊತೆಗೆ ಸಾಕಷ್ಟು ಕೋಟೆಗಳು, ಯಾತ್ರಾಕ್ಷೇತ್ರಗಳು ಹಾಗೂ ಸುಂದರವಾದ ಕಡಲತೀರಗಳನ್ನು ಹೊಂದಿರುವ ಮಹಾರಾಷ್ಟ್ರ ಭಾರತೀಯ ಪ್ರವಾಸಿಗರ ಆಕರ್ಷಣೆಯ ಪ್ರಮುಖ ಕೇಂದ್ರಗಳಲ್ಲೊಂದು. ಒಂದೆಡೆ ಸಹ್ಯಾದ್ರಿ ಪರ್ವತ ಶ್ರೇಣಿಯ ಅತ್ಯಾಕರ್ಷಕ ಪ್ರಕೃತಿ ಸೌಂದರ್ಯ, ಇನ್ನೊಂದೆಡೆ ಆಕರ್ಷಕವಾದ ಕಡಲತೀರ. ಮಹಾರಾಷ್ಟ್ರದ ಈ ಚಿತ್ತಾಕರ್ಷಕ ಚಿತ್ರಪಟದಲ್ಲಿ ನಾಸಿಕ್‌ ಜಿಲ್ಲೆಯ ಇಗತ್ಪುರಿ ಗಿರಿಧಾಮಕ್ಕೆ ವಿಶೇಷ ಸ್ಥಾನವಿದೆ.
 
ಎತ್ತರವಾದ ಪರ್ವತ ಶ್ರೇಣಿ, ರಮಣೀಯವಾದ ಕಣಿವೆಗಳು, ಮರಗಳಿಂದ ಸಮೃದ್ಧವಾದ ದಟ್ಟಾರಣ್ಯ – ಈ ಎಲ್ಲವನ್ನೂ ಇಗತ್ಪುರಿ ಗಿರಿಧಾಮ ಒಳಗೊಂಡಿದೆ. ಇದು ನಿಸರ್ಗಪ್ರಿಯರಿಗೆ ಅಚ್ಚುಮೆಚ್ಚಿನ ತಾಣ. ಈ ಪ್ರದೇಶ ನಗರೀಕರಣದಿಂದ ಬಲು ದೂರವಿದ್ದು, ಶುದ್ಧವಾದ ಗಾಳಿ ಹಾಗೂ ಹಚ್ಚ ಹಸಿರಿನಿಂದ ಕೂಡಿದ್ದು ಸಹೃದಯರನ್ನು ಸೆಳೆಯುತ್ತದೆ.
 
ಇಗತ್ಪುರಿಗೆ ಬರುವ ಪ್ರವಾಸಿಗರು ನೋಡಲೇಬೇಕಾದ ಕೆಲವೊಂದು ಪ್ರದೇಶಗಳಿವೆ. ಅವುಗಳಲ್ಲಿ ಪ್ರಮುಖವಾದುದು ಭತ್ಸಾ ನದಿ ಕಣಿವೆ. ಇದೊಂದು ಜನಪ್ರಿಯ ಪ್ರದೇಶ. ಸುತ್ತಮುತ್ತಲೂ ಎತ್ತರವಾದ ಬೆಟ್ಟಗಳನ್ನು ಹೊಂದಿರುವ ಕಣಿವೆ ಪ್ರದೇಶ ದಣಿದ ದೇಹಗಳಲ್ಲಿ ಉತ್ಸಾಹವನ್ನು ನವೀಕರಿಸುವ ಮದ್ದಿನ ಗುಣ ಹೊಂದಿದೆ. 
ಇಲ್ಲಿಗೆ ಬರುವ ಇತಿಹಾಸಪ್ರಿಯರು ತ್ರಿಂಗಲವಾಡಿ ಕೋಟೆಯನ್ನು ಅವಶ್ಯವಾಗಿ ಸಂದರ್ಶಿಸಲೇಬೇಕು. ಇದೊಂದು ಐತಿಹಾಸಿಕ ಪ್ರಸಿದ್ದ ಕೋಟೆಯಾಗಿದ್ದು, ಇದರ ವಾಸ್ತುಶಿಲ್ಪ ಅತ್ಯಂತ ವಿಶಿಷ್ಟವಾಗಿದೆ. ಇದನ್ನು ಏರುವುದು ಸುಲಭವಲ್ಲ. ಚಾರಣಪ್ರಿಯರಿಗೆ ಹೇಳಿಮಾಡಿಸಿದ ತಾಣ ಇದಾಗಿದೆ. ಈ ಕೋಟೆಯ ಮೇಲೇರಿ ನಿಂತರೆ ಒಂದು ಕ್ಷಣ ಉಸಿರುಕಟ್ಟುವ ಅನುಭವ ನಮಗಾಗುತ್ತದೆ. ಸಹ್ಯಾದ್ರಿ ಪರ್ವತ ಶ್ರೇಣಿ ಹಾಗೂ ಇಗತ್ಪುರಿ ಗಿರಿಧಾಮದ ವಿಹಂಗಮ ನೋಟವನ್ನು ನಾವು ಅಲ್ಲಿಂದ ನೋಡಬಹುದಾಗಿದೆ.  
 
ಕೋಟೆಯ ಆವರಣದಲ್ಲಿರುವ ಅತ್ಯಂತ ಪುರಾತನವಾದ ಹನುಮನ ಮಂದಿರವನ್ನೂ ಸಂದರ್ಶಿಸಬಹುದು. ಧಾರ್ಮಿಕ ಪ್ರವೃತ್ತಿಯುಳ್ಳವರು ಅವಶ್ಯಕವಾಗಿ ಈ ಮಂದಿರವನ್ನು ಸಂದರ್ಶಿಸಲೇಬೇಕು. ಇಲ್ಲಿನ ‘ವಾಲ್ ವಾಕರ್ ಮ್ಯೂಸಿಯಂ’ ಒಂದು ಅಪರೂಪದ ವಸ್ತುಸಂಗ್ರಹಾಲಯ. ಕೋಟೆಯ ಪಕ್ಕದಲ್ಲಿರುವ ಕೆರೆ ಎಂಥವರಿಗೂ ಮುದ ನೀಡುತ್ತದೆ. ಈ ಕೆರೆಯಿಂದಲೇ ಈ ಪ್ರದೇಶಕ್ಕೆ ಒಂದು ವಿಶಿಷ್ಟ ಆಕರ್ಷಣೆ ಲಭ್ಯವಾಗಿದೆ. ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯ ವೀಕ್ಷಿಸುತ್ತಾ ಕೆರೆಯ ದಂಡೆಯಲ್ಲಿ ಸುತ್ತಾಡುವುದೇ ಒಂದು ಸುಂದರ ಅನುಭವ. ಈ ಕೆರೆಗೆ ಸಾಕಷ್ಟು ಪಕ್ಷಿಗಳು ದೂರದೂರಿನಿಂದ ವಲಸೆ ಬರುವುದರಿಂದ, ಅವುಗಳ ಕಲರವ ಮಧುರ ಅನುಭೂತಿ ನೀಡುತ್ತದೆ.
 
ಇಗತ್ಪುರಿ ಪ್ರಮುಖವಾಗಿ ಗುರುತಿಸಿಕೊಂಡಿರುವುದು ಇಲ್ಲಿರುವ ಧಾರ್ಮಿಕ ತಾಣಗಳಿಂದಾಗಿ. ಅವುಗಳಲ್ಲಿ ಪ್ರಮುಖವಾದುದು ಗೀತಾದೇವಿ ದೇವಾಲಯ. ಈ ಭಾಗದ ಜನರ ನಂಬಿಕೆಯ ಪ್ರಕಾರ, ಗೀತಾದೇವಿ ಇಗತ್ಪುರಿ ಹಾಗೂ ಇಲ್ಲಿರುವ ಬೆಟ್ಟವನ್ನು ಕಾಯುವ ದೇವಿಯಾಗಿದ್ದಾಳೆ. ಇಲ್ಲಿರುವ ಅಪರೂಪದ ಧ್ಯಾನಕೇಂದ್ರವು ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. 
 
‘ಕ್ಯಾಮಲ್ ಕಣಿವೆ’ ಇಗತ್ಪುರಿಯ ಮತ್ತೊಂದು ಪ್ರವಾಸಿ ಆಕರ್ಷಣೆ. ಇದು ಭತ್ಸಾನದಿಯ ಕಣಿವೆ ಪ್ರದೇಶಕ್ಕೆ ಹತ್ತಿರವಿದ್ದು ಜಲಪಾತಕ್ಕೆ ಹೆಸರುವಾಸಿಯಾಗಿದೆ. ಒಂದು ಸಾವಿರ ಅಡಿ ಎತ್ತರದಿಂದ ಧುಮುಕುವ ನೀರು ನೋಡುವುದೇ ಒಂದು ಅದ್ಭುತ ಅನುಭವ.   ಮಳೆಗಾಲದಲ್ಲಿ ತುಂಬಿಹರಿಯುವ ಭತ್ಸಾ ನದಿಯಲ್ಲಿ ಸಾಹಸ ಕ್ರೀಡೆಗಳಿಗೂ ಅವಕಾಶವಿದೆ.  
 
ಇಗತ್ಪುರಿ ಗಿರಿಧಾಮದ ಇನ್ನೊಂದು ಪ್ರಮುಖ ಆಕರ್ಷಣೆ ವೈತರಣ ಅಣೆಕಟ್ಟು. ಬಸಾರಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಜಲಾಶಯ ತನ್ನ ಸಹಜ ಸೌಂದರ್ಯದಿಂದ ಹಾಗೂ ಪಶ್ಚಿಮಘಟ್ಟ ಅರಣ್ಯ ಪ್ರದೇಶದ ವಿಹಂಗಮ ನೋಟದಿಂದ ಆಪ್ತವೆನ್ನಿಸುತ್ತದೆ. ಬಸಾರಾ ನದಿಯನ್ನು ಮುಂಬೈ ಮಹಾನಗರಿಗೆ ಕುಡಿಯುವ ನೀರನ್ನು ಒದಗಿಸುವ ಮೂಲವೆಂದೇ ಹೇಳಬಹುದು. ಇಲ್ಲಿ ಸಾಕಷ್ಟು ಆಧುನಿಕ ಚಟುವಟಿಕೆಗಳು ನಡೆಯುತ್ತಿದ್ದು, ನದಿಯಲ್ಲಿ ಬೋಟಿಂಗ್ ಹಾಗೂ ಕ್ರೂಸಿಂಗ್‌ಗೆ ಸಾಕಷ್ಟು ಅವಕಾಶಗಳಿವೆ.
 
*
ವರ್ಷಪೂರ್ತಿ ಉತ್ತಮ ಹವಾಮಾನ ಹೊಂದಿರುವ ಇಗತ್ಪುರಿ ಗಿರಿಧಾಮವು ದೇಶದ ಪ್ರಮುಖ ಮಹಾನಗರಗಳಿಂದ ಉತ್ತಮ ಸಾರಿಗೆ ಸಂಪರ್ಕ, ರೈಲು ಸಂಪರ್ಕವನ್ನು ಹೊಂದಿದೆ. ವಾಯುಮಾರ್ಗದಲ್ಲಿ ಇಲ್ಲಿಗೆ ಬರಲು ಬಯಸುವವರಿಗೆ ಮುಂಬಯಿಯ ‘ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ ಹತ್ತಿರದ ನಿಲ್ದಾಣವಾಗಿದೆ. ಮುಂಬಯಿಯಿಂದ ಇಗತ್ಪುರಿಗೆ 140 ಕಿ.ಮೀ. ಅಂತರದಲ್ಲಿದೆ.
Comments
ಈ ವಿಭಾಗದಿಂದ ಇನ್ನಷ್ಟು
ಹೂ ಕಣಿವೆಯ ಸೌಂದರ್ಯ ಮತ್ತು ನೆತ್ತರ ಚರಿತ್ರೆ...

ಪುಷ್ಟಪ್ರಿಯರ ಪಾಲಿನ ಸ್ವರ್ಗ
ಹೂ ಕಣಿವೆಯ ಸೌಂದರ್ಯ ಮತ್ತು ನೆತ್ತರ ಚರಿತ್ರೆ...

31 Dec, 2017
ವಂಗನಾಡಿನ ಮಾಸದ ಸ್ವಪ್ನಗಳು...

ಕೋಲ್ಕತ್ತ
ವಂಗನಾಡಿನ ಮಾಸದ ಸ್ವಪ್ನಗಳು...

10 Dec, 2017
ಜನಕಪುರಿಯ ಝಲಕ್

ನೇಪಾಳ
ಜನಕಪುರಿಯ ಝಲಕ್

3 Dec, 2017
ಆಸ್ಟ್ರೇಲಿಯಾ ಎಂಬ ಖಂಡ ದೇಶದೊಳಗೆ...

ಗಗನಚುಂಬಿ ಕಟ್ಟಡಗಳು
ಆಸ್ಟ್ರೇಲಿಯಾ ಎಂಬ ಖಂಡ ದೇಶದೊಳಗೆ...

29 Oct, 2017
ಗೂಳೂರು ಗಣಪನ ನೋಡಿದಿರಾ?

ಸುತ್ತಾಣ
ಗೂಳೂರು ಗಣಪನ ನೋಡಿದಿರಾ?

28 Oct, 2017