ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇತಾಳ ಹೇಳಿದ ಬ್ಲಾಕ್ ಅಂಡ್ ವೈಟ್ ಕಥೆ

ಮಂದಹಾಸ
Last Updated 31 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಿಕ್ಕಿರಿದಿದ್ದ ಜನ ಕವಿಗೋಷ್ಠಿ ಆರಂಭವಾಗುತ್ತಿದ್ದಂತೆ ಕಾಣೆಯಾದರೂ, ಕವಿಗಳು ತಮ್ಮ ಕವಿತಾವಾಚನ ಮುಗಿದೊಡನೆ ಕಿವಿಗೆ ಹತ್ತಿ ಜಡಿದಂತೆ ಎತ್ತಲೋ ನೋಡುತ್ತಾ ಕುಳಿತಿದ್ದರೂ, ಹಟ ಬಿಡದೆ ಕವಿತೆ ವಾಚಿಸಲು ಹೊರಡುವ ಉದಯೋನ್ಮುಖ ಕವಿಯಂತೆ – ಹಟ ಬಿಡದ ತ್ರಿವಿಕ್ರಮನು ಮುಳ್ಳು ಮುತ್ತಗದ ಮರವನ್ನೇರಿ ಬೇತಾಳವನ್ನಿಳಿಸಿ ಹೊತ್ತುಕೊಂಡು ನಡೆಯಲಾರಂಭಿಸಿದನು. ಆಗ ಬೇತಾಳವು ಮಾತನಾಡಲುತೊಡಗಿತು.
 
‘‘ಅಯ್ಯಾ, ನಿನ್ನನ್ನು ನೋಡಿದರೆ ಜಗತ್ತಿನ ಸಣ್ಣ ಸಣ್ಣ ರಾಷ್ಟ್ರಗಳು ಪ್ರಯೋಗಿಸಲು ಹೆದರುವ ದೊಡ್ಡ ನೋಟುಗಳ ಬ್ಯಾನ್ ಅನ್ನು ಅತಿ ದೊಡ್ಡ ರಾಷ್ಟ್ರವೊಂದರಲ್ಲಿ ರದ್ದುಪಡಿಸಿ ಏಕಾಂಗಿ ಹೋರಾಟ ನಡೆಸುತ್ತಿರುವ ಪ್ರಧಾನಿಗಳ ನೆನಪು ಬರುತ್ತಿದೆ. ನಿನಗೆ ಮಾರ್ಗಾಯಾಸ ಆಗದಿರಲೆಂದು ಕಥೆಯೊಂದನ್ನು ಹೇಳುವೆನು ಕೇಳು’’ ಎಂದು ತನ್ನ ಕಥೆಯನ್ನು ಆರಂಭಿಸಿತು.
 
ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ ದೇಶದ ರಾಜಧಾನಿ ಬೆಂಗಳೂರು, ಶೈಕ್ಷಣಿಕ ರಾಜಧಾನಿ ಮಂಗಳೂರಿನ ನಡುವೆ ಸಿಂಹಾಸನಪುರಿಯೆಂಬ ನಗರವುಂಟು. ಆ ಹೆಸರಿಗೆ ಅನ್ವರ್ಥವಾಗಿ ಅಲ್ಲಿನವರೇ ರಾಷ್ಟ್ರದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದುಂಟು. ಇಂತಿರ್ಪ ಸಿಂಹಾಸನಪುರಿ ನಗರದೊಳ್ ಕಟ್ಟಿನಕೆರೆ, ದೇವಿಗೆರೆ ಮುಂತಾಗಿ ವ್ಯಾಪಾರದ ತಾಣಗಳುಂಟು. ಅವುಗಳ ನಡುವೆ ತೂರಿಹೋದರೆ ನೂರೆಂಟು ಗೂಡಂಗಡಿಗಳುಂಟು. ನೋಡಲು ಕಿರಿದಾದರೂ ಅವು ನಡೆಸುವ ವ್ಯಾಪಾರವಾದರೋ ಊಹಿಸಲಸಾಧ್ಯ.
 
ಇಂತಿಪ್ಪ ಜಾಗದಲ್ಲಿ ಅಂಗಡಿಯನ್ನಿಟ್ಟುಕೊಂಡಿರುವ ನಮ್ಮ ಕಥಾನಾಯಕ ಧರಣಿಗೆ ನಾಲ್ವರು ಮಕ್ಕಳು. ಎಲ್ಲರೂ ವಯಸ್ಸಿಗೆ ಬಂದಿದ್ದು ವ್ಯಾಪಾರದಲ್ಲಿ ಅಪ್ಪನಿಗೆ ನೆರವಾಗುತ್ತಿದ್ದಾರೆ. ಇವರೆಲ್ಲರಿಗೂ ನಗರದ ಬೇರೆಡೆ ಅಂಗಡಿಯನ್ನಿಟ್ಟುಕೊಡಲು ಧರಣಿ ತಯಾರಿ ನಡೆಸಿದ್ದರೂ ಯಾರಿಗೂ ಆ ಅಂಗಡಿಯನ್ನು ತೊರೆದು ಹೋಗಲು ಆಸಕ್ತಿಯಿಲ್ಲ. ಎಲ್ಲರಿಗೂ ಅದೇ ಅಂಗಡಿ ಮೇಲೆ ಕಣ್ಣು. ಅಷ್ಟೇ ಏಕೆ? ಆ ಅಂಗಡಿಯನ್ನು ಯಾರೊಬ್ಬರಿಗೆ ವಹಿಸಿದರೂ ತಂದೆಯೆ ಮೇಲೆ ದಾವೆ ಹೂಡಲು ತಯಾರಿದ್ದಾರೆ.
 
ಇಂಥ ಸಂದಿಗ್ಧ ಪರಿಸ್ಥಿತಿಂಯೊಳ್ ‘ನೋಟ್ ಬ್ಯಾನ್’ ಮಾಡಿದ ಆಘಾತಕಾರಿ ಸುದ್ದಿ ಹರಡಿತು. ಕಾಳಧನವಿದ್ದವರು, ರಿಯಲ್ ಎಸ್ಟೇಟ್ ಕುಳಗಳು, ರಾಜಕಾರಣಿಗಳು ತಲೆಯ ಮೇಲೆ ಕೈಹೊತ್ತು ಕುಳಿತರು. ಅದೇ ಸಂದರ್ಭದಲ್ಲಿ ತನ್ನ ನಾಲ್ಕು ಮಕ್ಕಳನ್ನು ಕರೆದು ಕೂರಿಸಿಕೊಂಡ ಧರಣಿಯು ಈ ರೀತಿ ನುಡಿದನು: ‘ನಾಲ್ಕು ಮಕ್ಕಳಾದ ನಿಮ್ಮ ಕೈಯಲ್ಲಿ ನಿಮ್ಮ ಪಾಲಿನ ಹಣವಾದ ಒಂದು ಕೋಟಿ ರೂಪಾಯಿಗಳನ್ನು ನೀಡುತ್ತಿರುವೆನು. ಈ ಕಪ್ಪುಹಣವನ್ನ ಬಿಳಿಯಾಗಿಸುವ ಜವಾಬ್ದಾರಿ ನಿಮ್ಮದು. ಯಾರು ಯಾವುದೇ ಅಪಾಯವಿಲ್ಲದೆ, ಎಲ್ಲರ ಮನಕೊಪ್ಪುವಂತೆ ಹಣ ಬದಲಾಯಿಸಿ ತರುವಿರೋ ಅವರಿಗೆ ಈ ಅಂಗಡಿ. ನಿಮ್ಮೆಲರಿಗೂ ಒಂದು ತಿಂಗಳ ಅವಕಾಶವಿದೆ’’.
 
ತಿಂಗಳು ಕಳೆಯಿತು. ಪೂರ್ವನಿಗದಿಯಂತೆ ಎಲ್ಲರೂ ಒಂದೆಡೆ ಸೇರಿದರು. ಹಿರಿಯ ಮಗನು ‘‘ಚಿನ್ನದ ಅಂಗಡಿಗೆ ಹೋಗಿ ಕೆ.ಜಿ.ಗೆ ಐವತ್ತು ಲಕ್ಷದಂತೆ ಎರಡು ಕೆ.ಜಿ ಚಿನ್ನವನ್ನು ತೆಗೆದಿಟ್ಟಿರುವೆ’’ ಎಂದು ತಿಳಿಸಿದನು. ಎರಡನೇ ಮಗ ‘‘ಆರಂಭದ ನಾಲ್ಕು ದಿನ ಹತ್ತು ಜನರನ್ನು ಹಿಡಿದು ಕ್ಯೂ ನಿಲ್ಲಿಸಿ ಹಳೇ ನೋಟ್ ಬದಲಾಯಿಸಲು ಯತ್ನಿಸಿ ಹತ್ತು ಲಕ್ಷ ನಗದೀಕರಿಸಿದೆ. ನಂತರ ಬ್ಯಾಂಕ್ ಅದಕ್ಕೆ ತಡೆಯೊಡ್ಡಲು, ತಲಾ ನಾಲ್ಕೈದು ಬ್ಯಾಂಕ್‌ಗಳಲ್ಲಿ ಐದು–ಹತ್ತು ಲಕ್ಷಗಳ ಡಿ.ಡಿ. ತೆಗೆದು ಅದನ್ನು ಎರಡುಮೂರು ದಿನಗಳಲ್ಲಿ ಸರೆಂಡರ್ ಮಾಡಿ ಹಣ ಪಡೆದೆ. ಕೊನೆಗೆ ಪರಿಚಯದ ದಲ್ಲಾಳಿ ಬಳಿ ಉಳಿದ ಹಣ ಮೂವತ್ತು ಪರ್ಸೆಂಟ್‌ನಂತೆ ಬದಲಾಯಿಸಿಕೊಂಡೆ’’ ಎಂದು ಹೇಳಿ, ತನ್ನಲ್ಲಿದ್ದ ಅರವತ್ತು ಲಕ್ಷ ರೂಪಾಯಿ ನೀಡಿದನು. ಮೂರನೇ ಮಗ – ‘‘ನಗರದ ಪ್ರಮುಖ ಹೋಲ್‌ಸೇಲ್ ಡೀಲರ್ ಬಳಿ ಹಣ ನೀಡಿರುವೆ. ಅವರು ಆ ಹಣದಿಂದ ಸ್ಟೇಷನರಿ ಹಾಗೂ ಇತರೆ ವಸ್ತುಗಳ ಸಗಟು ಖರೀದಿ ಮಾಡಿದ್ದಾರೆ. ಮುಂದೆ ಅದರ ಮಾರಾಟದ ನಂತರ, ಶೇ. 15 ಶುಲ್ಕ ಮುರಿದುಕೊಂಡು ಉಳಿದ ಹಣ ನೀಡುವರು’’ ಎಂದು ಹೇಳಿದನು.
 
ಈಗ ಕೊನೆಯ ಮಗನ ಸರದಿ. ಎಲ್ಲರೂ ಕೌತುಕದಿಂದ ಅವನೆಡೆ ನೋಡಿದರು. ಅವನ ಬಳಿ ಯಾವುದೇ ಹಣವಿಲ್ಲ. ‘‘ತಾನು ಉಳಿದ ಮೂವರು ಅಣ್ಣಂದಿರ ರೀತಿ ಯೋಚಿಸಿದ್ದೆನೆಂದೂ – ಅವೆಲ್ಲವೂ ನಿರರ್ಥಕ ಮತ್ತು ಅಪಾಯ ಎನ್ನಿಸಿದ್ದರಿಂದ ಹಣವನ್ನೆಲ್ಲ ಗಂಗೆಯಲ್ಲಿ ಮುಳುಗಿಸಿಬಿಟ್ಟೆ’’ ಎಂದನು.
 
ಅವನ ಮಾತನ್ನು ಉಳಿದ ಮೂವರು ಛೇಡಿಸಿದರು. ಒಬ್ಬನಂತೂ, ‘‘ಸರ್ಕಾರದ ಬೊಕ್ಕಸಕ್ಕೆ ಕಟ್ಟಿದ್ದರೂ ಅರ್ಧದಷ್ಟಾದರೂ ಹಣ ಸಿಗುತ್ತಿತ್ತು. ಅದನ್ನೂ ಮಾಡದ ಈತ ಮೂರ್ಖನೇ ಸರಿ’’ ಎಂದು ಜರಿದನು.
 
ಧರಣಿ ಮಾತ್ರ ತನ್ನ ಕೊನೆಯ ಮಗನ ಕಾರ್ಯವನ್ನು ಸಮರ್ಥಿಸಿ, ಅದರ ಲಾಭವನ್ನು ಎಳೆಎಳೆಯಾಗಿ ವಿವರಿಸಿದನು. ಉಳಿದವರು ಧರಣಿಯ ವಾದವನ್ನು ಒಪ್ಪಿ ತಾವು ಮಾಡಿದ ತಪ್ಪಿಗೆ ಪರಿತಪಿಸಿ, ಕೊನೆಯ ಮಗನಿಗೆ ಅಂಗಡಿಯನ್ನು ವಹಿಸುವ ನಿರ್ಧಾರಕ್ಕೆ ಬಂದರು.
 
ಕಥೆ ನಿಲ್ಲಿಸಿದ ಬೇತಾಳವು, ‘‘ರಾಜನ್, ಈಗ ನನ್ನದೊಂದು ಪ್ರಶ್ನೆಯಿದೆ. ಮೂವರು ಮಕ್ಕಳು ತಮಗೆ ತಿಳಿದಂತೆ ಹಣ ಉಳಿಸಿದರು. ಕೊನೆಯ ಮಗನಾದರೂ ಸಂಪೂರ್ಣ ಹಣವೇ ಇಲ್ಲದಂತೆ ಮಾಡಿದನು. ಆದರೂ ಅವನ ನಡೆಯೇ ಸರಿ ಎಂದು ಧರಣಿ ಹೇಗೆ ಸಮರ್ಥಿಸಿದನು? ಇದಕ್ಕೆ ಸರಿಯಾದ ಉತ್ತರ ನೀಡದಿದ್ದರೆ, ಹತ್ತಾರು ನ್ಯೂಸ್ ಚಾನಲ್‌ಗಳ ಪ್ಯಾನಲ್ ಡಿಸ್ಕಷನ್ ನೋಡಿದ ವೀಕ್ಷಕನ ತಲೆಯ ರೀತಿ ನಿನ್ನ ತಲೆ ಹೋಳಾಗುವುದು ಖಚಿತ’’ ಎಂದಿತು.
 
ಅದಕ್ಕೆ ವಿಕ್ರಮನು ಮಾತಾಡಿ, ‘‘ಅಯ್ಯಾ ಬೇತಾಳನ್, ನೀನೇ ತಿಳಿಸಿದಂತೆ ಹೊರಪ್ರಪಂಚಕ್ಕೆ ಗೋಚರಿಸದೆ ಸಣ್ಣ ಅಂಗಡಿಯಲ್ಲಿ ದೊಡ್ಡ ಮಟ್ಟದ ವ್ಯಾಪಾರ ಮಾಡುವ ಇವರು ಬಹುತೇಕ ನಕಲಿ ಪ್ರಾಡಕ್ಟ್‌ಗಳ ವಿತರಕರು. ಈ ಪ್ರಾಡಕ್ಡ್‌ಗಳಿಗೆ ಯಾವುದೇ ಸೇಲ್ಸ್ ಟ್ಯಾಕ್ಸ್, ಕಮರ್ಷಿಯಲ್ ಟ್ಯಾಕ್ಸ್ ಇಲ್ಲವೇ ಇನ್‌ಕಮ್ ಟ್ಯಾಕ್ಸ್ ಕಟ್ಟದೆ, ಬಂದ ಹಣವನ್ನೆಲ್ಲಾ ಸೈಟ್–ಮನೆ ಮುಂತಾಗಿ ವಿವಿಧೆಡೆ ತೊಡಗಿಸಿಕೊಂಡವರು. ಮೊದಲ ಇಬ್ಬರೂ ಮಾಡಿದ ಹಣ ಬದಲಾಯಿಸುವಿಕೆಯಲ್ಲಿ ಯಾವುದಾದರೂ ಒಂದು ಮೂಲದಿಂದ ಸಿಕ್ಕಿಬೀಳುವ ಸಾಧ್ಯತೆ ಹೆಚ್ಚು.
 
ಮೂರನೆಯವನ ಹಣ ಹಿಂತಿರುಗುವವರೆಗೂ ಗ್ಯಾರಂಟಿ ಇಲ್ಲ. ಇನ್ನೂ ಸರ್ಕಾರಕ್ಕೆ ಐವತ್ತು ಪರ್ಸೆಂಟ್ ಟ್ಯಾಕ್ಸ್ ತುಂಬಿ ಹಣ ಬಿಳಿ ಮಾಡಿಕೊಳ್ಳಬಹುದಾದರೂ ಮುಂದೆ ಆತನು ತೆರಿಗೆ ಬಲೆಗೆ ಸಿಲುಕಿ ನಿರಂತರವಾಗಿ ಟ್ಯಾಕ್ಸ್ ಕಟ್ಟಲೇಬೇಕಾದ ಅನಿವಾರ್ಯತೆಗೆ ಸಿಲುಕಿ, ತೆರಿಗೆ ಅಧಿಕಾರಿಗಳ ಕಣ್ಣಿಗೆ ಬಿದ್ದು ಮುಂದೇನಾಗುವುದೋ ಬಲ್ಲವರಾರು? ಹಣವನ್ನೇ ಇಲ್ಲವಾಗಿ ಮಾಡಿದರೆ ತಾತ್ಕಾಲಿಕವಾಗಿ ಅವನಿಗೆ ನಷ್ಟವಾಗಿರಬಹುದು. ಮುಂದೆ ಅವನಿಗೆ ಲಾಭವೇ ಸರಿ. ಹೀಗಾಗಿ ತನ್ನ ಕೊನೆಯ ಮಗನ ಚಾಣಾಕ್ಷತೆಗೆ ಧರಣಿ ತಲೆದೂಗಿದ’’ ಎಂದೊಡನೆ, ಬೇತಾಳವು ಆರ್.ಟಿ.ಐ ಕಾರ್ಯಕರ್ತನನ್ನು ಕಂಡ ರಾಜಕಾರಣಿಯಂತೆ ಮಾಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT