ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾರ್ಥಿ ದೈತ್ಯ

ಮಕ್ಕಳ ಕಥೆ
Last Updated 31 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಆ ಊರ ನಡುವೆ ಇದ್ದ ಒಂದು ದೊಡ್ಡ ಮನೆಯಲ್ಲಿ ಒಬ್ಬ ಸ್ವಾರ್ಥಿಯಾಗಿದ್ದ ದೈತ್ಯ ವಾಸ ಮಾಡುತ್ತಿದ್ದ. ಆ ಮನೆಯ ಸುತ್ತ ಬಹಳ ಸುಂದರವಾದ ತೋಟವಿತ್ತು. ಅದರಲ್ಲಿ ಮೆತ್ತನೆಯ ಹುಲ್ಲು ಬೆಳೆದಿತ್ತು. ಅವುಗಳಲ್ಲಿ ಹೊಳೆಯುವ ನಕ್ಷತ್ರಗಳ ಹಾಗೆ ಬಣ್ಣಬಣ್ಣದ ಹೂಗಳಿದ್ದವು. ಅಲ್ಲಿಲ್ಲಿ ಹರಡಿದಂತೆ ಹನ್ನೆರಡು ಪೀಚ್ ಮರಗಳಿದ್ದವು.

ಅವುಗಳಲ್ಲೂ ಹೂಗಳು, ಹಣ್ಣುಗಳು. ಆ ಮರಗಳಲ್ಲಿ ಕೂತು ಹಕ್ಕಿಗಳು ಹಾಡುತ್ತಿದ್ದವು. ಆದ್ದರಿಂದ ಊರಿನ ಎಲ್ಲ ಮಕ್ಕಳಿಗೂ ಆ ತೋಟದಲ್ಲಿ ಆಡಲು ಇಷ್ಟ. ಆದರೆ ಆ ದೈತ್ಯ ಯಾರನ್ನೂ ತೋಟದ ಒಳಕ್ಕೆ ಸೇರಿಸುತ್ತಿರಲಿಲ್ಲ. ಅವನು ಮನೆಯಲ್ಲಿ ಇಲ್ಲದಿರುವ ಸಮಯದಲ್ಲಿ ಮಕ್ಕಳು ಆ ತೋಟದ ಒಳಕ್ಕೆ ಹೋಗಿ ಮನಸ್ಸಿಗೆ ಸಂತೋಷವಾಗುವಷ್ಟು ಆಡಿಕೊಳ್ಳುತ್ತಿದ್ದರು.

ಒಂದು ದಿನ ದೈತ್ಯ ಬೇರೆ ರಾಜ್ಯದಲ್ಲಿದ್ದ ತನ್ನ ದೈತ್ಯ ಸ್ನೇಹಿತನ ಮನೆಗೆ ಹೋದ. ಹೋದವನು ಅಲ್ಲಿಯೇ ಏಳು ವರ್ಷಗಳ ಕಾಲ ಉಳಿದುಬಿಟ್ಟ. ಊರ ಜನ ಮನೆಯನ್ನು ಗುಳೇ ಹೋದವನ ಮನೆ ಎಂದು ಭಾವಿಸಿದರು. ಅಷ್ಟೂ ಕಾಲ ಮಕ್ಕಳಿಗೆ ಹಬ್ಬದಂತೆ ಇತ್ತು. ಆದರೆ ಒಂದು ದಿನ ದೈತ್ಯ ಊರಿಗೆ ವಾಪಸ್ಸು ಬಂದುಬಿಟ್ಟ. ತನ್ನ ತೋಟದಲ್ಲಿ ಆಡುತ್ತಿರುವ ಮಕ್ಕಳನ್ನು ಕಂಡ. ಅವನಿಗೆ ಕೋಪ ಬಂತು. ಮಕ್ಕಳನ್ನೆಲ್ಲ ಅಲ್ಲಿಂದ ಓಡಿಸಿಬಿಟ್ಟ. ‘ಇದು ನನ್ನ ಮನೆ. ಇದು ನನ್ನ ತೋಟ. ಇದು ನನಗಾಗಿ ಮಾತ್ರ’ ಎಂದು ತೋಟದ ಸುತ್ತಾ ಎತ್ತರವಾದ ಗೋಡೆ ಕಟ್ಟಿಸಿಬಿಟ್ಟ. ಮುಂದೆ ಅಲ್ಲಿಗೆ ಮಕ್ಕಳು ಯಾರೂ ಹೋಗದಂತಾಯಿತು. ಮಕ್ಕಳಿಗೆಲ್ಲಾ ನಿರಾಸೆಯಾಯಿತು. 
 
ಮಕ್ಕಳು ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದ ಬಳಿಕ ತೋಟದಲ್ಲಿದ್ದ ಮರ ಗಿಡಗಳಿಗೆ ಬಹಳ ಬೇಸರವಾಯಿತು. ಅವುಗಳ ಚೆಲುವು ಮಾಯವಾಯಿತು. ಅವುಗಳ ಮೇಲೆ ಹಿಮ ಸುರಿದು ಹೆಪ್ಪುಗಟ್ಟಿತು. ಹಕ್ಕಿಗಳು ಅಲ್ಲಿಗೆ ಬರುವುದನ್ನು ನಿಲ್ಲಿಸಿದವು. ಅವುಗಳ ಹಾಡು ಕೇಳದಾಯಿತು. ಎಲ್ಲ ಕಡೆಯೂ ವಸಂತ ಕಾಲ ಬಂದಿದ್ದರೂ ದೈತ್ಯನ ಕಾಂಪೋಂಡಿನಲ್ಲಿ ಮಾತ್ರ ಹಿಮ ಕರಗಲೇ ಇಲ್ಲ. ಅಲ್ಲಿ ಚಳಿಗಾಲ ಹಾಗೇ ನಿಂತುಬಿಟ್ಟಿತ್ತು. 
 
ಹೀಗೇ ಕೆಲವು ವರ್ಷ ಕಳೆದುಹೋಯಿತು. ದೈತ್ಯನಿಗೆ ಎಲ್ಲ ಕಡೆಯೂ ಕಾಲಗಳು ಬದಲಾದರೂ ತನ್ನ ತೋಟದಲ್ಲಿ ಏಕೆ ಆಗುತ್ತಿಲ್ಲ ಅನ್ನಿಸಿತು. ಆದರೆ ಅವನು ವಸಂತಕಾಲವು ನಿದ್ದೆ ಮಾಡಿಬಿಟ್ಟಿರಬೇಕೆಂದು ಬಗೆದು ತೋಟದ ವಾತಾವರಣಕ್ಕೆ ಒಗ್ಗಿಹೋದ. ಹಾಗೆಯೇ ಮುದುಕನೂ ಆಗಿಹೋದ.
 
ಊರ ಮಕ್ಕಳಿಗೆ ತೋಟದ ಅಂದವನ್ನು ಮರೆಯಲು ಸಾಧ್ಯವಾಗಲೇ ಇಲ್ಲ. ತೋಟಕ್ಕೆ ಹೇಗಾದರೂ ಹೋಗಿಯೇ ತೀರಬೇಕು ಎಂಬುದು ಅವರ ಆಸೆ. ಆ ಆಸೆ ಅವರಲ್ಲಿ ಬಲಿತು ಅವರು ಹೇಗಾದರೂ ತೋಟದ ಒಳಹೋಗಲು ಕಳ್ಳದಾರಿಯೊಂದನ್ನು ಕಂಡುಹಿಡಿಯಬೇಕೆಂದು ತೀರ್ಮಾನಿಸಿದರು. ಒಂದು ದಿನ ತೋಟದ ಗೋಡೆಯ ಸುತ್ತಲೂ ಸುತ್ತಿದರು. ಅವರಿಗೆ ದೂರದ ಮೂಲೆಯಲ್ಲೊಂದು ಮಕ್ಕಳು ನುಸುಳಬಹುದಾದಷ್ಟು ದೊಡ್ಡ ಕಿಂಡಿ ಇರುವುದು ಕಂಡುಬಂತು. ಅದರ ಮೂಲಕ ಒಬ್ಬೊಬ್ಬರೇ ತೆವಳಿಕೊಂಡು ಒಳಗೆ ಹೋಗಿ ಆಟ ಆಡಿಕೊಳ್ಳತೊಡಗಿದರು. ಅದನ್ನು ಕಂಡು ಅಲ್ಲಿನ ಹುಲ್ಲು, ಮರ ಗಿಡಗಳಿಗೆ ಸಂತೋಷವಾಯಿತು. ತೋಟದ ಒಳಕ್ಕೆ ವಸಂತ ಕಾಲ ಮರಳಿ ಬಂದು ನಿಂತುಬಿಟ್ಟಿತು. 
 
ಮರುದಿನ ದೈತ್ಯ ಕಿಟಕಿಯಿಂದ ಶುಭ್ರವಾದ ಸೂರ್ಯನ ಬೆಳಕು ಮುಖದ ಮೇಲೆ ಬಿದ್ದು ಎಚ್ಚರಗೊಂಡ. ಅಚ್ಚರಿಯಿಂದ ಹೊರ ಬಂದು ನೋಡುತ್ತಾನೆ, ಊರ ಮಕ್ಕಳು ಒಳಗೆ ಬಂದು ಆಡುತ್ತಿದ್ದಾರೆ! ಮಕ್ಕಳು ಬಂದಿದ್ದರಿಂದ ವಸಂತಕಾಲ ತನ್ನ ತೋಟಕ್ಕೂ ಬಂದುಬಿಟ್ಟಿದೆ. ಹುಲ್ಲು, ಗಿಡಮರ ಎಲ್ಲ ಹೂ ಬಿಟ್ಟಿವೆ. ಮರಗಳಲ್ಲಿ ಹಣ್ಣುಗಳಿವೆ! 
ದೈತ್ಯನಿಗೆ ತಾನು ಮಾಡಿದ ತಪ್ಪೆಲ್ಲವೂ ಅರ್ಥವಾಯಿತು. ಅವನಿಗೆ ಪಶ್ಚಾತ್ತಾಪವಾಯಿತು. ಅವನು ಕೂಡಲೇ ತೋಟಕ್ಕೆ ಕಟ್ಟಿಸಿದ್ದ ಗೋಡೆಯನ್ನು ಒಡೆಸಿಹಾಕಿದ. ಮಕ್ಕಳಿಗೆ ಆಡಲು ಬಿಟ್ಟ. ಈಗ ಮಕ್ಕಳಿಗೂ ಅವನನ್ನು ಕಂಡರೆ ಇಷ್ಟವಾಗುತ್ತಿತ್ತು. ಅವರೆಲ್ಲ ಆಟ ಮುಗಿದ ಮೇಲೆ ಅವನಿಗೆ ಥ್ಯಾಂಕ್ಸ್, ಬೈಬೈ ಹೇಳಿ ಮನೆಗಳಿಗೆ ಹೋಗುತ್ತಿದ್ದರು. ಆದರೂ ಏಕೋ ಅವರ ಪೈಕಿ ಒಬ್ಬ ಹುಡುಗನ ಮೇಲೆ ಮಾತ್ರ ಅವನಿಗೆ ಬಹಳ ಪ್ರೀತಿ ಉಂಟಾಗಿತ್ತು.
 
ಒಮ್ಮೆ ಅವನಿಗೆ ಆ ಮೂಲೆಯ ಮರದ ಅಡಿಯಲ್ಲಿ ತನ್ನ ಪ್ರೀತಿಯ ಬಾಲಕ ಯಾತಕ್ಕೋ ಕಷ್ಟಪಡುತ್ತಿರುವುದು ಕಾಣಿಸಿತು. ಆ ಹುಡುಗ ಮರದ ಹಣ್ಣೊಂದನ್ನು ಕೀಳಲು ಶ್ರಮಪಡುತ್ತಿದ್ದ. ಕೊಂಬೆ ಏನು ಮಾಡಿದರೂ ಎಟುಕುತ್ತಿರಲಿಲ್ಲ. ಅಲ್ಲದೆ ಆ ಹುಡುಗನಿಗೆ ಪ್ರಯತ್ನ ಮಾಡಿ ಮಾಡಿ ಹೆಚ್ಚಿಗೆ ಶ್ರಮವಾಗುತ್ತಿರುವಂತೆ ತೋರುತ್ತಿತ್ತು. ದೈತ್ಯ ಮರದ ಬಳಿ ಹೋದ. ಹುಡುಗನನ್ನು ಮರಕ್ಕೆ ಹತ್ತಿಸಿದ. ಇಳಿಯಲು ಅಗತ್ಯವಾದರೆ ತನ್ನನ್ನು ಕರೆಯಲು ಹೇಳಿದ. ಆದರೂ ದೂರ ಹೋಗಲು ಮನಸ್ಸು ಬರದೆ ಮರದ ಬಳಿಯೇ ಕುಳಿತ. ಉಳಿದ ಮಕ್ಕಳು ದೂರದಲ್ಲಿ ಆಡಿಕೊಳ್ಳುತ್ತಿದ್ದರು. ಹಣ್ಣು ಕಿತ್ತ ಹುಡುಗನಿಗೆ ಇಳಿಯಲು ಸಹಾಯ ಮಾಡಿದ.
 
ಕೆಲವು ದಿನಗಳು ಕಳೆದವು. ಮನೆಯಿಂದ ಹೊರಬಂದ ದೈತ್ಯನಿಗೆ ಮರದ ಅಡಿಯಲ್ಲಿ ಆ ಬಾಲಕ ಕಂಡುಬಂದ. ಅವನಿಗೆ ಇಂದೂ ಸಹಾಯ ಬೇಕಾದೀತು ಎಂಬ ಭಾವನೆಯಿಂದ ಮರದ ಹತ್ತಿರ ಹೋದ ದೈತ್ಯ. ಬಾಲಕನ ಕೈ–ಕಾಲುಗಳಲ್ಲಿ ಮೊಳೆಯ ಗಾಯಗಳಿದ್ದವು. ಅದನ್ನು ಕಂಡು ಕೋಪಗೊಂಡ ದೈತ್ಯ ಬಾಲಕನನ್ನು ‘ಯಾರು ಆ ಗಾಯಗಳನ್ನು ಮಾಡಿದವರು’ ಎಂದು ಕೇಳಿದ. ಬಾಲಕ ಉತ್ತರಿಸಲಿಲ್ಲ. ‘ಹೇಳು, ಅವನ ಮೂಳೆ ಮುರಿಯುತ್ತೀನಿ’ ಎಂದು ದೈತ್ಯ ಒತ್ತಾಯಿಸಿದ. ನಸುನಕ್ಕು ಬಾಲಕ ಹೇಳಿದ ‘ಗೆಳೆಯಾ, ಅವು ಗಾಯಗಳಲ್ಲ. ಪ್ರೀತಿಯ ಗುರುತುಗಳು’ ಎಂದು.
 
ಬಾಲಕ ಈಗ ಮರದತ್ತ ನೋಡುತ್ತಿದ್ದ. ದೈತ್ಯ ಅವನನ್ನು ಕೇಳಿದ, ‘ಮಗೂ ಮರ ಹತ್ತಲು ನಿನಗೆ ಸಹಾಯ ಮಾಡಲೇ?’ 
 
ನಸುನಕ್ಕು ಬಾಲಕ ಹೇಳಿದ, ‘ಅಂದು ನೀನು ನಿನ್ನ ಮರಕ್ಕೆ ಹತ್ತಲು ನನಗೆ ಸಹಾಯ ಮಾಡಿದೆ. ಇವತ್ತು ನಾನು ನನ್ನ ಮರಕ್ಕೆ ಹತ್ತಲು ನಿನಗೆ ಸಹಾಯ ಮಾಡುತ್ತೇನೆ. ಅಂದು ನೀನು ನನ್ನನ್ನು ನಿನ್ನ ತೋಟದಲ್ಲಿ ಆಡಲು ಬಿಟ್ಟೆ. ಇಂದು ನಾನು ನಿನ್ನನ್ನು ನನ್ನ ತೋಟದಲ್ಲಿ ಆಡಲು ಬಿಡುತ್ತೇನೆ’.
 
‘ನಿನ್ನ ಮರ ಎಂದರೆ?’ ಅಚ್ಚರಿಯಿಂದ ದೈತ್ಯ ಬಾಲಕನನ್ನು ಕೇಳಿದ. ‘ಅದು ಸ್ವರ್ಗ’ – ಬಾಲಕ ನುಡಿದ.
 
ಅಂದು ಮಧ್ಯಾಹ್ನ ಮಕ್ಕಳೆಲ್ಲ ಆಡಲು ಬಂದರು. ಮರದ ಅಡಿಯ ನೆರಳಿನಲ್ಲಿ ದೈತ್ಯನು ಮಲಗಿರುವುದು ಅವರಿಗೆ ಕಂಡಿತು. ದೈತ್ಯನ ಪ್ರಾಣಪಕ್ಷಿ ಹಾರಿಹೋಗಿತ್ತು. ಅವನ ಮೈತುಂಬಾ ಮರ ಉದುರಿಸಿದ ಬಿಳಿ ಹೂಗಳಿದ್ದವು.
(ಆಸ್ಕರ್ ವೈಲ್ಡ್‌ನ ‘ದಿ ಸೆಲ್ಫಿಷ್ ಜಯಂಟ್’ ಕಥೆಯ ಸಂಗ್ರಹ ಭಾವಾನುವಾದ)
(ಈ ಕಥೆಯನ್ನು goo.gl/MSSQuQ ಕೊಂಡಿ ಬಳಸಿ ಓದಬಹುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT