ಟಿಪ್ಪಣಿ

ನನ್ನ ಇಷ್ಟದ ಪುಸ್ತಕ

2016ರಲ್ಲಿ ಪ್ರಕಟಗೊಂಡ ಕೃತಿಗಳಲ್ಲಿ ತಮ್ಮ ಗಮನಸೆಳೆದ ಪ್ರಮುಖ ಪುಸ್ತಕವೊಂದರ ಕುರಿತು ವಿವಿಧ ಲೇಖಕರ ಟಿಪ್ಪಣಿಗಳು ಇಲ್ಲಿವೆ. ಇದು ಜನಪ್ರಿಯ ಪುಸ್ತಕಗಳ ಯಾದಿ ಅಥವಾ ‘ಟಾಪ್‌ 10’ ಮಾದರಿಯ ಪಟ್ಟಿಯಲ್ಲ. ಕೆಲವು ಒಳ್ಳೆಯ ಪುಸ್ತಕಗಳ ಬಗ್ಗೆ ಗಮನಸೆಳೆಯುವುದು ಈ ಕಿರುಬರಹಗಳ ಉದ್ದೇಶ. 

ನನ್ನ ಇಷ್ಟದ ಪುಸ್ತಕ
ಮೈ ಮನಗಳ ಸುಳಿಯಲ್ಲಿ
ಕನ್ನಡದಲ್ಲಿ ಒಳ್ಳೆಯ ಕಾದಂಬರಿಗಳು ಅಪರೂಪವಾಗುತ್ತಿವೆ. ವಿವರವಾದ ಚರ್ಚೆ, ಗಮನವನ್ನು ಬೇಡುವ ಕೃತಿಗಳೂ ಕಡಿಮೆಯೇ. ಇಂಥ ಹೊತ್ತಿನಲ್ಲಿ ‘ಪುನರಪಿ’ ಕಾದಂಬರಿ ಸ್ವಾಗತ, ಕೃತಜ್ಞತೆಗಳಿಗೆ ಅರ್ಹವಾಗಿ ಕಾಣುತ್ತದೆ. 
 
ಮುಖ್ಯವಾಗಿ ಅಸ್ಮಾ, ಅನೂಷ ಎಂಬ ತರುಣಿಯರು ಮತ್ತು ಲೋಕೇಶ ಜಿಗಜಿಣಗಿ ಎಂಬ ವೃದ್ಧನ ಪಾತ್ರಗಳ ನಡುವೆ ನಡೆಯುವ ಘಟನೆಗಳು ಅವರ ಸಂಬಂಧದ ತಡಕು ತೊಡಕು ಕಥೆಯನ್ನು ಹೆಣೆದಿವೆ. ಜೊತೆಗೇ ‘ಪುನರಪಿ’ಯು ಹರಯದ ಹೆಣ್ಣುಗಳ ಮೈ ಮನಸಿನ ಆಪ್ತಸಂಬಂಧಗಳ ಕಥನವೂ ಆಗುತ್ತದೆ. ಗಮನಿಸಿದರೆ ಅಂತರಂಗದ ಆಪ್ತತೆ, ಬಹಿರಂಗದ ಸಾಮಾಜಿಕ ತೊಡಕುಗಳ ಕಥನವೂ ಕೇಳುತ್ತದೆ. ಬಹಿರಂಗವು ಅಂತರಂಗವನ್ನು ತಿದ್ದಿ, ಕೊರೆದು, ಕಟೆಯುವ ಮತ್ತು ಹಾಗೆ ರೂಪುಗೊಂಡ ಅಂತರಂಗವೇ ಬಹಿರಂಗಕ್ಕೆ ಅರ್ಥ, ಬಣ್ಣ, ಆಕಾರಗಳನ್ನು ನೀಡುವ ಚೋದ್ಯವೂ ಕಾಣುತ್ತದೆ. ಭೂತಕಾಲವು ವರ್ತಮಾನವನ್ನು ಪರಿಣಾಮಿಸುವ, ವರ್ತಮಾನಕಾಲವು ಭೂತಕಾಲಕ್ಕೆ ಬೇರೆ ಅರ್ಥಗಳನ್ನು ನೀಡುವ ನೋಟವೂ ಇದೆ. ‘ಹದಿಹರೆಯದ ಹುಡುಗಿಯರು ವಯಸ್ಕರ ಲೋಕದಲ್ಲಿ ಅನುಭವಿಸುವ 
ತಲ್ಲಣ, ಹಿಂಸೆಗಳೂ’ ಹಿರಿಯರ ಲೋಕವನ್ನೇ ಅವಲಂಬಿಸಬೇಕಾದ ಅನಿವಾರ್ಯವೂ ಇದೆ.
 
ಹಿಮಾಚಲಪ್ರದೇಶದ ಹಳ್ಳಿಯ ಹುಡುಗಿ ಅಸ್ಮಾ; ಹಾವೇರಿ ಹತ್ತಿರದ ಊರಿನವಳು ಅನುಷಾ. ಇವರು ಬೆಂಗಳೂರಲ್ಲಿ ಭೆಟ್ಟಿಯಾಗುತ್ತಾರೆ. ಅವರಿಬ್ಬರ ಮೈ ಮನಸ್ಸುಗಳ ಸಂಬಂಧ ಗಾಢವೂ ಆಪ್ತವೂ ಆಗುತ್ತದೆ. ಅವರು ಧಾರವಾಡದಲ್ಲಿ ನೆಲೆಸಿ, ಸುತ್ತಲ ಸಮಾಜದ ಜೊತೆಯಲ್ಲಿ ಒಡನಾಡುತ್ತ, ವೃದ್ಧ ಲೋಕೇಶನ ಮತ್ತೆ ಅವನಂಥವರ ಬದುಕಿಗೆ ಆಸರೆಯಾಗುತ್ತಾರೆ. ಅವರಿಬ್ಬರ ಆಪ್ತ ಬದುಕಿನಲ್ಲೂ ತಲ್ಲಣ, ಕಸಿವಿಸಿಗಳಿವೆ. ಒಂದೊಂದು ಪಾತ್ರವೂ ತನ್ನ ಗತಕಾಲದ ನೆನಪುಗಳನ್ನು ಅವಲೋಕಿಸುತ್ತ ತನ್ನನ್ನು ತಾನು ಅರಿಯುವ ಬಗೆಯೂ ಗಮನ ಸೆಳೆಯುತ್ತದೆ. ವಾಸ್ತವವನ್ನು ಆಧರಿಸಿದ ಆತ್ಮಕಥೆ ಕಲ್ಪನೆಯನ್ನು ಆಧರಿಸಿದ ಕಾದಂಬರಿ ಮಾತ್ರವಲ್ಲ ಕಲ್ಪನೆ–ವಾಸ್ತವಗಳು ಬೇರ್ಪಡಿಸಲಾಗದಂತೆ ಮನುಷ್ಯರ ಬದುಕಿನಲ್ಲಿ ಬೆರೆತಿರುವ ಸತ್ಯದ ಮಿನುಗೂ ಇದೆ. ಜೊತೆಗೇ ಸಣ್ಣ ಪುಟ್ಟ ವಿವರಗಳನ್ನು ಗಮನಿಸಿ ದಾಖಲಿಸುತ್ತ ಆ ಮೂಲಕ ಪಾತ್ರದ ಮನಃಸ್ಥಿತಿಯನ್ನು ಸೂಚಿಸುವ ಕಾವ್ಯದಂಥ ಬರವಣಿಗೆಯ ಶಕ್ತಿಯೂ ಓದುಗರ ಗಮನಕ್ಕೆ ಬರುತ್ತದೆ. ‘ಹರಿವ ನದಿ ತೆರೆವ ನಭ’ ಅಧ್ಯಾಯದ ಮೊದಲಲ್ಲಿ ಬರುವ ಟೂತ್‌ಪೇಸ್ಟಿನ ಜಾಹೀರಾತು ಬರೆಯುವ ಹುಡುಗ, ಜಾಹೀರಾತಿನ ಮಾತು ಇವು ಅನೂಷಳ ಮನಸ್ಸು ಹರಿಯುವ ಕ್ರಮವನ್ನು ಸೂಚಿಸುವ ಬಗೆ ಇದಕ್ಕೊಂದು ಉದಾಹರಣೆ. ಅಧ್ಯಾಯಗಳಿಗೆ ನೀಡಿರುವ ರೂಪಕಾತ್ಮಕ ಶೀರ್ಷಿಕೆಗಳೂ ಕಾದಂಬರಿಯ ವೈಚಾರಿಕತೆಗೆ ಚೌಕಟ್ಟನ್ನು ಒದಗಿಸುವಷ್ಟು ಸಮರ್ಥವಾಗಿವೆ. 
 
ನೆನಪುಗಳ ಮೂಲಕ, ವರ್ತನೆಯ ಮೂಲಕ, ಪುಟ್ಟ ಪುಟ್ಟ ವಿವರಗಳ ಮೂಲಕ ಕಾದಂಬರಿಯ ಪಾತ್ರಗಳು ಆಪ್ತವಾಗುತ್ತವೆ. ಮತ್ತೆ ಮತ್ತೆ ಪುನರುಕ್ತವಾಗುತ್ತಲೇ ಇರುವ ದೈನಂದಿನ ಸಾಮಾನ್ಯ ಬದುಕಿನ ಹರಿವಿನೊಳಗೇ ಒಂದೊಂದೂ ಪಾತ್ರಗಳ ಅಂತರಂಗದ ವೈಶಿಷ್ಟ್ಯವನ್ನು ಸೂಚಿಸುವ ರೀತಿ ಗಮನ ಸೆಳೆಯುತ್ತದೆ. ಪುನರಪಿಯಾಗಿ ರಿಪೀಟು ಆಗಬೇಕಾದದ್ದು ಹಿಂಸೆ, ತಳಮಳ, ಕಸಿವಿಸಿಗಳಲ್ಲ – ಆದ್ರತೆ, ವಿಶ್ವಾಸ, ಪ್ರೀತಿಗಳೆಂಬ ಆಶಯವೂ ಗಮನ ಸೆಳೆಯುತ್ತದೆ. ಇಂಥ ಎಲ್ಲ ಸಂಗತಿಗಳನ್ನೂ ಹೆಣ್ಣು–ಹೆಣ್ಣಿನ ಮೈ ಮನಸುಗಳ ಸಂಬಂಧದ ಮೂಲಕ ತೀರ ಸಹಜವಾಗಿ, ಆಪ್ತವಾಗಿ ಕಾವ್ಯಾ ಕಡಮೆ ನಾಗರಕಟ್ಟೆಯವರು ನಿರ್ವಹಿಸಿದ್ದಾರೆ. ಇದು ಅವರ ಮೊದಲ ಕಾದಂಬರಿಯಾದ್ದರಿಂದ ಕಾವ್ಯಾ ಅವರ ಮುಂದಿನ ಕೃತಿಗಳ ಬಗ್ಗೆ ಹೆಚ್ಚಿನ ನಿರೀಕ್ಷೆ ಹುಟ್ಟುತ್ತದೆ.
–ಓ.ಎಲ್. ನಾಗಭೂಷಣ ಸ್ವಾಮಿ
 
(ಪುನರಪಿ ಲೇ: ಕಾವ್ಯ ಕಡಮೆ ನಾಗರಕಟ್ಟೆ ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ, ಬಳ್ಳಾರಿ)
 
**
ಮಾತುಕತೆಗಳೇ ‘ಕತೆ’

ಕನ್ನಡಕ್ಕೆ ಹಲವು ವಿಶಿಷ್ಟ ಕೃತಿಗಳನ್ನು ಕೊಟ್ಟಿರುವ ಹಿರಿಯ ಲೇಖಕಿ ವೈದೇಹಿ ಅವರ ಏಳನೆಯ ಕಥಾಸಂಕಲನ ‘ಕತೆ ಕತೆ ಕಾರಣ’. ಕತೆ ಕಟ್ಟುವ ಪರಿಕ್ರಮದಲ್ಲೇ ಘಟನೆಯೊಂದು ಕತೆಯಾಗುವ, ಇತಿಹಾಸವಾಗುವ, ಪುರಾಣವಾಗುವ ಪ್ರಕ್ರಿಯೆಯನ್ನು ಶೋಧಿಸಿಕೊಂಡು ಹೋಗುವ ಇಲ್ಲಿನ ರಚನೆಗಳು ವೈದೇಹಿ ಅವರ ಕಥಾಮೀಮಾಂಸೆಯನ್ನೂ ರೂಪಿಸಿರುವುದು ಈ ಸಂಕಲನದ ವೈಶಿಷ್ಟ್ಯವಾಗಿದೆ. ಸಾಮಾನ್ಯ ಮನುಷ್ಯರ ದೈನಂದಿನ ಮಾತುಕತೆಗಳೇ ‘ಕತೆ’ಗಳಾಗುವ ಸೋಜಿಗ ಲೇಖಕಿಯನ್ನು ಕಾಡಿದೆ. ಎಂದೋ ನಡೆದ ಘಟನೆಗಳು ಮನುಷ್ಯ ಕಥನದಲ್ಲಿ ಪಡೆದುಕೊಳ್ಳುವ ರೂಪಾಂತರಗಳು, ಒಂದೇ ಘಟನೆ ಹಲವರ ಹಲವು ನಿರೂಪಣೆಗಳಲ್ಲಿ ಬೇರೆ ಬೇರೆ ಸತ್ಯಗಳನ್ನೇ ಕಾಣಿಸುವುದು, ವಾಸ್ತವ ಜೀವನದಲ್ಲಿ ನಡೆದ ಘಟನೆಗಳು ನೋಡನೋಡುತ್ತಿದ್ದಂತೆಯೇ ಪುರಾಣಗಳಾಗಿ ಬಿಡುವ ಚೋದ್ಯವನ್ನು ವೈದೇಹಿ ಇಲ್ಲಿಯ ಕತೆಗಳಲ್ಲಿ ಕಾಣಿಸಿದ್ದಾರೆ. ಈ ಸಂಕಲನದ ಹಲವು ಕತೆಗಳ ಶೀರ್ಷಿಕೆಗಳೇ – ‘ಸ್ಥಳ ಪುರಾಣ’, ‘ವ್ಯಕ್ತಿ ಪುರಾಣ’, ‘ಬಾಕಿ ಇತಿಹಾಸ’, ‘ವಲಸೆ ಪುರಾಣ’, ‘ಧರ್ಮಸೂಕ್ಷ್ಮ ಪುರಾಣ’, ‘ಆಖ್ಯಾನ ಪ್ರತ್ಯಾಖ್ಯಾನ’ – ಅವುಗಳ ಸ್ವರೂಪ ಮತ್ತು ವ್ಯಾಪ್ತಿಯನ್ನು ಸೂಚಿಸುವಂತಿವೆ. ಹಿಂದೆ ನಡೆದ ಸಂಗತಿಗಳು ಇಂದು ‘ಇತಿಹಾಸ’ವಾಗಿ ಪರಿವರ್ತಿತವಾಗುವ ಪ್ರಕ್ರಿಯೆಯಲ್ಲಿ ಪಡೆದುಕೊಳ್ಳುವ ಪಲ್ಲಟಗಳಲ್ಲಿ ‘ಸತ್ಯ’ವೆಂದರೇನು ಎನ್ನುವ ಮೂಲಭೂತ ಪ್ರಶ್ನೆಯ ಪರಿಶೀಲನೆ ಇಲ್ಲಿನ ಕತೆಗಳಿಗೆ ಒಂದು ತಾತ್ವಿಕ ಎತ್ತರವನ್ನು ತಾನಾಗಿ ಧಾರಣ ಮಾಡಿಬಿಟ್ಟಿದೆ.

ಕನ್ನಡದಲ್ಲಿ ಶುದ್ಧಾಂಗಶುದ್ಧ ಕಥಾಮೀಮಾಂಸೆ ತೀರಾ ಕಡಿಮೆ. ಅದರ ಕೊರತೆಯನ್ನು ವೈದೇಹಿ ಅವರ ಅನೇಕ ಕತೆಗಳು ತುಂಬಿಕೊಟ್ಟಿವೆ ಎನ್ನುವುದು ಈ ರಚನೆಗಳಿಗೆ ವಿಶೇಷ ಮಹತ್ವವನ್ನು ತಂದುಕೊಟ್ಟಿವೆ. ಈ ಕಥಾಮೀಮಾಂಸೆಯು ಕ್ರಮೇಣ ಇತಿಹಾಸ ಲೇಖವನ್ನು ಕುರಿತ ಪ್ರಶ್ನೆಗಳಾಗಿಯೂ ಬೆಳೆಯುವುದರಿಂದ ಮೇಲುನೋಟಕ್ಕೆ ಹೆಂಗಳೆಯರ ಹರಟೆಯೆಂದು ತೋರುವ ಇಲ್ಲಿನ ಬಹುತೇಕ ಕತೆಗಳಿಗೆ ಒಂದು ರಾಜಕೀಯ ಆಯಾಮ ಒದಗಿ ಬಂದಿದೆ. ಹಾಗಾಗಿ ಈ ಕತೆಗಳು ಕೆಲವೊಂದು ಘಟನೆಗಳ ನಿರೂಪಣೆಯಾಗಿರುವಂತೆ ಮಹತ್ವದ ಸಮಕಾಲೀನ ಚಿಂತನೆ ಮತ್ತು ವಾಗ್ವಾದಗಳಿಗೆ ಲೇಖಕಿಯ ಪ್ರತಿಕ್ರಿಯೆ ಮತ್ತು ಪ್ರತಿಸ್ಪಂದನೆಗಳೂ ಆಗಿ ಯಾರದೋ ಕತೆಯನ್ನು ನಿರೂಪಿಸುತ್ತಿದ್ದರೂ ಅದು ಅಂತಿಮವಾಗಿ ಅವರ ಸತ್ಯಶೋಧನೆ ಮತ್ತು ಲೋಕದರ್ಶನವಾಗುವ ವೈಯಕ್ತಿಕ ತುರ್ತು ಸೂಚಿತವಾಗಿದೆ.

–ಟಿ.ಪಿ. ಅಶೋಕ

(ಕತೆ ಕತೆ ಕಾರಣ ಲೇ: ವೈದೇಹಿ ಪ್ರ: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ)
 
**
ಊರಕಥೆಯ ಜೊತೆ ಬದುಕಿನ ತಾತ್ವಿಕತೆ

ಬಾಳಾಸಾಹೇಬ ಲೋಕಾಪುರ ಅವರ ‘ಕೃಷ್ಣೆ ಹರಿದಳು’ ಅವರ ‘ಬಿಸಿಲುಪುರ’, ‘ಉಧೋಉಧೋ’, ‘ಹುತ್ತ’ ಕಾದಂಬರಿಗಳ ನಂತರ ರಚಿತವಾಗಿರುವ ಕೃತಿ. ಸಣ್ಣ ಕಥೆಗಳನ್ನೂ ತಮ್ಮ ಸೃಜನಶೀಲತೆಯ ಮುಖ್ಯ ವಾಹಕವಾಗಿ ಬಳಸಿಕೊಂಡಿರುವ ಲೋಕಾಪುರರ ಕಥನವು ಊರಕಥೆ, ಜೀವಕಥೆಗಳನ್ನು ಬದುಕಿನ ತಾತ್ವಿಕತೆಯಾಗಿ ಕಂಡುಕೊಳ್ಳುವುದು ಹೇಗೆಂಬ ಪ್ರಶ್ನೆಯ ಮುಂದೆ ಸದಾ ನಿಂತಿದೆ. ಈ ಕಾದಂಬರಿಯ ಆರಂಭದಲ್ಲಿ ಅವರು ಹೇಳುವ, ‘ಇಲ್ಲಿ ಕತೆಯೊಂದೇ ಮುಖ್ಯ. ಕತೆ ಅಲ್ಲದೆ ಮತ್ತೇನಿಲ್ಲ, ಬದುಕೆಂದರೆ ಕತೆ...’ ಎಂಬುದು ಅದನ್ನು ಧ್ವನಿಸುತ್ತದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಅವರ ಕಥಾನಕದ ಕೇಂದ್ರ. ಅದು ಇಲ್ಲಿ ಶಿರಿಹಾಡಿಯಾಗಿದೆ. ಅದನ್ನು ಹಾಯುವ ಕೃಷ್ಣೆ ಇಲ್ಲಿ ಹಿರಿಹೊಳೆಯಾಗಿದ್ದು, ಅದರಲ್ಲಿ ಊರವರು ತಮ್ಮ ಜೀವ ದಾಹ ಕಂಡುಕೊಂಡರೆ ಕಾದಂಬರಿಕಾರರು ಹಿರಿಹೊಳೆಯ ಮೌನವು ಕಟ್ಟಿಕೊಡುವ ನಿರ್ಲಿಪ್ತ ಧೈರ್ಯದಲ್ಲಿ ದಾಹದ ಎಳೆಗಳ ಸಿಕ್ಕನ್ನು ಬಿಡಿಸಲು ನೋಡಿದ್ದಾರೆ. ಇದು ತಂತ್ರವೂ ಹೌದು. ಜಗತ್ತಿಗೆ ನಾಗರಿಕತೆಗಳನ್ನು ಕಟ್ಟಿಕೊಟ್ಟ ನದಿಗಳದ್ದು ಅಂದಿನ ಇತಿಹಾಸವಾದರೆ, ನಾಗರಿಕತೆಯ ಕ್ರೌರ್ಯ, ತಲ್ಲಣ, ಮೋಹಗಳು ಹೊಸಕಾಲದ ನದಿಗಳ ಬಾಗಿನವಾಗಿರುವುದು ಇಂದಿನ ಚರಿತ್ರೆ. ಕಟ್ಟಿಕೊಂಡ ಮಾನವೀಯತೆಯು ಕಳಚುವ ಸಂಕಟದಲ್ಲಿ ‘ಕೃಷ್ಣೆ ಹರಿದಳು’ ತಾಳಿದೆ. ಇದಕ್ಕಾಗಿ ಲೋಕಾಪುರರು ದೊಡ್ಡ ಹರಹೊಂದನ್ನು ನಿರ್ಮಿಸಿಕೊಂಡಿದ್ದಾರೆ. ವ್ಯಾಪ್ತಿ ಹರಹುಗಳ ಜೊತೆಗೆ ಏಗುವ ಕನ್ನಡ ಕಾದಂಬರಿಯ ಇತ್ತೀಚಿನ ಉತ್ಸಾಹ ಹಾಗೂ ಮಹತ್ವಾಕಾಂಕ್ಷೆಗೆ ಇದೂ ಸೇರ್ಪಡೆಯಾದಂತಾಗಿದೆ.

ಗೌಡಿಕೆ ಮತ್ತು ದೇಸಾಯಿಕೆಗಳ ತಲೆಮಾರು ಸಂಘರ್ಷದಲ್ಲಿ ನಲುಗುವ ಸಾಮಾನ್ಯರು, ದಿಕ್ಕು ತಪ್ಪಿಸಿದವರನ್ನು ಕಾಣದೆ ಸಿಕ್ಕ ದಿಕ್ಕಿನೆಡೆ ತುಡಿಯುವವರು, ಕೊಲೆ ಮಾಡುವವರು, ಮಾಡಿಸುವವರು, ಲೈಂಗಿಕ ತತ್ವಾರಗಳು, ಕಷ್ಟಪಡುವ ಹೆಂಗಸರು, ಸೀಮೆ ದಾಟಿದ ಸಂಬಂಧಗಳು ಇವುಗಳಿಗೆ ಹೊಂದಿಕೊಂಡ ಸೇಡು,ದೈವಿಕತೆ, ಅನುಭಾವಿಕತೆ, ಅವಧೂತತನ, ಇದರ ಜೊತೆಗೆ ಹುಟ್ಟಿಕೊಳ್ಳುವ ಜನ್ಮಮೂಲ, ವಂಶಮೂಲಗಳ ಸುಳಿ, ಉತ್ತರವಿಲ್ಲದ ನಡವಳಿಕೆಗಳ ಮುಂದೆ ಅಲುಗಾಡುವ ಅಧಿಕಾರ ಸ್ಥಾನ, ರೂಪುಗೊಳ್ಳುವ ಜಾತಿ ಸಂಕರ, ಗ್ರಾಮ–ಪಟ್ಟಣ ಸಂಸ್ಕೃತಿಯ ಮುಖಾಮುಖಿ, ಬದಲಾವಣೆಯ ಅನಿವಾರ್ಯತೆ, ಶಾಂತಗೊಳ್ಳುವ ಉಮೇದು... ಹೀಗೆ ಇದು ಮುಗಿದರೂ ಮತ್ತೆ ಶುರುವಾಗುವ ಕಥೆ. ಮುಗಿಯಬೇಕಾಗಿರುವುದೇ ಕಾದಂಬರಿಯ ಸಮಸ್ಯೆಯಾಗಿದೆ. ಕುರಿದೇವರ ಕಲ್ಪನೆ, ನಿಜಪ್ಪನ ಶಹನಾಯಿ,ಅಪ್ಪಣ್ಣನ ವಚನ ಪ್ರೇಮ, ನಿರೂಪಣೆಯು ಒಳಗೊಳ್ಳುವ ದೇಸೀ ಪದಗಳು ಮತ್ತು ನೂರೆಂಟು ಸನ್ನಿವೇಶಗಳ ನಿರ್ಮಾಣಗಳ ಮೂಲಕ ಲೋಕಾಪುರರು ವೈವಿಧ್ಯಮಯ ಸಮೃದ್ಧ ಲೋಕ ನಿರ್ಮಿಸಿದ್ದಾರೆ.

ಇಂಥ ಕಥನಗಳು ಸಾಮಾನ್ಯವಾಗಿ ಒಳಗೊಳ್ಳುವ ಉತ್ಪ್ರೇಕ್ಷೆ, ನಾಟಕೀಯತೆ ಇಲ್ಲಿಯೂ ಇದೆ. ಹಲವು ಪಾತ್ರಗಳ ವೈಯಕ್ತಿಕ ನಿಲುವಿಗೆ ತಕ್ಕ ಭೂಮಿಕೆ ದೊರೆತಿಲ್ಲ.  ಸನ್ನಿವೇಶದ ಮಗ್ನತೆಯಲ್ಲಿ ಕಾಲ ಮತ್ತು ಅವಕಾಶಗಳು ಅಲ್ಲಲ್ಲಿ ಸ್ಪಷ್ಟಗೊಳ್ಳುವುದಿಲ್ಲ. ಆದರೆ ಇದು ಅರಿವಿಗೇ ಬರದಂತೆ ಕಥೆಯ ಓಘವಿದೆ. ಲೋಕಾಪುರರು ತಮ್ಮ ಇಡೀ ಕಥನಗಾರಿಕೆಯು ಒಳಗೊಂಡಿರುವ ಒಳಿತು ಕೆಡುಕುಗಳ ವಿಧಿಯನ್ನು ಇಲ್ಲಿ ಚಲನೆಯ ವಿಷಣ್ಣತೆಯಲ್ಲಿ ಕಂಡಿದ್ದಾರೆ. ನದಿಯ ಚಲನೆಯ ಜೊತೆ ಸ್ಥಗಿತಗೊಂಡ ಊರಿನ ಅಡ್ಡಾದಿಡ್ಡಿ ಚಲನೆಗಳನ್ನು ಕಾದಂಬರಿ ಸಮರ್ಥವಾಗಿ ತೂಗುತ್ತದೆ. ಪಾತ್ರವಿರುವ ನದಿಯ ಸುತ್ತ ಪಾತ್ರ ಕಳೆದುಕೊಂಡ ಪಾತ್ರಗಳಿಂದ ತುಂಬಿರುವ ಊರು ಕಾದಂಬರಿಯ ಪ್ರಧಾನ ರೂಪಕ. ಅದರ ಹುಡುಕಾಟವನ್ನು ಸಮಕಾಲೀನಗೊಳಿಸುವುದೇ ಇಲ್ಲಿಯ ಮುಖ್ಯ ಕಾಳಜಿ.

–ಜಿ.ಕೆ. ರವೀಂದ್ರಕುಮಾರ್
(ಕೃಷ್ಣೆ ಹರಿದಳು ಲೇ: ಬಾಳಾಸಾಹೇಬ ಲೋಕಾಪುರ ಪ್ರ: ಕಣ್ವ ಪ್ರಕಾಶನ, ಬೆಂಗಳೂರು)
 
**
ಅಂಗೈಯೊಳಗಿನ ಜ್ಯೋತಿ
ಗಿರಿಗಿರಿ ಗಿರಿಗಿರಿ ಗಿರಿಗಿರಿ ಸುತ್ತುವ ಮಕ್ಕಳು ಸುತ್ತುತ್ತ ಸುತ್ತುತ್ತ ಈ ಬ್ರಹ್ಮಾಂಡದ ಸುತ್ತುವಿಕೆಯೊಂದಿಗೆ ಬೆರೆತುಹೋಗುವ ಸುಖವನ್ನು ಅನುಭವಿಸುತ್ತಾರೆ. ಮಕ್ಕಳ ಹಾಗೆ ನಾನು ಸುತ್ತಬಾರದೆ ಲೋಕಸಮಸ್ತದೊಳಗೆ ಐಕ್ಯವಾಗಬಾರದೆ ಎಂದು ತಳಮಳಗೊಂಡು ಸುತ್ತಿದವನು ಮಹಾಪ್ರೇಮಿ ಸಂತ ಮೌಲಾನಾ ಜಲಾಲುದ್ದೀನ್ ರೂಮಿ. ಬೀಸುವ ಗಾಳಿಗೆ ತಾನೇ ಒಂದು ಗಿರಿಗಟ್ಟಲೆಯಾಗುವುದು ಸಾಮಾನ್ಯವೇನಲ್ಲ. ಇದಿರು ಏನೆಂದು ತಿಳಿಯಬೇಕಾದರೆ ತನ್ನನ್ನು ಇಲ್ಲವಾಗಿಸಿಕೊಳ್ಳಬೇಕು; ಅರಿವೆಂದರೆ, ಪ್ರೇಮವೆಂದರೆ ತುಂಬಿಕೊಳ್ಳುವುದಲ್ಲ, ಇರುವುದನ್ನೆಲ್ಲ ತುಂಬಿ ತುಂಬಿ ಹೊರಗೆ ಸುರಿಯುವುದು. ಹಾಗೇ... ಹಗುರಾಗುವುದು. ಪ್ರೇಮವೆಂದರೆ ಜೀವದ ಕಣಕಣಗಳಲ್ಲಿ ಝೇಂಕರಿಸುವ ನಾದ, ನಿಸರ್ಗದ ಆಹ್ವಾನ-ವಿಸರ್ಜನೆಯ ಸಂಭ್ರಮ – ಇಂತಹ ಅದೆಷ್ಟೋ ಅನುಭವಗಳು ರೂಮಿಯ ಜೊತೆ ಒಡನಾಡುವವರಿಗೆ ಆಗಿವೆ, ಆಗುತ್ತಿವೆ. ಈ ಗಿರಿಗಟ್ಟಲೆ ಸಂತರ ಜೊತೆಗಿನ ಯಾನವನ್ನು ಜಗತ್ತಿನ ಅದೆಷ್ಟೋ ಭಾಷೆಯ ಜನ ಮಾಡಿದ್ದಾರೆ. ಅದು ಬೆಳಕಿನ ಹುಳು ಮಂಟೆಸ್ವಾಮಿ ಹಚ್ಚಿಕೊಟ್ಟ ಅಂಗೈಯೊಳಗಿನ ಜ್ಯೋತಿಯಂತೆ ಎಲ್ಲ ಗಡಿಗಳನ್ನು ದಾಟಿದ್ದು.

ಮಾಡಲು ಕೆಲಸ ಏನಿದೆಯೆಂದು ಯಾರಾದರೂ ಕೇಳಿದರೆ ಅವರ ಬೊಗಸೆಯಲಿ ಹಚ್ಚಿದ ಹಣತೆಯನಿಡು

ಇಂತಹ ಸಾಲುಗಳಲ್ಲಿರುವ ರೂಮಿಯನ್ನು ಕೆಲವರು ಅಲ್ಲಿರುವ ಶಬ್ದದ ಮೂಲಕ ಅನುಸಂಧಾನ ಮಾಡಿದರೆ, ಮತ್ತೆ ಕೆಲವರು ಅದರಾಚೆಗಿನ ಮೌನವನ್ನು ಕೇಳಿಸಿಕೊಳ್ಳುತ್ತಾರೆ. ಇದಿರಿನ ಶಬ್ದ ಅದರಾಚೆಗಿನ ಮೌನದ ನಡುವೆ ತಾರತಮ್ಯಕ್ಕೆ ತಾವಿಲ್ಲ. ಅವೆರಡನ್ನೂ ವ್ಯಾಖ್ಯಾನಿಸಹೋಗುವ ಜಿಪುಣತನವನ್ನು ಯಾರೂ ಇಲ್ಲಿ ಮಾಡದಿರುವುದೇ ವಾಸಿ. ಇಲ್ಲಿನ ಅನಂತ ಸಾಧ್ಯತೆಗಳನ್ನು ಮಾತಿನಿಂದ ಕಿರಿದುಮಾಡಲು ಮಾತ್ರ ಸಾಧ್ಯ.

ರೂಮಿ ಸರಹನ ಹಾಗೆ ಲೌಕಿಕ ಮತ್ತು ಪಾರಲೌಕಿಕಗಳೆರಡನ್ನೂ ಉತ್ಕಟವಾಗಿ ಬಾಳಿದರೆ ಮಾತ್ರ ಎರಡನ್ನೂ ದಾಟಲು ಸಾಧ್ಯವೆಂದವನು, ಅದು ಲೌಕಿಕದ ಮಣ್ಣು ಮಿದ್ದು ಮಾಡಿದ್ದ ತಂಬಿಟ್ಟು, ಅದರ ಮೇಲಿಟ್ಟು ದೀಪವನ್ನಾದರೂ ಬೆಳಗಿ, ಮತ್ತೊಂದಕ್ಕಾದರೂ ಅರ್ಪಿಸಿ; ಎಲ್ಲವೂ ಹುಟ್ಟಿ ಬೆಳೆಯುವುದು ಇಲ್ಲೇ, ಪರವೇನಿದ್ದರೂ ನಂತರದ ಮಾತು. ಪ್ರೇಮವೆಂದರೆ ತಾನೇ ಆಕಾಶದಷ್ಟು ವಿಶಾಲವಾಗುವುದು, ಕಾಡು, ನದಿ ಗುಡ್ಡಗಳಲ್ಲಿ ಒಂದಾಗಿ ಹೋಗುವುದರ ಮೂಲಕ ದಾಟುವುದು.
ನಿನ್ನ ಪ್ರೇಮದಲ್ಲಿ ಆಗಸವಿರದಿದ್ದರೆ ಅದು ಶುಭ್ರವಾಗಿರುವುದಿಲ್ಲ ನಿನ್ನ ಪ್ರೇಮದಲ್ಲಿ ಸೂರ್ಯನಿರದಿದ್ದರೆ ಬೆಳಕೇ ಇರುವುದಿಲ್ಲ ನಿನ್ನ ಪ್ರೇಮದಲ್ಲಿ ನದಿಯಿಲ್ಲದಿದ್ದರೆ ಬರಿಮೌನ, ಚಲನೆಯಿರುವುದಿಲ್ಲ ಪ್ರೇಮದಲಿ ಗುಡ್ಡಬೆಟ್ಟ ಮಣ್ಣಿರದೆ ಹೋದರೆ ಬೆಳೆಯಲೇನೂ ಇರುವುದಿಲ್ಲ.

ದ್ವೈತಾದ್ವೈತಗಳನ್ನು ದಾಟಿ ನಡೆಸುವ ಅನುಸಂಧಾನವನ್ನು ಮುಂದಿಟ್ಟ ಬುದ್ಧ, ಸರಹ, ಕಬೀರರ ಸಾಲಿನವನು ಜಲಾಲುದ್ದೀನ್ ರೂಮಿ. ಭಾಷೆ, ಧರ್ಮ, ಕಾಲ, ದೇಶಗಳು ಮನುಷ್ಯನನ್ನು ಬಾಧಿಸುತ್ತಿರುವುದನ್ನು ಕಂಡ ರೂಮಿ ನಿಸರ್ಗದಲ್ಲಿ ತುಂಬಿತುಳುಕುತ್ತಿರುವ ಪ್ರೇಮವನ್ನು ಎದೆಗೆ ಕರೆದ ಕರೆಯೇ ಮಸ್ನವಿ ಕಾವ್ಯವಾಗಿ ಹೊಮ್ಮಿದೆ. ರೂಮಿಯ ಜೊತೆಗೆ, ಕಬೀರನ ಜೊತೆಗೆ ಯಾರು ಬೇಕಾದರೂ ಎಷ್ಟು ದೂರಬೇಕಾದರೂ  ನಡೆಯಲು ಯಾವ ತೊಡಕೂ ಇಲ್ಲ. ನಮ್ಮನ್ನು ಅವರಿಗೆ ಒಪ್ಪಿಸಿಕೊಂಡರೆ ಸಾಕು; ಹಾಗಾಗಿ ಇದು ಕಳೆದುಕೊಳ್ಳುವುದರ ಮೂಲಕ ಪಡೆಯುವ ಸುಖದ ಮಾತು. ಲೌಕಿಕವಾಗಿ ಮತ್ತು ಅದರಾಚೆಗಿನದರಲ್ಲೂ ಕಳೆದುಕೊಳ್ಳುವ ಸುಖವೇ ಸುಖ!

ಗೆಳೆಯನ ಮನೆಗೆ ಬಂದವ ಬಾಗಿಲು ತಟ್ಟಿದ,
‘ಯಾರದು?’
‘ನಾನು’, ಗೆಳೆಯನೆಂದ.
‘ಹೊರಟುಹೋಗು, ಊಟದ ಮೇಜಿನ ಮೇಲೆ ಹಸಿ ಮಾಂಸಕ್ಕೆ ಜಾಗವಿಲ್ಲ.’

ಹೊರಟು ಹೋದವ ಒಂದು ವರ್ಷ ಅಲೆದ, ಹಿಂದಿರುಗಿದ ಪೂರ್ಣ ಹದವಾಗಿದ್ದ ಗೆಳೆಯನ ಮನೆಯೆದುರು ಸುಳಿದಾಡಿ ಮೆದುವಾಗಿ ಬಾಗಿಲು ಮುಟ್ಟಿದ,
‘ಯಾರದು?’
‘ನೀನು’
‘ದಯವಿಟ್ಟು ಒಳಗೆ ಬಾ, ನನ್ನ ಆತ್ಮವೆ ಇಬ್ಬರಿಗೆ ಜಾಗವಿರುವುದಲ್ಲ ಈ ಮನೆ.

ರೂಮಿಯೊಡನೆ ನಡೆದ ಪ್ರಯಾಣವನ್ನು ನಮ್ಮೊಡನೆ ಡಾ. ಎಚ್.ಎಸ್. ಅನುಪಮಾ ಮತ್ತೆ ಹಂಚಿಕೊಂಡಿರುವ ಈ ಪುಸ್ತಕ ನನಗೆ ಇಷ್ಟವಾಯಿತು. ಬಸೂ ಈ ಪುಸ್ತಕವನ್ನು ಅಂಬೇಡ್ಕರ್ ಅವರ ನೂರಿಪ್ಪತ್ತೈದನೇ ವರ್ಷಾಚರಣೆ ಗೌರವ ಮಾಲಿಕೆಯಲ್ಲಿ ತಂದಿದ್ದಾರೆ.

–ಎಸ್. ನಟರಾಜ ಬೂದಾಳು
(ಉರಿವ ಕುಡಿಯ ನಟ್ಟ ನಡುವೆ (ಜಲಾಲುದ್ದೀನ್ ರೂಮಿ ಕವಿತೆಗಳು) ಲೇ: ಡಾ. ಎಚ್.ಎಸ್. ಅನುಪಮಾ ಪ್ರ: ಲಡಾಯಿ ಪ್ರಕಾಶನ,  ಗದಗ)
 
**
ಮಹತ್ವಾಕಾಂಕ್ಷೆಯ ಮೀಮಾಂಸೆ ಬರೆಹ
ಲೇಖಕ ಗಿರಿ (ಮಹಾಬಲಗಿರಿ ಎನ್. ಹೆಗಡೆ) ಅವರು ನಿಡುಗಾಲ ಕ್ಯಾಲಿಫೋರ್ನಿಯಾದ ‘ಸ್ಟೇಟ್ ಯೂನಿವರ್ಸಿಟಿ’ಯಲ್ಲಿ ಮಕ್ಕಳ ಮತ್ತು ವಯಸ್ಕರ ವಾಕ್ ಸಮಸ್ಯೆಗಳ ಬಗ್ಗೆ ಪಾಠ ಮಾಡುತ್ತ, ತತ್ಸಂಬಂಧದ ರೋಗ ಲಕ್ಷಣಗಳ ಬಗೆಗೆ ಪುಸ್ತಕಗಳನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ರಚಿಸಿದವರು. ಇದರೊಂದಿಗೆ ಗಿರಿ ಅವರು 1970ರ ದಶಕದಲ್ಲಿ ಬರೆದ ‘ಗತಿಸ್ಥಿತಿ’ ಕಾದಂಬರಿಯಿಂದಲೂ ಪ್ರಸಿದ್ಧರಾದವರು. ಈಗಲೂ ಅವರು ವಾಸವಿರುವುದು ಅಮೆರಿಕದ ಕ್ಲೋವಿಸ್‌ನಲ್ಲಿ. ಗಿರಿ ಅವರು ಇದೇ ಮೊದಲ ಬಾರಿಗೆ ವರ್ತನ ವಿಜ್ಞಾನವನ್ನು ಸಾಹಿತ್ಯ ಮೀಮಾಂಸೆಗೆ ಒಗ್ಗಿಸುವ ಪ್ರಯತ್ನದ ಹಿನ್ನಲೆಯಲ್ಲಿ ‘ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ’ ಬರೆದಿದ್ದಾರೆ. ಈ ಕೃತಿಗೆ ಹಿರಿಯ ವಿಮರ್ಶಕ ಜಿ.ಎಚ್. ನಾಯಕರು ಮುನ್ನುಡಿ ಬರೆದಿದ್ದಾರೆ.

ವಿಜ್ಞಾನದ ತಳಹದಿಯ ಮೇಲೆ ಸಾಹಿತ್ಯ ಮೀಮಾಂಸೆಯ ಸಂಗತಿಗಳನ್ನು ಚರ್ಚಿಸುವುದು, ಅದರೊಂದಿಗೆ ಪಾಶ್ಚಿಮಾತ್ಯ, ಪೌರ್ವಾತ್ಯ ಪರಂಪರೆಯ ವಿಮರ್ಶಾ ಪ್ರಕ್ರಿಯೆಗಳನ್ನು ಪರಿಷ್ಕರಿಸಿ ಅದೇ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಅನ್ವಯಿಸುವ ಮಹತ್ವಾಕಾಂಕ್ಷೆಯ ಬರೆಹ ಗಿರಿ ಅವರ ಪ್ರಸ್ತುತ ಕೃತಿ. ವ್ಯಾಪಕ ಅಧ್ಯಯನ ಮತ್ತು ಚರ್ಚೆಯ ಈ ಗ್ರಂಥ ಒಂಬತ್ತು ಅಧ್ಯಾಯಗಳಲ್ಲಿದೆ. ಆರಂಭಿಕ ಅಧ್ಯಾಯಗಳಲ್ಲಿ ಸಾಹಿತ್ಯ ಮತ್ತು ವಿಜ್ಞಾನದ ಸಂಬಂಧ, ನಂತರ ಬಿ.ಎಫ್‌. ಸ್ಕಿನ್ನರ್ ಅವರ ವರ್ತನ ವಿಜ್ಞಾನದ ವಿಶ್ಲೇಷಣೆ, ಮುಂದುವರಿದಂತೆ ಪೂರ್ವ–ಪಶ್ಚಿಮದ ಸಿದ್ಧಾಂತಗಳ ಮಂಡನೆ, ಇಷ್ಟೇ ಅಲ್ಲದೆ ವರ್ತನ ವಿಧಾನಗಳ ಸಾಹಿತ್ಯ ಸಮೀಕರಣವನ್ನು ಪ್ರಸ್ತಾಪಿಸುತ್ತಾರೆ.

ಆರು, ಏಳು, ಎಂಟನೇ ಅಧ್ಯಾಯಗಳಲ್ಲಿ ವರ್ತನಾ ವಿಧಾನಗಳ ಔಚಿತ್ಯವನ್ನು ಸಂಶೋಧನೆ, ಬರೆಹಗಾರ, ಬರೆಹದ ರಚನಾ ಪ್ರಕ್ರಿಯೆ ಇದಿಷ್ಟನ್ನು ಕನ್ನಡ ಸಾಹಿತ್ಯದ ನೆಲೆಗಳಲ್ಲಿ ಚರ್ಚಿಸಲಾಗಿದೆ. ಪ್ರಸ್ತುತ ಸಾಹಿತ್ಯ ಸಂದರ್ಭದಲ್ಲಿ ವರ್ತನ ವಿಜ್ಞಾನ ಬರವಣಿಗೆ, ವಿಮರ್ಶೆಗೆ ಸಂಬಂಧಿಸಿದ ತಿರುಣಾಮ–ಪರಿಣಾಮಗಳನ್ನು ಲೇಖಕರು ವಿವರಿಸುತ್ತ, ಮುಂದೆ ಪ್ರಾಚೀನ ಅಲಂಕಾರಿಕರ ರಸ–ಧ್ವನಿ ಸಿದ್ಧಾಂತ ಮಂಡನೆಯನ್ನೂ ಚರ್ಚೆಗೆ ಒಳಪಡಿಸಿದ್ದಾರೆ. ಕಾವ್ಯ ಮೀಮಾಂಸೆಯ ಸಂಗತಿಗಳ ಕುರಿತಾಗಿ ಈಗಾಗಲೇ ಪ್ರಸ್ತಾಪಿಸಲಾಗಿರುವ ವಿವರಗಳನ್ನು ವರ್ತನ ವಿಜ್ಞಾನದ ಆಧಾರದ ಮೇಲೆ ಕೆಲವು ಪ್ರಶ್ನೆಗಳನ್ನು ಓದುಗರ ಮುಂದಿಡುತ್ತಾರೆ. ಇಲ್ಲಿ ಮುಖ್ಯ ಪ್ರಶ್ನೆ ಎಂದರೆ, ಸಂಸ್ಕೃತ ಮೀಮಾಂಸೆಯು ವೈಜ್ಞಾನಿಕವೇ ಎಂಬುದು. ಇದರೊಂದಿಗೆ ಇನ್ನೊಂದು ಪ್ರಶ್ನೆ, ಪಾಶ್ಚಿಮಾತ್ಯ ಮೀಮಾಂಸೆಯ ಇತಿಹಾಸವೂ ಕೂಡ ಸಾಹಿತ್ಯವನ್ನು ‘ಅನುಕರಣೆ’ ಎಂಬ ಚೌಕಟ್ಟಿನಿಂದಾಚೆ ವ್ಯವಹರಿಸಿದ ಸಾಧ್ಯತೆ ಇದೆಯೇ ಎಂಬುದು. ಇದಕ್ಕೆ ಗಿರಿ ಅವರು ನಕಾರಾತ್ಮಕವಾಗಿ ಉತ್ತರಿಸುತ್ತ ವರ್ತನ ವಿಜ್ಞಾನದ ಪರಿಕಲ್ಪನೆಗಳನ್ನು ಅದರೊಂದಿಗೆ ಪಾರಿಭಾಷಿಕ ಪದಗಳನ್ನು ಕನ್ನಡಕ್ಕೆ ತರುವ ಪ್ರಯತ್ನದೊಂದಿಗೆ ಹೊಸಬಗೆಯ ಸಾಹಿತ್ಯ ಮೀಮಾಂಸೆಯನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.

ಹೊಸಗನ್ನಡ ವಿಮರ್ಶೆಯು ಪಾಶ್ಚಾತ್ಯ ವಿಮರ್ಶಾ ಮಾದರಿಗಳ ಹಿನ್ನಲೆಯಲ್ಲಿರುವುದನ್ನು ಚರ್ಚಿಸುತ್ತ ‘ವರ್ತನ ವಿಜ್ಞಾನ’ದ ಸಾರ್ವತ್ರಿಕತೆಯನ್ನು ಬಳಸಿ ಕನ್ನಡ ಸೃಜನಶೀಲತೆಯೇ ಮುಂತಾಗಿ ವಿಮರ್ಶಾ ಬರೆಹಗಳನ್ನು ಮರು ವಿಶ್ಲೇಷಿಸಿರುವುದು ಗಿರಿ ಅವರ ಈ ಕೃತಿಯ ಮಹತ್ವದ ಮತ್ತು ಕುತೂಹಲಕಾರಿ ಭಾಗವಾಗಿದೆ. ಹನ್ನೆರಡನೆಯ ಶತಮಾನದ ವಚನಕಾರರ, ಹದಿನೈದನೆಯ ಶತಮಾನದ ಕೀರ್ತನೆಕಾರರ, ಜನಪದ ಕತೆ, ಕಾವ್ಯಗಳಲ್ಲದೆ ಆಧುನಿಕ ಲೇಖಕರ ಕೃತಿಗಳಲ್ಲಿ ಸಾಹಿತ್ಯಿಕ ಪ್ರಕ್ರಿಯೆಯನ್ನು, ಅದರ ನಿರ್ಮಿತಿ ಮೂಲವನ್ನು ಪದೀಯ ವರ್ತನೆಯ ಮೂಲಕ ಹೇಳಲು ಲೇಖಕರು ಪ್ರಯತ್ನಿಸಿದ್ದಾರೆ. ಈ ನಿಟ್ಟಿನಲ್ಲಿ ಮೀಮಾಂಸೆಯ ಮುಖ್ಯ ಪರಿಕಲ್ಪನೆಗಳಾದ ಸಾಹಿತ್ಯವೆಂಬುದು ಜೀವನದ ಪ್ರತಿಬಿಂಬ ಅಲ್ಲದೆ ಸಾಹಿತ್ಯ ನಿರ್ಮಿತಿಗೆ ಸ್ಫೂರ್ತಿಯೇ ಕಾರಣವೆಂಬ ಪ್ರಚಲಿತ ನುಡಿಗಟ್ಟುಗಳ ಪ್ರಸ್ತುತತೆಯನ್ನು ಪ್ರಶ್ನಿಸುತ್ತಾರೆ. ಇದಲ್ಲದೆ ರಸ–ಧ್ವನಿ ಸಿದ್ಧಾಂತದಿಂದ ಆಧುನಿಕ ಕನ್ನಡದ ವಿಮರ್ಶಾ ಪ್ರಕ್ರಿಯೆಯವರೆಗೂ ಸಹಜ ವಿಜ್ಞಾನ ಭಾಗವಾದ ವರ್ತನ ವಿಜ್ಞಾನವನ್ನು ಅರ್ಥೈಸಿಕೊಳ್ಳುವ ಸಾಧ್ಯತೆಗಳನ್ನು ಗಿರಿ ಅವರು ಪುನರ್‌ಪರಿಶೀಲನೆಗೆ ಒಳಪಡಿಸುತ್ತಾರೆ. ಅಂದರೆ, ಪ್ರಾಚೀನ ಮೀಮಾಂಸಕರ, ಅಲಂಕಾರಿಕರ ಪರಿಕಲ್ಪನೆಗಳನ್ನೆಲ್ಲ ವೈಜ್ಞಾನಿಕ ಮೂಸೆಯಲ್ಲಿ ಗಮನಿಸಹೊರಟಾಗ ಏಳುವ ಪ್ರಶ್ನೆಗಳನ್ನು ಗಿರಿಯವರು ತಮ್ಮ ಗ್ರಂಥದಲ್ಲಿ ಚರ್ಚಿಸಿರುವುದು ಕನ್ನಡ ವಿಮರ್ಶಾ ಲೋಕಕ್ಕೆ ಹೊಸ ಕೊಡುಗೆಯಾಗಿದೆ. ಪಾಶ್ಚಾತ್ಯ ಅಥವಾ ಪೌರ್ವಾತ್ಯ ಮೀಮಾಂಸೆಗಳಲ್ಲಿನ ವೈಜ್ಞಾನಿಕ ಸಂಗತಿಗಳನ್ನು ಕ್ರೋಢೀಕರಿಸಿ ಪರಿಷ್ಕ್ರತ ಸಿದ್ಧಾಂತವನ್ನು ನೀಡಿರುವುದು ಕನ್ನಡ ಸಾಹಿತ್ಯ ಲೋಕದ ವಿಮರ್ಶಾ ಮಾದರಿಯ ಅಗತ್ಯತೆಯನ್ನು ಸದ್ಯದ ಮಟ್ಟಿಗೆ ಪೂರೈಸಬಹುದಾದ ಕೃತಿಯನ್ನು ಗಿರಿಯವರು ಓದುಗರಿಗೆ ನೀಡಿದ್ದಾರೆ.
–ಕೃಷ್ಣಮೂರ್ತಿ ಹನೂರು
 
( ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ ಲೇ: ಗಿರಿ ಪ್ರ: ಮನೋಹರ ಗ್ರಂಥ ಮಾಲೆ, ಧಾರವಾಡ)
Comments
ಈ ವಿಭಾಗದಿಂದ ಇನ್ನಷ್ಟು
ಸಸ್ಯಾಹಾರಿ ಗೆಳತಿಯ ಪ್ರೇಮನಿವೇದನೆ

ವಿಮರ್ಶೆ
ಸಸ್ಯಾಹಾರಿ ಗೆಳತಿಯ ಪ್ರೇಮನಿವೇದನೆ

28 May, 2017
ದೊಡ್ಡ ಮರಗಳಿಂದ ಹೊಸ ಗಿಡಗಳ ಕಸಿ

ವಿಮರ್ಶೆ
ದೊಡ್ಡ ಮರಗಳಿಂದ ಹೊಸ ಗಿಡಗಳ ಕಸಿ

28 May, 2017
ಮೊದಲ ಓದು

ನಾಡು ನುಡಿ ಸಂಗಮ ಲೇ
ಮೊದಲ ಓದು

28 May, 2017
ಮೊದಲ ಓದು

ನಗೆ, ಬಗೆ ಬಗೆ ಲೇ
ಮೊದಲ ಓದು

28 May, 2017
ಮೊದಲ ಓದು

ಸಿರಿಬೆಳಕು ಲೇ
ಮೊದಲ ಓದು

28 May, 2017