ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹೃದಯರ ಸ್ಪಂದನ

Last Updated 31 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಅದ್ಭುತ ಗದ್ಯದ ಖುಷಿ
ಡಿ. 25ರ ‘ಮುಕ್ತಛಂದ’ ಹಲವು ದೃಷ್ಟಿಗಳಿಂದ ವಿಶೇಷ. ‘ಪ್ರಜಾವಾಣಿ’ ಪತ್ರಿಕೆಯ ಕಾಳಜಿಯ ರೂಪದ ಪುರವಣಿ ಇಡೀ ಭಾನುವಾರ ತನ್ನದನ್ನಾಗಿಸಿಕೊಳ್ಳುತ್ತದೆ. ಕಥೆ, ಕವಿತೆ, ಪ್ರವಾಸ ಬರಹಗಳನ್ನು ಓದಿಯೇ ಅನುಭವಿಸಬೇಕು. ‘ಅವ್ಯಕ್ತ ಭಾರತ’ ನನ್ನ  ಪ್ರಿಯವಾದ ಅಂಕಣ. ಕೃಪಾಕ–ಸೇನಾನಿ ಅವರು ಕಂಡು ಅನುಭವಿಸಿದ ಪಶ್ಚಿಮಘಟ್ಟಗಳ ಕಾಡಿನ ಅನುಭವವನ್ನು ತಮ್ಮ ಸಂವೇದನಾಶೀಲ ಬರಹಗಳ ಮೂಲಕ ಮರುಸೃಷ್ಟಿಸಿದ್ದಾರೆ; ಆ ಮೂಲಕ ಒಂದು ಅದ್ಭುತ ಅನುಭವಜಗತ್ತನ್ನು ಕಟ್ಟಿಕೊಟ್ಟಿದಾರೆ. ನಾನು ಕೂಡ ಪಶ್ಚಿಮ ಘಟ್ಟದ ಅಭಯಾರಣ್ಯದ ಕಡೆಯಿಂದಲೇ ಬಂದವನು.
 
ಕಾಡಿನಲ್ಲಿ ಹೋಗುವಾಗ ಮರದ ಎಲೆ ಬಿದ್ದರೆ ಜೀವ ಬಾಯಿಗೆ ಬಂದಂತೆ ಎನ್ನಿಸುತ್ತದೆ. ಈ ಸಂಚಿಕೆಯ ‘ಹುಲಿಯ ಜಾಡಿನಲ್ಲಿ’ ಓದುತ್ತಾ ಹೋದಂತೆ, ಲೇಖನದ ಪ್ರತೀ ಸಾಲು–ಶಬ್ದ ಒಂದು ಗರಿಕೆಯ ಎಸಳು ಮುದುಡಿ ನಿಧಾನವಾಗಿ ಮತ್ತೆ ನಿಂತುಕೊಳ್ಳುವಂತೆ, ಕಪ್ಪೆಯ ಹೊಟ್ಟೆಯ ಮೇಲೆ ಮರಳನ್ನು ಪರೀಕ್ಷಿಸುವಂತೆ – ಹೀಗೆ  ಹೇಳುತ್ತಾ ಹೋಗಬಹುದು. ಇದನ್ನು ಓದಿದಾಗ ಒಂದು ಅದ್ಭುತ ಅನುಭವವಾಯಿತು. ದಟ್ಟಾರಣ್ಯವನ್ನು ಭೇದಿಸುವ ಕಣ್ಣು, ಸೂಕ್ಷ್ಮವಾದ ಒಳಗಣ್ಣು, ಮನಸ್ಸು ಮತ್ತು ದೇಹ – ಇಡೀ ಸಂದರ್ಭವನ್ನು ಲೇಖಕರು ಅಪೂರ್ವ ಎನ್ನುವಷ್ಟು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಬಹಳ ದಿನಗಳ ನಂತರ ಒಂದು ಅದ್ಭುತವಾದ ಗದ್ಯವನ್ನು ಓದಿದ ಖುಷಿಯನ್ನು ಅನುಭವಿಸಿದೆ. 
–ಸುಬ್ಬು ಹೊಲೆಯಾರ್, ಬೆಂಗಳೂರು 

*
ಏಸೊಂದು ನೆನಪು...
‘ನಿರ್ದೇಶಿಕಿಯಾದ ನನ್ನವ್ವ’ – ಪ್ರವೀಣ ಪೊಲೀಸ್ ಪಾಟೀಲರ ಕಥೆಯನ್ನು ಓದುತ್ತಿದ್ದಾಗ ನನ್ನ ಬಾಲ್ಯದ ನೆನಪುಗಳು ತಲೆಯಲ್ಲಿ ಸುಳಿದಾಡಿದವು. ನಾನು ಪ್ರಾಥಮಿಕ ಶಾಲೆಗೆ ಹೊಗುತ್ತಿರುವಾಗ – ಮೇಲ್ಜಾತಿ, ಕೆಳಜಾತಿಯವರು ಎನ್ನುವ ಮನೋಭಾವ ಸಮಾಜದಲ್ಲಿ ಬಹಳಷ್ಟು ಬೇರೂರಿತ್ತು. ಸರದಿಯಲ್ಲಿ ನೀರನ್ನು ಕೈ ಪಂಪ್‌ನಿಂದ ಹಿಡಿದುಕೊಳ್ಳುವಾಗ, ಕೆಳ ಜಾತಿಯವರು ನೀರನ್ನು ಹಿಡಿದುಕೊಂಡ ನಂತರ ಮೇಲ್ಜಾತಿಯವರು – ಆ ಪಂಪು, ನೀರು ಬೀಳುವ ಕೊಳಾಯಿ, ಎಲ್ಲವನ್ನೂ ನೀರಿನಿಂದ ತೊಳೆಯುತ್ತಿದ್ದರು. ಕೆಳಜಾತಿಯ ಮಕ್ಕಳು ಅವರ ಕೊಡವನ್ನು ಮುಟ್ಟುವಂತಿರಲಿಲ್ಲ. ಆದರೆ ಕೈ ಪಂಪು ಹೊಡೆಯುವ ಕಾಯಕ ಮಾತ್ರ ಆ ಮಕ್ಕಳದ್ದಾಗಿರುತ್ತಿತ್ತು. ಕುಡಿಯುವ ನೀರನ್ನು ಅವರು ಚರಿಗೆಯಿಂದ ಎತ್ತಿ ಬೊಗಸೆಗೆ ಹಣಿಸುತ್ತಿದ್ದರು (ಹಾಕುತ್ತಿದ್ದರು).

ಇಷ್ಟೆಲ್ಲದರ ನಡುವೆ ಅವರ ಮನೆಯ ಹೊರಿಸಲನ್ನು (ಹೊಸ್ತಿಲನ್ನು) ದಾಟುವಂತಿರಲಿಲ್ಲ. ದಾಟಿದರೆ ಹಾವು ಚೇಳು ಬರುತ್ತವೆ ಎಂದವರು ಮಾತಾಡುತ್ತಿದ್ದುದು ನೆನಪಿಗೆ ಬರುತ್ತದೆ. ಅಪ್ಪಿ ತಪ್ಪಿ ಅವರು ಊಟಕ್ಕೆ ಕೊಟ್ಟಾಗ, ಅವರ ಮನೆಯ ಹಳೆಯ ತಾಟಿನಲ್ಲಿ (ಗಂಗಾಳದಲ್ಲಿ) ಊಟಕ್ಕೆ ಕೊಡುತ್ತಿದ್ದರು. ಕುಡಿಯಲು ನೀರನ್ನು ಪ್ಲಾಸ್ಟಿಕ್ ಚರಿಗೆಯಲ್ಲಿ ಕೊಡುತ್ತಿದ್ದರು. ಈ ರೀತಿಯ ಪರಿಸ್ಥಿತಿಯಿರುವಾಗ ಬರಗಾಲ ನಾಡಿಗೆ ಆವರಿಸಿ ಅಂತರ್ಜಲ ಮಟ್ಟ ಪಾತಾಳ ಕಂಡಾಗ, ನೀರು ಹಿಡಿಯುವಾಗಿನ ಮಡಿ–ಮೈಲಿಗೆಗಳು ತನ್ನಿಂದ ತಾನೇ ದೂರವಾಗತೊಡಗಿದವು. ಕುಡಿಯಲು ನೀರು ಸಿಕ್ಕರೆ ಸಾಕಪ್ಪಾ ಎನ್ನುವಾಗ ಇನ್ನೆಲ್ಲಿಯ ಮಡಿ–ಮೈಲಿಗೆ? ಅದೇ ಸಮಯದಲ್ಲಿ ಶಿಕ್ಷಣ ಸಾರ್ವತ್ರಿಕರಣವಾಗತೊಡಗಿತು. ಮೇಲ್ವರ್ಗದ ಸ್ನೇಹಿತರ ಜೊತೆಗೊಡಗೂಡಿ ಅಭ್ಯಾಸ, ಆಟ–ಪಾಠ ಪ್ರಾರಂಭಿಸಿದ ಮೇಲೆ ಕ್ರಮೇಣವಾಗಿ ಜಾತಿಯ ಭೂತ ಬಡವಾಗತೊಡಗಿತು. ಆದರೆ, ಈಗಲೂ ಜಾತಿಯ ಭೂತ ನಮ್ಮ ನಡುವೆ ಧುತ್ತನೆ ಪ್ರತ್ಯಕ್ಷವಾದಾಗ ಗಾಬರಿಯಾಗುತ್ತದೆ. 
–ಮಲ್ಲಪ್ಪ ಫ. ಕರೇಣ್ಣನವರ, ಹನುಮಾಪುರ, ರಾಣೆಬೆನ್ನೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT