ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೇ ತಾಣ, ಹೊಸ ನೋಟ

ಪಿಸುಗುಡುವ ಚಿತ್ರಪಟ l ದಿಗ್ವಾಸ್‌ ಬೆಳ್ಳೆಮನೆ
Last Updated 31 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ನನ್ನ ಮಗಳು ಹುಟ್ಟಿದ್ದು 2006ರಲ್ಲಿ. ಅವಳ ಫೋಟೊ ತೆಗೆಯಲೆಂದು ಡಿಎಸ್‌ಎಲ್‌ಆರ್‌ ಕ್ಯಾಮೆರಾ ಕೊಂಡುಕೊಂಡೆ. ಮಗಳ ಫೋಟೊ ತೆಗೆಯುತ್ತಾ ತೆಗೆಯುತ್ತಾ ಛಾಯಾಗ್ರಹಣ ಮಾಧ್ಯಮದ ಮೇಲೆ ಆಸಕ್ತಿ ಕುದುರುತ್ತಾ ಹೋಯಿತು. ನಿಸರ್ಗದ ಚಿತ್ರಗಳನ್ನು ತೆಗೆಯಲು ಶುರುಮಾಡಿದೆ. ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದೆ. ಅವುಗಳಿಗೆ ಬಂದ ಪ್ರತಿಕ್ರಿಯೆ ನೋಡಿ ನನಗೆ ತುಸು ಧೈರ್ಯ ಬಂತು. 
 
ಫೋಟೊಗ್ರಫಿ ಜೊತೆಗೆ ಆ ಕ್ಷೇತ್ರದಲ್ಲಿನ ಅನೇಕರು ಪರಿಚಯವಾಗುತ್ತಾ ಹೋದರು. ಅವರಲ್ಲಿ ಪ್ರಮುಖರು ಹಿರಿಯ ಛಾಯಾಗ್ರಾಹಕ ಎಂ.ಎಸ್‌. ಹೆಬ್ಬಾರ್‌ ಮತ್ತು ಕೆ.ಎಸ್‌. ರಾಜಾರಾಮ್‌. ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತುಕೊಂಡೆ. ಆಗೀಗ ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ, ಪ್ರದರ್ಶನಗಳಿಗೆ ನನ್ನ ಛಾಯಾಚಿತ್ರಗಳನ್ನು ಕಳಿಸತೊಡಗಿದೆ. ಒಂದಿಷ್ಟು ಪ್ರಶಸ್ತಿಗಳೂ ಬಂದವು. ಇದರಿಂದ ಈ ಮಾಧ್ಯಮದ ಮೂಲಕ ನಾನು ಏನಾದರೂ ಸಾಧನೆ ಮಾಡುವ ಸಾಧ್ಯತೆ ಇದೆ ಎಂಬ ವಿಶ್ವಾಸ ಬಂತು.
 
ಛಾಯಾಗ್ರಹಣ ನನ್ನ ಹವ್ಯಾಸವೇ ಹೊರತು, ಅದರಿಂದ ಗಳಿಕೆ ಮಾಡುವ ಯಾವ ಉದ್ದೇಶವೂ ನನಗಿಲ್ಲ. ಹೊಟ್ಟೆಪಾಡಿಗೆ ನಾನು ಬೇರೆಯದೇ ವೃತ್ತಿ ಮಾಡುತ್ತಿದ್ದೇನೆ. 
 
ನಾನು ಹುಟ್ಟಿ ಬೆಳೆದಿದ್ದು ಶಿರಸಿಯಲ್ಲಿ. ಬಾಲ್ಯದಿಂದಲೇ ನನಗೆ ನಿಸರ್ಗದ ಬಗ್ಗೆ ಕುತೂಹಲವೂ ಒಲವೂ ಇತ್ತು. ಆಗೀಗ ಪ್ರವಾಸ, ಟ್ರೆಕ್ಕಿಂಗ್‌ ಮಾಡುತ್ತಿದ್ದೆ. ಫೋಟೊಗ್ರಫಿ ಆರಂಭಿಸಿದ ಮೇಲೆ ಅವವೇ ಜಾಗ–ಜಗತ್ತು ಬೆರೆಯದೇ ರೀತಿ ಕಾಣಿಸತೊಡಗಿತು. ನಾನು ಅವುಗಳನ್ನು ನೋಡುವ ರೀತಿಯೂ ಸಾಕಷ್ಟು ಬದಲಾಯಿತು.
 
ಯಾವುದೇ ಸಾಮಾಜಿಕ ಗುರುತು ಇಲ್ಲದ ನನಗೆ ಛಾಯಾಗ್ರಹಣ ಒಂದು ಐಡೆಂಟಿಟಿ ನೀಡಿದೆ. ಅದಕ್ಕಿಂತ ಮುಖ್ಯವಾಗಿ ಆ ಮಾಧ್ಯಮ ನನಗೆ ನೀಡಿರುವ ಸಂತೋಷ ಮತ್ತು ಮಾನಸಿಕ ನೆಮ್ಮದಿ ಅತ್ಯಮೂಲ್ಯವಾದದ್ದು. ಬೆಂಗಳೂರಿನ ಜಂಜಾಟದಿಂದ ತಪ್ಪಿಸಿಕೊಳ್ಳಬೇಕು ಎಂದಾಗ ನನ್ನ ಬಳಿ ಇರುವ ಆಯ್ಕೆ ಒಂದೇ – ಛಾಯಾಗ್ರಹಣ. 
 
ನಾನು ಅತ್ಯಂತ ಹೆಚ್ಚು ಫೋಟೊ ತೆಗೆದಿದ್ದು ಪಶ್ಚಿಮಘಟ್ಟಗಳಲ್ಲಿ. ನಾನು ಯಾವುದೇ ಜಾಗಕ್ಕೆ ಹೋಗುವುದಾದರೂ ಛಾಯಾಗ್ರಹಣವೇ ಅದರ ಮುಖ್ಯ ಉದ್ದೇಶ ಆಗಿರುತ್ತದೆ. ಈ ಹವ್ಯಾಸದ ಕಾರಣದಿಂದ ನಾನು ಸಾಕಷ್ಟು ಸ್ಥಳಗಳನ್ನು ನೋಡಲು ಸಾಧ್ಯವಾಗಿದೆ. ಅದದೇ ಸ್ಥಳಗಳನ್ನು ಮಾಮೂಲಿಯಲ್ಲದ ಕೋನಗಳಲ್ಲಿ, ದೃಷ್ಟಿಗಳಲ್ಲಿ ಗ್ರಹಿಸಲು ಸಾಧ್ಯವಾಗಿದೆ. 
 
ಯಾವುದೇ ಒಂದು ಸ್ಥಳಕ್ಕೆ ಹೋಗುವ ಮುನ್ನ ಯಾವ ರೀತಿ ಚಿತ್ರ ತೆಗೆಯಬೇಕು, ಅದಕ್ಕೆ ಬೆಳಕು ಹೇಗಿದ್ದರೆ ಪೂರಕ, ಯಾವ ಸಮಯದಲ್ಲಿ ಹೋಗಬೇಕು, ಯಾವ ಕಾಲದಲ್ಲಿ ಹೋಗಬೇಕು ಎಂಬುದನ್ನೆಲ್ಲ ತುಂಬ ಖಚಿತವಾಗಿ ನಿರ್ಧರಿಸಿಕೊಂಡೇ ಹೋಗುತ್ತೇನೆ. ಇಂಥದ್ದೇ ಚಿತ್ರವನ್ನು ತೆಗೆಯಬೇಕು ಎಂದು ಮೊದಲೇ ನಿರ್ಧರಿಸಿಕೊಂಡು ಹೋದಾಗ ಮಾತ್ರ ಒಳ್ಳೆಯ ಫೋಟೊ ತೆಗೆಯಲು ಸಾಧ್ಯ. ಸುಮ್ಮನೇ ಹೋಗಿ ಏನು ಕಾಣಿಸುತ್ತದೆಯೋ ಅದನ್ನು ತೆಗೆದುಕೊಂಡು ಬಂದರೆ ಅವು ಜರ್ನಲಿಸ್ಟಿಕ್‌ ಫೋಟೊಗಳಾಗುತ್ತವಷ್ಟೆ. ಕಲೆಯ ಮಟ್ಟಕ್ಕೆ ಏರುವುದು ಕಷ್ಟ. 
 
ಐಯ್ಯನಕೆರೆಯ ಚಿತ್ರ ನೋಡಿ. ಅದು ಇರುವುದು ಚಿಕ್ಕಮಗಳೂರಿನಿಂದ 18 ಕಿಲೋಮೀಟರ್‌ ದೂರದಲ್ಲಿ. ಆ ಕೆರೆಗೆ ಏಳೆಂಟು ಸಲ ಹೋಗಿದ್ದೇನೆ. ಮತ್ತೂ ಹಲವು ಸಲ ಹೋಗುತ್ತೇನೆ. ಅಂದರೆ ಯಾವುದೇ ಒಂದು ಜಾಗಕ್ಕೆ ಒಮ್ಮೆ ಹೋಗಿ ಫೋಟೊ ತೆಗೆದುಕೊಂಡು ಬಂದುಬಿಟ್ಟರೆ ಅದು ಅಲ್ಲಿಗೆ ಮುಗಿಯುವುದಲ್ಲ. ಮತ್ತೆ ಮತ್ತೆ ಅಲ್ಲಿಗೆ ಭೇಟಿ ನೀಡಿ ಹೊಸ ಥರ ನೋಡಲು ಸಾಧ್ಯವೇ ಎಂದು ಪ್ರಯತ್ನಿಸುತ್ತಲೇ ಇರುತ್ತೇನೆ. ಪ್ರತಿಸಲ ಹೋದಾಗಲೂ ಆ ಜಾಗ ಹೊಸ ಹೊಸ ರೀತಿಯೇ ಕಾಣುತ್ತದೆ. ಹೊಸ ಹೊಸ ಚಿತ್ರಗಳನ್ನೇ ತೆಗೆದುಕೊಂಡು ಬರುತ್ತೇನೆ.
 
ಅದರಲ್ಲಿಯೂ ಭೂದೃಶ್ಯ ಛಾಯಾಗ್ರಹಣದಲ್ಲಿ (ಲ್ಯಾಂಡ್‌ಸ್ಕೇಪ್‌) ಎಲ್ಲರೂ ನಿಂತು ನೋಡುವ ಜಾಗದಲ್ಲಿ ನಿಂತು ಫೋಟೊ ತೆಗೆದರೆ ಅದರಲ್ಲಿ ಹೊಸತೇನೂ ಇರುವುದಿಲ್ಲ. ಬೇರೆ ಬೇರೆ ಸ್ಥಳಗಳಿಂದ ಗ್ರಹಿಸಿದರೆ ಅಲ್ಲಿನ ಬೆಳಕು, ನೆರಳು, ದೃಶ್ಯಕಾಣ್ಕೆ ಮನಸ್ಸಿಗೆ ಅರಿವಾಗುತ್ತದೆ. 
 
ಯಾವುದೇ ಒಂದು ವಸ್ತುವನ್ನು ನಿರಂತರವಾಗಿ ಧ್ಯಾನಿಸುವ ಮನಸ್ಥಿತಿ ಛಾಯಾಗ್ರಾಹಕನಿಗೆ ಇರಬೇಕಾಗುತ್ತದೆ. ನಾನು ಮಗಳ ಫೋಟೊ ತಗೆಯಲೆಂದೇ ಕ್ಯಾಮೆರಾ ತೆಗೆದುಕೊಂಡಿದ್ದು ಎಂದು ಆಗಲೇ ಹೇಳಿದೆ. ಆದರೆ ನಿಸರ್ಗದ ಛಾಯಾಗ್ರಹಣ ಶುರುಮಾಡಿದೆ ಎಂದು ಮಗಳ ಫೋಟೊ ತೆಗೆಯುವುದನ್ನು ನಿಲ್ಲಿಸಲಿಲ್ಲ. ಇಲ್ಲಿ ಮರದ ಕೆಳಗೆ ನನ್ನ ಮಗಳು ಕುಳಿತುಕೊಂಡಿರುವ ಛಾಯಾಚಿತ್ರ ಲಾಲ್‌ಬಾಗ್‌ನಲ್ಲಿ ತೆಗೆದಿದ್ದು. ಆ ಬೆಳಕಿನ ವಿನ್ಯಾಸದಲ್ಲಿಯೇ ಫೋಟೊ ತೆಗೆಯಬೇಕು ಎಂಬ ಕಾರಣಕ್ಕೆ ನಸುಕಿನಲ್ಲೇ ಅವಳನ್ನು ಎಬ್ಬಿಸಿಕೊಂಡು ಹೋಗಿ ಅಲ್ಲಿ ಕೂಡಿಸಿ ತೆಗೆದದ್ದು. 
 
ಮೀನುಗಾರ ಬಲೆ ಎಸೆಯುತ್ತಿರುವ ಚಿತ್ರ ಉತ್ತರಕನ್ನಡದ ಹೊನ್ನಾವರದ ಸೇತುವೆ ಮೇಲೆ ನಿಂತುಕೊಂಡು ತೆಗೆದಿದ್ದು. ಬೆಳಿಗ್ಗೆ ಐದು ಗಂಟೆಗೇ ಆ ಜಾಗದಲ್ಲಿ ನಾನಿದ್ದೆ. ಈ ಥರದ ಚಿತ್ರಗಳನ್ನು ತುಂಬ ಜನ ತೆಗೆದಿದ್ದಾರೆ. ಆದರೆ ಏರಿಯಲ್‌ ವ್ಯೂನಲ್ಲಿ ತೆಗೆದರೆ ಚೆನ್ನಾಗಿರುತ್ತದೆ ಎಂದು ಯೋಚಿಸಿ ತೆಗೆದ ಚಿತ್ರವದು. 
 
ಇಲ್ಲಿ ಸಂಕದ (ಮರದ ಸೇತುವೆ) ಮೇಲೆ ವ್ಯಕ್ತಿಯೊಬ್ಬರು ಹೋಗುತ್ತಿರುವ ಚಿತ್ರ ಇದೆಯಲ್ಲ, ಅದು ಶಿರಸಿಯಲ್ಲಿ ನಮ್ಮ ಮನೆಯಿಂದ ತೋಟಕ್ಕೆ ಹೋಗಲು ಇರುವ ಸಂಕ. ನಾನು ಚಿಕ್ಕವನಿರುವಾಗಲಿನಿಂದ ನೋಡಿಕೊಂಡು, ಆಡಿಕೊಂಡು ಬೆಳೆದ ಜಾಗ ಅದು. ಆ ಜಾಗದಲ್ಲಿ ಚಳಿಗಾಲದಲ್ಲಿ ಅಂಥ ಬೆಳಕಿನ ವಿನ್ಯಾಸ ಇರುತ್ತದೆ ಎಂದು ನನಗೆ ಗೊತ್ತಿತ್ತು. ಆದ್ದರಿಂದಲೇ ಅಪ್ಪಟ ಮಲೆನಾಡಿನ ಬೆಳಗಿನ ದೈನಿಕವನ್ನು ಪ್ರತಿನಿಧಿಸುವ ಚಿತ್ರ ತೆಗೆಯಲು ಸಾಧ್ಯವಾಯಿತು. 
 
ಸಾತೊಡ್ಡಿ ಜಲಪಾತದ ಚಿತ್ರವನ್ನು ಹೀಗೆ ತೆಗೆಯಲು ಸಾಧ್ಯವಾಗಿದ್ದು ನನ್ನ ಅದೃಷ್ಟ. ಮಳೆಗಾಲ ಮುಗಿದು ಚಳಿಗಾಲ ಆರಂಭವಾದಾಗ ಊರಿಗೆ ನೀರು ತೆಗೆದುಕೊಂಡು ಹೋಗಲು ಜಲಪಾತದ ಎದುರು ಕಟ್ಟಿಗೆಯಿಂದ ತಾತ್ಕಾಲಿಕ ಅಣೆಕಟ್ಟು ಮಾಡುತ್ತಾರೆ. ಸ್ವಲ್ಪ ನೀರು ಜಾಸ್ತಿ ಇದ್ದರೂ ಆ ಕಟ್ಟಿಗೆಯ ಅಡ್ಡೆ ಕಾಣಿಸುವುದೇ ಇಲ್ಲ, ಸ್ವಲ್ಪ ನೀರು ಕಡಿಮೆ ಇದ್ದರೂ ನೀರಿನ ಆ ಝರಿ ಹರಿಯುವುದಿಲ್ಲ. ಹಾಗೆ ಸರಿಯಾದ ಸಮಯಕ್ಕೆ ನಾನು ಅಲ್ಲಿ ಹೋಗಿದ್ದರಿಂದ ಆ ಅಪರೂಪದ ಚಿತ್ರ ತೆಗೆಯಲು ಸಾಧ್ಯವಾಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT