ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರಿ ಪತ್ರಕ್ಕೆ ನಿರ್ಮಾಪಕ ಬೇಸ್ತು

Last Updated 31 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ರೂಪವತಿ ಹೆಣ್ಣುಮಗಳೊಬ್ಬರು ಅಂದು ಪಾಪುವಿನ ಜೊತೆ ನನ್ನ ಕಚೇರಿಗೆ ಬಂದರು.  ಅವರನ್ನು ಈ ಮೊದಲು ಎಲ್ಲಿಯೋ ನೋಡಿದಂತೆ ನನಗೆ ಅನ್ನಿಸಿತು. ಎಷ್ಟೇ ನೆನಪು ಮಾಡಿಕೊಂಡರೂ ಹೊಳೆಯಲಿಲ್ಲ. ಬಾಡಿಹೋದ ಅವರ ಮುಖವನ್ನು ಕಂಡು ಸಮಸ್ಯೆ ಏನು ಎಂದು ವಿಚಾರಿಸಿದೆ. ಅದಕ್ಕೆ ಅವರು, ‘ಜೀವನದಲ್ಲಿ ನಾನು ತುಂಬಾ ನೊಂದಿದ್ದೇನೆ. ನನಗೆ ನ್ಯಾಯ ಬೇಕಿದೆ. ಈ  ನನ್ನ ಮಗು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದೆ. ನಿಮ್ಮ ಫೀಸನ್ನೂ ನೀಡುವ ಶಕ್ತಿ ನನಗಿಲ್ಲ. ದಯವಿಟ್ಟು ನನಗೆ ನ್ಯಾಯ ದೊರಕಿಸಿಕೊಡಿ’ ಎಂದರು.

ಅದಕ್ಕೆ ನಾನು, ‘ಸರಿಯಮ್ಮ, ಮೊದಲು ನಿಮ್ಮ ಪರಿಚಯ ಮಾಡಿಕೊಳ್ಳಿ. ಆಮೇಲೆ ಸಮಸ್ಯೆ ಏನು ಎಂದು ಹೇಳಿ. ಉಳಿದದ್ದು ಆಮೇಲೆ ನೋಡುವ’ ಎಂದೆ. ಜೊತೆಗೆ ಆಕೆಯನ್ನು ಎಲ್ಲೋ ನೋಡಿದಂತಿದೆ ಎಂದೂ ಹೇಳಿದೆ. ಆಗ ಅವರು, ‘ನಾನು ಸಿನಿಮಾ ನಟಿ. ಹೆಸರು ವೀಣಾ. ಕೆಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ಸದ್ಯ ನನ್ನ ಕೈಲಿ ಯಾವ ಚಿತ್ರವೂ ಇಲ್ಲ. ನನ್ನ ಬದುಕೇ ಸಿನಿಮಾ ಕಥೆ ಥರ ಆಗಿಬಿಟ್ಟಿದೆ’ ಎಂದು ಅಳತೊಡಗಿದರು. ಅವರನ್ನು ಸಮಾಧಾನಪಡಿಸಿ, ಆದದ್ದೇನು ಎಂದು ವಿಚಾರಿಸಿದೆ. ಅವರು ಹೇಳಿದ ಸಾರಾಂಶ ಹೀಗಿದೆ...
***
ಕನ್ನಡ ಸಿನಿಮಾರಂಗ ಪ್ರಯೋಗಾತ್ಮಕ ಚಿತ್ರಗಳನ್ನು ಸಾಲುಸಾಲಾಗಿ ನೀಡಿದ ದಿನಗಳವು. ಅಂತಹ ಚಿತ್ರಗಳಲ್ಲಿ ನಟಿಸಿದಾಕೆ ಬೆಂಗಳೂರಿನ ವೀಣಾ. ನೋಡಲು ಸುಂದರಿಯಾಗಿದ್ದ ವೀಣಾ ಅವರಿಗೆ ಸಿನಿಮಾ ಗೀಳು ಆವರಿಸಿಕೊಂಡಿತ್ತು. ಇದೇ ಕಾರಣಕ್ಕೆ  ಗಾಂಧಿನಗರದ ಕಡೆಗೆ ಪ್ರಯಾಣ ಬೆಳೆಸಿದ್ದರು. ಅವರಿಗೆ ಚಿತ್ರವೊಂದರಲ್ಲಿ ಸಹನಟಿಯಾಗಿ ನಟಿಸುವ ಅವಕಾಶ ಸಿಕ್ಕಿತು. ಈ ಚಿತ್ರಕ್ಕೆ ಹಣ ಹಾಕಿದವರು ತಮಿಳುನಾಡು ಮೂಲದ ಕಣ್ಣನ್. ಚಿತ್ರ ಭರ್ಜರಿ ಯಶಸ್ಸು ಕಂಡಿತು.

ವೀಣಾ ಅವರ ರೂಪಕ್ಕೆ ಮನಸೋತ ವಿವಾಹಿತ ಕಣ್ಣನ್‌ ಅವರು, ಆಕೆಯ ಸಂಗ ಬಯಸಿದರು. ಆದ್ದರಿಂದ ತಮ್ಮ ಮುಂದಿನ ಚಿತ್ರದಲ್ಲಿ ಅವರನ್ನೇ ನಾಯಕಿಯನ್ನಾಗಿ ಮಾಡುವುದಾಗಿ ಆಸೆ ತೋರಿಸಿದರು. ನಾಯಕಿ ಪಾತ್ರ ಸುಲಭದಲ್ಲಿ ಸಿಕ್ಕಿದ್ದಕ್ಕೆ ವೀಣಾ ಅವರ ಸಂತೋಷಕ್ಕೂ ಪಾರವೇ ಇಲ್ಲದಾಯಿತು.

ಕಣ್ಣನ್‌ ಅವರ ಪೂರ್ವಾಪರ ವಿಚಾರಿಸುವ ಗೋಜಿಗೆ ಹೋಗದ ವೀಣಾ, ಅವರ ಜೊತೆ ಸಲುಗೆಯಿಂದ ನಡೆಯತೊಡಗಿದರು. ಕೊನೆಗೆ ಇಬ್ಬರೂ ದೇವಸ್ಥಾನವೊಂದಕ್ಕೆ ಹೋಗಿ ಮದುವೆಯನ್ನೂ ಆದರು! ಇಷ್ಟಾದರೂ ವೀಣಾ ಅವರಿಗೆ ಕಣ್ಣನ್‌ ಅವರ ಮೊದಲ ಮದುವೆ ವಿಷಯ ತಿಳಿಯಲೇ ಇಲ್ಲ. ಬೆಂಗಳೂರಿನಲ್ಲಿಯೇ ಇವರಿಬ್ಬರ ಸಂಸಾರ ಮುಂದುವರಿಯಿತು. ವೀಣಾ  ಅವರಿಗೆ ಮಗುವೂ ಹುಟ್ಟಿತು. ಆದರೆ ಮಗು ಬುದ್ಧಿಮಾಂದ್ಯವಾಗಿತ್ತು.

ಮಗು ಹುಟ್ಟಿದ ಮೇಲೆ ಕಣ್ಣನ್‌, ನಿಧಾನವಾಗಿ ವೀಣಾ ಅವರಿಂದ ಕಳಚಿಕೊಳ್ಳಲು ಶುರುವಿಟ್ಟುಕೊಂಡರು. ಚೆನ್ನೈ ಕಡೆಗೆ (ಮೊದಲ ಪತ್ನಿ ಇರುವಲ್ಲಿ) ಓಡಾಟ ಹೆಚ್ಚಾಗತೊಡಗಿತು. ಚೆನ್ನೈನಿಂದ ಆಗೀಗ ಬಂದು ವೀಣಾ ಅವರ ಕೈಯಲ್ಲಿ ಅಷ್ಟಿಷ್ಟು ದುಡ್ಡು ಕೊಟ್ಟು ಹೋಗತೊಡಗಿದರು.  ಕೊನೆಕೊನೆಗೆ, ತಮಗೆ ಚೆನ್ನೈನಲ್ಲಿಯೇ ವ್ಯವಹಾರ ಜಾಸ್ತಿ ಇದೆ ಎಂದು ವೀಣಾ ಅವರನ್ನು ನಂಬಿಸಿ ಬೆಂಗಳೂರಿಗೆ ಬರುವುದನ್ನೇ ಬಿಟ್ಟುಬಿಟ್ಟರು. ಮದುವೆಯಾದಾಗಿನಿಂದ ವೀಣಾ ಅವರು ಯಾವ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ.

ಆದ್ದರಿಂದ ಅವರ ಬಳಿ ಹಣ ಇರಲಿಲ್ಲ. ಇದ್ದ ಹಣವೆಲ್ಲಾ ಮಗುವಿನ ವೈದ್ಯಕೀಯ ಚಿಕಿತ್ಸೆಗೇ ಕರಗತೊಡಗಿತು. ಗಂಡ ತಮ್ಮಿಂದ ಏನೋ ಮುಚ್ಚಿಡುತ್ತಿರುವುದಾಗಿ ವೀಣಾ ಅವರಿಗೆ ಅನುಮಾನ ಬರುವ ಹೊತ್ತಿಗೆ ಸಮಯ ಮೀರಿ ಹೋಗಿತ್ತು. ವೀಣಾ ಕೆಲವೆಡೆ ವಿಚಾರಿಸಿದಾಗ, ಕಣ್ಣನ್‌ ಅವರು ಈ ಮೊದಲೇ ತಮ್ಮ ಅಕ್ಕನ ಮಗಳನ್ನು ಮದುವೆಯಾಗಿ, ಮನೆ ಅಳಿಯನಾಗಿ ಎರಡು ಮಕ್ಕಳನ್ನು ಪಡೆದಿದ್ದ ವಿಷಯ ತಿಳಿಯಿತು. ಇದನ್ನು ಕೇಳಿ ವೀಣಾ ಘಾಸಿಗೊಂಡರು.

ಕೈಯಲ್ಲಿ ಕೆಲಸವಿಲ್ಲ, ಮಡಿಲಲ್ಲಿ ಬುದ್ಧಿಮಾಂದ್ಯ ಮಗು, ಗಂಡ ಹಣ ನೀಡುತ್ತಿಲ್ಲ... ಇವೆಲ್ಲವುಗಳಿಂದ ದಿಕ್ಕು ತೋಚದ ಅವರು ಅಕ್ಷರಶಃ ಕುಸಿದು ಹೋದರು. ನಂತರ ನನ್ನಲ್ಲಿಗೆ ಬಂದಿದ್ದರು. ತಮಗೆ ಗಂಡನಿಂದ ಜೀವನಾಂಶ ದೊರಕಿಸಿಕೊಡಿ ಎಂದು ಕೋರಿಕೊಂಡರು.

ಇಷ್ಟು ವಿಷಯ ಅವರಿಂದ ತಿಳಿಯಿತು. ಆದರೆ ಕಾನೂನು, ಕರುಣೆ– ಕನಿಕರದ ಮೇಲೆ ನಿಂತಿಲ್ಲವಲ್ಲ! ಅದಕ್ಕೆ ಬೇಕಿರುವುದು ಸಾಕ್ಷ್ಯಾಧಾರ ಮಾತ್ರ. ಇಂಥ ಪ್ರಕರಣಗಳಲ್ಲಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) 125ನೇ ಕಲಮಿನ ಅಡಿ ಜೀವನಾಂಶ ಕೇಳಬಹುದು. ಆದರೆ ಆ ಸಮಯದಲ್ಲಿ ಕೋರ್ಟ್‌ಗೆ ಎರಡು ಸಾಕ್ಷ್ಯಾಧಾರಗಳನ್ನು ಒದಗಿಸಲೇಬೇಕು. ಅದೆಂದರೆ, ದಿನನಿತ್ಯದ ಖರ್ಚು ವೆಚ್ಚಗಳನ್ನು ಸರಿದೂಗಿಸುವ ವರಮಾನ ಮಹಿಳೆಗೆ ಇಲ್ಲ ಎನ್ನುವುದು ಹಾಗೂ ಜೀವನಾಂಶವನ್ನು ಕೊಡಬೇಕಾದ ಪತಿಗೆ ಸಾಕಷ್ಟು ವರಮಾನ ಇದೆ ಎನ್ನುವುದು. ಈ ಸಾಕ್ಷ್ಯಗಳನ್ನು ಒದಗಿಸಿದಲ್ಲಿ ಮಾತ್ರ ಪತಿಯ ವರಮಾನದ ಮೂರನೇ ಒಂದು ಭಾಗ ಜೀವನಾಂಶವನ್ನು ಕೊಡುವಂತೆ ನ್ಯಾಯಾಲಯಗಳು ಸಾಮಾನ್ಯವಾಗಿ ಆದೇಶಿಸುತ್ತವೆ.

ಆದರೆ ಇಲ್ಲಿ ಪರಿಸ್ಥಿತಿ ಹಾಗಿರಲಿಲ್ಲ. ವೀಣಾ ಅವರ ಬಳಿ ತಮ್ಮ ಮದುವೆ, ಮಗು ಕುರಿತು ಯಾವುದೇ ದಾಖಲೆಗಳು ಇರಲಿಲ್ಲ. ಗಂಡನ ಆಸ್ತಿಪಾಸ್ತಿ ಬಗ್ಗೆ ಕಿಂಚಿತ್‌ ಜ್ಞಾನವೂ ಇರಲಿಲ್ಲ. ಇವುಗಳ ಬಗ್ಗೆ ಹೇಗಾದರೂ ಮಾಹಿತಿ ಸಂಗ್ರಹಿಸುವಂತೆ ಅವರಿಗೆ ಹೇಳಿದೆ. ಆದರೆ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳದ ವೀಣಾ, ಭಾವೋದ್ವೇಗದಿಂದ ತಮಗಾಗಿರುವ ಅನ್ಯಾಯದ ಬಗ್ಗೆ ಪದೇ ಪದೇ ಹೇಳತೊಡಗಿದರು. ನನ್ನ ತಾಳ್ಮೆಯ ಗಡಿ ದಾಟಿತು.

ಸಿಟ್ಟಿನಿಂದ ನಾನು ವೀಣಾ ಅವರನ್ನು ಏರು ದನಿಯಲ್ಲಿ, ‘ಅಗತ್ಯ ಮಾಹಿತಿ ಕೊಡಲು ಸಾಧ್ಯವಾಗದಿದ್ದಲ್ಲಿ, ಕಚೇರಿಯಿಂದ ಹೊರ ಹೋಗಿ. ನಿಮ್ಮ ಭಾವೋದ್ವೇಗದ ಮಾತನ್ನು ಕಾನೂನು ಕೇಳುವುದಿಲ್ಲ. ನನಗೆ ಬೇಕಿರುವ ದಾಖಲೆ ಒದಗಿಸಲು ಏನಾದರೂ ಮಾಡಿ’ ಎಂದೆ. ತಕ್ಷಣವೇ ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ತಾಳ್ಮೆ ವಹಿಸಿದೆ.

ಒಂದು ಕಡೆ ನೊಂದ ಮನಸ್ಸಿಗೆ ಪರಿಹಾರ ಕೊಡಿಸುವ ಕರ್ತವ್ಯ, ಇನ್ನೊಂದೆಡೆ ಸಾಕ್ಷಿ ಪುರಾವೆಗಳಿಲ್ಲದ ಕೇಸು. ಒಟ್ಟಿನಲ್ಲಿ ಈ ಕೇಸು ನನ್ನನ್ನು ಗೋಜಲಿಗೆ ಸಿಲುಕಿಸಿತು.ಸಾಮಾನ್ಯವಾಗಿ ಅಪರಾಧಿ ಎಷ್ಟೇ ಬುದ್ಧಿವಂತನಾದರೂ ಏನಾದರೊಂದು ತಪ್ಪು ಹೆಜ್ಜೆ ಇಡುತ್ತಾನೆ. ಅದನ್ನೇ ವಕೀಲರಾದ ನಾವು ಹುಡುಕಿ ತೆಗೆಯುತ್ತೇವೆ. ಆದರೆ ಈ ಘಟನೆಯ ‘ಕಳ್ಳ’ ಸಾಬೀತು ಮಾಡುವಂಥ ಯಾವ ಕುರುಹನ್ನೂ ದಾಖಲೆ ಸಹಿತ ಬಿಟ್ಟಿರಲಿಲ್ಲ!

ತುಂಬಾ ತಲೆ ಕೆಡಿಸಿಕೊಂಡ ನಂತರ  ಸಿನಿಮಾ ಮಾದರಿ ಎನ್ನುವಂಥ ಉಪಾಯವೊಂದು ಹೊಳೆಯಿತು. ಆದರೆ ಅದು ಎಷ್ಟರಮಟ್ಟಿಗೆ ಯಶಸ್ಸು ಸಾಧಿಸುತ್ತದೆ ಎಂದು ಗೊತ್ತಿರಲಿಲ್ಲ. ದೇವರ ಮೇಲೆ ಭಾರ ಹಾಕಿ ಆ ಉಪಾಯವನ್ನು ವೀಣಾ ಅವರಿಗೆ ಹೇಳಿದೆ. ಅದು ‘ಪತ್ರದ ಉಪಾಯ’. ಆ ಉಪಾಯವನ್ನು ವೀಣಾ ಅವರಿಗೆ  ತಿಳಿಸಿದೆ.

ನನ್ನ ಸಲಹೆಯಂತೆ ವೀಣಾ, ಕಣ್ಣನ್‌ ಅವರಿಗೆ ಪತ್ರ ಬರೆದರು. ಅದರಲ್ಲಿ ಅವರು, ‘ನಾನು ನಿಮ್ಮ ಜೀವನದಲ್ಲಿ ಪ್ರವೇಶ ಆಗುವ ಮೊದಲು ನಿಮ್ಮಲ್ಲಿ ಏನೂ ಹಣವಿರಲಿಲ್ಲ. ನಾನು ನಟಿಸಿದ ಚಿತ್ರಗಳಿಂದಾಗಿ ನಿಮಗೆ ಹಣ ಸಿಕ್ಕಿದೆ. ಇದರಿಂದಲೇ ನೀವು ಅಗಾಧ ಆಸ್ತಿ ಪಡೆದಿರುವಿರಿ.

ಇಲ್ಲದಿದ್ದರೆ ನೀವು ಬೀದಿಗೆ ಬರಬೇಕಿತ್ತು. ನಾನು ಇಲ್ಲದಿದ್ದರೆ ನಿಮ್ಮ ಬದುಕು ಮೂರಾಬಟ್ಟೆಯಾಗುತ್ತಿತ್ತು. ಆದ್ದರಿಂದ ನನ್ನ ಹಣವನ್ನು ನನಗೆ ವಾಪಸ್‌ ನೀಡಿ...’ ಎಂಬಿತ್ಯಾದಿಯಾಗಿ ಸುಳ್ಳಿನ ಕಂತೆ ಸೃಷ್ಟಿಸಿ, ಅದರ ಜೊತೆ ಆಡು ಭಾಷೆಯ ಬೈಗುಳಗಳನ್ನು ಬೆರೆಸಿ ಬರೆದರು. ಈ ಪತ್ರವನ್ನು ಅಂತೂ ಅಂಚೆ ಡಬ್ಬಿಯಲ್ಲಿ ಹಾಕಲಾಯಿತು.

ಮುಂದಿನದ್ದು ಪತಿಯ ಉತ್ತರಕ್ಕಾಗಿ ಕಾಯುವ ಕಾಯಕ... ಕಣ್ಣನ್‌ ಮರುಪತ್ರ ಬರೆಯದೇ ಹೋದರೆ ಅಥವಾ ಪತ್ರ ಬರೆದರೂ ಅದರಲ್ಲಿ ನಮಗೆ ಬೇಕಾದ ಅಂಶ ಸಿಗದೇ ಹೋದರೆ... ಹೀಗೆ ಯೋಚನೆಯಲ್ಲೇ ಸ್ವಲ್ಪ ದಿನ ಕಳೆದೆ. ಆಮೇಲೆ ಬೇರೆ ಬೇರೆ ಕೇಸು ಬಂದಿದ್ದರಿಂದ ಇದರ ಬಗ್ಗೆ ಮರೆತೆ.

ಸ್ವಲ್ಪ ದಿನ ಕಳೆದ ಮೇಲೆ ವೀಣಾ  ಗಂಡನಿಂದ ಬಂದ ಪತ್ರವನ್ನು ಹಿಡಿದು ಕಚೇರಿಗೆ ಬಂದರು. ಅದನ್ನು ಓದಿದ ನನಗೆ ಕೇಸನ್ನು ಗೆದ್ದೇ ಬಿಟ್ಟಷ್ಟು ಖುಷಿ! ‘ಕಳ್ಳ’ ಕಣ್ಣನ್ ನನ್ನ ಬಲೆಗೆ ಬಿದ್ದುಬಿಟ್ಟಿದ್ದರು. ಅದರಲ್ಲಿ ನನಗೆ ಬೇಕಿದ್ದ ಸಾಕ್ಷ್ಯ ಪುರಾವೆ ಸಿಕ್ಕೇ ಬಿಟ್ಟಿತು. ಏಕೆಂದರೆ, ವೀಣಾ ಅವರಿಂದಲೇ ತಾವು ಶ್ರೀಮಂತ ಆಗಿರುವುದಾಗಿ ಪತ್ರದಲ್ಲಿ ಓದಿದ ಕಣ್ಣನ್‌ ಅವರ ಪಿತ್ತ ನೆತ್ತಿಗೇರಿತ್ತು.

ಅದರಲ್ಲಿ ಉಪಯೋಗಿಸಿದ  ಭಾಷೆ, ಶೈಲಿ ನಾನು ಅಂದುಕೊಂಡಂತೆ, ಅವರ ಆತ್ಮಸಾಕ್ಷಿಯನ್ನು ಕೆಣಕಿತ್ತು. ಅದೇ ಸಿಟ್ಟಿನ ಭರದಲ್ಲಿ ಅವರು, ‘ನಿನ್ನ ಜೊತೆ ಸಂಬಂಧ ಇಟ್ಟುಕೊಳ್ಳುವ ಮುಂಚಿನಿಂದಲೂ ನಾನು ಆಗರ್ಭ ಶ್ರೀಮಂತನೇ ಹೊರತು ನಿನ್ನನ್ನು ಮದುವೆಯಾದ ಮೇಲೆ ಅಲ್ಲ. ಅಷ್ಟಕ್ಕೂ ಎರಡನೇ ಹೆಂಡತಿಯಾದ ನಿನಗೆ ಕಾನೂನಿನ ಅನ್ವಯ ನಾನು ಹಣ ಕೊಡಬೇಕು ಎಂದೇನೂ ಇಲ್ಲ’ ಎಂದು ತಮ್ಮ ಅಗಾಧ ಕಾನೂನಿನ ಪ್ರೌಢಿಮೆಯನ್ನು ಮೆರೆದಿದ್ದರು. ಜೊತೆಗೆ, ತಮ್ಮ ಬಳಿ ಮೊದಲೇ ಎಷ್ಟೆಲ್ಲಾ ಆಸ್ತಿ ಇತ್ತು ಎಂದೂ ನಮೂದಿಸಿದ್ದರು!

ಇಷ್ಟು ಸಾಕಿತ್ತು ನನಗೆ. ಈ ಪತ್ರವನ್ನೇ ಸಾಕ್ಷ್ಯವನ್ನಾಗಿಸಿಕೊಂಡು ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದೆ. ಮದುವೆ, ಆಸ್ತಿ ವಿವರ ಎಲ್ಲವೂ ಪತ್ರದಲ್ಲೇ ಇದ್ದ ಕಾರಣ, ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್‌ ಕಣ್ಣನ್‌ ಅವರಿಗೆ ನೋಟಿಸ್‌ ಜಾರಿಗೊಳಿಸಿತು.

ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರು ನೋಟಿಸ್‌ ಹಿಡಿದು ಕಣ್ಣನ್‌ ಅವರ ಮನೆಗೆ ಹೋದರು. ಆ ಸಮಯದಲ್ಲಿ ಕಣ್ಣನ್‌ ಮನೆಯಲ್ಲಿ ಇರಲಿಲ್ಲ. ಅವರ ಮೊದಲ ಹೆಂಡತಿ ವಲ್ಲಿ ನೋಟಿಸ್‌ ಪಡೆದುಕೊಂಡರು. ಅದನ್ನು ಓದಿದಾಗ ಅವರಿಗೆ ಶಾಕ್‌ ಆಯಿತು. ಪತಿರಾಯನ ‘ಪರಾಕ್ರಮ’ ತಿಳಿಯಿತು.

ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಕಣ್ಣನ್‌ ಹಾಗೂ ವಲ್ಲಿ ಹಾಜರಾದರು. ನ್ಯಾಯಾಲಯದಲ್ಲಿ ಕಣ್ಣನ್ ಜೊತೆ ವಲ್ಲಿ ಸಹ ಬಂದಿದ್ದರು. ಕಣ್ಣನ್ ಪರ ವಕಾಲತ್ತು ಹಾಕಿದ ವಕೀಲರು ನನ್ನ ಸ್ನೇಹಿತರೇ ಆಗಿದ್ದರು. ಕಣ್ಣನ್‌ ಅವರು ಮಾಡಿರುವ ಮೋಸದ ವಿಷಯ ಅರಿತ ಅವರು, ಕೋರ್ಟ್‌ ಹೊರಗಡೆ ರಾಜಿ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ಕೋರ್ಟ್‌ ಅನ್ನು ಕೋರಿದರು. ಅದಕ್ಕೆ ಕೋರ್ಟ್‌ ಸಮ್ಮತಿಸಿತು.

ರಾಜಿ ಸಂಧಾನದ ವೇಳೆ ಅಚ್ಚರಿಯೊಂದು ನಡೆಯಿತು. ಅಲ್ಲಿಗೆ ವಲ್ಲಿ ಅವರೂ ಬಂದಿದ್ದರು. ವೀಣಾ ತಮ್ಮ ಕಥೆ ಹೇಳುತ್ತಿದ್ದಂತೆಯೇ ವಲ್ಲಿ ಅವರು ಕರಗಿ ಹೋದರು. ಮಧ್ಯೆ ಪ್ರವೇಶಿಸಿದ ಅವರು, ‘ನನ್ನ ಗಂಡ ಮಾಡಿರುವುದು ಅನಾಚಾರ. ಯಾವುದೇ ಕಾರಣಕ್ಕೂ ವೀಣಾ ಅವರಿಗೆ ಅನ್ಯಾಯವಾಗಬಾರದು. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ರಾಜಿ ತೀರ್ಮಾನ ಮಾಡಿ’ ಎಂದರು!

ಎರಡು ಸುತ್ತಿನ ಮಾತುಕತೆಯ ನಂತರ ಬೆಂಗಳೂರಿನ ಮನೆಯೊಂದನ್ನು ವೀಣಾ ಅವರಿಗೆ ಕೊಡಬೇಕು ಎಂದೂ, ಬ್ಯಾಂಕ್‌ನಲ್ಲಿ ಹಣ ಠೇವಣಿ ಇಟ್ಟು ಅದರಲ್ಲಿ ಬರುವ ಬಡ್ಡಿಯನ್ನು ಮಗು ಸಾಕಲು ನೀಡಬೇಕು ಎಂದೂ ತೀರ್ಮಾನಿಸಲಾಯಿತು. ಅದರಂತೆ ಎಲ್ಲವೂ ಸುಸೂತ್ರವಾಗಿ ನಡೆಯಿತು. ವೀಣಾ ಅವರಿಗೆ ನ್ಯಾಯ ಸಿಕ್ಕಿತು.
***
ಹಲವು ವರ್ಷಗಳ ನಂತರ, ನನ್ನನ್ನು ವೀಣಾ ಭೇಟಿಯಾದರು. ಮತ್ತೆ ಚಿತ್ರದಲ್ಲಿ ಅಭಿನಯ ಶುರು ಮಾಡಿರುವ ಬಗ್ಗೆ ತಿಳಿಸಿದರು. ಅಷ್ಟೇ ಅಲ್ಲದೆ, ಕಣ್ಣನ್‌ ಅವರ ಮೊದಲ ಹೆಂಡತಿ ವಲ್ಲಿ ಅವರು ಈಗಲೂ ತಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿರುವುದಾಗಿ ಹೇಳಿದರು.

ಇಡೀ ಪ್ರಕರಣದಲ್ಲಿ ‘ನಾಯಕಿ’ಯಾದವರು ವಲ್ಲಿ. ಅವರ ಹೃದಯ ಶ್ರೀಮಂತಿಕೆಗೆ ನನ್ನಿಂದ ಬೆಲೆ ಕಟ್ಟಲಾಗಲಿಲ್ಲ. ಒಬ್ಬ ಹೆಣ್ಣು ಇನ್ನೊಂದು ಹೆಣ್ಣಿನ ನೋವನ್ನು ಅರಿತಾಗ ಸಿಗುವ ನ್ಯಾಯ, ನ್ಯಾಯಾಲಯದಲ್ಲಿ ಸಿಗುವ ನ್ಯಾಯಕ್ಕಿಂತ ಅಮೂಲ್ಯವಾದದ್ದು ಎನ್ನಿಸಿತು.

(ಎಲ್ಲರ ಹೆಸರು ಬದಲಾಯಿಸಲಾಗಿದೆ)
ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT