ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಟುಂಬಿಕ ಕಲಹದ ‘ಬಲಿಪಶು’

Last Updated 31 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ಸಮಾಜವಾದಿಗಳು ಜಗಳವಿಲ್ಲದೆ ಬದುಕಲಾರರು, ಜಗಳಕ್ಕೆ ಯಾರೂ ಸಿಗದಿದ್ದರೆ ತಮ್ಮೊಂದಿಗೆ ತಾವೇ ಜಗಳ ಆಡಿಕೊಳ್ಳುತ್ತಾರೆ’ ಎಂದಿದ್ದರು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ. ಈ ಮಾತಿಗೆ ದೇಶದ ನಾನಾ ಭಾಗಗಳಲ್ಲಿ ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಹಲವು ನಿದರ್ಶನಗಳನ್ನು ಕಾಣಬಹುದು.

ಉತ್ತರ ಪ್ರದೇಶದ ಸಮಾಜವಾದಿ ಪಾರ್ಟಿ ಒಂದು ಕೌಟುಂಬಿಕ ಸ್ವತ್ತಿನಂತೆ ನಡೆದುಕೊಂಡು ಬಂದಿರುವ ರಾಜಕೀಯ ಪಕ್ಷ. ಈ ಕುಟುಂಬದ ಹಿರಿಯ ಮುಲಾಯಂ ಸಿಂಗ್ ಯಾದವ್. ಇವರ ಕಿರಿಯ ತಮ್ಮ ಶಿವಪಾಲ್ ಯಾದವ್ ಮತ್ತು ರಾಜ್ಯದ ಮುಖ್ಯಮಂತ್ರಿಯೂ ಆದ ಹಿರಿಯ ಮಗ ಅಖಿಲೇಶ್ ಯಾದವ್‌  ನಡುವೆ ಗದ್ದುಗೆಗಾಗಿ ನಡೆದಿರುವ ಗುದ್ದಾಟವನ್ನು ಸಮಾಜವಾದಿಗಳ ಜಗಳ ಎಂದು ಕರೆಯಲು ಬಾರದು. ರಾಮಮನೋಹರ ಲೋಹಿಯಾ ತನ್ನ ದಾರಿದೀಪ ಎನ್ನುತ್ತದೆ ಸಮಾಜವಾದಿ ಪಾರ್ಟಿ.

ಆನುವಂಶೀಯ ರಾಜಕಾರಣ ಎಂಬುದು ಜನತಾಂತ್ರಿಕ ಕ್ರಿಯೆಯ ಮೂಲತತ್ವದ ಉಲ್ಲಂಘನೆ ಎಂದಿದ್ದರು ಲೋಹಿಯಾ. ಮುಖ್ಯಮಂತ್ರಿ, ಮಂತ್ರಿ, ಸಂಸದರು, ಶಾಸಕರು, ಮುಂತಾದ ಆಯಕಟ್ಟಿನ ಕೆನೆಪದರದ ಹುದ್ದೆಗಳನ್ನು ಹೊಂದಿರುವ ಮುಲಾಯಂ ಕುಟುಂಬದ ಸದಸ್ಯರ ಸಂಖ್ಯೆ ಇಪ್ಪತ್ತನ್ನು ಮೀರುತ್ತದೆ. ಈ ಸಮಾಜವಾದಿ ಕಟ್ಟಿ ನಿಲ್ಲಿಸಿರುವ ಅನೈತಿಕ ಕುಟುಂಬ ರಾಜಕಾರಣ ಇದೀಗ ಒಳಗೊಳಗಿನಿಂದಲೇ ಸಿಡಿಯತೊಡಗಿದೆ.

ಮುಲಾಯಂ ಸಿಂಗ್ ಯಾದವ್ 2003ರಿಂದ 2007ರ ತನಕ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಈ ಅವಧಿಯಲ್ಲಿ ಶಿವಪಾಲ್ ಯಾದವ್ ಮತ್ತೊಬ್ಬ ಮುಖ್ಯಮಂತ್ರಿಯಂತೆಯೇ ಮೆರೆದಿದ್ದವರು. 2012ರಲ್ಲಿ ರಾಜ್ಯದ ಉದ್ದಗಲ ಸಂಚರಿಸಿ ಜನಮನ ಗೆದ್ದ ಮಗನಿಗೆ ಮುಲಾಯಂ ಪಟ್ಟ ಕಟ್ಟಿದಾಗ ಶಿವಪಾಲ್ ಒಳಗೊಳಗೇ ಕುದಿದು ಹೋಗಿದ್ದರು. ಈ ಸತತ ಒಳಗುದಿ ಆಗಾಗ ಹೊರಚೆಲ್ಲಿದೆ.

ಮುಲಾಯಂ ಅವರ ಎರಡನೆಯ ಪತ್ನಿ ಸಾಧನಾ ಸಿಂಗ್- ಶಿವಪಾಲ್ ಹಾಗೂ ಕುಟುಂಬ ಮಿತ್ರ ಅಮರ್ ಸಿಂಗ್ ತ್ರಿವಳಿ ಅಖಿಲೇಶ್ ವಿರುದ್ಧ ನಡೆಸಿದ ಮಸಲತ್ತುಗಳು ಸಮಾಜವಾದಿ ಪಾರ್ಟಿಯನ್ನು ಹಲವಾರು ಸಲ ಒಡಕಿನ ಅಂಚಿಗೆ ಒಯ್ದಿರುವುದು ಸುಳ್ಳಲ್ಲ.

ಸದಾ ಕಾಯಿಲೆಯಿಂದ ಬಳಲಿದ ಅಖಿಲೇಶ್ ಹೆತ್ತ ತಾಯಿ ಮಾಲತಿ ದೇವಿ ತೀರಿಕೊಂಡ ನಂತರ ಮಲತಾಯಿಯ ಜೊತೆ ರಾಜಿ ಮಾಡಿಕೊಂಡರು. ಆದರೆ ಸಾಧನಾ ಸಿಂಗ್ ತಾವು ಹೆತ್ತ ಮಗ ಪ್ರತೀಕ್ ಯಾದವ್ ಮತ್ತು ಸೊಸೆ ಅಪರ್ಣಾ ಸಿಂಗ್‌ಗೆ ರಾಜ್ಯಾಧಿಕಾರದಲ್ಲಿ ದೊಡ್ಡಪಾಲು ಕೇಳುತ್ತಿದ್ದಾರೆ. ಜೊತೆಗೆ ಅಣ್ಣನ ಉತ್ತರಾಧಿಕಾರಿ ತಾವೇ ಆಗಬೇಕಿತ್ತು ಎಂಬುದು ಶಿವಪಾಲ್ ಯಾದವ್ ಅವರ ದುಮ್ಮಾನ. ಸದ್ಯದಲ್ಲೇ ನಡೆಯುವ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಟಿಕೆಟುಗಳನ್ನು ಹಂಚುವ ಅಧಿಕಾರಕ್ಕಾಗಿ ಈಗಿನ ಗುದ್ದಾಟ ನಡೆದಿದೆ.

ಶುಕ್ರವಾರ ತಾರಕಕ್ಕೆ ಏರಿದ್ದ ಜಗಳ 24 ತಾಸುಗಳ ಒಳಗಾಗಿಯೇ ನಾಟಕೀಯವಾಗಿ ಶಮನಗೊಂಡಿದೆ. ಅಥವಾ ಶಮನವಾಗಿದೆ ಎಂದು ನಂಬಿಸಲಾಗುತ್ತಿದೆ. ಕೌಟುಂಬಿಕ ರಾಜಕಾರಣದ ಈ ಒಳಸುಳಿಗಳಲ್ಲಿ ಸಿಕ್ಕು ಅಪ್ಪ ಮಗ (ಮುಲಾಯಂ ಮತ್ತು ಅಖಿಲೇಶ್) ಮುಖಾಮುಖಿಯಾಗಿ ನಿಲ್ಲಬೇಕಾಗಿ ಬಂದಿದೆ. ಪುತ್ರವಾತ್ಸಲ್ಯ ಮತ್ತು ಮುದ್ದಿನ ಮಡದಿಯ ಮೇಲಿನ ಮಮಕಾರ ಹಾಗೂ ತಮ್ಮ ಶಿವಪಾಲ್‌ನನ್ನು ಬಿಟ್ಟುಕೊಡಲಾಗದ ಸೋದರಪ್ರೀತಿಯ ನಡುವೆ ಮುಲಾಯಂ ಜರ್ಜರಿತರು.

ಗಂಗಾ ಬಯಲಿನ ಸೀಮೆ ಇಟಾವ ಈ ಅವಿಭಕ್ತ ರೈತಾಪಿ ಕುಟುಂಬದ ಕರ್ಮಭೂಮಿ. ಡಕಾಯಿತರ ನಾಡು ಕೂಡ ಆಗಿತ್ತು. ವಿವಾಹದ ಹದಿನಾರು ವರ್ಷಗಳ ನಂತರ ಹುಟ್ಟಿದ ಅಖಿಲೇಶ್ ಅವರ ಅಡ್ಡ ಹೆಸರು ಟಿಪ್ಪು. ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನನ ಹೆಸರಿನಿಂದಲೇ ಅಖಿಲೇಶ್ ಅವರನ್ನು ಅವರ ಕುಟುಂಬ ವರ್ಗ ಕರೆಯತ್ತದೆ.

ಮಗನನ್ನು ಡಕಾಯಿತರು, ಸೇಡಿನ ಹತ್ಯೆಗಳು, ಅಪಹರಣಗಳ ಸೀಮೆಯಿಂದ ಹೊರಗೆ ಬೆಳೆಸಲು ಯತ್ನಿಸಿದರು ಮುಲಾಯಂ ಸಿಂಗ್. ರಾಜಸ್ತಾನದಲ್ಲಿ ಶಾಲೆ ಕಲಿತ ನಂತರ ಮೈಸೂರಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿದರು ಅಖಿಲೇಶ್.

ಮೈಸೂರಿನ ವಿಜಯನಗರದಲ್ಲಿ ಗೆಳೆಯರೊಡನೆ ಪುಟ್ಟ ಮನೆಯಲ್ಲಿ ವಾಸವಿದ್ದ ಅಖಿಲೇಶ್ ಅವರು ಮುಲಾಯಂ ಮಗನೆಂದು ಬಹುಮಂದಿಗೆ ಗೊತ್ತಿರಲಿಲ್ಲ. ಜೀನ್ಸ್, ಟೀ ಶರ್ಟ್ ಉಡುಪಿನ ಅಖಿಲೇಶ್‌ಗೆ ಚಾಮುಂಡಿ ಬೆಟ್ಟ ಹತ್ತಿ ಇಳಿಯುವುದು ಅತ್ಯಂತ ಪ್ರಿಯ ಹವ್ಯಾಸ. ಮೈಸೂರು ಪಾಕ್ ಬಹಳವಾಗಿ ಸೇರುತ್ತಿದ್ದ ಸಿಹಿ ತಿನಿಸು. ತೊಣಚಿಕೊಪ್ಪಲು ರಸ್ತೆಯ ಬೇಕರಿಯೊಂದು ನಿತ್ಯ ಸಂಜೆಯ ಹರಟೆಕಟ್ಟೆ. ಕಾಲೇಜಿನ ‘ರೋಸ್ ಕ್ವೀನ್’ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಗೆಳತಿಯ ಮೇಲೆ ಗುಲಾಬಿ ಹೂಗಳ ಮಳೆಗರೆಯಲು ಜಿಪ್ಸಿ ಹತ್ತಿ ಮೈಸೂರಿನ ಪೇಟೆಯಲ್ಲಿದ್ದ ಗುಲಾಬಿಯನ್ನೆಲ್ಲ ಖರೀದಿಸಿ ತಂದಿದ್ದವರು ಅಖಿಲೇಶ್.

ಸೇನಾಧಿಕಾರಿಯ ಮಗಳಾದ, ರಜಪೂತ ಕುಲಕ್ಕೆ ಸೇರಿದ ಉತ್ತರಾಖಂಡದ ಡಿಂಪಲ್ ಕೈ ಹಿಡಿದ ಅಖಿಲೇಶ್ ಈಗ ಮೂರು ಮಕ್ಕಳ ತಂದೆ. 2012ರಲ್ಲಿ ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ಅವರ ವಯಸ್ಸು ಕೇವಲ 38. ಈ ಪದವಿ ವಹಿಸಿಕೊಳ್ಳುವ ಮೊದಲು ಲೋಕಸಭಾ ಸದಸ್ಯರಾಗಿದ್ದರು.

ಅಖಿಲೇಶ್ ಸರ್ಕಾರವನ್ನು ತೆರೆಮರೆಯ ಹಿಂದೆ ಬಹಳ ಕಾಲ ನಡೆಸಿದವರು ಮುಲಾಯಂ ಸಿಂಗ್, ಶಿವಪಾಲ್ ಯಾದವ್, ಮುಲಾಯಂ ರಕ್ತಸಂಬಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮಗೋಪಾಲ ಯಾದವ್, ನಗರಾಭಿವೃದ್ಧಿ ಸಚಿವ ಆಜಂ ಖಾನ್ ಮತ್ತಿತರರು.

ಮುಖ್ಯಮಂತ್ರಿಯ ಅರಿವಿಗೆ ಬಾರದೆ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಈ ಚತುಷ್ಟಯದ ಮುಂದೆ ಅಖಿಲೇಶ್ ಬಹುಕಾಲ ಅಸಹಾಯಕ. ರಾಜ್ಯವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸುವ ಸ್ವಾತಂತ್ರ್ಯ, ಉತ್ಸಾಹಿ ಯುವ ಮುಖ್ಯಮಂತ್ರಿಗೆ ಸಿಕ್ಕಿದ್ದು ತಡವಾಗಿ.

2012ರ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಟಿಕೆಟ್ ಕೋರಿ ಬಂದಿದ್ದ ಪಶ್ಚಿಮ ಉತ್ತರ ಪ್ರದೇಶದ ಹೆಸರಾಂತ ಪಾತಕಿ ಡಿ.ಪಿ.ಯಾದವ್‌ಗೆ ಬಾಗಿಲು ತೋರಿಸಿದ್ದ ಅಖಿಲೇಶ್ ಬಗೆಗೆ ಉತ್ತರ ಪ್ರದೇಶದ ಜನ ಭಾರೀ ಭರವಸೆ ಇರಿಸಿದ್ದರು. 2003-2007ರಲ್ಲಿ ಅಖಿಲೇಶ್ ತಂದೆ ಮುಲಾಯಂ ಸಿಂಗ್ ಯಾದವ್ ಸರ್ಕಾರದಲ್ಲಿ ನೆಲೆಸಿದ್ದ ಗೂಂಡಾರಾಜ್ಯ ಮರುಕಳಿಸಲಾರದು ಎಂದು ನಂಬಿದ್ದರು.

ಈ ನಂಬಿಕೆ ಆರಂಭದಲ್ಲಿ ಹುಸಿ ಹೋಯಿತು. ಹೊಸ ಗಾಳಿಯನ್ನು ಅರಸಿ ಉತ್ತರ ಪ್ರದೇಶ ಆರಿಸಿ ತಂದ ಯುವ ಮುಖ್ಯಮಂತ್ರಿ ಅದೇ ಹಳೆಯ ಹಳಸಲು ಆಡಳಿತವನ್ನು ಬಡಿಸಬೇಕಾಗಿ ಬಂದಿತ್ತು. ಮಾಯಾವತಿ ಅವರು ಮೆಟ್ಟಿದ್ದ ಮಾಫಿಯಾಗಳು, ಪಾತಕಿಗಳು, ಗೂಂಡಾಗಳ ರಾಜ್ಯ ಮತ್ತೆ ಮೆರೆದಿದ್ದವು.

ಕೋಮುದಂಗೆಗಳು ಕುದುರಿ ಕೆನೆದವು. ಭ್ರಷ್ಟಾಚಾರ ಬಿಡುಬೀಸು. ಲಂಚ ತಿನ್ನಿ... ಆದರೆ ಮಿತಿ ಮೀರಿ ತಿನ್ನದಿರಿ ಎಂದಿದ್ದರು ಲೋಕೋಪಯೋಗಿ ಮಂತ್ರಿ ಶಿವಪಾಲ್ ಯಾದವ್. ನಿಜವಾದ ಅಧಿಕಾರ ಅಖಿಲೇಶ್‌ ಕೈಯಲ್ಲಿ ಇರಲಿಲ್ಲ. ಮಂತ್ರಿಮಂಡಲ ರಚನೆಯಲ್ಲೇ ಅವರಿಗೆ ಸ್ವಾತಂತ್ರ್ಯ ಸಿಗಲಿಲ್ಲ.

ಕ್ರಿಮಿನಲ್ ಹೆಜ್ಜೆಗುರುತಿನ ಹನ್ನೆರಡು ಕುಳಗಳು ಮಂತ್ರಿಗಳಾದರು. ಸಮಾಜವಾದಿ ಪಾರ್ಟಿಯ ನಿಷ್ಠರ ಮೇಲಿನ ಕ್ರಿಮಿನಲ್ ಕೇಸುಗಳನ್ನು ವಾಪಸು ಪಡೆಯಲಾಯಿತು.ಜೈಲುವಾಸ ಅನುಭವಿಸಿದ್ದ ಪಕ್ಷದ ಶಾಸಕನೊಬ್ಬನಿಗೆ ಲಕ್ಷುರಿ ಕಾರು ನೀಡಲಿಲ್ಲವೆಂದು ಪೊಲೀಸ್ ಇನ್‌ಸ್ಪೆಕ್ಟರ್‌  ಒಬ್ಬರನ್ನು ವರ್ಗಾವಣೆಯ ಶಿಕ್ಷೆಗೆ ಗುರಿ ಮಾಡಲಾಯಿತು. ಸಮಾಜವಾದಿ ಪಾರ್ಟಿಯ ಕೈ ಹಿಡಿದಿದ್ದ ಈ ಕುಳಗಳನ್ನು ಈಗ ಹೇಗೆ ಕೈ ಬಿಡಲು ಬಂದೀತು ಎಂಬ ಮುಲಾಯಂ ಸಮರ್ಥನೆಯ ಗಿಳಿಪಾಠವನ್ನು ಅಖಿಲೇಶ್ ಒಪ್ಪಿಸಬೇಕಾಗಿತ್ತು.

ಉತ್ತರ ಪ್ರದೇಶದ ಮರಳು ಮಾಫಿಯಾವನ್ನು ಮಟ್ಟ ಹಾಕಿ ಕಾನೂನಿನ ಆಡಳಿತವನ್ನು ಎತ್ತಿ ಹಿಡಿದು ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿಗಳ ಆದಾಯ ತಂದು ಕೊಟ್ಟ ‘ಅಪರಾಧ’ಕ್ಕಾಗಿ 28ರ ಹರೆಯದ ಐಎಎಸ್ ಅಧಿಕಾರಿ ದುರ್ಗಾಶಕ್ತಿ ನಾಗಪಾಲ್ ಅವರನ್ನು ಅಖಿಲೇಶ್ ಸರ್ಕಾರ ಅಮಾನತು ಮಾಡಿತ್ತು. ಈ ಆದೇಶ ನೀಡಿದವರು ಅಪ್ಪ ಮುಲಾಯಂ ಸಿಂಗ್.

ಕಾಲಕ್ರಮೇಣ ಈ ಮಿತಿಗಳ ನಡುವೆಯೇ ಅರ್ಥಪೂರ್ಣ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತಂದ ಅಖಿಲೇಶ್ ಜನಪ್ರಿಯತೆ ಈಗಲೂ ಮುಕ್ಕಾಗಿಲ್ಲ. ಶುಕ್ರವಾರದ ವಿದ್ಯಮಾನಗಳು ಅವರ ಕುರಿತ ಸಾರ್ವಜನಿಕ ಸಹಾನುಭೂತಿಯನ್ನು ಇನ್ನಷ್ಟು ಹೆಚ್ಚಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT