ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು ಗಣಿ; ಕಲ್ಲುಮನಸ್ಸಿನ ಧಣಿ

Last Updated 31 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

–ಮೆಗಾನ್ ಮ್ಯಾಕ್‌ಗ್ರಾಥ್

ಬೃಹತ್‌ ಕಲ್ಲಿದ್ದಲು ಗಣಿಗಾರಿಕೆ ಕೈಗೆತ್ತಿಕೊಳ್ಳಲು ಭಾರತದ ಅದಾನಿ ಸಮೂಹಕ್ಕೆ ಆಸ್ಟ್ರೇಲಿಯಾ ಸರ್ಕಾರವು ಈಗಾಗಲೇ ಅನುಮತಿ ನೀಡಿಯಾಗಿದೆ. ಕ್ವೀನ್ಸ್‌ಲ್ಯಾಂಡ್‌ನಲ್ಲಿ 30 ಮೈಲು ಉದ್ದದ ಭಾರಿ ಪ್ರಮಾಣದ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯು 10 ಸಾವಿರದಷ್ಟು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿದೆ.  ಗಣಿಗಾರಿಕೆಯು ಉತ್ತುಂಗ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಗಣಿಗಾರಿಕೆ ಸಂಸ್ಥೆಗಳು ದುಡಿಯುವ ವರ್ಗದ ವಿಷಯದಲ್ಲಿ ಎಸಗಿದ್ದ ತಪ್ಪನ್ನೇ ಅದಾನಿ ಸಮೂಹ ಕೂಡ ಎಸಗುವ ಸಾಧ್ಯತೆ ಕಂಡು ಬರುತ್ತಿದೆ.

ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಅನನುಕೂಲ ಆಗುವಂತಹ ‘ಅಸ್ಥಿರ ಕಾರ್ಮಿಕ’ರನ್ನು ದುಡಿಸಿಕೊಳ್ಳುವ ಪದ್ಧತಿಯನ್ನು ಅದಾನಿ ಸಮೂಹವೂ ಅಳವಡಿಸಿಕೊಳ್ಳುವ ಸಾಧ್ಯತೆ ಇದೆ ಎಂದೇ ಬಹುವಾಗಿ ನಿರೀಕ್ಷಿಸಲಾಗಿದೆ.

2003ರಿಂದ 2015ರ ಅವಧಿಯಲ್ಲಿ ಆಸ್ಟ್ರೇಲಿಯಾದ ಕಲ್ಲಿದ್ದಲಿಗೆ ಭಾರಿ ಪ್ರಮಾಣದಲ್ಲಿ ಬೇಡಿಕೆ ಕಂಡು ಬಂದಿದ್ದ ಸಂದರ್ಭದಲ್ಲಿ ಅಸ್ಥಿರ ಕಾರ್ಮಿಕ ಪಡೆಯ ಮೂಲಕ ಗಣಿಗಾರಿಕೆ ನಡೆಸಲಾಗಿತ್ತು. ದೂರ ಪ್ರದೇಶದಲ್ಲಿದ್ದ ಗಣಿಗಾರಿಕೆಗಳಿಗೆ ಕಾರ್ಮಿಕರನ್ನು ಕರೆತಂದು ವಾರಗಟ್ಟಲೆ ಅವರಿಂದ ಕೆಲಸ ತೆಗೆದುಕೊಂಡು ಮರಳಿ ಮನೆಗೆ ಕರೆತಂದು ಬಿಡಲಾಗುತ್ತಿತ್ತು.

ಕೆಲ ದಿನಗಳ ನಂತರ ಮತ್ತೆ ಇದೇ ಪ್ರಕ್ರಿಯೆಯನ್ನು ಪುನರಾವರ್ತನೆ ಮಾಡಲಾಗುತ್ತಿತ್ತು. ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರು ಶಾಶ್ವತವಾಗಿ ನೆಲೆಸುವಂತೆ ಮಾಡಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಗಣಿಗಾರಿಕೆ ಸಂಸ್ಥೆಗಳು ಮುಂದಾಗಿರಲಿಲ್ಲ.

ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರು ಶಾಶ್ವತವಾಗಿ ಒಂದೆಡೆ ನೆಲೆಸಲು ಅವಕಾಶ ಮಾಡಿಕೊಡದೆ, ಕಾರ್ಮಿಕರನ್ನಷ್ಟೇ ಗಣಿಗಾರಿಕೆ ಪ್ರದೇಶಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸುವ ಪದ್ಧತಿ ಆಸ್ಟ್ರೇಲಿಯಾದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.

ಆದರೆ, ಇಂತಹ ‘ಅಸ್ಥಿರ ಕಾರ್ಮಿಕ’ರಿಗೆ ಗಣಿ ಸಂಸ್ಥೆಗಳು ದುಬಾರಿ ವೇತನವನ್ನೇ ಪಾವತಿಸುತ್ತಿದ್ದವು. 2012ರಲ್ಲಿ ಗಣಿಗಾರಿಕೆ ಉದ್ದಿಮೆಯ ಉತ್ಕರ್ಷದ ದಿನಗಳಲ್ಲಿ  2.76 ಲಕ್ಷದಷ್ಟು ಜನರು ಗಣಿಗಾರಿಕೆ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.  ಇವರಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಜನರು ‘ಅಸ್ಥಿರ ಕಾರ್ಮಿಕ’ರಾಗಿದ್ದರು.

ಈ ‘ಅಸ್ಥಿರ ಕಾರ್ಮಿಕರು’ ಗಣಿಗಾರಿಕೆ ಸ್ಥಳದಲ್ಲಿನ ಕಾರ್ಮಿಕರ ಕೊರತೆ ದೂರ ಮಾಡಲು ಗಮನಾರ್ಹವಾಗಿ ನೆರವಾಗುತ್ತಿದ್ದರು. ಶಾಶ್ವತವಾಗಿ ಒಂದೆಡೆ ನೆಲೆಸದ ಕಾರ್ಮಿಕರನ್ನು ಬಳಸಿಕೊಳ್ಳಲು ಗಣಿಗಾರಿಕೆ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿಗಳ ಮೂಲಕ ಉತ್ತೇಜನ ನೀಡಲಾಗುತ್ತಿತ್ತು. ಈ ಕಾರ್ಮಿಕರಿಗೆ ಮಾಡುತ್ತಿದ್ದ ಊಟೋಪಚಾರ, ಸಾರಿಗೆ, ವಿಮಾನ ಪ್ರಯಾಣದ ಟಿಕೆಟ್‌ ವೆಚ್ಚ ಮುಂತಾದವುಗಳನ್ನು ಉತ್ಪಾದನಾ ವೆಚ್ಚ ಎಂದೇ ಪರಿಗಣಿಸಲಾಗುತ್ತಿತ್ತು. ಇದರಿಂದ ಗಣಿಗಾರಿಕೆ ಸಂಸ್ಥೆಗಳು ಪಾವತಿಸಬೇಕಾಗಿದ್ದ ತೆರಿಗೆ ಮೊತ್ತದ ಹೊರೆಯೂ ಕಡಿಮೆ ಇರುತ್ತಿತ್ತು. ಇದು ಗಣಿಗಾರಿಕೆ ಸಂಸ್ಥೆಗಳಿಗೆ ತುಂಬ ಲಾಭದಾಯಕ ವ್ಯವಸ್ಥೆಯಾಗಿತ್ತು.

ಹೀಗೆ ಈ ಹಿಂದಿನ ಗಣಿಗಾರಿಕೆಯ ಉತ್ತುಂಗದ ದಿನಗಳಲ್ಲಿ ದುಡಿಯುತ್ತಿದ್ದ ಹಂಗಾಮಿ ಕಾರ್ಮಿಕರು ಕಡಿಮೆ ಕಲಿತ ಯುವಕರಾಗಿದ್ದರು. ಗಣಿಗಾರಿಕೆಗೆ ಹೊರತಾದ ಉದ್ದಿಮೆಗಳಲ್ಲಿನ ದುಡಿತಕ್ಕೆ ಅವರಿಗೆ ಕಡಿಮೆ ಸಂಬಳ ದೊರೆಯುತ್ತಿತ್ತು. ಹೀಗಾಗಿ ಈ ಅಸ್ಥಿರ ಉದ್ಯೋಗದ ಕೈತುಂಬ ಸಂಬಳವು ಅವರ ಪಾಲಿಗೆ ಆಕರ್ಷಕವಾಗಿ ಕಂಡಿತ್ತು. 

ಗಣಿಗಾರಿಕೆಯಲ್ಲಿ ಕಲ್ಲಿದ್ದಲನ್ನು ಭೂಮಿಯ ಆಳದಿಂದ ಹೊರ ತೆಗೆದು ಲಾರಿಗಳಿಗೆ ಭರ್ತಿ ಮಾಡುವುದಕ್ಕೆ ಅವರಿಗೆ ವರ್ಷಕ್ಕೆ ಒಂದು ಲಕ್ಷ ಡಾಲರ್‌ನಷ್ಟು ವೇತನ ದೊರೆಯುತ್ತಿತ್ತು. 2016ರಲ್ಲಿ ಪೂರ್ಣ ಪ್ರಮಾಣದ ಗಣಿಗಾರಿಕೆ ಕಾರ್ಮಿಕರ ವಾರದ  ಸರಾಸರಿ ಗಳಿಕೆಯು, ಆಸ್ಟ್ರೇಲಿಯಾದ ಇತರ ಉದ್ಯೋಗಿಗಳ ವಾರದ ಗಳಿಕೆಗಿಂತ ಒಂದು ಸಾವಿರ ಡಾಲರ್‌ ಹೆಚ್ಚಿಗೆ ಇತ್ತು.

ಈ ‘ಅಸ್ಥಿರ ಕಾರ್ಮಿಕರು’ ಹೆಚ್ಚಿನ ಸಂಬಳ ಪಡೆಯುತ್ತಿದ್ದರೂ, ಅದಕ್ಕಾಗಿ ಅವರು ದುಬಾರಿ ಬೆಲೆ ತೆರಬೇಕಾಗಿತ್ತು. ಹಲವಾರು ಗಣಿಗಳ ಮಾಲೀಕರು ಇಂತಹ ಕಾರ್ಮಿಕರ ದಿನನಿತ್ಯದ ಚಟುವಟಿಕೆಗಳ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದರು.  ಅವರ ಊಟ, ತಿಂಡಿ, ಸ್ನಾನ, ನಿದ್ದೆ – ಹೀಗೆ ಪ್ರತಿ ಚಟುವಟಿಕೆಯನ್ನೂ ಮಾಲೀಕರೇ ನಿಯಂತ್ರಿಸುತ್ತಿದ್ದರು. ಕಾರ್ಮಿಕರು ತಮ್ಮ ದುಡಿಮೆಯ ಅವಧಿಯುದ್ದಕ್ಕೂ ಮಾಲೀಕರ ಮರ್ಜಿಯಲ್ಲಿಯೇ ಇರಬೇಕಾಗುತ್ತಿತ್ತು.

ಸಾರಿಗೆ ಸೌಲಭ್ಯಗಳು ಇಲ್ಲದ ಕಾರಣಕ್ಕೆ ಕಾರ್ಮಿಕರು ಮನರಂಜನೆ, ಈಜು, ದೈಹಿಕ ಕಸರತ್ತು (ಜಿಮ್‌) ಮತ್ತಿತರ ಉದ್ದೇಶಗಳಿಗಾಗಿ ಹತ್ತಿರದ ಪಟ್ಟಣಗಳಿಗೆ ಹೋಗಲು ಸಾಧ್ಯವಿರಲಿಲ್ಲ. ಕಾರ್ಮಿಕರಿಗೆ ಒದಗಿಸಿದ್ದ ವಸತಿ ಸೌಲಭ್ಯದಲ್ಲಿ ಮಲಗಲು ಸಾಕಷ್ಟು ಸ್ಥಳಾವಕಾಶವೂ ಇದ್ದಿರಲಿಲ್ಲ. ಹಲವಾರು ಕಾರ್ಮಿಕರು ಹಾಸಿಗೆಯನ್ನೂ ಹಂಚಿಕೊಳ್ಳಬೇಕಾಗಿತ್ತು.

12 ಗಂಟೆಗಳ ಕೆಲಸದ ಅವಧಿ, ವಾರದ ಏಳೂ ದಿನ ಕೆಲಸದಂತೆ ಒಂದು ಬಾರಿಗೆ ಮೂರು ವಾರಗಳ ತನಕ ನಿರಂತರವಾಗಿ ಕೆಲಸ ಮಾಡಬೇಕಾಗುತ್ತಿತ್ತು. ಆನಂತರ ಒಂದು ವಾರದ ಮಟ್ಟಿಗೆ ಮನೆಗೆ ಮರಳಿ ವಿಶ್ರಾಂತಿ ಪಡೆಯಬೇಕಾಗುತ್ತಿತ್ತು. ವಿಶ್ರಾಂತಿ ಅವಧಿ ಕೊನೆಗೊಳ್ಳುತ್ತಿದ್ದಂತೆಯೇ ಕೆಲಸಕ್ಕೆ ಮರಳಬೇಕಾಗುತ್ತಿತ್ತು. ಇಂತಹ ‘ಅವಿರತ ದುಡಿಮೆ, ಅಲ್ಪಕಾಲೀನ ಬಿಡುವಿನ’ ಬದುಕಿಗೆ ಕಾರ್ಮಿಕರೂ ಹೊಂದಿಕೊಂಡಿದ್ದರು.

ವಿಶ್ರಾಂತಿ, ರಂಜನೆ ಇಲ್ಲದ, ಕುಟುಂಬದ ಸದಸ್ಯರಿಂದ ಬಹಳ ದಿನಗಳವರೆಗೆ ದೂರ ಇದ್ದು ದುಡಿದದ್ದರ ಫಲವಾಗಿ ಕಾರ್ಮಿಕರು ಖಿನ್ನತೆ ಮತ್ತು ತಳಮಳದಿಂದ ಬಳಲುತ್ತಿದ್ದರು. ಆತ್ಮಹತ್ಯೆ ತಡೆ ಸಂಸ್ಥೆಯಾದ ‘ಲೈಫ್‌ಲೈನ್‌’ 2013ರಲ್ಲಿ ನಡೆಸಿದ್ದ ಅಧ್ಯಯನದ ಪ್ರಕಾರ, ಇಂತಹ ‘ಅಸ್ಥಿರ ಕಾರ್ಮಿಕ’ರಲ್ಲಿ ಶೇ 30ರಷ್ಟು ಜನರಲ್ಲಿ ಮಾನಸಿಕ ಅಸ್ವಸ್ಥತೆ ಕಂಡು ಬಂದಿತ್ತು. ಖಿನ್ನತೆಯಿಂದ ಹೊರ ಬರಲು ಅನೇಕರು ಉತ್ತೇಜನ ಪೇಯ, ಮಾದಕ ವಸ್ತುಗಳ ವ್ಯಸನ ಮತ್ತು ಮದ್ಯದ  ದಾಸರಾಗಿ ಬದಲಾಗಿದ್ದರು.

ಒಂದು ವರ್ಷದವರೆಗೆ ಹೀಗೆ ಅಸ್ಥಿರ ಕೆಲಸದಲ್ಲಿ ತೊಡಗಿದ್ದ ಗಣಿ ಕಾರ್ಮಿಕ ಮ್ಯಾಟ್‌ ರೊಸ್ ಸದಾ ಕಾಲ ಮಂಕು ಕವಿದಂತೆ ಇರುತ್ತಿದ್ದರು. ತಲೆನೋವಿನಿಂದಲೂ ಬಳಲುತ್ತಿದ್ದರು. ‘ಸಾಕಷ್ಟು ಸಂಖ್ಯೆಯ ಜನರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ನಾವು ನಮ್ಮೆಲ್ಲ ಸಾಮಾಜಿಕ ಕೌಶಲಗಳನ್ನು ಕಳೆದುಕೊಂಡು ಯಂತ್ರ ಮಾನವರಂತೆ ಕೆಲಸ ಮಾಡುತ್ತಿದ್ದೆವು. ನಮ್ಮ ಶಿಬಿರವು ಪಂಚತಾರಾ ಜೈಲಿನಂತೆ ಇತ್ತು’ ಎಂದೂ ಅವರು ಅಭಿಪ್ರಾಯಪಟ್ಟಿದ್ದರು.

‘ಅಸ್ಥಿರ ಕಾರ್ಮಿಕರು’ ಎದುರಿಸುತ್ತಿದ್ದ ಸಂಕಷ್ಟದ ಶೋಷಿತ ಬದುಕಿನ ಬಗ್ಗೆ 2014ರಲ್ಲಿ ದೇಶದಾದ್ಯಂತ ತೀವ್ರ ಕಳವಳ ಕಂಡುಬಂದಿತ್ತು. ಈ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗದವರಿಗೆ ಬೆಂಬಲ ನೀಡುವಂತಹ ಅಂತರ್ಜಾಲ ತಾಣಗಳು ಅಸ್ತಿತ್ವಕ್ಕೆ ಬಂದವು. ಅವರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವ ವ್ಯವಸ್ಥೆ ಕಲ್ಪಿಸಲಾಯಿತು.ಈ ಕಾರ್ಮಿಕರ ದುಡಿಮೆಯ ಅವಧಿಯು ಮಾನವ ಸಂಬಂಧಗಳ ಮೇಲೂ ಕೆಟ್ಟ ಪರಿಣಾಮ ಬೀರುವ ರೀತಿಯಲ್ಲಿತ್ತು.

ಆಗ, ಒಂದು ವೇಳೆ ಇದೇ ಬಗೆಯ ದುಡಿಮೆಯ ಸಂಸ್ಕೃತಿಯನ್ನು ಮುಂದುವರೆಸುವ ಅನಿವಾರ್ಯ ಇದ್ದರೆ, ಉದ್ಯೋಗದಾತರು ಇಂತಹ ವ್ಯವಸ್ಥೆಯಲ್ಲಿನ ಸಮಸ್ಯೆಗಳ ಬಗ್ಗೆ ಕಾರ್ಮಿಕರಿಗೆ ಅಗತ್ಯ ಮಾಹಿತಿ ನೀಡಬೇಕಾಗುತ್ತದೆ ಎಂಬ ಬೇಡಿಕೆ ಕೇಳಿಬಂತು. ‘ಅಸ್ಥಿರ ಕಾರ್ಮಿಕ’ರನ್ನು ಬಳಸಿಕೊಳ್ಳುವ ಗಣಿಗಾರಿಕೆ ಸಂಸ್ಥೆಗಳಿಗೆ ಸರ್ಕಾರವು ತೆರಿಗೆ ಉತ್ತೇಜನ ನೀಡುವುದನ್ನು ನಿಲ್ಲಿಸಲು ಮುಂದಾಗಬೇಕು.

ಗಣಿಗಾರಿಕೆ ಶಿಬಿರಗಳಲ್ಲಿ ತಾತ್ಪೂರ್ತಿಕವಾಗಿ ವಾಸಿಸುವ ಕಾರ್ಮಿಕರ ಬದುಕಿನ ಸುಧಾರಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಇದರಿಂದ ಕಾರ್ಮಿಕರು ತಮ್ಮ, ತಮ್ಮ ಕುಟುಂಬಗಳ ಜತೆ ಉತ್ತಮ ಬಾಂಧವ್ಯ ಹೊಂದಲು ಸಾಧ್ಯವಾಗಲಿದೆ. ಶಿಬಿರಗಳಲ್ಲಿ ವಾಸಿಸುವ ಕಾರ್ಮಿಕರಿಗೆ ವಿಶಾಲವಾದ ಸ್ಥಳಾವಕಾಶ ಒದಗಿಸಿ, ಹಾಸಿಗೆ ಹಂಚಿಕೊಳ್ಳುವ ಪ್ರವೃತ್ತಿಗೆ ಕೊನೆ ಹಾಡುವುದರಿಂದ ಕಾರ್ಮಿಕರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಕಂಡು ಬರಲಿದೆ. ಕಾರ್ಮಿಕರು ಒಬ್ಬಂಟಿತನದಿಂದ ಹೊರ ಬರಲು ಹತ್ತಿರದ ಪಟ್ಟಣಗಳಿಗೆ ಹೋಗಿ ಬರಲು ಉತ್ತೇಜನವನ್ನೂ ನೀಡಬೇಕು ಎನ್ನುವ ಹಕ್ಕೊತ್ತಾಯಗಳು ಸಹ ಕೇಳಿ ಬರತೊಡಗಿದವು.

ಅದಾನಿ ಗಣಿಗಾರಿಕೆಯು 60 ವರ್ಷಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ ಎಂದು ಗಣಿ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಗಣಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸುಧಾರಿಸುವುದರಿಂದ ಉದ್ಯೋಗಿಗಳು ಹತ್ತಿರದ ನಗರ– ಪಟ್ಟಣಗಳಿಗೆ ಹೋಗಿ ಬರಲು ನೆರವಾಗುತ್ತದೆ. ‘ಅಸ್ಥಿರ ಕಾರ್ಮಿಕ’ರನ್ನು  ಕರೆ ತರುವ, ಮರಳಿಸುವುದಕ್ಕೆ ಮಾಡುವ ವೆಚ್ಚವನ್ನು, ಕಾರ್ಮಿಕರು ಸ್ಥಳೀಯವಾಗಿ ನೆಲೆಸಲು ಅವಕಾಶ ಮಾಡಿಕೊಡುವುದಕ್ಕೆ ಬಳಸಿಕೊಂಡರೆ ಎರಡು ತಲೆಮಾರಿನ ಕೆಲಸಗಾರರು ಸಮುದಾಯದಲ್ಲಿ ಜೀವಿಸುವುದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.

ಕಲ್ಲಿದ್ದಲು ಗಣಿಯು ತುಂಬ ದೂರದಲ್ಲಿ ಇರುವುದರಿಂದ ಹೊಸ ಗಣಿಗಾರಿಕೆ ಸ್ಥಳದಲ್ಲಿ ‘ಅಸ್ಥಿರ ಕಾರ್ಮಿಕ’ರನ್ನು ಬಳಸುವುದು ಅನಿವಾರ್ಯವಾಗಲಿದೆ ಎಂದು ಅದಾನಿ ಒಕ್ಕೂಟದ ಪ್ರತಿನಿಧಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇಂತಹ ಕಾರ್ಮಿಕರ ಸಂಖ್ಯೆ ಎಷ್ಟು ಇರಬಹುದು ಎನ್ನುವುದನ್ನು ಅದಾನಿ ಸಮೂಹವು 2017ರಲ್ಲಷ್ಟೇ ಪ್ರಕಟಿಸುವ ಸಾಧ್ಯತೆ ಇದೆ.

ಅಸ್ಥಿರ ಕಾರ್ಮಿಕರಿಗೆ ಉತ್ತಮ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಆಸ್ಟ್ರೇಲಿಯಾದ ದುಡಿಯುವ ವರ್ಗ ಹಕ್ಕೊತ್ತಾಯ ಸಲ್ಲಿಸಲು ಇನ್ನೂ ಸಾಕಷ್ಟು ಕಾಲಾವಕಾಶ ಇದ್ದೇ ಇದೆ. ಗಣಿಗಾರಿಕೆ ಸಂಸ್ಥೆಗಳಿಗೆ ಲಾಭಕ್ಕಿಂತ ಕಾರ್ಮಿಕರ ಹಿತಚಿಂತನೆಯೇ ಮುಖ್ಯವಾಗುವವರೆಗೆ, ಆಸ್ಟ್ರೇಲಿಯಾ ಜನರ ಪಾಲಿಗೆ ಕಲ್ಲಿದ್ದಲು ಗಣಿಗಾರಿಕೆಯು ಹೆಚ್ಚು ಪ್ರಯೋಜನಕ್ಕೆ ಬರಲಿದೆ.
ದಿ ನ್ಯೂಯಾರ್ಕ್‌ ಟೈಮ್ಸ್‌

(ಕಾರಣಾಂತರಗಳಿಂದ ಈ ವಾರ ಶೇಖರ್‌ ಗುಪ್ತ ಅವರ  ‘ರಾಷ್ಟ್ರಕಾರಣ’ ಅಂಕಣ ಪ್ರಕಟವಾಗಿಲ್ಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT