ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿ ಹೋದರು ಶಾಲಾ ಟೂರ್ನಿ ಸಾಧಕರು?

Last Updated 1 ಜನವರಿ 2017, 19:30 IST
ಅಕ್ಷರ ಗಾತ್ರ

ಸೈನ್ಯದಲ್ಲಿ ಅಧಿಕಾರಿಯಾಗಿದ್ದ ಅರ್ಥರ್‌ ಕಾಲಿನ್ಸ್‌, ಆಸ್ಟ್ರೇಲಿಯಾದ ಜೆ.ಸಿ. ಶಾರ್ಪ್‌, ಪಂಜಾಬ್‌ನ ಚಮನ್‌ಲಾಲ್‌, ಮಹಾರಾಷ್ಟ್ರದ ಸಾಂಗ್ಲಿಯ ಅರ್ಮಾನ್ ಜಾಫರ್‌, ಪಾಕಿಸ್ತಾನದ ಮಹಮ್ಮದ್‌ ಇಕ್ಬಾಲ್‌, ಬರೋಡ ವಿಶ್ವವಿದ್ಯಾಲಯದಲ್ಲಿ ಹೆಸರಾಂತ ಆಟಗಾರನಾಗಿದ್ದ ಆರ್‌.ವೈ ದೇಶಮುಖ್‌.
ಇವರ ಹೆಸರುಗಳನ್ನು ಒಮ್ಮೆಯಾದರೂ ನೀವು ಕೇಳಿದ್ದೀರಾ? ಹೌದು ಎನ್ನುವುದಾದರೆ ಹೀಗೆ ಉತ್ತರಿಸುವವರ ಸಂಖ್ಯೆ ಕಡಿಮೆ ಇರುತ್ತದೆ.

ಏಕೆಂದರೆ ಇವರೆಲ್ಲಾ ಕ್ರಿಕೆಟಿಗರು. ಆದರೆ ಸಚಿನ್ ತೆಂಡೂಲ್ಕರ್‌, ರಾಹುಲ್ ದ್ರಾವಿಡ್‌, ಮಹೇಂದ್ರ ಸಿಂಗ್ ದೋನಿ ಮತ್ತು ವಿರಾಟ್ ಕೊಹ್ಲಿಯವರಷ್ಟು ಖ್ಯಾತನಾಮರಲ್ಲ. ಇವರಂತೆ ಎತ್ತರದ ಸಾಧನೆ ಮಾಡಿದವರೂ ಅಲ್ಲ. ಕ್ಲಬ್‌ ಮತ್ತು ಶಾಲಾ ಮಟ್ಟದ ಟೂರ್ನಿಗಳಲ್ಲಿ ತಮಗೆ ಸಿಕ್ಕ ಅವಕಾಶಗಳಲ್ಲಿಯೇ ಮಿಂಚಿ ಮರೆಯಾದ ನಕ್ಷತ್ರಗಳು. ಕಾಲಿನ್ಸ್‌, ಶಾರ್ಪ್‌ ಸೇರಿದಂತೆ ಮೇಲೆ ಉಲ್ಲೇಖಿಸಿದ ಎಲ್ಲಾ ಆಟಗಾರರು ಶಾಲಾ ಮಟ್ಟದ ಮತ್ತು ಜೂನಿಯರ್‌ ಟೂರ್ನಿಗಳಲ್ಲಿ ಹೆಸರು ಮಾಡಿ ದಾಖಲೆಯ ಪುಟಗಳಲ್ಲಿ ಕಂಗೊಳಿಸಿದವರು. ಆದರೆ ಇವರೆಲ್ಲಾ ಹೆಚ್ಚು ಕ್ರಿಕೆಟ್‌ ಪ್ರೇಮಿಗಳಿಗೆ ಗೊತ್ತೇ ಇಲ್ಲ.

ಇವೆಲ್ಲಾ ಕೇವಲ ಉದಾಹರಣೆಗಳಷ್ಟೇ. ಹೀಗೆ ಅಪರೂಪವಾಗಿ ಮಿಂಚಿ ಮತ್ತೆಂದೂ ಕ್ರಿಕೆಟ್‌ ಅಂಗಳದಲ್ಲಿ ಹೇಳಿಕೊಳ್ಳುವಂಥ ಸಾಧನೆ ಮಾಡದ ಅನೇಕ ಆಟಗಾರರು  ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ. ಹೀಗೆ ಮಿಂಚಿನ ವೇಗದಲ್ಲಿ ಮರೆಯಾದವರಲ್ಲಿ ನಾಗಲ್ಯಾಂಡ್‌ನ ಹೊಕೈಟೊ ಜಿಯಿಮೊಮಿ ಕೂಡ ಒಬ್ಬರು. ಹೊಕೈಟೊ ದೇಶವನ್ನು ಪ್ರತಿನಿಧಿಸಿದವರಲ್ಲ. ಆದರೆ ನಾಗಾಲ್ಯಾಂಡ್‌ ಕ್ರಿಕೆಟ್‌ ಪ್ರೇಮಿಗಳ ಪಾಲಿಗೆ ಸಚಿನ್‌ ಇದ್ದಂತೆ. ಕ್ರಿಕೆಟ್ ಚಟುವಟಿಕೆಗಳಲ್ಲಿ ತೀರಾ ಹಿಂದುಳಿದ ನಾಗಾಲ್ಯಾಂಡ್‌ನಲ್ಲಿ ಹೊಕೈಟೊ ಸಾಧನೆ ವಿಶ್ವ ಶ್ರೇಷ್ಠವೆನಿಸಿದೆ. ಏಕೆಂದರೆ ಅವರು ಪ್ರಥಮ ದರ್ಜೆ ಕ್ರಿಕೆಟ್‌ ಆಡಿದ ನಾಗಲ್ಯಾಂಡ್‌ನ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆ ಹೊಂದಿದ್ದಾರೆ.

ನಾಗಲ್ಯಾಂಡ್‌ನ ದಿಮಾಪುರ ಜಿಲ್ಲೆಯ ಹೊಕೈಟೊ ಕ್ರಿಕೆಟ್‌ನಲ್ಲಿ ಎತ್ತರದ ಸಾಧನೆ ಮಾಡುವ ಬೆಟ್ಟದಷ್ಟು ಕನಸು ಹೊತ್ತು ಕೋಲ್ಕತ್ತದಲ್ಲಿ ಜೂನಿಯರ್‌ ಮತ್ತು ಕ್ಲಬ್‌ ಮಟ್ಟದ ಟೂರ್ನಿಗಳಲ್ಲಿ ಆಡಿದ್ದರು. 2009ರ ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್ ತಂಡದಲ್ಲಿ ಸ್ಥಾನ ಲಭಿಸಿತು. ಆದರೆ ಒಂದೂ ಪಂದ್ಯದಲ್ಲಿ ಅವಕಾಶ ಸಿಗಲಿಲ್ಲ. ನಾಲ್ಕು ವರ್ಷಗಳ ಹಿಂದೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಸ್ಸಾಂ ತಂಡವನ್ನು ಪ್ರತಿನಿಧಿಸಿದ್ದರು.

ರೈಡರ್ಸ್ ತಂಡದಲ್ಲಿದ್ದಾಗ ಹೊಕೈಟೊ ಅವರು ಕ್ರಿಸ್‌ ಗೇಲ್, ಡೇವಿಡ್‌ ಹಸ್ಸಿ, ಬ್ರೆಂಡನ್‌ ಮೆಕ್ಲಮ್‌, ಅಜಿತ್‌ ಅಗರಕರ್‌, ಸೌರವ್‌ ಗಂಗೂಲಿ, ಇಶಾಂತ್‌ ಶರ್ಮಾ ಅವರಂಥ ಹೆಸರಾಂತ ಕ್ರಿಕೆಟಿಗರ ಜೊತೆ ಡ್ರೆಸ್ಸಿಂಗ್ ಕೊಠಡಿ ಹಂಚಿಕೊಂಡಿದ್ದರು. ಇದರಿಂದ ಹೊಕೈಟೊ ರಾಷ್ಟ್ರೀಯ ತಂಡದಲ್ಲಿ ಆಡುವ ಕನಸು ಕಂಡಿದ್ದರು. ಆದರೆ ಅವರು 2012ರ ಬಳಿಕ ಮತ್ತೆ ಯಾವತ್ತೂ ಸ್ಪರ್ಧಾತ್ಮಕ ಕ್ರಿಕೆಟ್‌ ಕಣದಲ್ಲಿ ಕಾಣಿಸಿಕೊಳ್ಳಲೇ ಇಲ್ಲ.

ಅದೇ ರೀತಿಯ ಕಥೆ ಕಾಲಿನ್ಸ್‌ ಅವರದ್ದು.  ಕೋಲ್ಕತ್ತದಲ್ಲಿ  ಸೈನ್ಯದಲ್ಲಿ  ಅಧಿಕಾರಿ ಯಾಗಿ ಕೆಲಸ ಮಾಡುತ್ತಿದ್ದ ಕಾಲಿನ್ಸ್‌ ಕ್ರಿಕೆಟ್‌ನಲ್ಲಿ ಅಪರಿಮಿತ ಆಸಕ್ತಿ ಹೊಂದಿದ್ದವರು. ಆದ್ದರಿಂದ ಶಾಲಾ ಮಟ್ಟದಿಂದಲೇ ಕ್ರಿಕೆಟ್‌ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ಆಗೆಲ್ಲಾ ಗಮನಾರ್ಹ ಪ್ರದರ್ಶನ ನೀಡಿದ್ದು ಕಡಿಮೆ. ಆದರೆ 1899ರಲ್ಲಿ ಇಂಗ್ಲೆಂಡ್‌ನ ಕ್ಲಿಫ್ಟನ್‌ ಕಾಲೇಜು ಮೈದಾನದಲ್ಲಿ ನಡೆದ ಶಾಲಾ ಟೂರ್ನಿಯಲ್ಲಿ ಕಾಲಿನ್ಸ್‌ ಕ್ಲಾರ್ಕ್‌ ಹೌಸ್ ತಂಡವನ್ನು ಪ್ರತಿನಿಧಿಸಿದ್ದರು. ನಾರ್ಥ್‌ ಟೌನ್‌ ವಿರುದ್ಧದ ಪಂದ್ಯದಲ್ಲಿ ಆರು ಗಂಟೆ 50 ನಿಮಿಷ ಕ್ರೀಸ್‌ನಲ್ಲಿದ್ದು 628 ರನ್‌ ಹೊಡೆದಿದ್ದರು. ಆಗ ಅವರಿಗೆ 13 ವರ್ಷ ವಯಸ್ಸು!

ಇದು ಇವತ್ತಿಗೂ ಶಾಲಾ ಟೂರ್ನಿಗಳಲ್ಲಿ ವೈಯಕ್ತಿಕ ಹೆಚ್ಚು ರನ್‌ ಗಳಿಸಿದ ಎರಡನೇ ಗರಿಷ್ಠ ಮೊತ್ತವೆನ್ನುವ ದಾಖಲೆಯಾಗಿ ಉಳಿದಿದೆ. ಕಾಲಿನ್ಸ್‌ ಸಾಧನೆ ಹೋದ ವರ್ಷದ ತನಕವೂ ಗರಿಷ್ಠ ಮೊತ್ತದ ದಾಖಲೆಯಾಗಿತ್ತು. ಆದರೆ 2016ರ ಜನವರಿ ಐದರಂದು ಮುಂಬೈನ ಯೂನಿಯನ್‌ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಭಂಡಾರಿ ಕಪ್‌ ಟೂರ್ನಿಯಲ್ಲಿ 117 ವರ್ಷಗಳ ಕಾಲಿನ್ಸ್‌ ದಾಖಲೆ ಪತನವಾಯಿತು. ಆರ್ಯ ಗುರುಕುಲ ಎದುರಿನ ಪಂದ್ಯದಲ್ಲಿ ಕೆ.ಸಿ. ಗಾಂಧಿ ಶಾಲೆಯನ್ನು ಪ್ರತಿನಿಧಿಸಿದ್ದ ಪ್ರಣವ್‌ ಧನವಾಡೆ 327 ಎಸೆತಗಳಲ್ಲಿ 1009ರನ್‌ ಕಲೆ ಹಾಕಿ ಕಾಲಿನ್ಸ್‌ ದಾಖಲೆಯನ್ನು ಅಳಿಸಿ ಹಾಕಿದ್ದರು.

ಅದೇ ರೀತಿ ಮುಂಬೈನ ಪೃಥ್ವಿ ಪಂಕಜ್‌ ಶಾ ಶಾಲಾ ಟೂರ್ನಿಯಲ್ಲಿ ಮಾಡಿದ ಸಾಧನೆ ಗಮನ ಸೆಳೆದಿತ್ತು. ಬಲಗೈ ಬ್ಯಾಟ್ಸ್‌ಮನ್‌ ಪೃಥ್ವಿ ರಿಜ್ವಿ ಸ್ಪ್ರಿಂಗ್‌ಫೀಲ್ಡ್‌ 16 ವರ್ಷದ ಒಳಗಿನವರ ಹೈಸ್ಕೂಲು ತಂಡಕ್ಕೆ ನಾಯಕರಾಗಿದ್ದರು. ಮೂರು ವರ್ಷಗಳ ಹಿಂದೆ ಪೃಥ್ವಿ ಹ್ಯಾರಿಸ್‌ ಶೀಲ್ಡ್‌ ಎಲೀಟ್‌ ಡಿವಿಷನ್‌ ಪಂದ್ಯದಲ್ಲಿ 546 ರನ್‌ ಹೊಡೆದು ಮಿಂಚಿದ್ದರು.

ಹೋದ ವಾರ ಜೈಪುರದಲ್ಲಿ ನಡೆದಿದ್ದ ರಣಜಿ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಗುಜರಾತ್‌ ತಂಡದ ಸಮಿತ್‌ ಗೊಹೆಲ್‌ ಒಡಿಶಾ ವಿರುದ್ಧದ ಪಂದ್ಯದಲ್ಲಿ ತ್ರಿಶತಕ (ಅಜೇಯ 359) ಗಳಿಸಿ 117 ವರ್ಷದ ದಾಖಲೆ ಪತನಮಾಡಿದ್ದರು. ಗುಜರಾತ್‌ ತಂಡದ ಪ್ರಿಯಾಂಕ್‌ ಪಾಂಚಾಲ್‌ ಪಂಜಾಬ್‌ ಎದುರಿನ ರಣಜಿ ಪಂದ್ಯದಲ್ಲಿ ಬೆಳಗಾವಿಯಲ್ಲಿ 314 ರನ್ ಗಳಿಸಿದ್ದರು. ಇವರೆಲ್ಲಾ ಶಾಲಾ ಟೂರ್ನಿಗಳಲ್ಲಿ ಮಿಂಚಿದ ಪ್ರತಿಭೆಗಳೇ.

ಹೀಗೆ ಶಾಲಾ ಮತ್ತು ಕ್ಲಬ್‌ ಮಟ್ಟದ ಟೂರ್ನಿಗಳಲ್ಲಿ ಅಪರೂಪವಾಗಿ ರನ್‌ ಹೊಳೆ ಹರಿಸಿದ ಆಟಗಾರರು ಮುಂದೊಂದು ದಿನ ಕ್ರಿಕೆಟ್ ಬದುಕಿನಿಂದಲೇ ದೂರ ಉಳಿದು ಬಿಡುತ್ತಾರೆ. ರಾಷ್ಟ್ರೀಯ ತಂಡದ ಎತ್ತರಕ್ಕೆ ಏರಲಾಗದೇ ದೇಶಿ ಟೂರ್ನಿಗಳಲ್ಲಿ ಕ್ರಿಕೆಟ್‌ ಬದುಕು ಮುಗಿಸುತ್ತಾರೆ.

19 ವರ್ಷದ ಒಳಗಿನವರ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದ ತರುವಾರ್ ಕೊಹ್ಲಿ, ಶ್ರೀವತ್ಸ ಗೋಸ್ವಾಮಿ, ಸಿದ್ದಾರ್ಥ್‌ ಕೌಲ್‌, ಸೌರಭ್‌ ಬಂಡೇಕರ್‌, ಗೌರವ್‌ ಧಿಮಾನಿ, ಯೊ ಮಹೇಶ್‌, ಉತ್ತರ ಪ್ರದೇಶದ ರವಿಕಾಂತ್ ಶುಕ್ಲಾ, ದೆಹಲಿಯ ಮಯಂಕ್‌ ತೆಹ್ಲಾನ್‌ ಇವರೆಲ್ಲಾ ಎಲ್ಲಿ ಮರೆಯಾಗಿ ಹೋದರು?

ಅವಕಾಶದ ಕೊರತೆ
ಶಾಲಾ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಒಬ್ಬ ಕ್ರಿಕೆಟಿಗ ವರ್ಷಗಳು ಉರುಳಿದಂತೆ ವೈಫಲ್ಯ ಕಾಣುತ್ತಾ ಸಾಗಬಹುದು. ಕೆಲ ಬಾರಿ ಅವಕಾಶಗಳ ಕೊರತೆಯಿಂದಲೂ ದೇಶಿ ಟೂರ್ನಿಗಳಿಗಷ್ಟೇ ಸೀಮಿತವಾಗಿ ಬಿಡಬಹುದು. ಇದಕ್ಕೆ ಪಾರ್ಥಿವ್‌ ಪಟೇಲ್‌ ಅವರಿಗಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ.

ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಪಾರ್ಥಿವ್‌ ಮೊದಲ ಅಂತರರಾಷ್ಟ್ರೀಯ ಟೆಸ್ಟ್‌ ಆಡಿದಾಗ ಅವರಿಗೆ 17 ವರ್ಷವಷ್ಟೇ. ತಮ್ಮ 18ನೇ ವಯಸ್ಸಿನಲ್ಲಿ ಏಕದಿನ ಮಾದರಿಗೂ ಪದಾರ್ಪಣೆ ಮಾಡಿದ್ದರು.

ಪಾರ್ಥಿವ್‌ ರಾಷ್ಟ್ರೀಯ ತಂಡದಲ್ಲಿ ಆಡಿದ್ದಾಗ ವಿರಾಟ್ ಕೊಹ್ಲಿ ದೇಶಿ ಟೂರ್ನಿಯಲ್ಲಿಯೇ ಸ್ಥಾನ ಪಡೆದಿರಲಿಲ್ಲ. ಮಹೇಂದ್ರ ಸಿಂಗ್ ದೋನಿ ದೇಶಿ ಕ್ರಿಕೆಟ್‌ನಲ್ಲಿ ಸ್ಥಾನಕ್ಕಾಗಿ ಪರದಾಡುತ್ತಿದ್ದರು. ಇವರ ಬಗ್ಗೆ ಆಗ ಹೆಚ್ಚು ಜನಕ್ಕೆ ಗೊತ್ತಿರಲಿಲ್ಲ. ಕೊಹ್ಲಿ 2008ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾಗ ಪಾರ್ಥಿವ್‌ ಆಗಲೇ 23 ಟೆಸ್ಟ್‌, 38 ಏಕದಿನ ಪಂದ್ಯಗಳನ್ನು ಆಡಿದ್ದರು. ದೋನಿ ಮೊದಲ ಬಾರಿಗೆ ಭಾರತ ಸೀನಿಯರ್ ತಂಡದ ಪೋಷಾಕು ಧರಿಸಿದ್ದಾಗ ಪಾರ್ಥಿವ್‌ ರಾಷ್ಟ್ರೀಯ ತಂಡಕ್ಕೆ ಬಂದು ಎರಡು ವರ್ಷಗಳೇ ಉರುಳಿದ್ದವು!

ಆದರೆ 2008ರಲ್ಲಿ ತಂಡದಿಂದ ಹೊರಬಿದ್ದ ಬಳಿಕ ಪಾರ್ಥಿವ್‌ಗೆ ಅವಕಾಶಗಳೇ ಲಭಿಸಲಿಲ್ಲ. ಏಕೆಂದರೆ ತಂಡದಲ್ಲಿ ಒಬ್ಬರಿಗೆ ಮಾತ್ರ ವಿಕೆಟ್ ಕೀಪಿಂಗ್‌ ನಿಭಾಯಿಸಲು ಜವಾಬ್ದಾರಿ ಸಿಗುತ್ತದೆ. ಆದ್ದರಿಂದ ದೋನಿ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ತನಕ ಪಾರ್ಥಿವ್‌ ಪ್ರತಿಭೆಯಿದ್ದರೂ ತಂಡದಿಂದ ಹೊರಗುಳಿಯಬೇಕಾಯಿತು. ಮತ್ತೆ ಎಂಟು ವರ್ಷಗಳ ಬಳಿಕ ಅವರು ಭಾರತ ತಂಡದಲ್ಲಿ ಅವಕಾಶ ಪಡೆದರು. ಇಂಗ್ಲೆಂಡ್‌ ಎದುರು ಮೊಹಾಲಿಯಲ್ಲಿ 2016ರ ನವೆಂಬರ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಆಡಿದ್ದರು.

ಅದೇ ರೀತಿ 20 ವರ್ಷಗಳಿಂದ ದೇಶಿ ಟೂರ್ನಿಗಳಲ್ಲಿ ಆಡುತ್ತಿರುವ ವಾಸಿಮ್‌ ಜಾಫರ್ ಇದುವರೆಗೂ ಎರಡೇ ಸಲ ಭಾರತ ಎಕದಿನ ತಂಡ
ದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗೆ ಪ್ರತಿಭೆಯಿದ್ದರೂ ಅವಕಾಶದ ಕೊರತೆಯಿಂದ ರಾಷ್ಟ್ರೀಯ ತಂಡದ ಸ್ಥಾನವೆಂಬುದು ಹಲವು ಕ್ರಿಕೆಟಿಗರಿಗೆ ದೂರದ ಬೆಟ್ಟವಾಗಿಯೇ ಕಾಣಿಸುತ್ತಿದೆ. 

ಮರೆಯಾದ ಉನ್ಮುಕ್ತ್‌ ವರ್ಚಸ್ಸು
2012ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ 19 ವರ್ಷದ ಒಳಗಿನವರ ವಿಶ್ವಕಪ್‌ನಲ್ಲಿ ಭಾರತ ತಂಡ ಚಾಂಪಿಯನ್‌ ಆಗಿತ್ತು. ಆಗ ತಂಡವನ್ನು ಮುನ್ನಡೆಸಿದ್ದ ದೆಹಲಿಯ ಉನ್ಮುಕ್ತ್‌ ಚಾಂದ್‌ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಫೈನಲ್‌ನಲ್ಲಿ ಅವರು ಶತಕ ಹೊಡೆದಿದ್ದರು. ವಿಶ್ವಕಪ್‌ ಬಳಿಕ ಉನ್ಮುಕ್ತ್‌ ಅವರ ಮಾರುಕಟ್ಟೆ  ಮೌಲ್ಯ ಹೆಚ್ಚಾಯಿತು. ಕಂಪೆನಿಗಳು ಜಾಹೀರಾತಿಗಾಗಿ ಲಕ್ಷಾಂತರ ರೂಪಾಯಿ ಹಣ ಸುರಿದವು.

ಇದರಿಂದ ಉನ್ಮುಕ್ತ್‌ ‘ಬೆಲೆ’ಯೂ ಇಮ್ಮಡಿಗೊಂಡಿತು. ಆದ್ದರಿಂದ ದೆಹಲಿಯವರೇ ಆದ ವಿರಾಟ್‌್ ಕೊಹ್ಲಿ ಸಾಮರ್ಥ್ಯಕ್ಕೆ ಸಮನಾಗಿ ಉನ್ಮುಕ್ತ್‌ ಬೆಳೆಯುತ್ತಾರೆ ಎನ್ನುವ ಮಾತುಗಳೂ ಕೇಳಿ ಬಂದಿದ್ದವು. ಆದರೆ ಉನ್ಮುಕ್ತ್‌ ರಾಷ್ಟ್ರೀಯ ತಂಡದಲ್ಲಿ ಅವಕಾಶಕ್ಕಾಗಿ ಪರದಾಡುತ್ತಿದ್ದಾರೆ. ದೇಶಿ ಟೂರ್ನಿಗಳಲ್ಲಿಯೂ ಅವರ ಪ್ರದರ್ಶನ ಅಷ್ಟಕಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT