ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮವಿಶ್ವಾಸವನ್ನು ಹೆಚ್ಚಿಸುವ ‘ಪಾಸಿಂಗ್ ಪ್ಯಾಕೇಜ್’

ಅಕ್ಷರ ಗಾತ್ರ

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ. 30ರಿಂದ ಏ. 12ರವರೆಗೆ ನಿಗದಿಯಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ತಲೆದೋರುವ ಪರೀಕ್ಷಾ ಭಯವನ್ನು ನಿವಾರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವುಗಳ ಪೈಕಿ ‘ಪಾಸಿಂಗ್ ಪ್ಯಾಕೇಜ್’ (Passing Package) ಕೂಡ ಒಂದು. ಹೆಸರೇ ಸೂಚಿಸುವಂತೆ ನಿಧಾನಕಲಿಕಾ ಸಾಮರ್ಥ್ಯದ ಮಕ್ಕಳಿಗೆ ಪರೀಕ್ಷೆಯಲ್ಲಿ ಕನಿಷ್ಠ ಪಾಸಾಗುವ ಮಟ್ಟಿಗೆ ಪೂರ್ವಸಿದ್ಧತೆ ಒದಗಿಸುವ ಪ್ರಯತ್ನವೇ ‘ಪಾಸಿಂಗ್ ಪ್ಯಾಕೇಜ್’.

ತಜ್ಞರ ಅಭಿಪ್ರಾಯದಂತೆ ಒಂದು ತರಗತಿಯಲ್ಲಿ ನಿಧಾನ ಕಲಿಕೆ, ಸರಾಸರಿ ಕಲಿಕೆ, ವೇಗದ ಕಲಿಕೆ ಸಾಮರ್ಥ್ಯ ಹೊಂದಿದ ಮಕ್ಕಳು ಇದ್ದೇ ಇರುತ್ತಾರೆ. ಸಾಮಾನ್ಯವಾಗಿ ಸರಾಸರಿ ಕಲಿಕೆ ಸಾಮರ್ಥ್ಯದ ಮಕ್ಕಳ ಸಂಖ್ಯೆ ಹೆಚ್ಚಿದ್ದು, ನಿಧಾನ ಕಲಿಕೆ ಹಾಗೂ ವೇಗದ ಕಲಿಕೆ ಸಾಮರ್ಥ್ಯದ ಮಕ್ಕಳ ಸಂಖ್ಯೆ ಕಡಿಮೆ ಪ್ರಮಾಣದಲ್ಲಿರುತ್ತದೆ.

ಪರೀಕ್ಷಾಸಿದ್ಧತೆ, ಪರೀಕ್ಷೆ ಎದುರಿಸುವಿಕೆ ಹಾಗೂ ಉತ್ತಮ ಫಲಿತಾಂಶ ಪಡೆಯುವುದಕ್ಕೆ ಸರಾಸರಿ, ವೇಗದ ಕಲಿಕಾ ಸಾಮರ್ಥ್ಯ ಹೊಂದಿದ ಮಕ್ಕಳಿಗೆ ಯಾವುದೇ ತೊಂದರೆ ಆಗಲಾರದು. ಆದರೆ, ನಿಧಾನ ಕಲಿಕಾ ಸಾಮರ್ಥ್ಯದ ಮಕ್ಕಳಿಗೆ ಈ ದಿಕ್ಕಿನಲ್ಲಿ ಶಿಕ್ಷಕರು, ಪೋಷಕರು ಹಾಗೂ ಸಹಪಾಠಿಗಳ ಬೆಂಬಲ, ಸಹಕಾರ ಅಗತ್ಯವಾಗಿರುತ್ತದೆ.

ಮಾನಸಿಕ ಸ್ಥೈರ್ಯ
ನಿಧಾನ ಕಲಿಕಾ ಸಾಮರ್ಥ್ಯದ ಮಕ್ಕಳಿಗೆ ಪರೀಕ್ಷೆಯು ಬಿಡಿಸಲಾಗದ ಕಗ್ಗಂಟಾಗಿರುತ್ತದೆ. ‘ಪಠ್ಯಕ್ರಮ, ಪಠ್ಯಪುಸ್ತಕ, ಪರೀಕ್ಷೆ ನಮ್ಮ ಸಾಮರ್ಥ್ಯ ಮೀರಿದವು’ ಎಂದು ಅವರು ಭಾವಿಸಿರುತ್ತಾರೆ. ‘ಪರೀಕ್ಷೆಯಲ್ಲಿ ಪಾಸಾಗುವುದು ಸವಾಲಿನ ಕೆಲಸ, ಅದು ನನ್ನಿಂದ ಸಾಧ್ಯವಿಲ್ಲ. ಇಷ್ಟು ದೊಡ್ಡ ಪಠ್ಯಪುಸ್ತಕವನ್ನು ಓದಿ ಮುಗಿಸುವುದಾದರೂ ಹೇಗೆ? ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಾದರೂ ಹೇಗೆ ?’ ಎಂದು ಅವರು ಭಾವಿಸಿಕೊಳ್ಳುತ್ತಾರೆ. ಕೆಲವೊಮ್ಮೆ ‘ನೀನು ಹೆಡ್ಡ, ನೀನು ದಡ್ಡ, ನಿನ್ನ ತಲೆಗೆ ವಿದ್ಯೆ ಹತ್ತುವುದಿಲ್ಲ...’ ಎಂದು  ಪೋಷಕರು ಅಥವಾ ಶಿಕ್ಷಕರು ಸದಾ ನಿಂದಿಸುವುದೂ ಇದಕ್ಕೆ ಕಾರಣವಾಗಿರುತ್ತದೆ.

ಈ ದಿಕ್ಕಿನಲ್ಲಿ ‘ಪಾಸಿಂಗ್ ಪ್ಯಾಕೇಜ್‌’ ಮಕ್ಕಳಿಗೆ ಅಗತ್ಯವಿರುವ ಮಾನಸಿಕ ಬೆಂಬಲವನ್ನು ಒದಗಿಸುತ್ತದೆ. ಪರೀಕ್ಷಾ ದೃಷ್ಟಿಯಿಂದ ಅತಿ ಮಹತ್ವದ ಪ್ರಶ್ನೆಗಳನ್ನು ಆಧರಿಸಿ ವಿಷಯವಾರು ಚಿಕ್ಕ ಕೈಪಿಡಿಗಳನ್ನು ತಯಾರಿಸಿ ಮಕ್ಕಳಿಗೆ ಒದಗಿಸಲಾಗುತ್ತದೆ. ಈ ಕೈಪಿಡಿಗಳನ್ನು ನುರಿತ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು ಸಿದ್ಧಪಡಿಸಿರುತ್ತಾರೆ. ಹಲವು ವರ್ಷಗಳ ಪ್ರಶ್ನೆಪತ್ರಿಕೆಗಳ ಪರಾಮರ್ಶೆ, ಪೂರ್ವಭಾವಿ ‘ನೀಲನಕ್ಷೆ’ ಆಧರಿಸಿ ಈ ಕೈಪಿಡಿಗಳನ್ನು ರಚಿಸಲಾಗಿರುತ್ತದೆ. ಪಠ್ಯಪುಸ್ತಕಕ್ಕೆ ಹೋಲಿಸಿದರೆ, ಈ ಕೈಪಿಡಿಯ ಗಾತ್ರ ತುಂಬ ಚಿಕ್ಕದಾಗಿರುತ್ತದೆ. ಇದರಿಂದ ನಿಧಾನ ಕಲಿಕಾ ಸಾಮರ್ಥ್ಯದ ಮಕ್ಕಳಲ್ಲಿ ‘ಇಷ್ಟು ಓದಿದರೆ ನಾನು ಪಾಸಾಗಬಹುದು’ ಎಂಬ ಧೈರ್ಯ ಮೂಡುತ್ತದೆ.

ಅಂಕ ಗಳಿಸುವ ಸರಳ ಸೂತ್ರ
ಪ್ರಸ್ತುತ ಪರೀಕ್ಷಾ ಕ್ರಮದಲ್ಲಿ ಶೇ. 80ರಷ್ಟು ಅಂಕಗಳು ಬಾಹ್ಯಪರೀಕ್ಷೆಗೆ ನಿಗದಿಯಾಗಿದ್ದು ಶೇ. 20ರಷ್ಟು ಆಂತರಿಕ ಮೌಲ್ಯಮಾಪನಕ್ಕೆ ನಿಗದಿಯಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಪಾಸಾಗಲು 80 ಅಂಕಗಳಿಗೆ ಕನಿಷ್ಠ 28 ಅಂಕಗಳನ್ನು ಗಳಿಸುವುದು ಅನಿವಾರ್ಯ. 

ಮಕ್ಕಳಿಗೆ ವಿಷಯವಾರು ಕನಿಷ್ಠ 40ರಿಂದ 50 ಅಂಕಗಳನ್ನು ಗಳಿಸುವ ಸುಲಭದ ದಾರಿಯನ್ನು ಮನನ ಮಾಡಿಕೊಡಲಾಗುತ್ತದೆ. ಆಯಾ ವಿಷಯದಲ್ಲಿ ಕೆಲವು ಮಾದರಿಯ ಪ್ರಶ್ನೆಗಳು ಬಂದೇ ಬರುತ್ತವೆ ಎಂಬುದನ್ನು ಮಕ್ಕಳಿಗೆ ತಿಳಿಸಿ, ಅದಕ್ಕೆ ಅಗತ್ಯ ಸಿದ್ಧತೆ ಒದಗಿಸಲಾಗುತ್ತದೆ.

ಉದಾಹರಣೆಗೆ: ಭಾಷಾ ವಿಷಯಗಳಲ್ಲಿ ಪತ್ರಬರವಣಿಗೆ, ಸಂದರ್ಭಸಹಿತ ಸ್ಪಷ್ಟೀಕರಣ, ವ್ಯಾಕರಣಾಂಶ, ಪದ್ಯವನ್ನು ಪೂರ್ಣಗೊಳಿಸುವಿಕೆ, ಪ್ರಬಂಧ. ಅದೇ ರೀತಿ ವಿಜ್ಞಾನದಲ್ಲಿ ಚಿತ್ರಬರಹ, ಪ್ರಯೋಗವಿಶ್ಲೇಷಣೆ; ಗಣಿತದಲ್ಲಿ ಪ್ರಮೇಯ, ಬೀಜಗಣಿತದ ಸೂತ್ರ, ತ್ರಿಭುಜ–ವೃತ್ತ, ಪರಿಧಿಯ ರಚನೆ; ಸಮಾಜವಿಜ್ಞಾನದಲ್ಲಿ ನಕ್ಷೆಯನ್ನು ರಚಿಸಿ ಸ್ಥಳಗಳನ್ನು ಗುರುತಿಸುವ ಮಾದರಿಯ ಪ್ರಶ್ನೆಗಳು ಕಡ್ಡಾಯವಾಗಿ ಬರುತ್ತವೆ. ಈ ಮಾದರಿಯ ಪ್ರಶ್ನೆಗಳಿಗೆ ಸಿದ್ಧ ಉತ್ತರಗಳನ್ನು ಕೈಪಿಡಿ ಒಳಗೊಂಡಿರುತ್ತದೆ. ಆಯಾ ವಿಷಯದ ಕೈಪಿಡಿಯಲ್ಲಿ 80 ಅಂಕಗಳ ಪೈಕಿ ಕನಿಷ್ಠ 40 ಅಂಕಗಳ ಪ್ರಶ್ನೆಗಳು ಬಂದೇ ಬರುತ್ತವೆ.

*
ನಿಧಾನ ಕಲಿಕೆಯ ಮಕ್ಕಳಿಗೆ ವರದಾನ
ಶಿಕ್ಷಕರು ನೈದಾನಿಕ ಪರೀಕ್ಷೆಗಳ ಮೂಲಕ ನಿಧಾನ ಕಲಿಕಾ ಸಾಮರ್ಥ್ಯದ ಮಕ್ಕಳನ್ನು ಮೊದಲೇ ಗುರುತಿಸಿರುತ್ತಾರೆ. ಅವರ ದೌರ್ಬಲ್ಯ, ಸಮಸ್ಯೆಗೆ ಅತಿ ಸುಲಭವೆನಿಸುವ ಪರಿಹಾರಗಳನ್ನು ಒದಗಿಸಲಾಗುತ್ತದೆ. ನಿಧಾನ ಕಲಿಕಾ ಸಾಮರ್ಥ್ಯದ ಮಕ್ಕಳ ಜೊತೆ ಶಿಕ್ಷಕರು ನಿಗದಿತ ಸಮಯ ಕಳೆಯುತ್ತಾರೆ. ಅವರಿಗೆ ಅಗತ್ಯವಿರುವ ಪಠ್ಯಸಂಬಂಧಿ ಮಾರ್ಗದರ್ಶನದೊಂದಿಗೆ ಭಾವನಾತ್ಮಕ ಬೆಂಬಲವನ್ನೂ ನೀಡಿ, ಆತ್ಮವಿಶ್ವಾಸವನ್ನು ತುಂಬುತ್ತಾರೆ. ಪರೀಕ್ಷಾ ದಿನಗಳಲ್ಲೂ ಸಮಯಾವಕಾಶ ಸಿಕ್ಕಾಗ ನಿಧಾನ ಕಲಿಕಾ ಸಾಮರ್ಥ್ಯದ ಮಕ್ಕಳನ್ನು ಶಾಲೆಗೆ ಕರೆಯಿಸಿಕೊಂಡು ಮಾರ್ಗದರ್ಶನವನ್ನು ಒದಗಿಸುವುದು ಸಹ ‘ಪಾಸಿಂಗ್ ಪ್ಯಾಕೇಜ್’ನಲ್ಲಿ ಸೇರಿದೆ. ಹೀಗಾಗಿ, ಇದು ನಿಧಾನ ಕಲಿಕೆಯ ಮಕ್ಕಳಿಗೆ ವರದಾನವಾಗಿದೆ.
–ಗಜಾನನ ಮನ್ನೀಕೇರಿ,
ಡಿಡಿಪಿಐ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT