ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

35 ವರ್ಷಗಳಲ್ಲಿ ಮೂರೇ ಪದಕ!

ಗುಲಬರ್ಗಾ ವಿ.ವಿ.
Last Updated 1 ಜನವರಿ 2017, 19:30 IST
ಅಕ್ಷರ ಗಾತ್ರ

ಗುಲಬರ್ಗಾ ವಿಶ್ವವಿದ್ಯಾಲಯ ಆರಂಭವಾದ ಮರು ವರ್ಷವೇ ಚಾಲನೆ ಪಡೆದುಕೊಂಡ ದೈಹಿಕ ಶಿಕ್ಷಣ ವಿಭಾಗಕ್ಕೆ ಈಗ 35ರ ಹರೆಯ. ಆದರೆ, ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಟೂರ್ನಿಯಲ್ಲಿ ಮೂರೂವರೆ ದಶಕಗಳಿಂದ ಕಾರ್ಯಪ್ರವೃತ್ತವಾಗಿರುವ ಕ್ರೀಡಾ ವಿಭಾಗದ ಇದುವರೆಗಿನ ಸಾಧನೆ ಮೂರು ಪದಕವಷ್ಟೆ!

2004ರಲ್ಲಿ ರೋಹಿತ್‌ ಹವಳ ಎಂಬುವವರು ಲಾಂಗ್‌ಜಂಪ್‌ನಲ್ಲಿ ಬೆಳ್ಳಿ, ಟ್ರಿಪಲ್‌ ಜಂಪ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ 23 ವರ್ಷಗಳ ಪದಕದ ಬರ ನೀಗಿಸಿದ್ದರು.  2014ರಲ್ಲಿ ಉತ್ತರ ಪ್ರದೇಶದ  ಚೌಧರಿ ಚರಣ್‌ ಸಿಂಗ್‌ ವಿಶ್ವವಿದ್ಯಾಲಯದಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾಲಯಗಳ ಕುಸ್ತಿ ಟೂರ್ನಿಯ 50 ಕೆ.ಜಿ ತೂಕದ ವಿಭಾಗದಲ್ಲಿ ಮಂಜುನಾಥ ಮಾದರ ಅವರು ಈ ವಿ.ವಿ.ಗೆ ಬೆಳ್ಳಿಯ ಪದಕ ತಂದು ಕೊಟ್ಟರು.

ಸುಮಾರು 820 ಎಕರೆ ವಿಶಾಲವಾದ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಬಹುಪಯೋಗಿ ಒಳಾಂಗಣ ಕ್ರೀಡಾಂಗಣ,  ಬ್ಯಾಸ್ಕೆಟ್‌ಬಾಲ್‌, ವಾಲಿಬಾಲ್‌, ಕಬಡ್ಡಿ ಹಾಗೂ ಕೊಕ್ಕೊ ಅಂಗಳಗಳ ನ್ನೊಳಗೊಂಡ ಹೊರಾಂಗಣ, 400 ಮೀ. ಟ್ರ್ಯಾಕ್‌, ಹ್ಯಾಂಡ್‌ಬಾಲ್‌ ಕೋರ್ಟ್‌, ಫುಟ್‌ಬಾಲ್‌ ಮತ್ತು ಹಾಕಿ ಕ್ರೀಡಾಂಗಣ, ಸಿಂಥೆಟಿಕ್‌ ಟೆನಿಸ್ ಕೋರ್ಟ್‌, ಅತ್ಯುತ್ತಮ ದರ್ಜೆಯ ಜಿಮ್‌, ಕುಸ್ತಿ ಅಖಾಡ, ಕ್ರಿಕೆಟ್ ನೆಟ್ಸ್‌ ಹಾಗೂ ಬಹುತೇಕ ಎಲ್ಲಾ ಆಟಗಳ ಸಾಮಗ್ರಿಗಳು ಕ್ರೀಡಾ ವಿಭಾಗದಲ್ಲಿ ವೆಯಾದರೂ ಸಾಧನೆ ಏನೇನೂ ಇಲ್ಲ.

‘ಕ್ರೀಡಾ ಸಾಮಗ್ರಿ ಖರೀದಿಗೆ ₹12 ಲಕ್ಷ, ಕ್ರೀಡೆಯ ಅಭಿವೃದ್ಧಿಗೆ ₹8 ಲಕ್ಷ, ವಿವಿಧೆಡೆ ನಡೆಯುವ ಟೂರ್ನಿಗಳಲ್ಲಿ ಪಾಳ್ಗೊಳ್ಳಲು ₹10 ಲಕ್ಷ, ಆಯ್ಕೆ ಟ್ರಯಲ್ಸ್‌ ಹಾಗೂ ಕ್ರೀಡಾಪಟುಗಳ ಪ್ರವಾಸ ಮತ್ತು ತುಟ್ಟಿ ಭತ್ಯೆ ನೀಡಲು ₹3 ಲಕ್ಷ ಹೀಗೆ ಒಟ್ಟು ಪ್ರಸಕ್ತ ವರ್ಷ ₹33 ಲಕ್ಷ ಅನುದಾನ ನೀಡಲಾಗಿದೆ.

ಮೂಲಸೌಲಭ್ಯ ಕಲ್ಪಿಸಲು ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಇವೆ. ಇದಕ್ಕಿಂತ ಕ್ರೀಡೆಗೆ ಇನ್ನೆಷ್ಟು ಬೆಂಬಲ ಕೊಡಲು ಸಾಧ್ಯ’ ಎಂದು ಪ್ರಶ್ನಿಸುತ್ತಾರೆ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ದಯಾನಂದ ಅಗಸರ್‌.

‘ವಿಶ್ವವಿದ್ಯಾಲಯದ ವ್ಯಾಪ್ತಿಗೆ ಕಲಬುರ್ಗಿ, ಬೀದರ್‌, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ಒಟ್ಟು 350ಕ್ಕೂ ಹೆಚ್ಚು ಕಾಲೇಜುಗಳು ಬರುತ್ತವೆ. ಒಟ್ಟಾರೆ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಒಂದು ಲಕ್ಷ ವಿದ್ಯಾರ್ಥಿಗಳು ವಿಶ್ವ ವಿದ್ಯಾಲಯದಲ್ಲಿ ಕಲಿಯುತ್ತಿದ್ದಾರೆ.

ಇಷ್ಟಿದ್ದರೂ ಇಲ್ಲಿನ ಕ್ರೀಡೆ ಚಟುವಟಿಕೆಗಳು ಸ್ತಬ್ಧವಾಗಿವೆ. ಆದರೆ, ಕ್ರೀಡೆಯ ಹೆಸರಲ್ಲಿ ಅನುದಾನ ಮಾತ್ರ ಖರ್ಚಾಗುತ್ತಲೇ ಇದೆ. ಯಾಂತ್ರಿಕವಾಗಿ ಕೆಲಸ ಮಾಡುತ್ತಿರುವುದರಿಂದ ಫಲಿತಾಂಶದಲ್ಲಿ ಸುಧಾರಣೆಯೇ ಇಲ್ಲವಾಗಿದೆ’ ಎನ್ನುವುದು ಅವರ ವಿಶ್ಲೇಷಣೆ.

*
ಕ್ರೀಡಾ ವಿಭಾಗದಲ್ಲಿ ಮೂರು ಮಂದಿ ಉಪನಿರ್ದೇಶಕರು, ಒಬ್ಬರು ವಾಲಿಬಾಲ್‌ ಕೋಚ್‌, ಒಂಬತ್ತು ಮಂದಿ ಸಿಬ್ಬಂದಿ,  ಏಳು ಮಂದಿ ತಾಂತ್ರಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರ ವೇತನಕ್ಕಾಗಿಯೇ ಸರ್ಕಾರ ಪ್ರತಿ ವರ್ಷ ಲಕ್ಷಾಂತರ ರೂಪಾಯಿಯನ್ನು ವಿನಿಯೋಗಿಸುತ್ತಿದೆ. ನಾವು ಕನಿಷ್ಠ ನೈತಿಕತೆ ಮತ್ತು ಕರ್ತವ್ಯ ಪ್ರಜ್ಞೆ ಇಟ್ಟುಕೊಂಡು ಕೆಲಸ ಮಾಡಿದರೆ ಫಲಿತಾಂಶ ಬೇರೆಯೇ ಇರುತ್ತದೆ.
–ದಯಾನಂದ ಅಗಸರ್,
ಕುಲಸಚಿವ, ಗುಲಬರ್ಗಾ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT