ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ತಂಡದಲ್ಲಿ ರಾಜ್ಯದ ಲೀಲಾವತಿ

Last Updated 1 ಜನವರಿ 2017, 19:30 IST
ಅಕ್ಷರ ಗಾತ್ರ

ಅಂದು ಪುರುಷರ ಜೊತೆ ಸೇರಿ ಹಾಕಿ ಆಡುತ್ತಾ ಗೋಲು ಗಳಿಸಿ ಗಮನ ಸೆಳೆದಿದ್ದ ಹುಡುಗಿ ಇಂದು ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಪದಕಕ್ಕೆ ಮುತ್ತಿಟ್ಟಿದ್ದಾಳೆ..!

ಆ ಹುಡುಗಿಯ ಹೆಸರು ಎಂ.ಜೆ.ಲೀಲಾವತಿ. ಥಾಯ್ಲೆಂಡ್‌ ರಾಜಧಾನಿ ಬ್ಯಾಂಕಾಕ್‌ನಲ್ಲಿ ಕಳೆದ ವಾರ ನಡೆದ 18 ವರ್ಷದೊಳಗಿನವರ ಏಷ್ಯಾಕಪ್‌ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಕಂಚಿನ ಪದಕ ಜಯಿಸುವಲ್ಲಿ ಕೊಡಗಿನ ಈ ಹುಡುಗಿ ಪ್ರಮುಖ ಪಾತ್ರ ವಹಿಸಿದ್ದಾರೆ.

ವಿರಾಜಪೇಟೆ ತಾಲ್ಲೂಕಿನ ಬೆಕ್ಕೆಸೊಡ್ಲೂರಿನ ಲೀಲಾವತಿ ಅವರು ಕೊಡವ ಕುಟುಂಬಗಳ ವಾರ್ಷಿಕ ಹಾಕಿ ಉತ್ಸವದಲ್ಲಿಯೂ ಆಡಿದ್ದಾರೆ. ಮಲ್ಲಮಡ ಕುಟುಂಬ ಪ್ರತಿನಿಧಿಸುವ ಅವರು ಈ ಹಾಕಿ ಉತ್ಸವದಲ್ಲಿ ಪುರುಷರೊಂದಿಗೆ ಆಡಿದ್ದರು. ಫಾರ್ವರ್ಡ್‌ ಆಟಗಾರ್ತಿ ಆಗಿರುವ ಅವರು ಕೆಲವು ಗೋಲು ಗಳಿಸಿದ್ದರು.

ಮಲ್ಲಮಡ ಕುಟುಂಬದವರೇ ಆದ ಎಂ.ಎನ್‌.ಪೊನ್ನಮ್ಮ ಈಗಾಗಲೇ ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದಾರೆ. ಅಲ್ಲದೆ, ಜೂನಿಯರ್‌ ವಿಶ್ವಕಪ್‌ನಲ್ಲಿ ಆಡಿ ದೇಶಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ. ಈಗ ಅದೇ ಕುಟುಂಬದ ಆಟಗಾರ್ತಿ ಲೀಲಾವತಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದಾರೆ.

ಜೂನಿಯರ್‌ ಏಷ್ಯಾಕಪ್‌ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿದೆ. ಲೀಗ್‌ನಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್‌ಗೆ ಅರ್ಹತೆ ಪಡೆದಿತ್ತು. ಆದರೆ, ಜಪಾನ್ ಎದುರಿನ ನಾಲ್ಕರ ಘಟ್ಟದ ಪಂದ್ಯದಲ್ಲಿ ಶೂಟೌಟ್‌ನಲ್ಲಿ 2–3 ಗೋಲುಗಳಿಂದ ಸೋಲು ಕಂಡಿತು. ನಿಗದಿತ ಅವಧಿಯಲ್ಲಿ ಪಂದ್ಯ 1–1 ಗೋಲಿನಿಂದ ಸಮಬಲವಾಗಿತ್ತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ 3–0 ಗೋಲುಗಳಿಂದ ಕೊರಿಯಾ ಎದುರು ಗೆದ್ದು ಕಂಚಿನ ಪದಕಕ್ಕೆ ಕೊರಳೊಡ್ಡಿದರು.

18ರ ಹರೆಯದ ಲೀಲಾವತಿ ಎಲ್ಲಾ ಪಂದ್ಯ ಆಡಿದರು. ಅದಕ್ಕೂ ಮೊದಲು ಅವರು ಭೋಪಾಲ್‌ನಲ್ಲಿ ನಡೆದ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಭಾರತ ತಂಡದ ಸಾರಥ್ಯವನ್ನು ಹರಿಯಾಣದ ಉದಿತಾ ವಹಿಸಿದ್ದರು. ದಕ್ಷಿಣ ಭಾರತದಿಂದ ಆಯ್ಕೆ ಆಗಿದ್ದ ಏಕೈಕ ಆಟಗಾರ್ತಿ ಕರ್ನಾಟಕದ ಲೀಲಾವತಿ. ಈ ಟೂರ್ನಿಯಲ್ಲಿ ಚೀನಾ, ಜಪಾನ್‌, ಥಾಯ್ಲೆಂಡ್‌, ಚೀನಾ ತೈಪೆ, ಕೊರಿಯಾ, ಸಿಂಗಪುರ ಹಾಗೂ ಮಲೇಷ್ಯಾ ತಂಡಗಳು ಪಾಲ್ಗೊಂಡಿದ್ದವು.

ಮಡಿಕೇರಿಯ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ಓದುತ್ತಿರುವ ಲೀಲಾವತಿ ದಕ್ಷಿಣ ಭಾರತ ಅಂತರ ವಿ.ವಿ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ವಿ.ವಿ ಪ್ರತಿನಿಧಿಸಿ ಗಮನ ಸೆಳೆದಿದ್ದಾರೆ. ಈಗಾಗಲೇ ರಾಷ್ಟ್ರೀಯ ಸಬ್‌ ಜೂನಿಯರ್‌ ಹಾಗೂ ಜೂನಿಯರ್‌ ಮಟ್ಟದಲ್ಲಿ ರಾಜ್ಯ ತಂಡದ ಪರ ಆಡಿದ್ದಾರೆ. ಅಂತರ ಭಾರತ ಕ್ರೀಡಾ ಪ್ರಾಧಿಕಾರ (ಎಸ್ಎಐ) ಹಾಕಿ ಟೂರ್ನಿಯಲ್ಲಿ ದಕ್ಷಿಣ ವಲಯ ಪ್ರತಿನಿಧಿಸಿದ್ದಾರೆ.

ಲೀಲಾವತಿ ಜೊತೆಗಿನ ಸಂದರ್ಶನದ ಸಾರ

* ಮೊದಲ ಬಾರಿ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಆಡಿದ ಅನುಭವ ಹೇಗಿತ್ತು?

ಮೊದಲ ಅವಕಾಶದಲ್ಲಿಯೇ ಪದಕ ಒಲಿದಿರುವುದು ಖುಷಿ ತಂದಿದೆ. ಖಂಡಿತವಾಗಿಯೂ ಇದೊಂದು ವಿಶೇಷ ಅನುಭವ. ಹಲವು ಹೊಸ ವಿಚಾರ ಕಲಿಯಲು ಸಾಧ್ಯವಾಯಿತು. ಈ ಟೂರ್ನಿಯಲ್ಲಿ ಮೊದಲ ಗೋಲು ಗಳಿಸಿದ್ದೇ ನಾನು. ಚೀನಾ ತೈಪೆ ತಂಡದ ಎದುರು ಆ ಗೋಲು ಬಂತು. ಎಲ್ಲಾ ಪಂದ್ಯಗಳಲ್ಲಿ ಆಡಲು ನನಗೆ ಅವಕಾಶ ಲಭಿಸಿತು.

*ಹಾಕಿ ಆಟದತ್ತ ಒಲವು ಮೂಡಲು ಪ್ರೇರಣೆ ಯಾರು?
ನಮ್ಮ ಕುಟುಂಬದ ಬಹುತೇಕ ಮಂದಿ ಸ್ಥಳೀಯ ಮಟ್ಟದಲ್ಲಿ ಹಾಕಿ ಆಡಿದವರೇ. ತಂದೆ ಮಲ್ಲಮಡ ಜಯ ಹಾಗೂ ತಾಯಿ ವಾಣಿ ನನಗೆ ಸ್ಫೂರ್ತಿ. ನಾನು ಆರಂಭದ ದಿನಗಳಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿಯೂ ಪಾಲ್ಗೊಂಡಿದ್ದೆ.

*ಪೊನ್ನಮ್ಮ ಬಳಿಕ ಈಗ ನೀವು ರಾಷ್ಟ್ರೀಯ ಜೂನಿಯರ್‌ ತಂಡದಲ್ಲಿ ಸ್ಥಾನ ಪಡೆದಿದ್ದೀರಿ. ಈ ಬಗ್ಗೆ?
ಮಡಿಕೇರಿಯಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ಹಾಸ್ಟೆಲ್‌ಗೆ ನಾನು ಸೇರಲು ಪ್ರಮುಖ ಕಾರಣ ಪೊನ್ನಮ್ಮ ಅಕ್ಕ. ಅವರು ನೀಡಿದ ಸಲಹೆ, ಪ್ರೋತ್ಸಾಹ ಮರೆಯಲಾರೆ.  ಅವರಂತೆ ನಾನು ಕೂಡ ಉತ್ತಮ ಪ್ರದರ್ಶನ ನೀಡಿ ರಾಜ್ಯಕ್ಕೆ ಹೆಸರು ತರಬೇಕು.

*ಮುಂದಿನ ಗುರಿ?
ರಾಷ್ಟ್ರೀಯ ಸೀನಿಯರ್‌ ಮಹಿಳಾ ತಂಡದಲ್ಲಿ ಆಡಬೇಕು ಎಂಬುದು ನನ್ನ ಗುರಿ. ಹಾಕಿ ಆಟದ ಹೊಸ ಕೌಶಲ ಕಲಿಯಬೇಕು. ಅದಕ್ಕಾಗಿ ಮತ್ತಷ್ಟು ಶ್ರಮ ಹಾಕಿ ತಾಲೀಮು ನಡೆಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT