ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು, ಮಕ್ಕಳು ಮತ್ತು ನಾರ್ವೆ

ಸಂಗತ
Last Updated 1 ಜನವರಿ 2017, 19:30 IST
ಅಕ್ಷರ ಗಾತ್ರ
ನಾರ್ವೆ ದೇಶದಲ್ಲಿ ಭಾರತೀಯ ದಂಪತಿಯಿಂದ ಅವರ ಮಗುವನ್ನು ಬೇರ್ಪಡಿಸಿ, ಸರ್ಕಾರಿ ಶಿಶುಪಾಲಕರಿಗೆ ಒಪ್ಪಿಸಿದ ಅಲ್ಲಿನ ಸರ್ಕಾರದ ಧೋರಣೆ ಬಗ್ಗೆ ನಮ್ಮಲ್ಲಿ ಅನೇಕರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಮೇಲ್ನೋಟಕ್ಕೆ ಇದು ಸಹಜ ಪ್ರತಿಕ್ರಿಯೆ ಎಂದು ಅನಿಸಿದರೂ, ನಾವು ನಮ್ಮ ಮಕ್ಕಳನ್ನು ನೋಡಿಕೊಳ್ಳುವ ಬಗೆ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ.
 
ಮಕ್ಕಳ ವರ್ತನೆಯನ್ನು ಮಾತುಮಾತಿಗೆ ಖಂಡಿಸುವುದು, ಅವರನ್ನು ಹೊಡೆಯುವುದು ನಮ್ಮ ಸಂಸ್ಕೃತಿಯಾಗಿಬಿಟ್ಟಿದೆ. ಹಾಗಲ್ಲದಿದ್ದರೆ, ಅವರನ್ನು ಹದ್ದುಬಸ್ತಿನಲ್ಲಿಡಲು ಕಷ್ಟ, ಶಿಸ್ತು ಕಲಿಸುವುದು ಅಸಾಧ್ಯ ಎಂಬ ತಪ್ಪು ಕಲ್ಪನೆ ನಮ್ಮಲ್ಲಿ ಮನೆಮಾಡಿದೆ.  ಮಕ್ಕಳ ಮನಸ್ಸಿನ ಮೇಲೆ ಇದರಿಂದಾಗುವ ಪರಿಣಾಮದ ಬಗ್ಗೆ ಕನಿಷ್ಠ ಕಲ್ಪನೆಯೂ ಇಲ್ಲದೆ, ಎಳೆಯ ಜೀವಗಳ ಮನಸ್ಸನ್ನು ನೋಯಿಸಿ, ಅವರ ಆತ್ಮಸ್ಥೈರ್ಯ ಕುಂದಿಸುತ್ತಿರುವುದು ನಮ್ಮ ಗಮನಕ್ಕೆ ಬರುತ್ತಿಲ್ಲ. 
 
ಕೆಲವು ವಿಚಾರಗಳಲ್ಲಿ ಈ ನೆಲದ ಸಾಕ್ಷಿಪ್ರಜ್ಞೆಯಂತಿರುವ ಅಣ್ಣಾ ಹಜಾರೆ ಅವರು ಟಿ.ವಿ. ಚಾನೆಲ್‌ವೊಂದರಲ್ಲಿ ಮಾತನಾಡುತ್ತ, ‘ಶಾಲೆಗಳಲ್ಲಿ ಮಕ್ಕಳನ್ನು ಹೊಡೆಯುವುದನ್ನು ಬಿಟ್ಟಿದ್ದರಿಂದ ಶಿಕ್ಷಣ ಮಟ್ಟ ಕುಸಿದಿದೆ’ ಎಂಬರ್ಥದ ಮಾತುಗಳನ್ನಾಡಿಬಿಟ್ಟಿದ್ದಾರೆ.  ಆ ವಾಹಿನಿಯ ಹಾಸ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲ ಈ ಮಾತನ್ನು ಕೇಳಿ ದೊಡ್ಡದಾಗಿ ನಕ್ಕುಬಿಟ್ಟರು. ಅವರ ಮಾತಿನ ಪರಿಣಾಮದ ಬಗ್ಗೆ, ಮಕ್ಕಳಿಗೆ ಇದರಿಂದಾಗುವ ಆಘಾತದ  ಬಗ್ಗೆ ನಾವ್ಯಾರೂ ಚಕಾರವೆತ್ತಲಿಲ್ಲ.
 
ಮಕ್ಕಳದು ಮೃದು ಮನಸ್ಸು. ಅವರ ಕರ್ತೃತ್ವ ಶಕ್ತಿ ಸದಾ ವೃದ್ಧಿಸಿ, ಆತ್ಮಸ್ಥೈರ್ಯದ ಉತ್ತುಂಗದಲ್ಲಿರುವಂತೆ ನೋಡಿಕೊಳ್ಳುವುದು ಸಮಾಜದ, ಅದರಲ್ಲೂ ಪಾಲಕರ ಮತ್ತು ಶಿಕ್ಷಕರ  ಕರ್ತವ್ಯ. ಅದು ಬಿಟ್ಟು ‘... ನಾಲ್ಕು ಬಾರಿಸಿ ದಾರಿಗೆ ತನ್ನಿ’ ಎಂದು ಶಿಕ್ಷಕರ ಉಡಿಯಲ್ಲಿ ಮಕ್ಕಳನ್ನು ಹಾಕುವ ಅನೇಕ ‘ಸುಶಿಕ್ಷಿತ’ ಪಾಲಕರು ನಮ್ಮಲ್ಲಿದ್ದಾರೆ. ‘ಕೈಯಲ್ಲಿ ಕೋಲಿಲ್ಲದಿದ್ದರೆ, ಕಲಿಸಲು ಸಾಧ್ಯವೇ ಇಲ್ಲ’ ಎಂದು ನಂಬಿದ ಮತ್ತು ಅದನ್ನೇ ಬೋಧಿಸುವ ‘ಅತ್ಯುತ್ತಮ ಶಿಕ್ಷಕರು’ ಬಹಳಷ್ಟಿದ್ದಾರೆ. 
 
‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು’ ಎಂದು ಒಂದು ದೊಡ್ಡ ಸುಳ್ಳು ಹೇಳಿ ಮಕ್ಕಳ ಕುರಿತು ಮಾತು ಆರಂಭಿಸುವ ಪರಿಪಾಠ ಮುಂದುವರಿದಿದೆ. ಅವರು ಹುಟ್ಟಿದಾಗಲೇ ಈ ನೆಲದ ಪ್ರಜೆಗಳು. ಒಬ್ಬ ಶಿಕ್ಷಕ ಅಥವಾ ಪಾಲಕ ಮಗುವನ್ನು ಹೊಡೆದರೆ ಅಥವಾ ಬೈದರೆ ಒಬ್ಬ ಪ್ರಜೆ ಇನ್ನೊಬ್ಬ ಪ್ರಜೆಯನ್ನು ಹೊಡೆದಂತೆ, ಬೈದಂತೆ. ಅದರಲ್ಲೂ ಒಬ್ಬ ‘ಮಾಗಿದ’ ಪ್ರಜೆ ಇನ್ನೂ ಅರಳುತ್ತಿರುವ ಪ್ರಜೆಯ ಮೇಲೆ ಮಾಡಿದ ಅತ್ಯಾಚಾರ ಎಂದೇ ಪರಿಗಣಿಸಬೇಕು. ಮಕ್ಕಳ ತುಂಟಾಟ, ಮಾತು, ಚೆಲ್ಲಾಟಗಳು ಅವರ ಬೆಳವಣಿಗೆಯ ಮಜಲುಗಳೇ ಹೊರತು ಅವರು ಬೇಕಂತಲೇ ಮಾಡಿದ ದುರ್ಬುದ್ಧಿಯ ಅತಿರೇಕಗಳಲ್ಲ ಎಂದು ತಿಳಿಯಲು ಏಕೆ ಸಾಧ್ಯವಾಗುತ್ತಿಲ್ಲ? ದಾರಿಯಲ್ಲಿ ಹೋಗುತ್ತಿರುವಾಗ ಮಗು ಎಡವಿ ಬಿದ್ದರೆ ತಮಗಾದ ಅವಮಾನವೆಂದು ಭಾವಿಸಿ ಮಗುವಿಗೆ ಗುದ್ದು ನೀಡುವ ನಮ್ಮ ಜಾಯಮಾನ ಬದಲಾಗುವುದೆಂದು? ಒಂದು ಗೊಂಬೆಯನ್ನು ಕೊಡಿಸಿದಾಗ ಮಗು ಅದರೊಳಗೇನಿದೆ ಎಂದು ತಿಳಿಯಲು ಅದನ್ನು ಹರಿದು, ಒಡೆದು ನೋಡಿದರೆ ಅದರ ಕುತೂಹಲ ಮೆಚ್ಚುವ ಬದಲು ನಾವು ರಂಪ ಮಾಡುವುದೇಕೆ? 
 
ಮಕ್ಕಳ ಮನಸ್ಸನ್ನು ಅರಿತು ಅವರ ಭವಿಷ್ಯ ಉಜ್ವಲಗೊಳ್ಳಲು ನಾವು ಮಾಡಬೇಕಾದುದು ಬೆಟ್ಟದಷ್ಟಿದೆ. ನಾಲ್ಕು ಜನ ದೊಡ್ಡವರು ಕುಳಿತು ಮಾತನಾಡುವಾಗ, ಮಗುವೊಂದು ಅಲ್ಲಿದ್ದರೆ, ‘ಇಲ್ಲಿ ನಿಂದೇನು ಕೆಲಸ’ ಎಂದು ಹೊರದಬ್ಬುವ ಬದಲು, ಮಕ್ಕಳ ಮುಂದೆ ಆಡಬಾರದ ಮಾತುಗಳೇನಾದರೂ ಇದ್ದರೆ, ಅವನ್ನು ಆ ಸಂದರ್ಭದಲ್ಲಿ ಮುಂದೂಡಿ ಮಗುವಿಗೆ ಗೌರವ ತೋರಿಸುವಂತಾಗಬೇಕಿದೆ. ಮಗು ಪರೀಕ್ಷೆಯೊಂದರಲ್ಲಿ ವಿಫಲವಾದರೆ, ಮುಕ್ತವಾಗಿ ಪಾಲಕರೊಂದಿಗೆ ಹಂಚಿಕೊಳ್ಳುವಷ್ಟು ಆರೋಗ್ಯಪೂರ್ಣ ವಾತಾವರಣ ಮನೆಮನೆಗಳಲ್ಲಿ ನೆಲೆಸಬೇಕಿದೆ. 
 
ನಾರ್ವೆ ವಿದ್ಯಮಾನ ಮತ್ತು ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯಿಂದ  ನಾವು ಕಲಿಯುವುದು ಬಹಳ ಇದೆ. ‘ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಮಕ್ಕಳು ಕುಟುಂಬ ವಾತಾವರಣದಿಂದ ವಂಚಿತವಾಗಿದ್ದರೆ ಅಥವಾ ಅವರಿಗೆ ಹಾನಿಯಾಗುವಂತಹ ವಾತಾವರಣ ಇದೆ ಎಂದು ಸಾಬೀತಾದರೆ, ಸರ್ಕಾರದಿಂದ ರಕ್ಷಣೆ ಪಡೆಯುವ ಹಕ್ಕು ಮಕ್ಕಳಿಗಿದೆ’ ಎಂಬ ಮಕ್ಕಳ ಹಕ್ಕುಗಳ ಒಡಂಬಡಿಕೆಯ 20ನೇ ವಿಧಿಯಂತೆ ನಾರ್ವೆ ಸರ್ಕಾರ ನಡೆದುಕೊಂಡಿದ್ದರೆ, ನಾವು ಇತ್ತೀಚಿನ ಘಟನೆಯನ್ನು ಬೇರೊಂದು ದೃಷ್ಟಿಯಿಂದ ನೋಡಬೇಕಿದೆ. ಭಾವುಕರಾಗಿ ನೋಡುವ ವಿಷಯ ಇದಲ್ಲ. 1990ರ ಸೆಪ್ಟೆಂಬರ್‍ 2ರಂದು ಜಾರಿಗೆ ಬಂದ ಈ ಒಡಂಬಡಿಕೆ  ಮಕ್ಕಳ ಜೀವಿಸುವ, ಬೆಳೆಯುವ, ರಕ್ಷಣೆ ಹೊಂದುವ ಮತ್ತು ಸರ್ವ ಚಟುವಟಿಕೆಯಲ್ಲಿ ಭಾಗವಹಿಸುವಂತಹ ಹಕ್ಕುಗಳನ್ನು ಗುರುತಿಸಿದೆ. ಮಕ್ಕಳಿಗೆ ಖಾಸಗಿತನದ, ಆಲೋಚಿಸುವ ಮತ್ತು ಅಭಿವ್ಯಕ್ತಿಸುವ ಹಕ್ಕು ಇದೆಯೆಂಬುದನ್ನೂ ಹೇಳಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದರೆ, ನಾವು ಕ್ಷಣಕ್ಷಣಕ್ಕೂ ಮಕ್ಕಳಿಗೆ, ‘ಅದು ಮಾಡಬೇಡ, ಇದು ಮಾಡಬೇಡ’ ಎಂದು ಹೇಳುವ ಮೂಲಕ ಅವರ ಹಕ್ಕು ಕಸಿಯುತ್ತಿರುತ್ತೇವೆ ಎಂಬ ಅರಿವು ಮೂಡಿಸಿಕೊಳ್ಳುವ ಮಟ್ಟಿಗೆ ನಾವು ನಮ್ಮನ್ನು ಪಕ್ವಗೊಳಿಸಿಕೊಳ್ಳುತ್ತೇವೆ. 
 
ವಿಲ್ ಡುರಾಂಟ್ ಎಂಬ ತತ್ವಶಾಸ್ತ್ರಜ್ಞ ಹೇಳುವ ಒಂದು ಮಾತಿದೆ. ‘ನೀವು ನಿಮ್ಮ ಮಕ್ಕಳನ್ನು ಕರೆತನ್ನಿ, ನೀವು ಎಂಥವರೆಂಬುದನ್ನು ಹೇಳುತ್ತೇನೆ’ ಎನ್ನುವ ಅವರು, ಮಕ್ಕಳು ನಮ್ಮನ್ನೇ ನೋಡಿ ಅನೇಕ ವಿಷಯಗಳನ್ನು, ಗುಣಗಳನ್ನು ಕಲಿತಿರುತ್ತವೆ ಎಂಬ ಅಂಶದ ಬಗ್ಗೆ ಬೆಳಕು ಚೆಲ್ಲುತ್ತಾರೆ. 
 
‘ಹೋಗು ಓದಿಕೊ’ ಎನ್ನುವ ಬದಲು, ‘ನಿನ್ನ ಪುಸ್ತಕಗಳನ್ನು ತೆಗೆದುಕೊಂಡು ಬಾ, ಜೊತೆಗೆ ಓದೋಣ’ ಎನ್ನುವುದು ಹೇಗೆ ಉತ್ತಮ ಎಂದು ವಿವರಿಸುತ್ತಾರೆ. 
 
ಸ್ಟೀವನ್ ಆರ್‍. ಕೋವಿ ತಮ್ಮ ‘ದಿ ಸೆವೆನ್ ಹ್ಯಾಬಿಟ್ಸ್‌ ಆಫ್ ಹೈಲಿ ಎಫೆಕ್ಟಿವ್ ಪೀಪಲ್’ ಪುಸ್ತಕದಲ್ಲಿ ವಿವರಿಸುವ ಈ ಘಟನೆ ಕಣ್ತೆರೆಯುವಂತಿದೆ. ಅವರ ಮಗಳು ತನ್ನ ಮೂರನೇ ಹುಟ್ಟುಹಬ್ಬದಲ್ಲಿ ಕಾಣಿಕೆಯಾಗಿ ಬಂದ ಬೊಂಬೆಗಳನ್ನು ಬೇರೆ ಮಕ್ಕಳೊಡನೆ ಹಂಚಿಕೊಳ್ಳಲು ತಿರಸ್ಕರಿಸುತ್ತಾಳೆ. ಬಣ್ಣಬಣ್ಣದ ಮಾತುಗಳಿಂದ ಅವಳ ಮನವೊಲಿಸಲು ಸೋತು ಕೊನೆಗೆ ಅವಳನ್ನು ಬೆದರಿಸಿದಾಗ, ಆ ಪುಟ್ಟಿ ಹೇಳುತ್ತಾಳೆ, ‘ಇವು ನನ್ನ ವಸ್ತುಗಳು. ಅವುಗಳನ್ನು ಬೇರೆಯವರೊಡನೆ ನಾನು ಹಂಚಿಕೊಳ್ಳಬೇಕಿಲ್ಲ’. ಇದನ್ನು ವಿವರಿಸುತ್ತ, ಕೋವಿ ಹೇಳುತ್ತಾರೆ, ‘ಬಹುಶಃ ನನ್ನ ಮಗಳಿಗೆ ಮೊದಲು ಆ ವಸ್ತುಗಳನ್ನು  ತನ್ನದಾಗಿಸಿಕೊಳ್ಳುವ ಅನುಭವ ಬೇಕಿತ್ತು. ಆ ಅನುಭವ ಹೊಂದಲು ಸಹಕರಿಸುವ ಭಾವನಾತ್ಮಕ ಪರಿಪಕ್ವತೆಯುಳ್ಳ ತಂದೆಯನ್ನು ನನ್ನಲ್ಲಿ ನೋಡಲು ಬಯಸಿದ್ದಳು’.
 
ಬಹು ಇಷ್ಟದ ಟೆನಿಸ್ ರ್‍ಯಾಕೆಟ್‌ ಒಂದನ್ನು  ತನ್ನ ತಂದೆ ಬೇರೊಂದು ಮಗುವಿಗೆ ಕೊಟ್ಟುಬಿಟ್ಟದ್ದನ್ನು ಇಳಿವಯಸ್ಸಿನಲ್ಲೂ ನೆನೆದು  ದುಃಖಿಸುವ ಸಂಬಂಧಿಯೊಬ್ಬರನ್ನು ನಾನು ಬಲ್ಲೆ. ಅಂದಮೇಲೆ ಮಕ್ಕಳ ಮುಗ್ಧ ಮನಸ್ಸಿನ ಆಳಕ್ಕಿಳಿದು ಅವರನ್ನು ಅರ್ಥ ಮಾಡಿಕೊಳ್ಳಬೇಕಿದೆಯಲ್ಲವೇ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT