ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ಪೀಳಿಗೆ ಹೊತ್ತಿಗೆ ಬಡತನ ನಿವಾರಣೆ

ಕರಾವಳಿ ಉತ್ಸವಕ್ಕೆ ತೆರೆ: ‘ಕರಾವಳಿ ಗೌರವ’ ಪ್ರಶಸ್ತಿ ಸ್ವೀಕರಿಸಿ ತಿಂಗಳಾಯ ಆಶಯ
Last Updated 2 ಜನವರಿ 2017, 6:27 IST
ಅಕ್ಷರ ಗಾತ್ರ

ಮಂಗಳೂರು: ‘ದೇಶದ ಬಡತನವನ್ನು ಹತ್ತಿರದಿಂದ ನೋಡಿದ್ದೇನೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ದೇಶದಲ್ಲಿ ಇರುವ ಬಡತನವನ್ನು ಎರಡು ಪೀಳಿಗೆಯಲ್ಲಿ ನಿವಾರಣೆ ಮಾಡಲು ಸಾಧ್ಯವಿದೆ ಎಂದು ಆರ್ಥಿಕ ತಜ್ಞ ಎನ್‌.ಕೆ. ತಿಂಗಳಾಯ ಹೇಳಿದರು.

ಇಲ್ಲಿಯ ಪಣಂಬೂರು ಬೀಚ್‌ನಲ್ಲಿ ಭಾನುವಾರ ನಡೆದ ಕರಾವಳಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ‘ಕರಾವಳಿ ಗೌರವ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

ಬ್ಯಾಂಕುಗಳು ಕುಬೇರನ ಆಸ್ತಿಯಲ್ಲ. ಜನರಿಂದ ಪಡೆದ ಹಣವನ್ನು ಜನರಿಗೆ ನೀಡುವ ಮೂಲಕ ಅಭಿವೃದ್ಧಿ ಸಾಧಿಸುವ ಸಂಸ್ಥೆಗಳೇ ಬ್ಯಾಂಕ್‌ಗಳು. ಬಡಜನರಿಗೆ ಬೇಕಾದ ಸಾಲ ಸೌಲಭ್ಯವನ್ನು ನೀಡುವುದು ಬ್ಯಾಂಕ್‌ಗಳ ಕರ್ತವ್ಯ ಎಂದು ಅವರು ಪ್ರತಿಪಾದಿಸಿದರು.

ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಕರಾವಳಿಯ ಕೊಡುಗೆಯನ್ನು ಮರೆಯು ವಂತಿಲ್ಲ. ನಾಲ್ಕು ರಾಷ್ಟ್ರೀಕೃತ ಬ್ಯಾಂಕ್‌ ಗಳು ಹಾಗೂ ಒಂದು ಖಾಸಗಿ ಬ್ಯಾಂಕ್‌ ಇಲ್ಲಿಂದಲೇ ಆರಂಭವಾಗಿದ್ದು, ಇದೀಗ ದೇಶದ ಸೀಮೆಯನ್ನು ದಾಟಿ ವಿದೇಶ ದಲ್ಲಿಯೂ ಆರ್ಥಿಕ ವಹಿವಾಟು ನಡೆಸುತ್ತಿವೆ ಎಂದರು.

ಬ್ಯಾಂಕ್‌ಗಳು ಸಾಲ ಸೌಲಭ್ಯ ಸೇರಿ ದಂತೆ ದೇಶದ ಬಡತನ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಕ್ಕೆ ಮುಂದಾಗಬೇಕು. ದೇಶದ ಬಡತನ ನಿವಾರಣೆಯಾದಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಚಿವ ಬಿ. ರಮಾನಾಥ ರೈ, ಕರಾವಳಿ ಉತ್ಸವದ ಮೂಲಕ ಒಂದು ವಾರ ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರದರ್ಶಿಸಲಾಗಿದೆ. ಇದೊಂದು ಯಶಸ್ವಿ ಉತ್ಸವವಾಗಿದ್ದು, ಇಲ್ಲಿಗೆ ಹರಿದು ಬಂದಿರುವ ಜನಸಾಗ ರವೇ ಇದಕ್ಕೆ ನಿದರ್ಶನ ಎಂದರು.

ಎನ್‌.ಕೆ. ತಿಂಗಳಾಯ ಅವರಿಗೆ ಕರಾವಳಿ ಗೌರವ ಪ್ರಶಸ್ತಿ ಸಂದಿರುವುದು ಅತ್ಯಂತ ಸೂಕ್ತವಾಗಿದೆ. ಪ್ರೊ.ವಿವೇಕ್‌ ರೈ ನೇತೃತ್ವದ ಆಯ್ಕೆ ಸಮಿತಿಯು ಸೂಕ್ತ ವ್ಯಕ್ತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಹೇಳಿದರು.

ವಿಧಾನ ಪರಿಷತ್‌ ಆಡಳಿತ ಪಕ್ಷದ ಮುಖ್ಯ ಸಚೇತಕ ಐವನ್‌ ಡಿಸೋಜ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೀಚ್‌ಗಳ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಹೆಜ್ಜೆ ಇರಿಸಲಾಗಿದೆ. ಬೀಚ್‌ಗಳ ಅಭಿವೃದ್ಧಿಯಿಂದ ಜಿಲ್ಲೆಯ ಆರ್ಥಿಕ ಸ್ಥಿತಿಯ ಸುಧಾರಣೆಗೂ ಹೆಚ್ಚಿನ ಅವಕಾಶ ದೊರೆತಂತಾಗುತ್ತದೆ ಎಂದರು.

ಶಾಸಕ ಬಿ.ಎ. ಮೊಯಿದ್ದೀನ್‌ ಬಾವ ಅಧ್ಯಕ್ಷತೆ ವಹಿಸಿದ್ದರು. ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್‌ ಕ್ಯಾಸ್ತಲಿನೋ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮೊಹಮ್ಮದ್‌ ಹನೀಫ್‌, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್‌. ಖಾದರ್‌, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್‌ಕುಮಾರ್‌ ಕಲ್ಕೂರ, ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್‌, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಉಮೇಶ್‌, ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್‌, ತಹಶೀಲ್ದಾರ್‌ ಮಹದೇವಯ್ಯ, ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್‌ ನಜೀರ್‌ ಸೇರಿದಂತೆ ಹಲವರು ಇದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT