ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ನಲ್ಲಿ ಸಂಪರ್ಕ: ಆದಾಯ ಖೋತಾ

ನಗರಸಭೆ ಅಧಿಕಾರಿಗಳಿಗೆ ತಲೆನೋವಾದ ₹1.87 ಕೋಟಿ ನೀರಿನ ತೆರಿಗೆ ಬಾಕಿ
Last Updated 2 ಜನವರಿ 2017, 7:20 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ ಅನಧಿಕೃತ ನಲ್ಲಿ ಸಂಪರ್ಕಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ನಗರಸಭೆ ಬೊಕ್ಕಸಕ್ಕೆ ನೀರಿನ ತೆರಿಗೆ ರೂಪದಲ್ಲಿ ಬರಬೇಕಾದ ಆದಾಯ ಖೋತಾ ಆಗುತ್ತಿದೆ. ನೀರಿನ ತೆರಿಗೆ ವಸೂಲಾತಿ ಪ್ರಕ್ರಿಯೆ ಹಲವು ವರ್ಷಗಳಿಂದ ಹಳಿ ತಪ್ಪಿದ್ದು, ತೆರಿಗೆ ಬಾಕಿ ಕೋಟಿಯ ಗಡಿ ದಾಟಿದೆ.

ಸುಮಾರು 30 ಚದರ ಕಿ.ಮೀ ವಿಸ್ತಾರವಾಗಿರುವ ನಗರದಲ್ಲಿ ಸದ್ಯ 35 ವಾರ್ಡ್‌ಗಳಿದ್ದು, ಜನಸಂಖ್ಯೆ 1.75 ಲಕ್ಷ ಮೀರಿ ಬೆಳೆದಿದೆ. ನಗರ ವಿಸ್ತಾರವಾದಂತೆ ಜನಸಂಖ್ಯೆ ವೃದ್ಧಿಸುತ್ತಿದೆ. ಅದಕ್ಕೆ ಅನುಗುಣವಾಗಿ ನೀರಿಗೆ ಬೇಡಿಕೆ ಹೆಚ್ಚುತ್ತಿದೆ. ಈಗೀನ ಜನಸಂಖ್ಯೆಗೆ ಹೋಲಿಸಿದರೆ ನಗರಕ್ಕೆ ಪ್ರತಿನಿತ್ಯ ಸುಮಾರು 70 ಲಕ್ಷ ಲೀಟರ್‌ ನೀರಿನ ಅಗತ್ಯವಿದೆ.

ಸತತ ಬರದಿಂದ ನಗರದ ಕೊಳವೆ ಬಾವಿಗಳಲ್ಲಿ ನೀರು ಬತ್ತುತ್ತಿದ್ದು, ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಗಂಭೀರವಾಗುತ್ತಿದೆ. ಎಲ್ಲೆಡೆ ಅಂತರ್ಜಲ ಮಟ್ಟ ಕುಸಿದಿದ್ದು, 1,500 ಅಡಿ ಆಳ ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಕಷ್ಟ. ಹೀಗಾಗಿ ಜನ ನಗರಸಭೆಯ ನಲ್ಲಿ ಹಾಗೂ ಟ್ಯಾಂಕರ್‌ ನೀರಿನ ಮೇಲೆ ಅವಲಂಬಿತರಾಗಿದ್ದಾರೆ.

ನಗರದಲ್ಲಿ ಪ್ರಸ್ತುತ 10,316 ನಲ್ಲಿ ಸಂಪರ್ಕಗಳಿದ್ದು, ಈ ಪೈಕಿ 7,364 ಅಧಿಕೃತ. ಉಳಿದ 2,952 ನಲ್ಲಿ ಸಂಪರ್ಕಗಳು ಅನಧಿಕೃತವಾಗಿವೆ. ಜಲಕ್ಷಾಮದಿಂದ ಬಸವಳಿದಿರುವ ನಗರವಾಸಿಗಳು ನೀರಿನ ಸೌಕರ್ಯಕ್ಕಾಗಿ ಕಳ್ಳ ದಾರಿ ಹಿಡಿದಿದ್ದಾರೆ. ವಿವಿಧ ಬಡಾವಣೆಗಳಲ್ಲಿ ಮನೆ ಹಾಗೂ ವಾಣಿಜ್ಯ ಕಟ್ಟಡಗಳ ಮಾಲೀಕರು ರಾತ್ರೋರಾತ್ರಿ ಅಕ್ರಮವಾಗಿ ನಲ್ಲಿ ನೀರಿನ ಸಂಪರ್ಕ ಪಡೆದು ನಗರಸಭೆಗೆ ವಂಚಿಸುತ್ತಿದ್ದಾರೆ. ಮತ್ತೆ ಕೆಲ ಬಡಾವಣೆಗಳಲ್ಲಿ ನಗರಸಭೆ ವಾಟರ್‌ ಮೆನ್‌ಗಳು ಸಾರ್ವಜನಿಕರಿಂದ ಲಂಚ ಪಡೆದು ನಲ್ಲಿ ಸಂಪರ್ಕ ಕಲ್ಪಿಸುತ್ತಿದ್ದಾರೆ.

ಪ್ರತ್ಯೇಕ ತೆರಿಗೆ: ಗೃಹೋಪಯೋಗಿ ಹಾಗೂ ವಾಣಿಜ್ಯ ಉದ್ದೇಶದ ನಲ್ಲಿ ಸಂಪರ್ಕಕ್ಕೆ ನಗರಸಭೆಯು ಪ್ರತ್ಯೇಕ ತೆರಿಗೆ ನಿಗದಿಪಡಿಸಿದೆ. ಗೃಹೋಪಯೋಗಿ ಉದ್ದೇಶಕ್ಕೆ ತಿಂಗಳಿಗೆ ₹ 120 ಹಾಗೂ ವಾಣಿಜ್ಯ ಉದ್ದೇಶದ ನಲ್ಲಿ ಸಂಪರ್ಕಕ್ಕೆ ₹ 240 ತೆರಿಗೆ ಇದೆ. ಮುಖ್ಯವಾಗಿ ಹೋಟೆಲ್‌, ಕಲ್ಯಾಣ ಮಂಟಪ, ವಾಣಿಜ್ಯ ಸಮುಚ್ಚಯ ಹಾಗೂ ನರ್ಸಿಂಗ್‌ ಹೋಂಗಳು ವಾಣಿಜ್ಯ ಉದ್ದೇಶದ ನಲ್ಲಿ ಸಂಪರ್ಕ ಪಡೆದಿವೆ.

ಪ್ರತಿ ವರ್ಷ ನಗರಸಭೆ ಆಯವ್ಯಯದಲ್ಲಿ ನೀರಿನ ತೆರಿಗೆ ಸಂಗ್ರಹದ ಗುರಿ ನಿಗದಿ ಮಾಡಲಾಗುತ್ತದೆ. ವರ್ಷದಿಂದ ವರ್ಷಕ್ಕೆ ತೆರಿಗೆ ಸಂಗ್ರಹದ ಗುರಿಯನ್ನು ಪರಿಷ್ಕರಿಸಲಾಗುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 94 ಲಕ್ಷ ನೀರಿನ ತೆರಿಗೆ ಸಂಗ್ರಹದ ಗುರಿ ಇದ್ದು, ಏಪ್ರಿಲ್‌ನಿಂದ ನವೆಂಬರ್‌ ಅಂತ್ಯದವರೆಗೆ ಸುಮಾರು ₹ 59 ಲಕ್ಷ ತೆರಿಗೆ ಸಂಗ್ರಹವಾಗಿದೆ.

ನೀರು ಬರದಿದ್ದರೂ ತೆರಿಗೆ: ‘ನಗರಸಭೆ ನಲ್ಲಿಗಳಲ್ಲಿ ನೀರು ಬರುತ್ತಲೇ ಇಲ್ಲ. ಈ ಬಗ್ಗೆ ಬಡಾವಣೆಯ ವಾಟರ್‌ ಮೆನ್‌, ವಾರ್ಡ್‌ ಸದಸ್ಯರು ಹಾಗೂ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ದೂರು ಕೊಟ್ಟರೂ ಸಮಸ್ಯೆ ಬಗೆಹರಿದಿಲ್ಲ. ನಲ್ಲಿಯಲ್ಲಿ ನೀರು ಬರದೆ ಇದ್ದರೂ ನಗರಸಭೆಯು ನೀರಿನ ತೆರಿಗೆ ವಿಧಿಸುತ್ತಿದೆ. ನೀರಿನ ಸೌಕರ್ಯ ಪಡೆಯದಿದ್ದ ಮೇಲೆ ತೆರಿಗೆ ಏಕೆ ಕಟ್ಟಬೇಕು’ ಎಂಬುದು ನಗರವಾಸಿಗಳ ವಾದ.

ಅನಧಿಕೃತ ಮತ್ತು ನೀರಿನ ತೆರಿಗೆ ಕಟ್ಟದ ಕಟ್ಟಡಗಳ ನಲ್ಲಿ ಸಂಪರ್ಕಗಳನ್ನು  ನಗರಸಭೆ ಅಧಿಕಾರಿಗಳು ನೀರಿನ ತೆರಿಗೆ ಕಟ್ಟದ ಕಟ್ಟಡಗಳ ಮಾಲೀಕರಿಗೆ ಮೂರು ಬಾರಿ ನೋಟಿಸ್‌ ಕೊಟ್ಟು ನಲ್ಲಿ ಸಂಪರ್ಕ ಕಡಿತಗೊಳಿಸಬಹುದು. ಆದರೆ, ಅಧಿಕಾರಿಗಳು ರಾಜಕೀಯ ಒತ್ತಡದ ಕಾರಣದಿಂದಾಗಿ ಈ ಕ್ರಮಕ್ಕೆ ಮುಂದಾಗುತ್ತಿಲ್ಲ.

ಮತ್ತೊಂದೆಡೆ ಕರ ವಸೂಲಿಗಾರರು ಸೇರಿದಂತೆ ನಗರಸಭೆಯಲ್ಲಿನ ಬಹುಪಾಲು ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಇವೆ. ಇದರಿಂದ ತೆರಿಗೆ ವಸೂಲಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ. ಸಿಬ್ಬಂದಿ ಕೊರತೆಯ ಕಾರಣಕ್ಕೆ ತೆರಿಗೆ ವಸೂಲಿ ಜವಾಬ್ದಾರಿಯನ್ನು ಪೌರ ಕಾರ್ಮಿಕರಿಗೆ ವಹಿಸಲಾಗಿದೆ. ಆದರೆ, ಪ್ರತಿ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ನೀರಿನ ತೆರಿಗೆ ವಸೂಲಾಗದ ಕಾರಣ ತೆರಿಗೆ ಬಾಕಿ ಏರು ಗತಿಯಲ್ಲಿ ಸಾಗಿದೆ. ಸದ್ಯ ₹ 1.87 ಕೋಟಿ ನೀರಿನ ತೆರಿಗೆ ಬಾಕಿ ಇದ್ದು, ಇದನ್ನು ವಸೂಲಿ ಮಾಡುವುದು ನಗರಸಭೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT