ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಠಿ, ಕೋವಿ ಶಬ್ದಗಳ ಮಧ್ಯೆ ಜ್ಞಾನ ಲಹರಿ

ಸಶಸ್ತ್ರ ಮೀಸಲು ಪೊಲೀಸ್‌ ವಸತಿ ಗೃಹಗಳ ಕೋಣೆಯಲ್ಲೊಂದು ಕದ ತೆರೆದ ಗ್ರಂಥಾಲಯ
Last Updated 2 ಜನವರಿ 2017, 9:52 IST
ಅಕ್ಷರ ಗಾತ್ರ

ಯಾದಗಿರಿ: ಆ ವೃತ್ತಿಯೇ ಹಾಗೆ ಸದಾ ಒತ್ತಡ... ಬಿಡುವಿಲ್ಲದ ದಣಿವು... ಹಗಲು ರಾತ್ರಿ ಎಂಬುದಿಲ್ಲ. ಸೇವೆಗಾಗಿ ಸದಾ ಸನ್ನದ್ಧರಾಗಿರಬೇಕು... ಇಷ್ಟೆಲ್ಲಾ ಒತ್ತಡದಿಂದ ಹೊರಬಂದು ಪೊಲೀಸರು ನಿರಾಳವಾಗಿ ಜ್ಞಾನದೀವಿಗೆ ಹಿಡಿಯಲಿ ಎಂಬ ಉದ್ದೇಶದಿಂದ ಇಲ್ಲಿನ  ಸಶಸ್ತ್ರ ಮೀಸಲು ಪೊಲೀಸ್‌ ಪಡೆ ಠಾಣೆಯ ಕೋಣೆಯೊಂದರಲ್ಲಿ ಗ್ರಂಥಾಲಯವೊಂದು ಕದ ತೆರೆದುಕೊಂಡಿದೆ.

ಕಾನ್‌ಸ್ಟೆಬಲ್‌ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಉನ್ನತ ಗುರಿ ಸಾಧಿಸಬೇಕೆಂಬ ಹಪಹಪಿ ಎಷ್ಟೋ ಕಾನ್‌ಸ್ಟೆಬಲ್‌ಗಳಿಗೆ ಇರುತ್ತದೆ. ಆದರೆ, ಅದಕ್ಕೆ ಪೂರಕ ಅವಕಾಶಗಳ ಕೊರತೆ ಇರುತ್ತದೆ. ಅವಕಾಶಕ್ಕಾಗಿ ಅವರು ಪಡುವ ಕಷ್ಟ ಅಷ್ಟಿಷ್ಟಲ್ಲ. ಮಾಹಿತಿ ಹಾಗೂ ಪುಸ್ತಕಗಳ ಕೊರತೆಯಿಂದಲೂ ಬಹಳಷ್ಟು ಮಂದಿ ಕಾನ್‌ಸ್ಟೆಬಲ್‌ಗಳು ಉನ್ನತ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ, ಇಲಾಖೆ ನಡೆಸುವ ಪರೀಕ್ಷೆಗಳಿಂದ ಹಿಂದೆ ಸರಿದಿರುವ ಉದಾಹರಣೆಗಳಿವೆ.

ಈ ಕಾರಣಕ್ಕಾಗಿಯೇ ಮೀಸಲು ಸಶಸ್ತ್ರ ಪೊಲೀಸ್‌ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಕೇದಾರನಾಥ ಅವರು ವಿಶೇಷ ಆಸಕ್ತಿ ವಹಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರ ಅನುಮತಿ ಮೇರೆಗೆ ಜಿಲ್ಲಾ ಪಂಚಾಯಿತಿಯಿಂದ ಅನುದಾನ ಪಡೆದು ಠಾಣಾ ಕೋಣೆಯಲ್ಲಿ ಗ್ರಂಥಾಲಯ ಕದ ತೆರೆಯುವಂತೆ ಶ್ರಮಿಸಿದ್ದಾರೆ.

ಈ ಜ್ಞಾನ ಭಂಡಾರದಲ್ಲಿ ಐಎಎಸ್, ಐಪಿಎಸ್, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ನಡೆಸಲು ಬೇಕಾಗುವಷ್ಟು ಮಾಹಿತಿ ನೀಡುವ ಪುಸ್ತಕಗಳ ಹರವು ಇದೆ. ಸದ್ಯ ₹ 1ಲಕ್ಷಮೌಲ್ಯದ ಪುಸ್ತಕಗಳು ಈ ಗ್ರಂಥಾಲಯದಲ್ಲಿ ಲಭ್ಯ ಇವೆ.

ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಷ್ಟೇ ಅಲ್ಲ, ಸಾಮಾನ್ಯ ಜ್ಞಾನ, ಐತಿಹಾಸಿಕ, ವಿದೇಶ, ವಿಜ್ಞಾನ, ಪತ್ರಿಕೋದ್ಯಮ ಮತ್ತು ಅಧ್ಯಾತ್ಮಕ್ಕೆ ಸಂಬಂಧಿಸಿದಂತೆ ಅಮೂಲ್ಯ ಪುಸ್ತಕಗಳ ಸಂಗ್ರಹವನ್ನು ಗ್ರಂಥಾಲಯ ಹೊಂದಿದೆ. ಇದರೊಂದಿಗೆ ನಿತ್ಯ ಹತ್ತಾರು ನಿಯತಕಾಲಿಕಗಳು ಗ್ರಂಥಾಲಯಗಳಲ್ಲಿ ಸಿಗುತ್ತವೆ.

80ಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿಗಳ ಹಾಗೂ 70ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ವಸತಿ ಗೃಹಗಳಿರುವುದರಿಂದ ಒಂದು ಪುಟ್ಟ ನೌಕರರ ಜನಸಂದಣಿ ಇರುವ ಪ್ರದೇಶವನ್ನು ಜಿಲ್ಲಾ ಮೀಸಲು ಸಶಸ್ತ್ರ ಪೊಲೀಸ್ ಠಾಣಾ ಮೈದಾನ ಒಳಗೊಂಡಿದೆ. ನಗರದಿಂದ ಮೂರು ಕಿ.ಮೀ. ದೂರದ ಹೊರವಲಯದಲ್ಲಿ ಇರುವುದರಿಂದ ಇಲ್ಲಿ ಅಗತ್ಯ ವಸ್ತುಗಳು ತಕ್ಷಣ ಸಿಗುವುದಿಲ್ಲ. ಇಲಾಖೆಯ ಕ್ಯಾಂಟೀನ್ ನೌಕರರ ದೈನಂದಿನ ವಸ್ತುಗಳನ್ನು ಪೂರೈಸುತ್ತಿದೆ.

‘ಇಲಾಖೆಯಲ್ಲಿ ಯುವಕರೇ ಹೆಚ್ಚಾಗಿ ಇದ್ದಾರೆ. ಅಂತಹವರಿಗೆ ಉನ್ನತ ಹುದ್ದೆ ಪಡೆಯುವ ಹಂಬಲ ಇರುತ್ತದೆ. ಆದರೆ, ಪೂರಕ ಆರ್ಥಿಕ ಶಕ್ತಿ ಮತ್ತು ಸಮಯಾವಕಾಶ ಇರುವುದಿಲ್ಲ. ಕಾನ್‌ಸ್ಟೆಬಲ್‌ಗೆ ಮಾಸಿಕ ₹ 16ರಿಂದ 18 ಸಾವಿರ ವೇತನ ಸಿಗುತ್ತದೆ. ತಿಂಗಳ ಪೂರ್ತಿ ಕುಟುಂಬ ಮತ್ತು ಮಕ್ಕಳ ಪೋಷಣೆಗೆ ವೇತನ ಸಾಲುವುದಿಲ್ಲ. ಇನ್ನು ಸಾವಿರಾರು ರೂಪಾಯಿ ವೆಚ್ಚಮಾಡಿ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವ ತಯಾರಿ ಮಾಡಲು ಸಾಧ್ಯವಿಲ್ಲ. ಅಂತಹವರ ಕನಸು ಕೊನರಿಸುವುದಕ್ಕಾಗಿಯೇ ಗ್ರಂಥಾಲಯ ತೆರೆಯಲಾಗಿದೆ. ಪೊಲೀಸರು ಇದರ ಸದುಪಯೋಗ ಪಡೆದುಕೊಳ್ಳಬೇಕಷ್ಟೇ’ ಎನ್ನುತ್ತಾರೆ ಮೀಸಲು ಸಶಸ್ತ್ರ ಪೊಲೀಸ್‌ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಕೇದಾರನಾಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT