ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾಗಲಿದೆ ಅವಿಶ್ವಾಸ ಮಂಡನೆ?

ನಗರಸಭೆ ಅಧ್ಯಕ್ಷ ಪಟ್ಟ: ಜೆಡಿಎಸ್‌, ಪಕ್ಷೇತರ ಸದಸ್ಯರ ನಿರ್ಧಾರ ನಿರ್ಣಾಯಕ
Last Updated 2 ಜನವರಿ 2017, 10:44 IST
ಅಕ್ಷರ ಗಾತ್ರ

ಮಂಡ್ಯ: ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಅವರ ವಿರುದ್ಧ ಮಂಡಿಸಿರುವ ಅವಿಶ್ವಾಸ ಮಂಡನೆ ಸಭೆಯು ಜ. 5ರಂದು ನಡೆಯಲಿದೆ. ಅಧ್ಯಕ್ಷರು ಸ್ಥಾನ ಉಳಿಸಿಕೊಳ್ಳುವ ಯತ್ನ ಮಾಡುತ್ತಿದ್ದರೆ, ಅವಿಶ್ವಾಸ ಮಂಡಿಸಿ­ದವರು ಕೆಳಗೆ ಇಳಿಸಲು ಬೇಕಾದ ಯತ್ನಗಳನ್ನು ಮುಂದುವರೆಸಿದ್ದಾರೆ.

ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಅವಿಶ್ವಾಸ ಸೂಚಿಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದರು. ಅವರು ಸಭೆ ಕರೆಯಲಿಲ್ಲ ಎಂದು ಉಪಾಧ್ಯಕ್ಷೆ ಸುಮಾರಾಣಿ ಅವರಿಗೆ ಮನವಿ ಸಲ್ಲಿಸಿದ್ದರು. ಅವರು, ಜ. 5ರಂದು ಅವಿಶ್ವಾಸ ಮಂಡನೆಗೆ ಕುರಿತಂತೆ ಸಭೆ ಕರೆದಿದ್ದು, ಕುತುಹೂಲ ಮೂಡಿಸಿದೆ.

ತೆರೆಮರೆಯಲ್ಲಿ ಎರಡೂ ಬಣಗಳು ಕಸರತ್ತು ನಡೆಸಿವೆ. ಸದಸ್ಯರನ್ನು ತಮ್ಮ ಗುಂಪಿನತ್ತ ಸೆಳೆಯುವ ಪ್ರಯತ್ನವನ್ನು ಮುಂದುವರೆಸಿವೆ. ತಮ್ಮತ್ತ ಸೆಳೆಯಲು ಬೇರೆ, ಬೇರೆ ಕಡೆಗಳಿಂದ ಒತ್ತಡ ಹಾಕಿಸುವ ಕೆಲಸವನ್ನೂ ಮಾಡಲಾಗುತ್ತಿದೆ.

ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಕಾಂಗ್ರೆಸ್‌ ಹಾಗೂ ಪಕ್ಷ ಬೆಂಬಲಿಸುತ್ತಿರುವ ಕೆಲ ಸದಸ್ಯರ ಸಭೆಯನ್ನು ನಡೆಸಲಾಗಿದೆ. ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌. ಆತ್ಮಾನಂದ, ಮುಖಂಡ ಅಮರಾವತಿ ಚಂದ್ರಶೇಖರ್‌ ಭಾಗವಹಿಸಿದ್ದರು. ಕೆಲವರು ಬಿಟ್ಟರೆ, ಬಹುತೇಕರು ಮುಂದುವರೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಶಾಸಕ ಅಂಬರೀಷ್‌ ನಿರ್ಧಾರ ಏನು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಜ. 3ರಂದು ಅಂಬರೀಷ್‌ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ ಎನ್ನಲಾಗಿದ್ದು, ಆಗ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎನ್ನಲಾಗುತ್ತಿದೆ.

‘ಅಂಬರೀಷ್‌ ಅವರು ನಮ್ಮ ನಾಯಕರು. ಅವರಿಗೆ ಎಲ್ಲ ಗೊತ್ತಿದೆ. ಶೀಘ್ರದಲ್ಲಿಯೇ ಅವರು ಮಂಡ್ಯಕ್ಕೆ ಬಂದು ಸಮಸ್ಯೆ ಬಗೆಹರಿಸಲಿದ್ದಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ.

37 ಮಂದಿ ಸದಸ್ಯರು: ನಗರಸಭೆಗೆ 35 ಮಂದಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇವರಲ್ಲದೇ ಶಾಸಕ ಅಂಬರೀಷ್‌, ಸಂಸದ ಸಿ.ಎಸ್‌. ಪುಟ್ಟರಾಜು ಅವರೂ ಮತ ಹೊಂದಿದ್ದಾರೆ. ಹಾಗಾಗಿ ಒಟ್ಟು 37 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ.

ಕಾಂಗ್ರೆಸ್‌ನ 15 ಮಂದಿ, ಜೆಡಿಎಸ್‌ನ 9, ಪಕ್ಷೇತರರಾಗಿ 10 ಹಾಗೂ ಒಬ್ಬರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಅವರೂ ಈಗ ಕಾಂಗ್ರೆಸ್‌ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಅಧ್ಯಕ್ಷರ ವಿರುದ್ಧ ಮಂಡಿಸಿರುವ ಅವಿಶ್ವಾಸ ಯಶಸ್ವಿಯಾಗಬೇಕಾದರೆ 25 ಮಂದಿ ಸದಸ್ಯರ ಬೆಂಬಲ ಬೇಕು. ಅಧ್ಯಕ್ಷರು ಉಳಿದುಕೊಳ್ಳಲು 13 ಮತಗಳ ಅವಶ್ಯಕತೆ ಇದೆ.

ಜೆಡಿಎಸ್‌ ಹಾಗೂ ಪಕ್ಷೇತರರು ನಿರ್ಣಾಯಕ: ಅಧ್ಯಕ್ಷರ ವಿರುದ್ಧ ಮಂಡಿಸಿರುವ ಅವಿಶ್ವಾಸದಲ್ಲಿ ಯಶಸ್ಸು ಸಾಧಿಸಬೇಕಾದರೆ ಕಾಂಗ್ರೆಸ್‌ ಪಕ್ಷಕ್ಕೆ ಜೆಡಿಎಸ್‌ ಅಥವಾ ಪಕ್ಷೇತರ ಬಹುತೇಕ ಸದಸ್ಯರ ಬೆಂಬಲ ಬೇಕು.

ಹಿಂದೆ ಅಧ್ಯಕ್ಷರನ್ನು ಇಳಿಸುವಾಗ ಅಧಿಕಾರ ಹಂಚಿಕೆ ಭರವಸೆ ನೀಡಿದ್ದ ಕಾಂಗ್ರೆಸ್‌ ಪಕ್ಷ ನಂತರ ಜೆಡಿಎಸ್‌ಗೆ ಕೈಕೊಟ್ಟಿತ್ತು. ಇದೇ ಕಾರಣಕ್ಕೆ ಎರಡನೇ ಬಾರಿ ಅಧ್ಯಕ್ಷ ಚುನಾವಣೆ ವೇಳೆ ಕೆಲ ಪಕ್ಷೇತರರನ್ನು ಸೇರಿಸಿಕೊಂಡು ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನೀಡಿತ್ತು.

ಜೆಡಿಎಸ್‌ ಪಕ್ಷದ ನಿಲುವು ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಜತೆಗೆ ಕೆಲ ಪಕ್ಷೇತರರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಅವರ ನಿರ್ಣಯವೇ ಅವಿಶ್ವಾಸದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT