ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಿ ಚಳಿಗೆ ಮಡಿಕೇರಿ ಗಡಗಡ...

ಸ್ವೆಟರ್‌, ಟೋಪಿ, ಬೂಟ್‌, ಗ್ಲೌಸ್‌ ಮೊರೆ ಹೋದ ಜನರು
Last Updated 2 ಜನವರಿ 2017, 11:23 IST
ಅಕ್ಷರ ಗಾತ್ರ

ಮಡಿಕೇರಿ: ಹಾ ಏನ್‌ ಚಳಿ ಅಲ್ವಾ... ಎಲ್ಲೆಲ್ಲೂ ಇದೇ ಮಾತು. ಮಾಗಿಯ ಚಳಿಗೆ ಕೊಡಗು ಜಿಲ್ಲೆ ಥಂಡಿ ಆಗಿದೆ. ಬೆಳ್ಳಂಬೆಳಿಗ್ಗೆ ಎದ್ದು ವಾಕಿಂಗ್‌ಗೆ ತೆರಳಲು ಆಗದ ಸ್ಥಿತಿಯಿದೆ.ಮಂಜು ಕಾಣಿಸ ದಿದ್ದರೂ ಚಳಿ ಅನುಭವ ವಿಪರೀತ... ಕಳೆದೊಂದು ವಾರದಿಂದ ಇತ್ತೀಚೆಗೆ ಜಿಲ್ಲೆಯಲ್ಲಿ ಜನರಿಗೆ ಚಳಿಯ ಅನುಭವ ಉಂಟಾಗುತ್ತಿದೆ.

ಮೈಕೊರೆಯುವ ಚಳಿಯಿಂದ ಪಾರಾಗಲು ಜನರು ಬೆಂಕಿಯ ಮೊರೆ ಹೋಗುತ್ತಿದ್ದಾರೆ. ಮಡಿಕೇರಿ ನಗರದ ಅಲ್ಲಲ್ಲಿ ವೃದ್ಧರು ಸಂಜೆ– ಬೆಳಿಗ್ಗೆ ರಸ್ತೆ ಪಕ್ಕದಲ್ಲಿ ನಿಂತು ಪೇಪರ್‌, ಕಟ್ಟಿಗೆ ಸಂಗ್ರಹಿಸಿ ಬೆಂಕಿಗೆ ಮೈಯೊಡ್ಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಗುಡಿಸಲುಗಳಲ್ಲಿ ವಾಸವಿರುವ ಕಾರ್ಮಿಕರು ಪರದಾಡುತ್ತಿದ್ದಾರೆ.

ಕೈಗೆ ಗ್ಲೌಸ್‌, ಟೋಪಿ, ಸ್ವೆಟರ್‌, ಬೂಟ್‌ ಹಾಕಿಕೊಂಡು ಹೋದರೂ ಚಳಿ ತಡೆಯಲು ಆಗುತ್ತಿಲ್ಲ ಎನ್ನುತ್ತಾರೆ ದ್ವಿಚಕ್ರ ವಾಹನ ಸವಾರರು. ವಾಕಿಂಗ್‌ ಹೋಗುವ ಜನರ ಡ್ರೆಸ್‌ನಲ್ಲೂ ಬದಲಾ ವಣೆ ಆಗಿದೆ. ಶಾಲು, ಸ್ವೆಟರ್‌ ಇಲ್ಲದೇ ಹೊರ ಹೋಗಲು ಆಗುತ್ತಿಲ್ಲ ಎನ್ನುತ್ತಾರೆ ವಾಕಿಂಗ್‌ ಪ್ರಿಯರು.

ಡಿ.25ರ ಕ್ರಿಸ್‌ಮಸ್‌ ದಿನದಂದು ವಿಪರೀತ ಚಳಿಯಿತ್ತು. ಕೊಡಗು ಜಿಲ್ಲೆಯ ಪ್ರವಾಸಕ್ಕೆ ಬಂದವರು ಚಳಿಗೆ ತತ್ತರಿಸಿ ಹೋದರು. ಚಳಿಯನ್ನು ತಡೆಯಲಾಗದೆ ಕಂಡ ಕಂಡ ಅಂಗಡಿಗಳಿಗೆ ಎಡತಾಕಿ ಸ್ವೆಟರ್‌, ಮಂಕಿ ಕ್ಯಾಪ್‌ ಖರೀದಿಸಿದರು. ಅಂದು ಮಡಿಕೇರಿಯಲ್ಲಿ ಗರಿಷ್ಠ 27, ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಒಂದು ವಾರದಿಂದ ಕನಿಷ್ಠ ಉಷ್ಣಾಂಶ ಕಳೆದ ವಾರದಿಂದ ಇದೇ ಆಸುಪಾಸಿನಲ್ಲೇ ಮುಂದುವರಿ ಯುತ್ತಿದ್ದು, ತೋಟದ ಮಧ್ಯದಲ್ಲಿ ಇರುವ ಮನೆಗಳಲ್ಲಿ ಚಳಿಯ ಹಿತಾನುಭವ ಉಂಟಾಗುತ್ತಿದೆ.

ಹಗಲು ವೇಳೆಯೂ ಚಳಿಯಿದೆ. ಸೂರ್ಯ ನೆತ್ತಿಯ ಮೇಲೆ ಬಂದಾಗ ಸ್ವಲ್ಪ ಬಿಸಿಲು ತಾಗುತ್ತಿರುವುದನ್ನು ಹೊರತು ಪಡಿಸಿದರೆ ಸಂಜೆಯಾಗುತ್ತಿದ್ದಂತೆ ಮತ್ತೆ ಥಂಡಿ... ಅರಣ್ಯ ಪ್ರದೇಶಕ್ಕೆ ಹೊಂದಿ ಕೊಂಡಿರುವ ಗ್ರಾಮಗಳಲ್ಲಿ ಮಾಗಿಯ ಚಳಿಗೆ ಜನರು ಹೈರಾಣಾಗಿದ್ದಾರೆ. ಈಗಾಗಲೇ ಸೋಮವಾರಪೇಟೆ, ವಿರಾಜ ಪೇಟೆ, ಮಡಿಕೇರಿ ತಾಲ್ಲೂಕಿನ ವಿವಿಧೆಡೆ ಭತ್ತದ ಕೊಯ್ಲು ಪೂರ್ಣಗೊಂಡಿದ್ದು, ಸಂಜೆಯ ಬಳಿಕ ಒಕ್ಕಣೆ ಕಾರ್ಯಕ್ಕೆ ಚಳಿ ಅಡ್ಡಿ ಪಡಿಸುತ್ತಿದೆ. ಕುಶಾಲನಗರದಿಂದ ಮಡಿಕೇರಿಗೆ ಆರು ಗಂಟೆಯ ಮೇಲೆ ಬಂದರೆ ವಾಹನ ಚಾಲನೆ ಮಾಡಲು ಸಾಧ್ಯವಾಗುತ್ತಿಲ್ಲ.

ವ್ಯಾಪಾರಕ್ಕೆ ವರ:  ಚಳಿ ಅನುಭವ ಪಡೆಯಲು ಕೊಡಗಿನತ್ತ ಪ್ರವಾಸಿಗರೇ ದಂಡೇ ಹರಿದು ಬರುತ್ತಿದೆ. ಚಳಿಯ ನಡುವೆ ಪ್ರವಾಸಿ ತಾಣಗಳಲ್ಲಿ  ಪ್ರವಾಸಿಗರು ವಿಹರಿಸುತ್ತಿದ್ದಾರೆ. ಳಿಗೆ ಬೆಚ್ಚಗಿರಲು ಕಾಫಿ, ಟೀ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಭಜ್ಜಿ, ಬೋಂಡಾ ಮಾರಾಟ ಜೋರಾಗಿದೆ. ಬೆಚ್ಚಗಿರಲು ಮಾಂಸಾಹಾರಿ ಹೋಟೆಲ್‌ ಗಳ ಮುಂದೆಯೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕಾಣಿಸುತ್ತಿದ್ದಾರೆ. 

ಚಳಿಯ ತೀವ್ರತೆಯಿಂದ ರಾತ್ರಿಯಿಡೀ ಜಿಲ್ಲೆಯ ಜನರು ತತ್ತರಿಸುವಂತೆ ಆಗಿದೆ. ಬೆಚ್ಚನೆಯ ಹೊದಿಕೆ ಮೊರೆ ಹೊಕ್ಕರೂ, ಚಳಿಯ ತೀವ್ರತೆ ಕಡಿಮೆಯಾಗುತ್ತಿಲ್ಲ. ಮುಸ್ಸಂಜೆಯಲ್ಲಿ ಬೀಸುವ ಕುಳಿರ್ಗಾಳಿಗೆ ಅಂಜಿ, ಮನೆಯಿಂದ ಜನರು ಹೊರ ಬರುತ್ತಿಲ್ಲ. ನದಿ ಹಾಗೂ ಅರಣ್ಯದಂಚಿನ ಮನೆಗಳಲ್ಲಿ ಚಳಿಯ ಅನುಭವ ಜೋರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT