ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಅರಿಯಲು ಯುವಜನ ಮೇಳ ಸಹಕಾರಿ

ತಾಲ್ಲೂಕುಮಟ್ಟದ ಯುವಜನಮೇಳದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ ಅಭಿಪ್ರಾಯ
Last Updated 2 ಜನವರಿ 2017, 11:41 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರಚಾರಪಡಿಸಲು ಯುವಜನ ಮೇಳ ಉತ್ತಮ ವೇದಿಕೆ ಕಲ್ಪಿಸುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ ಹೇಳಿದರು. ನಗರದ ಡಿ.ದೇವರಾಜ ಅರಸು ಭವನದಲ್ಲಿ ಶನಿವಾರ ಸಾಯಂಕಾಲ ನಡೆದ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ನಡೆದ ತಾಲ್ಲೂಕುಮಟ್ಟದ ಯುವಜನಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರ ಪ್ರತಿಭೆ ಗುರುತಿಸಲು ಯುವಜನಮೇಳ ಸಹಕಾರಿಯಾಗಿದೆ. ಜಿಲ್ಲೆಯ ಕಲೆ, ಸಂಸ್ಕೃತಿ ಬೆಳೆಸುವ  ನಿಟ್ಟಿನಲ್ಲಿ ಯುವಜನರು ಮುಂದಾಗಬೇಕು ಎಂದು ಸಲಹೆ ನೀಡಿದರು. ತಾಲ್ಲೂಕುಮಟ್ಟದಲ್ಲಿ ವಿಜೇತರಾದವರು ಜಿಲ್ಲಾಮಟ್ಟದಲ್ಲಿ ಭಾಗವಹಿಸಲಿದ್ದಾರೆ. ನಂತರ ರಾಜ್ಯಮಟ್ಟದ ಕಾರ್ಯಕ್ರಮ ನಡೆಯಲಿದ್ದು, ಯುವ ಪ್ರತಿಭೆಗಳು ಹೆಚ್ಚಿನ ಅಭ್ಯಾಸ ನಡೆಸಬೇಕು ಎಂದರು.

ಜಿಲ್ಲೆಯ ಗೊರವರ ಕುಣಿತ, ಕಂಸಾಳೆ ಸೇರಿದಂತೆ ಹಲವು ಜನಪದ ಕಲಾವಿದರು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಅಂಥಹ ಕಲಾವಿದರ ಮಾರ್ಗದರ್ಶನವನ್ನು ಯುವ ಕಲಾವಿದರು ಪಡೆದು ರಾಷ್ಟ್ರಮಟ್ಟದಲ್ಲಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ತಿಳಿಸಿದರು.

ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಚಾಮರಾಜನಗರ ಜಿಲ್ಲೆಯು ಜನಪದ ಕಲೆಗಳ ತವರೂರು. ಜಿಲ್ಲೆ ಉತ್ತಮ ಕಲಾವಿದರನ್ನು ನಾಡಿಗೆ ಕೊಡುಗೆಯಾಗಿ ನೀಡಿದೆ.ದೇಶ, ವಿದೇಶದಲ್ಲಿ ನಮ್ಮ ಕಲಾವಿದರು ಕಾರ್ಯಕ್ರಮ ನೀಡಿದ್ದಾರೆ ಎಂದರು.

ಮಂಟೇಸ್ವಾಮಿ, ಮಹದೇಶ್ವರರು ಓಡಾಡಿದ ಪುಣ್ಯಭೂಮಿ ಚಾಮರಾಜನಗರ. ಇಲ್ಲಿ ಜನಿಸಿದ ಯುವ ಪ್ರತಿಭೆಗಳು ಉತ್ತಮ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ಸಲಹೆಯನ್ನು  ನೀಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕಿನ ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಭಾವಗೀತೆ, ರಂಗಗೀತೆ, ಏಕಪಾತ್ರಾಭಿನಯ, ಲಾವಣಿ, ಜನಪದ ಗೀತೆ, ಜನಪದ ನೃತ್ಯ, ಕೋಲಾಟ, ಭಜನೆ, ಸೋಬಾನೆ ಪದ, ರಾಗಿ ಬೀಸುವ ಕಲ್ಲಿನ ಪದ, ಚರ್ಮವಾದ್ಯ ಮೇಳ ಈ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿಯ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿಸಮಿತಿಯ ಅಧ್ಯಕ್ಷ ಕೆ.ಪಿ. ಸದಾಶಿವಮೂರ್ತಿ, ಸದಸ್ಯೆ ಶಶಿಕಲಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ. ಚಂದ್ರು, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಂ. ಚಲುವಯ್ಯ, ಕ್ರೀಡಾ ಇಲಾಖೆಯ ಸಂಯೋಜಕ ಬಸವಣ್ಣ, ವ್ಯವಸ್ಥಾಪಕ ಕೆ. ರಂಗಸ್ವಾಮಿ, ವ್ಯಾಯಾಮ ತರಬೇತಿ ಶಿಕ್ಷಕ ದೊರೆಸ್ವಾಮಿ, ಜಿಮ್ ತರಬೇತಿದಾರ ಆರ್. ರೇವಣ್ಣ, ಯುವ ಪರಿವೀಕ್ಷಕರಾದ ಮಹೇಶ್, ರವಿಕುಮಾರ್, ಮಾದಲಾಂಬಿಕಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT