ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಳದ ಗೆಣಸು

Last Updated 2 ಜನವರಿ 2017, 19:30 IST
ಅಕ್ಷರ ಗಾತ್ರ

ಕೆಲವು ದಿನಗಳ ಹಿಂದೆ ಗ್ರೋ ಬ್ಯಾಗಿನ ಗೆಣಸಿನ ಬಳ್ಳಿಯ ಎಲೆಗಳು ಬಾಡಲಾರಂಭಿಸಿದ್ದವು. ನೀರು ಸಾಕಾಗುತ್ತಿಲ್ಲವೆಂದುಕೊಂಡು ಎರಡು ದಿನ ನೀರುಣಿಸಿದೆ. ಎಲೆಗಳೇನೋ ತಲೆಯೆತ್ತಿಕೊಂಡವು, ಆದರೆ ಯಾಕೋ ಅನುಮಾನವಾಗಿ ಬಳ್ಳಿಯ ಬುಡಕ್ಕೆ ಕೈ ಹಾಕಿದರೆ ಗಟ್ಟಿಯಾದದ್ದೇನೋ ಚೀಲದ ಅಡಿಯಲ್ಲಿದ್ದುದು ಭಾಸವಾಯಿತು. ಚೀಲ ಎತ್ತಿ ನೋಡಿದರೆ, ಎರಡು ಉದ್ದುದ್ದ ಗಡ್ಡೆಗಳು ಮಂದಹಾಸ ಬೀರುತ್ತ ಮಲಗಿದ್ದವು.

ಗಡ್ಡೆ ಬಲಿತದ್ದು ಗೊತ್ತಾಗುವುದು ಸಾಮಾನ್ಯವಾಗಿ ಬಳ್ಳಿ ಹೂಬಿಟ್ಟಾಗ. ಆದರೆ ಎಲ್ಲಾ ಬಾರಿಯೂ ಹೂವೇ ಬಿಡಬೇಕೆಂದಿಲ್ಲವೆನ್ನುವುದು ನಮ್ಮ ಇನ್ನೊಂದು ಸಂಗ್ರಹವಾದ ಯಾಮ್ ಗಡ್ಡೆಯ ಬಳ್ಳಿಯೂ ಒಣಗಿದಾಗ ನಮಗೆ ಮನದಟ್ಟಾಯಿತು. ಅದೂ ಅಷ್ಟೆ. ನೆಲದಡಿಯ ಗಡ್ಡೆ ಬೆಳೆಯುತ್ತಾ ಹೋದಂತೆ ಮೇಲಿನ ಬಳ್ಳಿ ಚೆಂದದ ತೆನೆ ಹೂ ಬಿಟ್ಟು ಅದರಿಂದ ಕೋಡುಗಳು ಮೂಡಿ, ಅವೂ ಬಲಿತು ಒಣಗುತ್ತಾ ಬರುತ್ತವೆ.

ಆ ಹಂತದಲ್ಲಿ ಕೋಡುಗಳನ್ನು ಕೊಯ್ದು ಬೀಜಗಳನ್ನು ಸಸ್ಯಾಭಿವೃದ್ಧಿಗೆಂದು ಉಳಿಸಿಕೊಂಡು ಗಡ್ಡೆಗಳನ್ನು ಕೀಳಬೇಕು. ಈ ಸಲ ಕಾರಣ ಗೊತ್ತಿಲ್ಲ, ಆದರೆ ಒಂದು ಯಾಮ್ ಬಳ್ಳಿ ಒಣಗಿ ಹೋಯಿತು. ವಾರದ ನಂತರ ಕಿತ್ತಾಗ ಗಡ್ಡೆಗಾಗಲೇ ಕೀಟಗಳ ಕ್ರಮಣ ಆರಂಭವಾಗಿತ್ತು. (ಅಂದ ಹಾಗೆ, ಈ ಯಾಮ್ ಗಡ್ಡೆ ಬೀಟ್ರೂಟಿನಂಥ, ಆದರೆ ಅಚ್ಚಬಿಳಿ ಗಡ್ಡೆ, ಹಸಿಯಾಗಿ ತಿನ್ನಲು ಬಲು ರುಚಿ, ಬೆಳೆಯುವುದೂ ಸುಲಭ. ಹತ್ತಾರು ಬಗೆಯ ಪದಾರ್ಥಗಳನ್ನೂ ಮಾಡಬಹುದು.)
ಇನ್ನು ತಡ ಮಾಡಬಾರದೆಂದು ಆರಾರೂಟ್  ಗಿಡಗಳನ್ನು ಪರೀಕ್ಷಿಸಿದೆ.

ಅವು ಬಾಡಿ ಆಗಲೇ ತಿಂಗಳಾಗ್ತಾ ಬಂದಿತ್ತು, ಅಗೆದಾಗ ಒಂದೆರಡು ಮಾತ್ರ ಕೊಳೆತಿದ್ದು, ಉಳಿದವೆಲ್ಲ ಸರಿಸ್ಥಿತಿಯಲ್ಲೇ ಇದ್ದವು. ಆರಾರೂಟು ಐದಾರು ಗಡ್ಡೆಗಳು ಮಾತ್ರವೇ ಇದ್ದರೆ ಅವುಗಳಿಂದ ಪುಡಿ ಮಾಡುವ ಶ್ರಮಕ್ಕಿಂತ ಸೀದಾ ಇಡಿಯಾಗಿ ಉಪ್ಪು ನೀರಲ್ಲಿ ಬೇಯಿಸಿದರೆ ತಣಿದ ನಂತರ ಅಗೆದು ತಿನ್ನಲು ರುಚಿಯಾಗುತ್ತದೆ. ಹಾಗೆಯೇ ಬೇಯಿಸಿ ನುರಿದು ಮಿಕ್ಸಿಗೆ ಹಾಕಿ, ಸೋಸಿ ಹಾಲು ಬೆಲ್ಲದೊಟ್ಟಿಗೆ ಬಿಸಿಮಾಡಿ ಕುಡಿದರೆ ಅತ್ಯುತ್ತಮ ತಾಜಾ ಪೇಯವಾಗುತ್ತದೆ. ಅಂಗಳದ ಗೆಣಸು ತಾನು ರೆಡಿಯಾಗಿದ್ದೇನೆಂದು ಇನ್ನೊಂದು ರೀತಿಯಲ್ಲಿ ತಿಳಿಸುತ್ತದೆ.

ಅದೇನು ಗೊತ್ತೆ? ನೆಲದಿಂದ ಗಡ್ಡೆಯ ಮೇಲು ಭಾಗ ಹೊರಕ್ಕಿಣುಕುತ್ತಿರುತ್ತದೆ. ಕೈತೋಟದಲ್ಲಿ ಇಲಿಯ ಕಾಟವಿದ್ದಲ್ಲಿ, ನೀವು ಗಡ್ಡೆಯ ಸಂಜ್ಞೆಗಳನ್ನು ಅರಿಯದೇ ಹೋದರೆ ಖಂಡಿತಾ ಅದು ಇಲಿಯ ಪಾಲಾಗುತ್ತದೆ!

ಇದೇ ರೀತಿ ಶುಂಠಿ, ಅರಿಶಿಣಗಳು ಹೂ ಬಿಟ್ಟು ತಾನು ಬಲಿತಿದ್ದನ್ನು ಸೂಚಿಸುತ್ತವೆ. ಅರಿಶಿಣವನ್ನು ಏಪ್ರಿಲ್‌ವರೆಗೂ ಕಾದು ಆ ನಂತರ ಕಿತ್ತು ಸಂಸ್ಕರಿಸಿಕೊಳ್ಳಬಹುದು. ಶುಂಠಿ ಮತ್ತು ಮಾವಿನ ಶುಂಠಿಗಳನ್ನು ಹಾಗೆಯೇ ನೆಲದಲ್ಲಿ ಉಳಿಸಿಟ್ಟು ಅಡುಗೆಗೆ ಬೇಕಾದಾಗ ಮಾತ್ರವೇ ಕಿತ್ತುಕೊಳ್ಳಬಹುದು ಅಥವಾ ಗಡ್ಡೆಗಳನ್ನು ಕಿತ್ತು ಮರಳಿನಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ಇನ್ನೊಂದು ಉಪಾಯವೆಂದರೆ, ಸಣ್ಣ ಬಿಲ್ಲೆಗಳಾಗಿ ಹೆಚ್ಚಿ ಬಿಸಿಲಲ್ಲಿ ಒಣಗಿಸಿ ಪುಡಿ ಮಾಡಿಟ್ಟುಕೊಂಡರೆ ಅತ್ಯಂತ ಉಪಯುಕ್ತ.

ಈ ಎಲ್ಲ ಗಡ್ಡೆಗಳು ಮಳೆಗಾಲದ ನೀರನ್ನು ಹೀರಿ, ಅತಿ ಕಡಿಮೆ ಗೊಬ್ಬರ ಹೀರಿ, ಅಂದರೆ ಕಡಿಮೆ ಮಾನವ ಶ್ರಮ ತಿಂದು ಅಮೃತಸಮಾನವಾದ ಫಲಕೊಡುವಂಥವು. ಮೇ ಕೊನೆಯಲ್ಲಿ ನೆಟ್ಟರೆ ನವೆಂಬರ್ - ಡಿಸೆಂಬರ್ ಅಥವಾ ಜನವರಿಗೆ ಅವು ರೆಡಿಯಾಗುತ್ತವೆ.

ಉಳಿದ ಕಾಲದಲ್ಲಿಯೂ ಬೆಳೆದುಕೊಳ್ಳಬಹುದು, ಆದರೆ ಆಗ ಅವು ಹೆಚ್ಚು ನೀರು ಮತ್ತು ನಿಗಾ ಬೇಡುತ್ತವೆ.  ತೋಟ ಮಾಡಿಕೊಂಡವರಿಗೆ, ಕುಂಡಗಳಲ್ಲಿ ಗಡ್ಡೆ ತರಕಾರಿಗಳನ್ನು ಬೆಳೆಯುವವರಿಗೆ ಈ ಟಿಪ್ಸ್ ಉಪಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT