ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗಶೀಲ ತೋಟ

ಹೊಸ ಹೆಜ್ಜೆ– 34
Last Updated 2 ಜನವರಿ 2017, 19:30 IST
ಅಕ್ಷರ ಗಾತ್ರ

ಸರಿಯಾದ ಮಳೆಯಾಗದೆ, ಉತ್ತಮ ಬೆಳೆ ಬರಲಿಲ್ಲವೆಂದು ಹತಾಶರಾಗಿ ಕೃಷಿ ಬಿಟ್ಟುಬಿಡುವವರ ನಡುವೆ  ವಿಭಿನ್ನವಾಗಿ ಕಾಣಿಸುತ್ತಾರೆ ಹುಬ್ಬಳ್ಳಿಯ ಅಮರಗೋಳದ 73ವರ್ಷದ ಸಿದ್ದಪ್ಪ ಬೆಟಗೇರಿ.

ಹಿಂದೊಮ್ಮೆ ಪಾಳು ಬಿದ್ದು ಕಸಕಡ್ಡಿಗಳ ಕೊಂಪೆಯಂತಿದ್ದ ಎರಡೂವರೆ ಗುಂಟೆ ಜಮೀನು, ಸಿದ್ದಪ್ಪ ಅವರಿಂದಾಗಿ ಹಸಿರಿನ ತಾಣವಾಗಿದೆ. ಕಸ ತುಂಬಿದ್ದ ಜಮೀನನ್ನು ಸ್ವಚ್ಛಗೊಳಿಸಿ, ಬೇಲಿ ಹಾಕಿ, ಚಿಕ್ಕ ತೋಟ ನಿರ್ಮಿಸಿರುವ ಸಿದ್ದಪ್ಪ ಅವರ ಅಪಾರ ಪರಿಶ್ರಮ ಫಲ ಕಂಡಿದೆ. ಸಿದ್ದಪ್ಪ ಅವರೇನೂ ಮೂಲತಃ ಕೃಷಿಕರಲ್ಲ. ರೈಲ್ವೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರು, ನಿವೃತ್ತಿ ನಂತರ ತೋಟ ಮಾಡುವತ್ತ ವಾಲಿದವರು.

ನಿವೃತ್ತಿ ನಂತರ ಸುಮ್ಮನೇ ಕುಳಿತುಕೊಳ್ಳುವ ಮನಸ್ಸಾಗದೆ, ಏನಾದರೂ ಹೊಸತು ಮಾಡಬೇಕೆಂಬ ತುಡಿತ ಅವರನ್ನು ತೋಟಗಾರಿಕಾ ಬೆಳೆಯತ್ತ ವಾಲಿಸಿತು. ಅವರ ಈ ಹೊಸ ಆಲೋಚನೆಗೆ ಹುಮ್ಮಸ್ಸು ನೀಡಿದ್ದು ಈ ಪಾಳು ಜಮೀನು. ಅದರಲ್ಲಿಯೇ ಬೆಳೆ ಬೆಳೆಯುವ ಮನಸ್ಸು ಮಾಡಿದರು.

ಮನಸ್ಸೇನೋ ಮಾಡಿಯಾಗಿದೆ. ಆದರೆ ಕಸದಿಂದ ತುಂಬಿದ್ದ ಜಮೀನನ್ನು ಸ್ವಚ್ಛಗೊಳಿಸಿ ಅಲ್ಲಿ ಹಸಿರು ಉಕ್ಕಿಸುವುದು ಚಿಕ್ಕ ಕೆಲಸವೇ? ಸಾಧ್ಯವೇ ಇಲ್ಲ ಎಂದವರೇ ಹೆಚ್ಚು. ಆದರೆ ಛಲ ಬಿಡದ ಸಿದ್ದಪ್ಪ ಅವರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು.

ಸ್ವಚ್ಛತೆಯೆಲ್ಲಾ ಮುಗಿದು ಬೆಳೆ ಉತ್ತಿದ ಬಳಿಕ ನೀರು ಪೂರೈಸುವ ಕಾರ್ಯವಾಗಬೇಕಲ್ಲ? ಅದರಲ್ಲಿಯೂ ಹೊಸತೊಂದು ಯೋಚನೆ ಸಿದ್ದಪ್ಪ ಅವರಿಗೆ ಬಂತು. ದಿನವೂ ಮನೆ ಅಂಗಳದಿಂದ ಹರಿದು ನೀರು ಚರಂಡಿ ಸೇರುತ್ತಿತ್ತು. ಇದೇ ನೀರನ್ನು ಕೃಷಿಗೆ ಬಳಸಿಕೊಂಡರೆ ಹೇಗೆ ಎಂಬ ಯೋಚನೆಯಿಂದ ಇದೇ ನೀರನ್ನು ಸಣ್ಣ ಕಾಲುವೆಗಳಂತೆ ಮಾಡಿದರು. ಆ ನೀರಿನಲ್ಲಿ ಕೊಳಕಿನ ಅಂಶ ಸೇರಬಾರದು ಎಂಬ ಕಾರಣಕ್ಕೆ ಶುದ್ಧ ನೀರು ಮಾತ್ರ ತೋಟಕ್ಕೆ ಹೋಗುವಂತೆ ಭತ್ತದ ಹುಲ್ಲು ಮತ್ತು ಕಲ್ಲುಗಳಿಂದ ಕಾಲುವೆ ಸರಿಪಡಿಸಿದರು. ಇದರಿಂದಾಗಿ ನೀರು ಮಾತ್ರ ತೋಟಕ್ಕೆ ಹರಿಯಿತು.

ಇದರ ಪರಿಣಾಮವಾಗಿ ಈ ಪರಿಯ ಬರಗಾಲದ ನಡುವೆಯೂ ಯಶಸ್ವಿ ಬೆಳೆ ತೆಗೆದಿದ್ದಾರೆ. ಅಷ್ಟೇ ಅಲ್ಲದೆ ಪ್ಲಾಸ್ಟಿಕ್ ಚೀಲಗಳಿಂದ ಆ ನೀರನ್ನು ತುಂಬಿ ತಂದು ಗಿಡಗಳಿಗೆ ಸುರಿಯುವ ಮೂಲಕ ಪ್ರತಿ ಸಸಿಗೂ ನೀರು ತಲುಪಿಸುತ್ತಾರೆ. ಕೈತೋಟದಲ್ಲಿ ಬದನೆಕಾಯಿ, ಮೆಣಸಿನಕಾಯಿ, ಟೊಮೆಟೊ, ಕಲ್ಲಂಗಡಿ, ಹೀರೆಕಾಯಿ, ಸೋರೆಕಾಯಿ, ಕುಂಬಳ, ಹಾಗಲಕಾಯಿ, ಅವರೆಕಾಯಿ, ಸೌತೆಕಾಯಿ, ಕೊತ್ತಂಬರಿ, ಬಡೆಸೊಪ್ಪು ಹೀಗೆ ಹಲವು ತರಕಾರಿ ಸೊಪ್ಪುಗಳನ್ನು ಬೆಳೆದಿದ್ದಾರೆ.

ಯುವ ಕೃಷಿಕರನ್ನೂ ನಾಚಿಸುವಷ್ಟರ ಮಟ್ಟಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸಿದ್ದಪ್ಪನವರು ಹೊಸ ಪ್ರಯೋಗಗಳಿಂದ ಲಾಭದ ಹಾದಿ ಕಂಡುಕೊಳ್ಳುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT