ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿಲ್ಲ ವಿದ್ಯುತ್ ಸಮಸ್ಯೆ!

Last Updated 2 ಜನವರಿ 2017, 19:30 IST
ಅಕ್ಷರ ಗಾತ್ರ

ವಿದ್ಯುತ್‌ ಸಮಸ್ಯೆ ತಲೆದೋರಿದರೆ ಅದಕ್ಕೆ ಮೊದಲು ಬಲಿಯಾಗುವುದು ಗ್ರಾಮೀಣ ಪ್ರದೇಶಗಳೇ. ಪಟ್ಟಣ, ನಗರ ಪ್ರದೇಶಗಳಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚು ಎಂಬ ಕಾರಣಕ್ಕೆ, ವಿದ್ಯುತ್ತನ್ನೇ ನಂಬಿ ಬದುಕುತ್ತಿದ್ದರೂ ಗ್ರಾಮೀಣ ಪ್ರದೇಶಿಗರ ಮೇಲೆ ಸರ್ಕಾರ ಬರೆ ಬೀಳಿಸುತ್ತಿರುವುದು ಇಂದು ನಿನ್ನೆಯ ಮಾತಲ್ಲ.

ಆದರೆ ಇದಕ್ಕೆ ವಿರುದ್ಧ ಎಂಬಂತೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಯಡಹಳ್ಳಿ ಗ್ರಾಮದಲ್ಲೀಗ ವಿದ್ಯುತ್‌ ಸಮಸ್ಯೆಯೇ ಇಲ್ಲ. ಅಂದ ಮಾತ್ರಕ್ಕೆ ಇಲ್ಲಿ ಸರ್ಕಾರ 24/7 ವಿದ್ಯುತ್‌ ಸರಬರಾಜು ಮಾಡುತ್ತಿದೆ ಎಂದರ್ಥವಲ್ಲ. ಬದಲಿಗೆ ಇಡೀ ಗ್ರಾಮಕ್ಕೆ ಗ್ರಾಮವೇ ಸೌರವಿದ್ಯುತ್‌ ಯೋಜನೆಗೆ ಒಳಗಾಗಿರುವುದು!

ಅಂದಹಾಗೆ ಯಡಹಳ್ಳಿ ಸುಮಾರು 150 ಮನೆಗಳಿರುವ ಚಿಕ್ಕ ಗ್ರಾಮ. ಎಲ್ಲ ಗ್ರಾಮಗಳಂತೆ ಈ ಗ್ರಾಮದಲ್ಲೂ ಮುಂಚೆ ವಿದ್ಯುತ್‌ ಸಮಸ್ಯೆ ಹೆಚ್ಚಾಗೇ ಇತ್ತು. ದಿನೇದಿನೇ ಹೆಚ್ಚಾಗುತ್ತಿದ್ದ ಈ ಸಮಸ್ಯೆ ನೀಗಿಸಲು ಹಲವು ಪರ್ಯಾಯ ವ್ಯವಸ್ಥೆ ಕಲ್ಪಿಸಿದರೂ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ವಿದ್ಯುಚ್ಛಕ್ತಿ ಪಡೆಯುವುದು ಮರೀಚಿಕೆಯಾಗಿ ಬಿಟ್ಟ ಮಾತು ಈ ಗ್ರಾಮಕ್ಕೂ ಅನ್ವಯ ಆಗುತ್ತಿತ್ತು.

ಇಂಥ ಪರಿಸ್ಥಿತಿಯಲ್ಲಿ ಈ ಗ್ರಾಮದ ಜನರಿಗೆ ವರದಾನವಾಗಿ ಬಂದದ್ದು ಸೌರವಿದ್ಯುತ್‌. ಸರ್ಕಾರದ ಸೌರಬೆಳಕು ಯೋಜನೆಯನ್ನು ಈ ಗ್ರಾಮದ ಜನ ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡಿದ್ದಾರೆ. ಗ್ರಾಮಕ್ಕೆ ಸೇರಿದ ಕೇಂದ್ರೀಕೃತ ಸೌರ ವಿದ್ಯುತ್ ಘಟಕಗಳಿಂದ ವಿದ್ಯುತ್ ಒದಗಿಸಲು ಒಂದರಿಂದ ನಾಲ್ಕು ಕಿಲೊವ್ಯಾಟ್‌ ತಾಂತ್ರಿಕ ವಿನ್ಯಾಸಗಳುಳ್ಳ ಮಾದರಿಗಳನ್ನು ಗ್ರಾಮದ ಅವಶ್ಯಕತೆಗನುಗುಣವಾಗಿ ಕ್ಲಸ್ಟರ್‌ಗಳಲ್ಲಿ ಅಳವಡಿಸಲಾಗಿದೆ.

ಈ ಮೂಲಕ ಸಂಪೂರ್ಣ ಗ್ರಾಮವೀಗ ಸೂರ್ಯನ ಬೆಳಕಿನ ಸಹಾಯದಿಂದ ಪ್ರಜ್ವಲಿಸುತ್ತಿದೆ. ಸರ್ಕಾರದ ಯೋಜನೆಗಳೆಂದರೆ ಅಲ್ಲಿ ಹೆಚ್ಚಿನದಾಗಿ ಆರಂಭಶೂರತ್ವ ಮಾತ್ರ ಕಾಣಿಸುತ್ತದೆ ಎಂಬ ಆಪಾದನೆಯೂ ಇದೆ. ಈ ಆಪಾದನೆ ಇಲ್ಲಿಯೂ ತಟ್ಟಬಾರದು ಎಂಬ ಕಾರಣಕ್ಕೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರ ಕುಂದು ಕೊರತೆಯ ಪುಸ್ತಕ ಇಡಲಾಗಿದೆ. ವಿದ್ಯುತ್ತಿಗೆ ಸಂಬಂಧಿಸಿದಂತೆ ಏನೇ ತೊಂದರೆ ಇದ್ದರೂ ಅಂಥವರು ಈ ಪುಸ್ತಕದಲ್ಲಿ ವಿವರಣೆ ನೀಡಿದರೆ, ತಕ್ಷಣವೇ ತೊಂದರೆಯ ನಿವಾರಣೆಗೆ ಆದ್ಯತೆ ನೀಡಲಾಗುತ್ತಿದೆ.

ಸೌರವಿದ್ಯುತ್‌ನಿಂದಾಗಿ ಸರ್ಕಾರದ ಬೊಕ್ಕಸಕ್ಕೂ ಹಾನಿ ತಪ್ಪಿದೆ. ‘ಪ್ರತಿ ತಿಂಗಳು ಈ ಮೊದಲು ಹುಬ್ಬಳ್ಳಿ ವಿದ್ಯುತ್ ವಿತರಣಾ ಕೇಂದ್ರ (ಹೆಸ್ಕಾಂ)ಕ್ಕೆ ಬೀದಿ ದೀಪವೊಂದರ ಮೊತ್ತವೇ 40 ಸಾವಿರ ರೂಪಾಯಿ ಮೀರುತ್ತಿತ್ತು. ಇಷ್ಟು ಮೊತ್ತವನ್ನು ಭರಿಸುವುದು ಗ್ರಾಮ ಪಂಚಾಯಿತಿಗೂ ತುಂಬಾ ಹೊರೆಯಾಗಿತ್ತು. ಅದೀಗ ಉಳಿತಾಯ ಆಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಬ್ಯಾಂಕ್‌ ಖಾತೆ ತೆರೆದು ಈ ಯೋಜನೆಯ ನಿರ್ವಹಣೆಗಾಗಿ ಭರಿಸುತ್ತೇವೆ’ ಎನ್ನುತ್ತಾರೆ ಪಂಚಾಯಿತಿ ಅಧಿಕಾರಿಗಳು.

‘ಈ ದೀಪದ ವ್ಯವಸ್ಥೆಯನ್ನು ಬೀದಿದೀಪಗಳಿಗೆ ಸದ್ಯ ಮಾಡಿದ್ದರೂ, ಮಕ್ಕಳು ಅಭ್ಯಾಸ ಮಾಡಲೂ ಇದೇ ನೆರವಾಗುತ್ತದೆ. ನಮ್ಮ ಮನೆಗೆ ವಿದ್ಯುಚ್ಛಕ್ತಿ ಇರದಿದ್ದರೂ ಈಗ ಸಮಸ್ಯೆ ಇಲ್ಲ’ ಎನ್ನುತ್ತಾರೆ ಗ್ರಾಮದ ಹಿರಿಯರಾದ ಯಮನಪ್ಪ. ಇದರ ಜೊತೆಗೆ ಈ ಗ್ರಾಮವು ‘ಬಯಲು ಬಹಿರ್ದೆಸೆ ಮುಕ್ತ’ ಗ್ರಾಮ ಎಂದೂ ಘೋಷಣೆಯಾಗಿದೆ.

ಬಾಗಲಕೋಟ ಜಿಲ್ಲೆಯ ನಾಲ್ಕು ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಎರಡು ಗ್ರಾಮಗಳಲ್ಲಿ ಈ ಯೋಜನೆಯ ಅನುದಾನ ಜಾರಿಯಲ್ಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT