ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪು ಹಣದಿಂದ ಅರ್ಥ ವ್ಯವಸ್ಥೆ ಬುಡಮೇಲು

ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶ ಶಿರೋಳ್ ಅಭಿಪ್ರಾಯ
Last Updated 3 ಜನವರಿ 2017, 7:31 IST
ಅಕ್ಷರ ಗಾತ್ರ

ಕೋಲಾರ: ‘ದೇಶದಲ್ಲಿ ಭ್ರಷ್ಟಾಚಾರ, ಕಪ್ಪು ಹಣ ಮತ್ತು ಬೇನಾಮಿ ಆಸ್ತಿಗಳು ಪರ್ಯಾಯ ಅರ್ಥ ವ್ಯವಸ್ಥೆ ಸೃಷ್ಟಿಸುವಷ್ಟು ಪ್ರಬಲವಾಗಿ ಬೆಳೆದಿವೆ’ ಎಂದು ಸಿವಿಲ್ ನ್ಯಾಯಾಧೀಶ ಗುರುರಾಜ ಜಿ.ಶಿರೋಳ್ ಅಭಿಪ್ರಾಯಪಟ್ಟರು.

ನಗರದ ಆದರ್ಶ ಕಾಲೇಜಿನಲ್ಲಿ ಸೋಮವಾರ ನಡೆದ ಕುವೆಂಪು ಜನ್ಮ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಭ್ರಷ್ಟಾಚಾರ, ಕಪ್ಪು ಹಣ ಮತ್ತು ಬೇನಾಮಿ ಆಸ್ತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಯಬೇಕು ಎಂದು ಹೇಳಿದರು.

ಚರ್ಚಾ ಸ್ಪರ್ಧೆಗಳು ಯಾರ ಪರ ಅಥವಾ ವಿರುದ್ಧವಾಗಿರದೆ ಭೌತಿಕವಾಗಿ ಚರ್ಚಿಸುವ ಚಿಂತಕರ ಛಾವಡಿಯಾಗಬೇಕು. ಆರ್ಥಿಕತೆಯು ಎಲ್ಲರಿಗೂ ಮುಟ್ಟುವ ರೀತಿಯಲ್ಲಿ ಚರ್ಚೆ ನಡೆಯಬೇಕು. ದೇಶದ ಪ್ರಮುಖ ವಿದ್ಯಮಾನಗಳಲ್ಲಿ ಒಂದಾದ ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಕುರಿತು ಚರ್ಚಾ ಸ್ಪರ್ಧೆ ಆಯೋಜಿಸಿರುವುದು ಒಳ್ಳೆಯ ಪ್ರಯತ್ನ ಎಂದರು.

ಪ್ರತಿಯೊಬ್ಬರೂ ರಾಜಕೀಯದಲ್ಲಿ ಇರದಿದ್ದರೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಈ ಕ್ಷೇತ್ರದ ನಂಟು ಇದ್ದೇ ಇರುತ್ತದೆ. ಹೀಗಾಗಿ ಚರ್ಚೆಯ ವೇಳೆ ಯಾವುದೇ ಪಕ್ಷ ಅಥವಾ ವ್ಯಕ್ತಿಯ ಪರ- ವಿರೋಧವಾಗಿ ಮಾತನಾಡದೆ ಭೌತಿಕವಾಗಿ ಮಾತನಾಡಬೇಕು. ವಿದ್ಯಾರ್ಥಿಗಳು ಸಿನಿಮಾ, ಮೊಬೈಲ್‌, ಇಂಟರ್‌ನೆಟ್‌ನ ಮೋಹದ ಸೆಳೆತಕ್ಕೆ ಒಳಗಾಗದೆ ಶಿಕ್ಷಣದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಆಶಯಕ್ಕೆ ಧಕ್ಕೆ:  ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಎನ್.ಸಂಜೀವರೆಡ್ಡಿ ಮಾತನಾಡಿ, ‘ವೃತ್ತಿಯ ಆಧಾರದ ಮೇಲೆ ನಾವೇ ಜಾತಿಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸಿ ನಾಚಿಕೆಪಡುವ ರೀತಿಯಲ್ಲಿ ವ್ಯವಸ್ಥೆಯನ್ನು ಹುಟ್ಟು ಹಾಕಿರುವುದು ಬೇಸರದ ಸಂಗತಿ. ಇದೇ ವ್ಯವಸ್ಥೆ ಮುಂದುವರಿದರೆ ಕುವೆಂಪು ಅವರ ವಿಶ್ವಮಾನವ ಸಂದೇಶದ ಆಶಯಕ್ಕೆ ಧಕ್ಕೆಯಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಜಾತಿ ಪದ್ಧತಿಯ ಕಪಿಮುಷ್ಠಿಯಿಂದ ಹೊರ ಬರುವುದಕ್ಕೆ ಹಿರಿಯರು ಪ್ರಯತ್ನ ಮಾಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಯುವಕ ಯುವತಿಯರು ಜಾತಿ ವ್ಯವಸ್ಥೆಯಿಂದ ಹೊರಬಂದು ವಿಶ್ವಮಾನವರಾಗಬೇಕು.

ಪದವಿ ಪಡೆದು ಕೆಲಸಕ್ಕೆ ಹೋಗುವುದು ದೊಡ್ಡ ಸಾಧನೆಯಲ್ಲ. ಪದವಿ ಪಡೆದವರು ಅದರ ಘನತೆ ಎತ್ತಿ ಹಿಡಿಯುವ ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

ದೇಶದಲ್ಲಿ ಇರುವಷ್ಟು ಧರ್ಮ, ಜಾತಿಗಳು ಯಾವ ದೇಶದಲ್ಲೂ ಇಲ್ಲ. ಇವನ್ನೆಲ್ಲಾ ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಿದ್ದೇವೆ. ಯುವಕರು ಇದನ್ನು ನಿರ್ಮೂಲನೆ ಮಾಡಲು ಮುಂದಾಗಬೇಕು ಎಂದರು.

ಭಾಷೆ ಇರುವುದು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಮಾತನಾಡುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಭಾಷೆಗಳ ಕಿತ್ತಾಟದಿಂದ ರಾಜ್ಯ ರಾಜ್ಯಗಳ ನಡುವೆ ಗಲಾಟೆಗಳು ಆಗುತ್ತಿರುವುದು ದೊಡ್ಡ ದುರಂತ ಎಂದು ವಿಷಾದಿಸಿದರು.

ಮಧ್ಯಾಹ್ನ ನಡೆದ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಕುವೆಂಪು ಜೀವನ ಕುರಿತು ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ಬಿ.ಎಚ್.ನವೀನ್‌ಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT