ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಔರಾದ್‌ ತಾಲ್ಲೂಕಿನಲ್ಲಿ ಅತ್ಯಾಚಾರ ಪ್ರಕರಣ: ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
Last Updated 3 ಜನವರಿ 2017, 8:25 IST
ಅಕ್ಷರ ಗಾತ್ರ

ಬೀದರ್: ಔರಾದ್‌ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯ ಮೇಲೆ ದೌರ್ಜನ್ಯ ನಡೆಸಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಹಾಗೂ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ನಗರದಲ್ಲಿ ಸೋಮವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ದೂರದೃಷ್ಟಿಯಿಂದ ಮಹಿಳೆಯರು  ಸಾಮಾಜಿಕ, ರಾಜಕೀಯವಾಗಿ ಮುಂದೆ ಬರಬೇಕು ಎನ್ನುವ ಉದ್ದೇಶದಿಂದ 40 ವರ್ಷಗಳ ಹಿಂದೆ ಅಂಗನವಾಡಿಗಳಿಗೆ ಪ್ರಾಮುಖ್ಯತೆ ನೀಡಿದರು. ಅಂಗನವಾಡಿ ಕಾರ್ಯಕರ್ತೆಯರು ಇವತ್ತಿಗೂ ಅಲ್ಪ ಗೌರವಧನದಲ್ಲಿ ಸೇವಾ ಭದ್ರತೆ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕಿಡಿಗೇಡಿಗಳ ಹಾಗೂ ಜಾತಿವಾದಿಗಳ ಉಪಟಳ ಹೆಚ್ಚಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಭಯದ ವಾತಾವರಣದಲ್ಲಿ ಕೆಲಸ ನಿರ್ವಹಿಸುವಂತಾಗಿದೆ ಎಂದು ಹೇಳಿದರು.

ಔರಾದ್ ತಾಲ್ಲೂಕಿನ ಸುಂಕನಾಳದಲ್ಲಿ ಅಂಗನವಾಡಿ ಕಾರ್ಯಕರ್ತೆಯ ಮೇಲೆ ಅದೇ ಗ್ರಾಮದ ಕೆಲ ಕಿಡಿಗೇಡಿಗಳು ದೌರ್ಜನ್ಯ ನಡೆಸಿದ್ದು, ತಕ್ಷಣ ಅವರನ್ನು ಬಂಧಿಸಿ  ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಜಿಲ್ಲಾ ಘಟಕದ ಜಿಲ್ಲಾ ಸಂಚಾಲಕ ಶಿವರಾಜ ಕಟಗಿ, ರಾಜ್ಯ ಸಮಿತಿ ಸದಸ್ಯೆ ಸುಲೋಚನಾ ಪೂಜಾರಿ, ಜಿಲ್ಲಾ ಘಟಕದ ಅಧ್ಯಕ್ಷೆ ಶೀಲಾ ಸಾಗರ,  ಜಿಲ್ಲಾ ಉಪಾಧ್ಯಕ್ಷೆ ಚಂದ್ರಕಲಾ ಕಮಠಾಣೆ, ಕಾರ್ಯದರ್ಶಿ ಇಂದುಮತಿ ಆಣದೂರ, ಪ್ರಧಾನ ಕಾರ್ಯದರ್ಶಿ ಬಸಮ್ಮ ಹಾಗೂರಗೇರಿ, ಸಂಘಟನಾ ಕಾರ್ಯದರ್ಶಿ ಮನೋರಂಜಿನಿ ಮೈಲೂರ, ಶಕುಂತಲಾ ಅಮಲಾಪೂರ ಪ್ರತಿಭಟನಾಕಾರರ ನೇತೃತ್ವ ವಹಿಸಿದ್ದರು.

ಅಂಗನವಾಡಿ ನೌಕರರ ಸಂಘ: ಅಂಗನವಾಡಿ ಕಾರ್ಯಕರ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ 7 ಜನ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಗೆ ಹೆಚ್ಚಿನ ಪರಿಹಾರ ಕೊಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅಂಗನವಾಡಿ ಕಾರ್ಯಕರ್ತೆಯರು ನಗರದ ಗಣೇಶ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತೆರಳಿ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು.

ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷೆ ಶಾಂತಾ ಘಂಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದಾ, ಜಿಲ್ಲಾ ಘಟಕದ ಅಧ್ಯಕ್ಷೆ ಸುಶೀಲಾ ಹತ್ತಿ, ಜಿಲ್ಲಾ ಘಟಕದ ಕಾರ್ಯದರ್ಶಿ ಶ್ರೀದೇವಿ ಚಿವಡೆ, ಖಜಾಂಚಿ ಪದ್ಮಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT