ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ: ಕೆಲವೆಡೆ ಅವಿರೋಧ ಆಯ್ಕೆ

ಚುನಾವಣೆ: ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಸಿದ್ಧ; ಪಕ್ಷಗಳ ಜಿದ್ದಾ ಜಿದ್ದಿ ಪ್ರಾರಂಭ
Last Updated 3 ಜನವರಿ 2017, 8:39 IST
ಅಕ್ಷರ ಗಾತ್ರ

ಕೊಪ್ಪಳ:  ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ಗಿಣಿಗೇರಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ನಾಗರಾಜ ಬಸಪ್ಪ ಚಳ್ಳೊಳ್ಳಿ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರದಿಂದ ಸ್ಪರ್ಧಿಸಿದ್ದ ಇನ್ನುಳಿದ 6 ಅಭ್ಯರ್ಥಿಗಳು ನಾಮಪತ್ರ ವಾಪಸ್‌  ಪಡೆದಿದ್ದರಿಂದ ಚುನಾವಣಾ ಅಧಿಕಾರಿ ಸೋಮವಾರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಬಳಿಕ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್‌ ಜುಲ್ಲು ಖಾದರ್‌ ಖಾದ್ರಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಸವರಾಜ ಹಿಟ್ನಾಳ್‌, ಜಿ.ಪಂ ಸದಸ್ಯರಾದ ರಾಜಶೇಖರ ಹಿಟ್ನಾಳ್‌, ಗೂಳಪ್ಪ ಹಲಗೇರಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಕರಿಯಣ್ಣ ಮೇಟಿ, ಕೋಟ್ರಬಸಯ್ಯಸ್ವಾಮಿ ಹಿರೇಮಠ, ಮಹೆಂದ್ರ ಹಾಲವರ್ತಿ, ಆಂಜನೇಯ ಹಡಪದ, ಹನುಮಪ್ಪ ಕೌದಿ, ಮುದಕಪ್ಪ ಉಪ್ಪಾರ, ನಾಗರಾಜ, ರಾಮಣ್ಣ ಚಳ್ಳೊಳ್ಳಿ, ಪಂಪಣ್ಣ ಪೂಜಾರ, ನಾಗರಾಜ ಧರ್ಮಾಪುರ, ಗ್ಯಾನಪ್ಪ ಕೌದಿ, ಮೌಲಾಸಾಬ್ ಇದ್ದರು.

ಗಂಗಾವತಿ ವರದಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 14 ಸದಸ್ಯ ಸ್ಥಾನಗಳಿಗೆ ಆಯ್ಕೆ ಬಯಸಿ 29 ಅಕಾಂಕ್ಷಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ನಾಮಪತ್ರ ಹಿಂತೆಗೆತಕ್ಕೆ ಕೊನೆ ದಿನವಾದ ಸೋಮವಾರ 13 ಮಂದಿ ನಾಮಪತ್ರ ಹಿಂದಕ್ಕೆ ಪಡೆದರು.  ಒಟ್ಟು 42 ಅಭ್ಯರ್ಥಗಳಿಂದ 74 ನಾಮಪತ್ರ ಸಲ್ಲಿಕೆಯಾಗಿದ್ದವು.

ಬಹುತೇಕ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಆದರೆ ಕೃಷಿ ಹುಟ್ಟುವಳಿ ಸಂಸ್ಕರಣ ಸಹಕಾರ ಸಂಘದ ಕ್ಷೇತ್ರದಿಂದ ಆಯ್ಕೆ ಬಯಸಿ ಬಿಜೆಪಿ ಅಭ್ಯರ್ಥಿಗಳ ಮಧ್ಯೆಯೇ ಪೈಪೋಟಿ ಏರ್ಪಟ್ಟಿದ್ದು, ಮಾಜಿ ಸಂಸದ ಶಿವರಾಮಗೌಡರ ಪುತ್ರ ಶಿವರಾಜಗೌಡ ಹಾಗೂ ಪಿಕಾರ್ಡ್‌ ಬ್ಯಾಂಕ್ ನಿರ್ದೇಶಕ ಮಂಜುನಾಥ ಮಸ್ಕಿ ಅಂತಿಮ ಕಣದಲ್ಲಿದ್ದಾರೆ.

ಗಂಗಾವತಿ ಕೃಷಿಕರ ಕ್ಷೇತ್ರಕ್ಕೆ ನಿರ್ಮಲಾ ಬಾಗೋಡಿ, ಶಂಕ್ರಮ್ಮ ಪಂಪಣ್ಣ, ವೆಂಕಟಗಿರಿ ಕ್ಷೇತ್ರದಿಂದ ರುದ್ರೇಶ ಡ್ಯಾಗಿ, ವೆಂಕೋಬ ವಡಕಿ, ಶಿವಮೂರ್ತಿಗೌಡ ಉಡಮಕಲ್, ಸಣ್ಣಕ್ಕಿ ನೀಲಪ್ಪ, ಕನಕಗಿರಿ ಕ್ಷೇತ್ರಕ್ಕೆ ದೇವಪ್ಪ ತೋಳದ, ಗೋರಳ್ಳಿ ಹುಸೇನಸಾಬ ಕಣದಲ್ಲಿದ್ದಾರೆ. 

ಹುಲಿಹೈದರ ಕ್ಷೇತ್ರದಲ್ಲಿ ಪಾಂಡುರಂಗ ರಾಠೋಡ, ಶಿವಶಂಕ್ರಪ್ಪ ಚಿನ್ನದಾಸರ, ನವಲಿ ಕ್ಷೇತ್ರದಲ್ಲಿ ತಿಮ್ಮಯ್ಯ ಪೂಜಾರ ರಾಮಚಂದ್ರಪ್ಪ, ಸಣ್ಣ ಸಿದ್ದೇಶ್ವರ, ಹೇರೂರು ಕ್ಷೇತ್ರದಲ್ಲಿ  ಚನ್ನಮ್ಮ ಅಯ್ಯನಗೌಡ, ಸುಶೀಲಮ್ಮ ಮಲ್ಲಿಕಾರ್ಜುನ, ಶ್ರೀರಾಮನಗರದಲ್ಲಿ ಅನ್ನೇ ಚಂದ್ರಶೇಖರ, ರೆಡ್ಡಿ ಶ್ರೀನಿವಾಸ ಕಣದಲ್ಲಿದ್ದಾರೆ.

ಸಿದ್ದಾಪುರ ಕ್ಷೇತ್ರದಲ್ಲಿ ಚಿಟ್ಟೂರಿ ದುರ್ಗಾರಾವ್, ಜನಗಂಡೆಪ್ಪ ಪೂಜಾರಿ, ಹುಳ್ಕಿಹಾಳದಲ್ಲಿ ಅಮರೇಶಪ್ಪ ಕೋಮಲಾಪುರ, ಜಿ. ಮೋಹನರಾವ್, ಕಾರಟಗಿ ಕ್ಷೇತ್ರದಲ್ಲಿ ಶರಣಪ್ಪ ಪನ್ನಾಪುರ, ಶಿವಪ್ಪ ಆರಾಪುರ ಚುನಾವಣಾ ಕಣದಲ್ಲಿದ್ದಾರೆ. 

ಯರಡೋಣಾದಲ್ಲಿ ಚಂದ್ರಗೌಡ, ವಿರುಪಾಕ್ಷಪ್ಪ, ವರ್ತಕರ ಕ್ಷೇತ್ರದಲ್ಲಿ ಎಚ್.ಆರ್. ಶರಣೇಗೌಡ, ಉಮರ ಹುಸೇನಸಾಬ ಹಾಗೂ ಸಂಸ್ಕರಣ ಘಟಕಗಳ ಕ್ಷೇತ್ರದಿಂದ ಎಸ್. ಶಿವರಾಜಗೌಡ, ಮಂಜುನಾಥ ಮಸ್ಕಿ ಅಂತಿಮ ಕಣದಲ್ಲಿದ್ದಾರೆ.  ಆದರೆ ಟಿಎಪಿಸಿಎಂಎಸ್ ಕ್ಷೇತ್ರಕ್ಕೆ ನ್ಯಾಯಾಲಯದಲ್ಲಿ ತಡೆ ಇರುವ ಕಾರಣ ಇದುವರೆಗೂ ಯಾವುದೇ ನಾಮಪತ್ರ ಸ್ವೀಕರಿಸಿಲ್ಲ. ಹಿಂದಿನ ನಾಮಪತ್ರ ಪರಿಶೀಲಿಸಲಾಗಿದ್ದು, ನ್ಯಾಯಾಲಯದ ಆದೇಶದ ಬಳಿಕ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಕಾರಟಗಿ ವರದಿ: ಇಲ್ಲಿಯ ಭತ್ತ ಮತ್ತು ಅಕ್ಕಿ ಉತ್ಪನ್ನಗಳ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಜ. 12ರಂದು ಚುನಾವಣೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದ ಸೋಮವಾರ 20 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ.

ಆಯ್ಕೆ ಬಯಸಿ ಒಟ್ಟು 50 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಪರಿಶೀಲನೆ ವೇಳೆ ಒಬ್ಬ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿತ್ತು. ಸೋಮವಾರ 20 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು, 12 ಕ್ಷೇತ್ರಗಳಿಗೆ ಒಟ್ಟು 29 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದು  ಚುನಾವಣಾಧಿಕಾರಿ ಕಿರಣಕುಮಾರ, ಸಹಾಯಕ ಚುನಾವಣಾಧಿಕಾರಿ ಮಹಾಂತಗೌಡ ತಿಳಿಸಿದರು.

ಅಭ್ಯರ್ಥಿಗಳಿಗೆ ಚಿನ್ಹೆಯನ್ನು ಅಂತಿಮಗೊಳಿಸಿದ್ದು, ಅನುಮೋದನೆಗೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದೆ. ಮಂಗಳವಾರ ಅಭ್ಯರ್ಥಿಗಳಿಗೆ ಚಿನ್ಹೆ ವಿತರಿಸಿ, ಚುನಾವಣಾ ನೀತಿ ಸಂಹಿತೆಯ ಮಾಹಿತಿಯನ್ನು ನೀಡಲಾಗುವುದು ಎಂದವರು ತಿಳಿಸಿದರು.

ಕುಷ್ಟಗಿ ವರದಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ನಡೆಲಿರುವ ಚುನಾವಣೆಗೆ ಸಂಬಂಧಿಸಿದಂತೆ 12 ಕ್ಷೇತ್ರಗಳಲ್ಲಿ 29 ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ನಾಮಪತ್ರಗಳನ್ನು ಹಿಂಪಡೆಯುವುದಕ್ಕೆ ಕೊನೆಯ ದಿನವಾಗಿದ್ದ ಸೋಮವಾರ 8 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂದೆಪಡೆದರು. ಒಟ್ಟು 14 ಕ್ಷೇತ್ರಗಳಿದ್ದು ವರ್ತಕರ ಕ್ಷೇತ್ರ ಹಾಗೂ ಮಾರಾಟಗಾರರ ಸಹಕಾರ ಸಂಘಗಳ ಕ್ಷೇತ್ರದಲ್ಲಿ ತಲಾ ಒಬ್ಬರು ಅಭ್ಯರ್ಥಿಗಳು ಮಾತ್ರ ಇದ್ದು ಈ ಕ್ಷೇತ್ರಗಳ ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸುವುದಷ್ಟೆ ಬಾಕಿ ಉಳಿದಿದೆ. ಜನವರಿ 12ರಂದು ಮತದಾನ ನಡೆಯಲಿದ್ದು, 14ರಂದು ಮತಗಳ ಎಣಿಕೆ ನಡೆಯುವುದು ಎಂದು ಚುನಾವಣಾಧಿಕಾರಿಯಾಗಿರುವ ತಹಶೀಲ್ದಾರ್‌ ಎಂ.ಗಂಗಪ್ಪ ತಿಳಿಸಿದರು.

ಕನಕಗಿರಿ ವರದಿ:  ಈ ಕ್ಷೇತ್ರದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಹುಸೇನಸಾಬ ಗೊರಳ್ಳಿ ಅವರ ಪರ ಕಾಂಗ್ರೆಸ್ ಮುಖಂಡರು ವಿವಿಧ ಗ್ರಾಮಗಳಲ್ಲಿ ಭಾನುವಾರ ಪ್ರಚಾರ ನಡೆಸಿದರು. ಸಮೀಪದ ಮಲ್ಲಿಗೆವಾಡ, ಕಾಟಾಪುರ, ಹಿರೇಖೇಡ ಇತರೆ ಗ್ರಾಮಗಳಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕೆ. ಗಂಗಾಧರಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯ ಶರಣಬಸವ ಭತ್ತದ ಮಾತನಾಡಿದರು. ಮುಖಂಡರಾದ ರಮೇಶ ನಾಯಕ, ವೀರೇಶ ಸಮಗಂಡಿ, ಹಿರೇರಾಜಸಾಬ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT