ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಶಾಲೆ ತೆರೆದು ರಾಸುಗಳ ರಕ್ಷಿಸಲು ಮನವಿ

Last Updated 3 ಜನವರಿ 2017, 9:32 IST
ಅಕ್ಷರ ಗಾತ್ರ

ಹೊಳೆನರಸೀಪುರ: ಬರಗಾಲದಿಂದ ಜಾನುವಾರುಗಳಿಗೆ ಮೇವು ಮತ್ತು ನೀರು ಸಿಗದೆ ತಾಲ್ಲೂಕಿನ ರೈತರು ರಾಸುಗಳನ್ನು ಕಟುಕರಿಗೆ ಮಾರುತ್ತಿ ದ್ದಾರೆ. ಅಧಿಕಾರಿಗಳು ಗೋಶಾಲೆ ತೆರೆದು ರಾಸುಗಳನ್ನು, ರೈತರ ಜೀವನವನ್ನು ಕಾಪಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಜವರೇಗೌಡ ಕಳಕಳಿಯ ಮನವಿ ಮಾಡಿದರು.

ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಮಾತನಾಡಿ, ಇಂತಹ ಬರಗಾಲ ಪರಿಸ್ಥಿತಿಯಲ್ಲೂ ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ತಾಲ್ಲೂಕಿನ ನಗರನಹಳ್ಳಿ ಸೇರಿದಂತೆ ಸುತ್ತಮುಲ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಇದೆ. ಪರಿಹಾರಕ್ಕೆ ಕ್ರಮ ಕೈಗೊಳ್ಳಿ ಎಂದಾಗ, ಇತರ ಸದಸ್ಯರೂ ಅರೊಂದಿಗೆ ಧ್ವನಿಗೂಡಿಸಿ ಸಮಸ್ಯೆ ಬಗೆಹರಿಸಲು ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಸತೀಶ್ ಬಾಬು ಮಾತನಾಡಿ, ಶಾಸಕರು ಮತ್ತು ಜಿಲ್ಲಾ ಪಂಚಾಯಿತಿ ಕಾರ್ಯಪಡೆ ಅಧ್ಯಕ್ಷರು ಕಸಬಾ ಮತ್ತು ಹಳೇಕೋಟೆ ಹೋಬಳಿಗೆ ₹ 15 ಲಕ್ಷ ಅನುದಾನವನ್ನು ಒದಗಿಸಿದ್ದಾರೆ. ಈ ಅನುದಾನವನ್ನು ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲು ಹಾಗೂ ಕೊಳವೆಬಾವಿಗಳನ್ನು ಕೊರೆಯಿಸಲು ಬಳಸಲಾಗುವುದು.

ಕೆಲವು ಕಡೆ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಅಂತಹ ಕಡೆಗೆ ಟ್ಯಾಂಕರ್‌ ಮೂಲಕ ಸರಬರಾಜು ಮಾಡಿದ್ದೇವೆ ಎಂದರು. ತಾಲ್ಲೂಕು ಪಂಚಾಯಿತಿ ಸದಸ್ಯ ಶಿವಣ್ಣ, ಕೆರಗೋಡು ಗ್ರಾಮದಲ್ಲಿ ಪಡಿತರ ವಿತರಣೆಯ ವ್ಯವಸ್ಥೆ ಹದಗೆಟ್ಟಿದೆ ಎಂದು ಸಭೆಯ ಗಮನಕ್ಕೆ ತಂದರು.ಆಹಾರ ಸರಬರಾಜು ಇಲಾಖೆಯ ಅಧಿಕಾರಿ ರಾಮಚಂದ್ರ ತಾಲ್ಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲೂ ವಿತರಣಾ ಪತ್ರ ನೀಡಿ ಗ್ರಾಹಕರಿಂದ ಸಹಿ ಪಡೆಯಲು ತಿಳಿಸಲಾಗಿದೆ. ತಾಲ್ಲೂಕಿನಲ್ಲಿ ಆಧಾರ್ ಸಂಖ್ಯೆ ನೀಡದ ಕುಟುಂಬಗಳಿಗೆ ಪಡಿತರ ರದ್ದು ಮಾಡಲಾಗಿದೆ. ನಿಮ್ಮ ದೂರಿನ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದು ಕೊಳ್ಳುತ್ತೇನೆ ಎಂದರು.

ಕೃಷಿ ಅಧಿಕಾರಿ ಭಾನುಪ್ರಕಾಶ್, ‘ಹಿಂಗಾರಿನಲ್ಲಿ ಮಳೆ ಆಶ್ರಿತ ಬೆಳೆಗಳಾದ ರಾಗಿ, ಮುಸುಕಿನ ಜೋಳ, ಹುರಳಿ ಮತ್ತು ಕಡ್ಲೆಕಾಳು ಬೆಳೆಗೆ ವಿಮೆ ಮಾಡಿಸಲು ಜ. 10 ಕಡೆ ದಿನವಾಗಿದೆ. ಬ್ಯಾಂಕುಗಳಿಗೆ ಪಹಣಿ ಜತೆ ಸ್ವಯಂಘೋಷಿತ ಪ್ರಮಾಣ ಪತ್ರ ನೀಡಿದರೆ ವಿಮೆ ಮಾಡಲಾಗುತ್ತದೆ. ಬ್ಯಾಂಕ್‌ಗಳಲ್ಲಿ ಸಹಕರಿಸಿದಿದ್ದರೆ ಕೃಷಿ ಇಲಾಖೆಗೆ ಮಾಹಿತಿ ನೀಡಿ ಎಂದು ರೈತರಿಗೆ ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗಳ ಪ್ರಗತಿಯನ್ನು ವಿವರಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹೇಮಲತಾ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ತಮ್ಮಣ್ಣೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT