ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಜ್ಞರಿಗಿಂತ ಹೃದಯವಂತ ವೈದ್ಯರು ಅಗತ್ಯ

ಕೃತಿ ಬಿಡುಗಡೆ: ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್‌
Last Updated 3 ಜನವರಿ 2017, 9:49 IST
ಅಕ್ಷರ ಗಾತ್ರ

ಮೈಸೂರು: ಮಾನವನ ದೇಹದೊಂದಿಗೆ ಒಡನಾಡಲು ತಜ್ಞರಿಗಿಂತ ಹೃದಯವಂತ ವೈದ್ಯರ ಅಗತ್ಯವಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್‌ ಅಭಿಪ್ರಾಯಪಟ್ಟರು.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಎಂಎಂಸಿಆರ್‌ಐ) ಶಿಕ್ಷಕರ ಸಂಘ, ಭಾರತೀಯ ವೈದ್ಯಕೀಯ ಸಂಘದ (ಐಎಂಎ) ವತಿಯಿಂದ ಇಲ್ಲಿನ ಕೆ.ಆರ್.ಆಸ್ಪತ್ರೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ.ಎಸ್‌.ಪಿ.ಯೋಗಣ್ಣ ಅವರ ‘ಅಭ್ಯಾಸಗಳು ಮತ್ತು ಆರೋಗ್ಯ’ ಹಾಗೂ ‘ನಾನ್ಯಾರು’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ನಿರ್ಜೀವ ಕಟ್ಟಡಗಳೊಂದಿಗೆ ವ್ಯವಹರಿಸಲು ತಜ್ಞ ಎಂಜಿನಿಯರ್‌ ಬೇಕು. ಆದರೆ, ಮನುಷ್ಯನ ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಳ್ಳಲು ಸಂವೇದನಾಶೀಲ ವೈದ್ಯನಿಂದ ಮಾತ್ರ ಸಾಧ್ಯ. ತಜ್ಞತೆ ಇದ್ದರೆ ಚಿಕಿತ್ಸೆ ನೀಡಬಹುದೆ ಹೊರತು ರೋಗಲಕ್ಷಣವನ್ನು ಸಂಪೂರ್ಣವಾಗಿ ಗುಣಪಡಿಸಲು ಆಗದು ಎಂದು ಪ್ರತಿಪಾದಿಸಿದರು.

ರೋಗಿ ಮತ್ತು  ವೈದ್ಯರದು ಸರಕು ಮತ್ತು ಗ್ರಾಹಕರ ಮಾದರಿಯ ಸಂಬಂಧವಲ್ಲ. ರೋಗಿಗಳನ್ನು ಗ್ರಾಹಕರಂತೆ  ಉಪಚರಿಸಬಾರದು. ಸಾಹಿತ್ಯದ ಸಂಬಂಧ ಹೊಂದಿದ ವೈದ್ಯರು ಸಂವೇದನಾಶೀಲರಾಗುತ್ತಾರೆ. ಹೀಗಾಗಿ, ವೈದ್ಯರು ಕನ್ನಡ ಸಾಹಿತ್ಯ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

ಸೂಕ್ಷ್ಮದರ್ಶಕ ಯಂತ್ರ, ಸ್ಕ್ಯಾನಿಂಗ್‌ ತಂತ್ರಜ್ಞಾನ ಇಲ್ಲದ ಕಾಲದಲ್ಲಿಯೂ ಭಾರತೀಯರಿಗೆ ಮಾನವ ದೇಹ ರಚನೆಯ ಜ್ಞಾನ ತಿಳಿದಿತ್ತು. ದೇಹದ ನರನಾಡಿಗಳ ಸಂಪೂರ್ಣ ಮಾಹಿತಿ ಇತ್ತು. ದೇಹ ಯಂತ್ರವಲ್ಲ, ಸಾಮಾಜಿಕ, ಅನುವಂಶಿಕ ಹಿನ್ನೆಲೆಯಲ್ಲಿ ಇದು ರಚನೆಯಾಗಿರುತ್ತದೆ ಎಂದರು.

ಅತ್ಯುತ್ತಮ ಚಿಂತನೆ, ಸಕಾರಾತ್ಮಕ ಆಲೋಚನೆ ಇದ್ದರೆ ದೇಹಾರೋಗ್ಯವೂ ಸುಸ್ಥಿತಿಯಲ್ಲಿರುತ್ತದೆ. ರೋಗಿಗಳಿಗೆ ಉಪಚರಿಸುವ ಕ್ರಮ ಅಲೋಪಥಿಯಲ್ಲಿ ಇದೆಯೇ ಹೊರತು ನಿರೋಗಿ ಮನಸಿನ ಬಗೆಗೆ ಏನನ್ನೂ ಹೇಳಿಲ್ಲ. ಇತ್ತೀಚಿನ ದಿನಗಳಲ್ಲಿ ವೈದ್ಯಶಾಸ್ತ್ರ ತವರಿಗೆ ಮರಳುತ್ತಿದೆ. ಪರಂಪರಾಗತವಾಗಿ ಭಾರತೀಯರು ಹೊಂದಿದ್ದ ಜ್ಞಾನಕ್ಕೆ ಮನ್ನಣೆ ಸಿಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಾಹಿತಿ ಸಿ.ಪಿ.ಕೃಷ್ಣಕುಮಾರ್‌, ಎಂಎಂಸಿಆರ್‌ಐ ನಿರ್ದೇಶಕ ಡಾ.ಕೆ.ಕೃಷ್ಣಮೂರ್ತಿ, ಸಾಹಿತಿ ಡಾ.ಎಚ್‌.ಟಿ.ಚಿದಾನಂದ, ಶಾಂತಿ ಪ್ರಕಾಶನದ ಮಹಮ್ಮದ್‌ ಕುಂಞ, ಐಎಂಎ ಅಧ್ಯಕ್ಷ ಡಾ.ಬಸವನಗೌಡಪ್ಪ, ಡಾ.ಜಿ.ಆರ್‌.ಜಗನ್ನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT