ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

42 ಕ್ಷೇತ್ರಗಳಲ್ಲಿ 124 ಸ್ಪರ್ಧಿಗಳ ಹಣಾಹಣಿ

ಎಪಿಎಂಸಿ ಚುನಾವಣೆ: 11 ಸದಸ್ಯರ ಅವಿರೋಧ ಆಯ್ಕೆ
Last Updated 3 ಜನವರಿ 2017, 10:00 IST
ಅಕ್ಷರ ಗಾತ್ರ

ವಿಜಯಪುರ: ಎಪಿಎಂಸಿ ಚುನಾವಣೆಯ ಕಣ ಅಂತಿಮಗೊಂಡಿದೆ. ಅಪಾರ ಸಂಖ್ಯೆಯಲ್ಲಿ ಅಖಾಡಕ್ಕೆ ಧುಮುಕಿದ್ದ ಪಕ್ಷದ ಪ್ರಮುಖ ಬೆಂಬಲಿಗರನ್ನು ಕಣದಿಂದ ಹಿಂದೆ ಸರಿಸುವಲ್ಲಿ ಪ್ರಮುಖ ಪಕ್ಷಗಳು ಯಶಸ್ವಿಯಾಗಿವೆ. ನಾಮಪತ್ರ ಸಲ್ಲಿಕೆಯ ಅಂತಿಮ ದಿನವಾಗಿದ್ದ ಡಿ 30ರ ಶುಕ್ರವಾರ ಜಿಲ್ಲೆಯ ನಾಲ್ಕು ಎಪಿಎಂಸಿಗಳ 56 ಕ್ಷೇತ್ರಗಳಲ್ಲಿ 53 ಕ್ಷೇತ್ರಗಳಿಗೆ 288 ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದರು.

ಪರಿಶೀಲನೆ ಪ್ರಕ್ರಿಯೆ, ವಾಪಸ್‌ ಪಡೆಯುವ ಕೊನೆ ದಿನವಾದ ಸೋಮವಾರದ ಒಳಗೆ ಒಟ್ಟು 164 ಸ್ಪರ್ಧಿಗಳು ಕಣದಿಂದ ಹಿಂದೆ ಸರಿದಿದ್ದು, 11 ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ನಡೆದಿದೆ.

ಇದೀಗ ಉಳಿದ 42 ಕ್ಷೇತ್ರಕ್ಕೆ ಚುನಾವಣಾ ಅಖಾಡ ಸಿದ್ಧವಾಗಿದ್ದು 124 ಸ್ಪರ್ಧಾಕಾಂಕ್ಷಿಗಳು ಮಾತ್ರ ಅಂತಿಮ ಕಣದಲ್ಲಿದ್ದಾರೆ. ಬಹುತೇಕ ಕಡೆ ಬಿಜೆಪಿ–ಕಾಂಗ್ರೆಸ್‌–ಜೆಡಿಎಸ್‌ ನಡುವೆ ತ್ರಿಕೋನ ಪೈಪೋಟಿಯ ಸ್ಪರ್ಧೆ ಗೋಚರಿದರೆ, ಹಲವೆಡೆ ಕಾಂಗ್ರೆಸ್‌–ಬಿಜೆಪಿ ನಡುವಿನ ಪೈಪೋಟಿಯ ಅಖಾಡ ಸಿದ್ಧಗೊಂಡಿದೆ. ಜೆಡಿಎಸ್‌ ಸಹ ಇಂಡಿ, ಸಿಂದಗಿ, ತಾಳಿಕೋಟೆ, ವಿಜಯಪುರ ಎಪಿಎಂಸಿ ವ್ಯಾಪ್ತಿಯ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿ, ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಫಲಿತಾಂಶದ ಮುನ್ನುಡಿ ಬರೆಯಲು ಸಜ್ಜುಗೊಂಡಿದೆ.

ವಿಧಾನಸಭಾ ಚುನಾವಣೆಯ ಸ್ಪರ್ಧಾಕಾಂಕ್ಷಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮೂರು ಪಕ್ಷಗಳ ಉಸ್ತುವಾರಿ, ನೇತೃತ್ವ ವಹಿಸಿರುವುದು ಅಖಾಡದ ರಂಗೇರಿಸಿದೆ. ಇದು ಜೆಡಿಎಸ್‌ನಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಕಾಂಗ್ರೆಸ್‌ನಲ್ಲಿ ಸ್ಥಳೀಯ ಶಾಸಕರು ಸಾರಥ್ಯ ವಹಿಸಿದ್ದರೆ, ಬಿಜೆಪಿಯಲ್ಲಿ ಜಿಲ್ಲಾ ಘಟಕದ ಉಸ್ತುವಾರಿಯಲ್ಲಿ ಆಯಾ ಮಂಡಳಗಳು, ಪ್ರಬಲ ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಗೆಲುವಿಗೆ ತಂತ್ರ–ಪ್ರತಿತಂತ್ರ ರೂಪಿಸುತ್ತಿದ್ದಾರೆ.

11 ಅವಿರೋಧ ಆಯ್ಕೆ: ಇಂಡಿ ಎಪಿಎಂಸಿ ವ್ಯಾಪ್ತಿಯ 14 ಮತಕ್ಷೇತ್ರ ಗಳಲ್ಲಿ ಐವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಒಂದು ಮತಕ್ಷೇತ್ರದಿಂದ ನಾಮಪತ್ರ ಸಲ್ಲಿಕೆಯಾಗಿಲ್ಲ. ಸಿಂದಗಿ ಎಪಿಎಂಸಿ ವ್ಯಾಪ್ತಿಯಲ್ಲಿ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಒಂದು ಮತಕ್ಷೇತ್ರದಿಂದ ನಾಮಪತ್ರ ಸಲ್ಲಿಕೆಯಾಗಿಲ್ಲ.ವಿಜಯಪುರ ಎಪಿಎಂಸಿ ವ್ಯಾಪ್ತಿಯ 14 ಮತಕ್ಷೇತ್ರಗಳಲ್ಲಿ ಸಹ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ ಎಲ್ಲ 12 ಕ್ಷೇತ್ರಗಳಿಗೂ ನಾಮಪತ್ರ ಸಲ್ಲಿಕೆಯಾಗಿವೆ.

ತಾಳಿಕೋಟೆ ಎಪಿಎಂಸಿ ವ್ಯಾಪ್ತಿಯಲ್ಲಿ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದರೆ, ಒಂದು ಮತಕ್ಷೇತ್ರದಿಂದ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಜಿಲ್ಲಾ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

124 ಸ್ಪರ್ಧಿಗಳು ಅಖಾಡದಲ್ಲಿ: ವಿಜಯಪುರ ಎಪಿಎಂಸಿ ಪರಿಶಿಷ್ಟ ಜಾತಿಯ ಮತಕ್ಷೇತ್ರದಲ್ಲಿ ಅಂತಿಮವಾಗಿ 8 ಸ್ಪರ್ಧಿಗಳು, ತಾಳಿಕೋಟೆ, ಸಿಂದಗಿ ತಲಾ ಮೂವರು, ಇಂಡಿಯಲ್ಲಿ ನಾಲ್ವರು ಅಂತಿಮ ಕಣದಲ್ಲಿದ್ದಾರೆ.

ಪರಿಶಿಷ್ಟ ಪಂಗಡ ಮತಕ್ಷೇತ್ರಕ್ಕೆ ವಿಜಯಪುರ–4, ತಾಳಿಕೋಟೆ, ಸಿಂದಗಿ ತಲಾ –3, ಹಿಂದುಳಿದ ಅ ವರ್ಗ ಮತಕ್ಷೇತ್ರದಿಂದ ವಿಜಯಪುರ, ತಾಳಿಕೋಟೆ, ಸಿಂದಗಿ ತಲಾ ಇಬ್ಬರು, ಇಂಡಿಯಲ್ಲಿ ಮೂವರು, ಹಿಂದುಳಿದ ಬ ವರ್ಗ ಮೀಸಲು ಕ್ಷೇತ್ರಕ್ಕೆ ವಿಜಯಪುರ, ತಾಳಿಕೋಟೆ, ಇಂಡಿ ತಲಾ ಮೂವರು, ಸಿಂದಗಿ ವ್ಯಾಪ್ತಿಯಲ್ಲಿ ಇಬ್ಬರು ಅಂತಿಮ ಅಖಾಡದಲ್ಲಿ ಉಳಿದಿದ್ದಾರೆ.

ಮಹಿಳಾ ಕ್ಷೇತ್ರದಿಂದ ವಿಜಯಪುರ–4, ತಾಳಿಕೋಟೆ–5, ಇಂಡಿ–2, ಸಿಂದಗಿ–4, ಸಾಮಾನ್ಯ ಕ್ಷೇತ್ರದಿಂದ ವಿಜಯಪುರ–22, ತಾಳಿಕೋಟೆ–18, ಇಂಡಿ–11, ಸಿಂದಗಿ–10 ಆಕಾಂಕ್ಷಿಗಳು ಅಖಾಡದಲ್ಲಿದ್ದಾರೆ. ನಾಲ್ಕು ಎಪಿಎಂಸಿಗಳಿಂದ ಪರಿಶಿಷ್ಟ ಜಾತಿಯ ಕ್ಷೇತ್ರಗಳಿಗೆ ಒಟ್ಟು 18, ಪಂಗಡದ ಕ್ಷೇತ್ರಕ್ಕೆ 10, ಹಿಂದುಳಿದ ವರ್ಗ ಅ ಕ್ಷೇತ್ರದಿಂದ 9, ಹಿಂದುಳಿದ ಬ ಮೀಸಲು ಕ್ಷೇತ್ರದಿಂದ 11, ಮಹಿಳಾ ಮೀಸಲು ಕ್ಷೇತ್ರದಿಂದ 15 ಸ್ಪರ್ಧಾ ಕಾಂಕ್ಷಿಗಳು ಅಂತಿಮ ಕಣದಲ್ಲಿದ್ದರೆ, ಸಾಮಾನ್ಯ ಕ್ಷೇತ್ರದಿಂದ 61 ಆಕಾಂಕ್ಷಿಗಳು ಸ್ಪರ್ಧೆ ಬಯಸಿ ಅಖಾಡದಲ್ಲಿ ಉಳಿದಿದ್ದಾರೆ.

ಚುನಾವಣೆ ನಡೆಯುವ ಒಟ್ಟು 42 ಮತಕ್ಷೇತ್ರಗಳಿಂದ ಆಯ್ಕೆ ಬಯಸಿ 124 ಸ್ಪರ್ಧಾಕಾಂಕ್ಷಿಗಳು ಅಂತಿಮ ಅಖಾಡದಲ್ಲಿ ಗೆಲುವಿಗಾಗಿ ಹಣಾಹಣಿ ನಡೆಸಲಿದ್ದಾರೆ ಎಂದು ಜಿಲ್ಲಾ ಚುನಾವಣಾ ಆಯೋಗದ ಮೂಲಗಳು ‘ಪ್ರಜಾವಾಣಿ’ಗೆ ಅಂಕಿ–ಅಂಶದ ಮಾಹಿತಿ ಒದಗಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT