ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲಾಪ್ರಕಾರ ಅಂತರಂಗದ ಸೌಂದರ್ಯ’

‘ವಚನ ನೃತ್ಯ ಮಹೋತ್ಸವ’ಕ್ಕೆ ಚಾಲನೆ; ಸಮಾಜದಲ್ಲಿ ಪರಿವರ್ತನೆ ತರಲು ವಚನ ಸಾಹಿತ್ಯ ರಚನೆ
Last Updated 3 ಜನವರಿ 2017, 10:03 IST
ಅಕ್ಷರ ಗಾತ್ರ

ಧಾರವಾಡ:  ‘ಸಾಹಿತ್ಯ, ಸಂಗೀತ ಸೇರಿದಂತೆ ವಿವಿಧ ಕಲಾಪ್ರಕಾರಗಳು ಸಂಸ್ಕೃತಿಯ ಅಂಗಗಳು. ಇವು ಅಂತರಂಗದ ಸೌಂದರ್ಯ. ಬಾಹ್ಯ ಸೌಂದರ್ಯ ಎಂದರೆ ಅದು ನಾಗರಿಕತೆ. ಅಂತರಂಗದ ಸೌಂದರ್ಯ ಸೃಜನಶೀಲ ಕಲೆಗಳ ಮೂಲಕ ಅಭಿವ್ಯಕ್ತಗೊಳ್ಳುತ್ತದೆ’ ಎಂದು ಬೆಳಗಾವಿ ನಾಗನೂರ ಮಠದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗುರಪ್ಪ ಬೆಲ್ಲದ ದತ್ತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ‘ವಚನ ನೃತ್ಯ ಮಹೋತ್ಸವ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಾವ್ಯ ರಚನೆ ಶರಣರ ಉದ್ದೇಶವಾಗಿರಲಿಲ್ಲ. ಸಮಾಜದಲ್ಲಿ ಪರಿವರ್ತನೆ ತರಬೇಕು. ತಿಳಿವಳಿಕೆ, ಅರಿವು ಮೂಡಿಸುವ ಉದ್ದೇಶದಿಂದ ವಚನಗಳನ್ನು ಮಾಧ್ಯಮವಾಗಿ ಬಳಸಿಕೊಂಡರು. ವಚಗಳಲ್ಲಿ ಛಂದಸ್ಸು, ಲಯದಂಥ ಸಾಹಿತ್ಯಿಕ ಗುಣಗಳಿರುವುದರಿಂದಲೇ ವಚನ ಸಾಹಿತ್ಯ ಎನ್ನುವ ಪ್ರಕಾರಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವ ಬಂದಿದೆ. ಕನ್ನಡ ಸಾಹಿತ್ಯದ ಘನತೆ, ಗೌರವವನ್ನು ಹೆಚ್ಚಿಸಿದ ಸಾಹಿತ್ಯ ವಚನ ಸಾಹಿತ್ಯ’ ಎಂದರು.

‘ಪ್ರಸ್ತುತ ಜ್ಞಾನ ಸಂಪಾದನೆಯ ಸಮಯದಲ್ಲಿ ನಮ್ಮ ಮಕ್ಕಳು ಮೊಬೈಲ್‌, ಕಂಪ್ಯೂಟರ್‌ಗಳಲ್ಲಿ ಕಳೆದು ಹೋಗುತ್ತಿದ್ದಾರೆ. ಅವರಲ್ಲಿ ಉತ್ತಮ ಹವ್ಯಾಸಗಳನ್ನು ಬೆಳೆಸುವ ಹೊಣೆಗಾರಿಕೆ ಪಾಲಕರ ಮೇಲಿದೆ. ಅವರಿಗೆ ವಚನಗಳನ್ನು ಪರಿಚಯಿಸಬೇಕಿದೆ. ಸಾಹಿತ್ಯ, ಸಂಗೀತ ಕಲೆಗಳತ್ತ ಒಲವು ಮೂಡಿಸುವ ವಾತಾವರಣ ನಿರ್ಮಾಣ ಮಾಡಬೇಕಿದೆ.

ತಂದೆ, ತಾಯಿ, ಹಿರಿಯರ ಸ್ಮರಣೆಯನ್ನು ವಿಧಾಯಕ ಕಾರ್ಯಕ್ರಮಗಳ ಮೂಲಕ ಮಾಡುತ್ತಿರುವ, ವಚನಗಳನ್ನು ಜನಮಾನಸದೆಡೆಗೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ಅವುಗಳಿಗೆ ಸಂಗೀತ, ನೃತ್ಯ ಅಳವಡಿಸಿ ಪ್ರದರ್ಶಿಸುವ  ಕಾರ್ಯಕ್ರಮ ಅಭಿನಂದನೀಯ’ ಎಂದರು. ‘ಬದುಕಿಗೆ ಅಗತ್ಯವಾದ ಎಲ್ಲ ಮೌಲಿಕ ವಿಚಾರಗಳು ವಚನಗಳಲ್ಲಿವೆ. ಜೀವನದ ಎಲ್ಲ ಸಮಸ್ಯೆಗಳಿಗೂ ಶರಣರು ತಮ್ಮ ವಚನಗಳ ಮೂಲಕ ಪರಿಹಾರ ಸೂಚಿಸಿದ್ದಾರೆ.

ಅಂಧಕಾರದ ಬದುಕಿಗೆ ಬೆಳಕು ತೋರುವ ಶಕ್ತಿ ವಚನಗಳಿಗಿದೆ. ಬಸವಾದಿ ಶರಣರ ಅನುಭವ ಮತ್ತು ಅನುಭಾವದ ಪರಿಣಾಮವಾಗಿ ರಚಿತವಾದ ವಚನಗಳಲ್ಲಿನ ಮೌಲಿಕ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಸರ್ವಸಮಾನ, ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯ’ ಎಂದು ಹೇಳಿದರು.

ಆಕಾಶವಾಣಿಯ ಅನಿಲ್‌ ದೇಸಾಯಿ ಮಾತನಾಡಿ, ‘ಬಡವ ಶ್ರೀಮಂತರ ನಡುವಿನ ಸಂಘರ್ಷವಾಗಿ ರಷ್ಯಾ, ಪ್ರೆಂಚ್‌ ಕ್ರಾಂತಿಗಳಾದವು. ಆದರೆ ಸಮಾನತೆ, ವ್ಯಕ್ತಿ ಗೌರವಗಳಂಥ ಸಂಗತಿಗಳನ್ನು ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಭಾರತದಲ್ಲಿ ಅದರಲ್ಲೂ ರಾಜ್ಯದಲ್ಲಿ ನಡೆದ ವಚನ ಕ್ರಾಂತಿ ಅತ್ಯಂತ ಮಹತ್ವದ್ದು ಮತ್ತು ವಿಶೇಷವಾದದ್ದು’ ಎಂದರು. ಕಾರ್ಯಕ್ರಮದಲ್ಲಿ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಚಂದ್ರಕಾಂತ ಬೆಲ್ಲದ, ಶಿವಣ್ಣ ಬೆಲ್ಲದ, ಡಾ.ಶ್ರೀಶೈಲ ಹುದ್ದಾರ. ಡಾ.ಗೌರಿ ಪಾಟೀಲ ಇದ್ದರು.  ನಂತರ ವಿವಿಧ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ವಚನ ನೃತ್ಯ ಮತ್ತು ವಚನಗಾಯನ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT