ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ವಿದ್ವಾಂಸರ ಪಯಣ ಕುತೂಹಲ

Last Updated 3 ಜನವರಿ 2017, 19:30 IST
ಅಕ್ಷರ ಗಾತ್ರ

ಸಂಗೀತಗಾರರಿಗೆ ತಾವು ಬಳಸುವ ವಾದ್ಯಗಳ ಬಗ್ಗೆ ಅತೀವ ಪ್ರೀತಿ. ಬಿಡಿಸಲಾಗದ ನಂಟು. ಕಲಾವಿದನ ಹೃದಯದ ಭಾಷೆಯನ್ನು ಉಣಬಡಿಸುವ ಸಂಗೀತಕ್ಕೆ ಉಪಕರಣಗಳೇ ಆಧಾರ. ಸಂಗೀತ ಕಲೆ ಪಸರಿಸಲು ವಿಶ್ವದ ಮೂಲೆಮೂಲೆಗೂ ಪ್ರಯಾಣಿಸುವ ಸಂಗೀತಗಾರರಿಗೆ ಪ್ರಯಾಣದ ಸಮಯದಲ್ಲಿ ಅವರ ಸಂಗೀತ ಉಪಕರಣಗಳನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಭಾರತದ ಖ್ಯಾತ ಸಂಗೀತಗಾರರು ತಮ್ಮ ವಾದ್ಯಗಳನ್ನು ರಕ್ಷಿಸಿಕೊಳ್ಳಲು ತೆಗೆದುಕೊಳ್ಳುವ ಕಾಳಜಿಯ ಬಗ್ಗೆ ಕಲಾವಿದರು ಏನು ಹೇಳಿಕೊಂಡಿದ್ದಾರೆ ಗೊತ್ತೆ?

ನಮ್ಮ ಸಿತಾರ್ ಒಡೆದ ಮೊಟ್ಟೆಯಂತಾಗಿತ್ತು
ನನ್ನ ಸಿತಾರ್ ರಕ್ಷಣೆಗೆ ನಾನು ಎರಡು ಮಾರ್ಗಗಳನ್ನು ಅನುಸರಿಸುತ್ತೇನೆ. ವಿಮಾನದಲ್ಲಿ ಸಿತಾರ್‌ನ ಸಣ್ಣ ಪೆಟ್ಟಿಗೆಯೊಂದಿಗೆ ನಾನು ಪ್ರಯಾಣಿಸುತ್ತಿದ್ದರೆ, ಅದಕ್ಕೂ ಕೂಡ ಒಂದು ಟಿಕೆಟ್ (ಸೀಟ್) ಖರೀದಿಸುತ್ತೇನೆ.

ಕೆಲ ಸಂದರ್ಭಗಳಲ್ಲಿ 32 ಕಿಲೋ ತೂಕದ ದೊಡ್ಡದಾದ ಪೆಟ್ಟಿಗೆಯೊಳಗೆ ಸಿತಾರ್ ಒಯ್ಯುತ್ತೇನೆ. ಸಿತಾರ್‌ಗಳಿಗೆ ಪ್ರತ್ಯೇಕ ಆಸನ ಖರೀದಿಸುವ ಮೊದಲು ವಿಮಾನ ಪ್ರಯಾಣ ಮಾಡುವಾಗ ಅನೇಕ ಸಲ ನನ್ನ ಸಿತಾರ್‌ಗಳು ಮುರಿದಿವೆ. ಒಮ್ಮೆ ಅಪ್ಪನೊಂದಿಗೆ ಏರ್ ಫ್ರಾನ್ಸ್ ನಲ್ಲಿ ಆರ್ಲ್ ನಗರಕ್ಕೆ ಬಂದಿಳಿದಾಗ ನಮ್ಮಿಬ್ಬರ ಸಿತಾರ್‌ಗಳು ಒಡೆದ ಮೊಟ್ಟೆಯಂತೆ ಹಾಳಾಗಿದ್ದವು. ಅದೊಂದು ಕೆಟ್ಟ ಅನುಭವ.
-ಅನೌಷ್ಕಾ ಶಂಕರ್, ಸಿತಾರ್ ವಾದಕಿ

***
ಬೆಲೆ ಕಟ್ಟಲು ಸಾಧ್ಯವಿಲ್ಲ

2014ರಲ್ಲಿ ಲಂಡನ್‌ನಿಂದ ದೆಹಲಿಗೆ ಹಿಂದಿರುಗುವಾಗ ಬ್ರಿಟಿಷ್ ಏರ್‌ವೇಸ್ ಸಿಬ್ಬಂದಿ ನನ್ನ ಸರೋದ್ ಕಳೆದು ಬಿಟ್ಟಿದ್ದರು. ಅದೃಷ್ಟವಶಾತ್ ಅದು ಮತ್ತೆ ನನಗೆ ಸಿಕ್ಕಿತು.ನಾನು ಕಳೆದ 45 ವರ್ಷಗಳಿಂದ ಸರೋದ್ ನುಡಿಸುತ್ತಿದ್ದೇನೆ. ಸರೋದ್ ನನ್ನ ಅಭಿವ್ಯಕ್ತಿ ಮಾಧ್ಯಮ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದನ್ನು ಕಳೆದುಕೊಳ್ಳಲು ನಾನು ಎಂದಿಗೂ ಇಷ್ಟಪಡುವುದಿಲ್ಲ.

ಈಗ ವಿಮಾನ ಪ್ರಯಾಣದ ಸಮಯದಲ್ಲಿ, ಅಲ್ಲಿನ ಸಿಬ್ಬಂದಿಗೆ ಸರೋದ್ ಕೊಡುವಾಗ ಅದನ್ನು ದೇವರ ಕೈಗೆ ನೀಡುತ್ತಿರುವ ಹಾಗೆ ಭಾವಿಸುತ್ತೇನೆ. ಅದು ಸುರಕ್ಷಿತವಾಗಿರಲೆಂದು ಪ್ರಾರ್ಥನೆ ಮಾಡುತ್ತೇನೆ.
-ಉಸ್ತಾದ್ ಆಮ್ಜದ್ ಅಲಿ ಖಾನ್, ಖ್ಯಾತ ಸರೋದ್ ವಾದಕ

***
ನೋವು ವಿವರಿಸಲು ಸಾಧ್ಯವಿಲ್ಲ

ಇತರ ಸಂಗೀತ ವಾದ್ಯಗಳಿಗೆ ಹೋಲಿಸಿದರೆ ಪಿಟೀಲು ಗಾತ್ರದಲ್ಲಿ ಸಣ್ಣದು. ಪ್ರಯಾಣದ ಸಮಯದಲ್ಲಿ ನನ್ನೊಂದಿಗೆ ಅದೂ ಇರುತ್ತದೆ. ಆದರೆ ತಂಬೂರಿ ಅಥವಾ ಸ್ವರಮಂಡಲ್‌ಗಳನ್ನು ಸಾಗಿಸುವಾಗ ನನಗೆ ಭಯವಾಗುತ್ತೆ.

ಯಾವಾಗ ಪ್ರಯಾಣ ಮುಗಿದು ನನ್ನ ಸಂಗೀತ ವಾದ್ಯಗಳನ್ನು ಕಣ್ತುಂಬಿಕೊಳ್ಳುತ್ತೇನೋ ಎಂಬ ನಿರೀಕ್ಷೆಯಲ್ಲೇ ಇರುತ್ತೇನೆ. ನಾವು ಬಳಸುವ ವಾದ್ಯಗಳಲ್ಲಿಯೇ ನಮ್ಮ ಜೀವ ಇರುತ್ತದೆ. ಇಷ್ಟದ ಸಂಗೀತ ಉಪಕರಣಗಳನ್ನು ಕಳೆದುಕೊಂಡ ಅಥವಾ ಹಾಳಾದ ಸ್ಥಿತಿಯಲ್ಲಿ ನೋಡುವ ಸಂಗೀತ ವಿದ್ವಾಂಸರ ನೋವನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ.
-ಎಲ್.ಸುಬ್ರಮಣಿಯಂ, ಖ್ಯಾತ ಪಿಟೀಲು ವಾದಕ

***
ಕ್ಯಾಬಿನ್‌ಗಳಲ್ಲಿ ಇಡುವುದಿಲ್ಲ

ಸಂತೂರ್ ಇಟ್ಟುಕೊಳ್ಳಲು ನಾನು ಪೆಟ್ಟಿಗೆಗಳನ್ನು ಉಪಯೋಗಿಸುತ್ತೇನೆ. ಆ ಪೆಟ್ಟಿಗೆಗಳನ್ನು ಪ್ರಯಾಣದ ಸಮಯದಲ್ಲಿ ನನ್ನೊಂದಿಗೆ ಇರಿಸಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಪ್ರಯಾಣಿಕರು ಲಗೇಜ್‌ಗಳನ್ನು ಇಡಲು ಬಳಸುವ ಕ್ಯಾಬಿನ್‌ನಲ್ಲಿ ಸಂತೂರ್ ಇರಿಸುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ.

ವಿಮಾನ ಪ್ರಯಾಣದ ಸಮಯದಲ್ಲಿ ವೀಣೆ, ಸಿತಾರ್‌ ಮತ್ತು ಸರೋದ್ ಹಾಳಾಗಿರುವ ಘಟನೆಗಳ ಬಗ್ಗೆ ನನಗೆ ತಿಳಿದಿದೆ. ಪುಣ್ಯಕ್ಕೆ, ನನ್ನ ಸಂತೂರ್ ನ್ನು ವಿಮಾನದಲ್ಲಿ ಸುಲಭವಾಗಿ ಸಾಗಿಸಬಹುದು.
-ಪಂಡಿತ್ ಶಿವಕುಮಾರ್ ಶರ್ಮಾ, ಖ್ಯಾತ ಸಂತೂರ್ ವಾದಕ

***
‘ಕೈಚೀಲದಲ್ಲೇ ಇಟ್ಕೋತೀನಿ’

ಸಂಗೀತ ಕಚೇರಿಗಳಿಗೆ ತೆಗೆದುಕೊಂಡು ಹೋಗುವ ಕೊಳಲುಗಳನ್ನು ನಾನು ಬಹುತೇಕ ಬಾರಿ ನನ್ನ ಕೈ ಚೀಲದಲ್ಲೇ ಇಟ್ಟುಕೊಳ್ಳುತ್ತೇನೆ. ಕೆಲವು ಸಲ ಅವುಗಳನ್ನು ವಿಮಾನದಲ್ಲಿ ವಸ್ತುಗಳನ್ನಿಡುವ ಕ್ಯಾಬಿನ್‌ನಲ್ಲಿ ಇಡಬೇಕಾಗುತ್ತದೆ. ಒಮ್ಮೆ ಪ್ರಯಾಣ ಮುಗಿದು ಕೊಳಲುಗಳನ್ನು ನೋಡುವವರೆಗೂ ನಾನು ಒಂದು ರೀತಿಯ ಹೆದರಿಕೆಯಲ್ಲಿ ಇರುತ್ತೇನೆ.

ಜನರು ಕ್ಯಾಬಿನ್‌ನಿಂದ ವಸ್ತುಗಳನ್ನು ತೆಗೆದುಕೊಳ್ಳುವಾಗ ಇತರರ ವಸ್ತುಗಳನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ. ಕೊಳಲು ಒಂದು ಸಣ್ಣ ವಾದ್ಯವಾಗಿರುವುದರಿಂದ, ಅದನ್ನು ಹೆಚ್ಚು ಕಷ್ಟವಿಲ್ಲದೆ ಸಾಗಿಸಬಹುದು.
-ಪಂಡಿತ್ ಹರಿಪ್ರಸಾದ ಚೌರಾಸಿಯ, ಖ್ಯಾತ ಕೊಳಲು ವಿದ್ವಾಂಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT