ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 3 ಜನವರಿ 2017, 19:30 IST
ಅಕ್ಷರ ಗಾತ್ರ

ಮಹೇಶ್‌. ಮೈಸೂರು
* ನಾನು ರಾಜ್ಯ ಸರ್ಕಾರದ ನೌಕರ. ಸಂಬಳ ₹ 31,000 ವಯಸ್ಸು 30. ಮದುವೆ ಆಗಿಲ್ಲ. ವೈಯಕ್ತಿಕ ಬ್ಯಾಂಕ್‌ ಸಾಲದ ಕಂತು ಹಾಗೂ ಎಲ್ಲಾ ಕಡಿತ ಮತ್ತು ಖರ್ಚು ಹೋಗಿ ₹ 8,000 ಉಳಿಯುತ್ತದೆ. ನನಗೆ  ₹ 1.50 ಲಕ್ಷ ಸಾಲ ಬೇಕಾಗಿದೆ.  ಉತ್ತಮ ಉಳಿತಾಯ ತಿಳಿಸಿ.
ಉತ್ತರ:
ನಿಮಗೆ ಈಗಾಲೇ ವೈಯಕ್ತಿಕ ಸಾಲವಿದ್ದು, ಆ ಸಾಲದ ಇ.ಎಂ.ಐ. ಸರಿಯಾಗಿ ಕಟ್ಟುತ್ತಾ ಬಂದಿರುವಲ್ಲಿ, ಈಗಿರುವ ಸಾಲದ ಮೊತ್ತ ಮುರಿದು, ಹೊಸಸಾಲ ಪಡೆಯಬಹುದು. ನೀವು ಸಂಬಳ ಪಡೆಯುವ ಬ್ಯಾಂಕಿನಲ್ಲಿ ವಿಚಾರಿಸಿ. ಗರಿಷ್ಠ 10 ತಿಂಗಳ ಸಂಬಳದ ಮೊತ್ತದ ತನಕ ಸಂಬಳ ಪಡೆಯುವ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲ ಸಿಗಬಹುದು. ನೀವು ಸದ್ಯ ಮದುವೆಯಾಗಬೇಕು. ನಿಮ್ಮ ಉಳಿತಾಯದ ಸಾಮರ್ಥ್ಯದ ಬಹಳ ಕಡಿಮೆ ಇದೆ. ನೀವೇ ಒಂದು ಮೊತ್ತ ನಿರ್ಧರಿಸಿ, ಆ ಮೊತ್ತದ ಆರ್‌.ಡಿ. 5 ವರ್ಷಗಳ ಅವಧಿಗೆ ಮಾಡಿ, ಉಳಿತಾಯಕ್ಕೆ ಸ್ವಲ್ಪಮಟ್ಟಿನ ತ್ಯಾಗ ಮನೋಭಾವನೆ ಇರಬೇಕಾಗಿತ್ತದೆ.

ವೀರೇಶ್‌, ಕಮತಗಿ
* ನಾನು ಇತ್ತೀಚೆಗೆ ಕಿಡ್ನಿ ತೊಂದರೆಯಿಂದ, ಬೇರೊಬ್ಬರ ಕಿಡ್ನಿ ದಾನ ಪಡೆದು ಅಳವಡಿಸಿಕೊಂಡಿದ್ದೇನೆ. ದೇವರ ದಯೆಯಿಂದ ಈಗ ತೊಂದರೆ ಇಲ್ಲ. ನಾನು ಟರ್ಮ್‌ ಇನ್ಶುರನ್‌್ಸ ಮಾಡಿಸಬೇಕೆಂದಿದ್ದೇನೆ. ಎಲ್‌ಐಸಿ ಅಥವಾ ಐಸಿಐಸಿಯಲ್ಲಿ ಮಾಡಿಸಬೇಕೆ ಸಲಹೆ ನೀಡಿ. ನನ್ನ ಖಾತೆ ಐಸಿಐಸಿಯಲ್ಲಿರುತ್ತದೆ. ನನ್ನ ಉಳಿತಾಯ: ಜೀವನ ಆನಂದ ₹ 16000 ವಾರ್ಷಿಕ ಹಾಗೂ ಮ್ಯೂಚುವಲ್‌ ಫಂಡ್‌ ₹ 60000. ಪಿಪಿಎಫ್‌ಗೆ ₹ 1.50 ಲಕ್ಷ ಕಟ್ಟುತ್ತೇನೆ. ನನಗೆ ನಿಮ್ಮ ಸಲಹೆ ಅಗತ್ಯವಿದೆ.
ಉತ್ತರ:
ಬಹಳಷ್ಟು ಇನ್ಶುರನ್‌್ಸ ಕಂಪೆನಿಗಳು, ವ್ಯಕ್ತಿಗೆ ಈಗಲೇ ಇರುವ ಕಾಯಿಲೆ ಪರಿಗಣಿಸಿ, ವಿಮೆ ಇಳಿಸುವಾಗ, ವಿಮೆಯ ಸೌಲತ್ತು ಪ್ರಥಮ ಮೂರು ವರ್ಷಗಳ ತನಕ ಒದಗಿಸುವುದಿಲ್ಲ. ಐಸಿಐಸಿಯವರು ನಿಮಗೆ ಟರ್ಮ್‌ ಇನ್ಶುರನ್‌್ಸ ಮಾಡುವಲ್ಲಿ, ಅಲ್ಲಿಯೇ ನಿಮ್ಮ ಸಂಬಳ ಜಮಾ ಆಗುವುದರಿಂದ, ಅಲ್ಲಿಯೇ ಮಾಡಿರಿ, ಟರ್ಮ್‌ ಇನ್ಶುರನ್‌್ಸನಲ್ಲಿ ಕಟ್ಟಿದ ಹಣ ವಾಪಸು ಬರುವುದಿಲ್ಲವಾದರೂ, ವ್ಯಕ್ತಿಯು ಅಕಾಲ ಮರಣಕ್ಕೀಡಾದಾಗ, ವಿಮಾ ಮೊತ್ತ ವನ್ನು ವಾರಸುದಾರರು ಪಡೆಯಬಹುದು. ಜತೆಗೆ ವಾರ್ಷಿಕ ಪ್ರೀಮಿಯಂ ಹಣ ಕಡಿಮೆ ಇರುತ್ತದೆ. ಸಾಧ್ಯವಾದರೆ ಕನಿಷ್ಠ ₹ 50 ಲಕ್ಷ ಟರ್ಮ್‌ ಇನ್ಶುರನ್‌್ಸ  ಮಾಡಿಸಿ. ವಾರ್ಷಿಕ ಪ್ರೀಮಿಯಂ ಅಂದಾಜು
₹ 15,000 ಬರಬಹುದು. ನೀವು ಮ್ಯೂಚುವಲ್‌ ಫಂಡ್‌ನಲ್ಲಿ ಹೂಡುತ್ತಿರುವ ಮೊತ್ತದ ಎನ್‌ಎವಿ ಆದಾಗ ಪರಿಶೀಲಿಸುತ್ತಾ ಇರಿ. ಈ ಹೂಡಿಕೆ ಲಾಭದಾಯಕವೇ ಎನ್ನುವುದನ್ನು ತಿಳಿದುಕೊಳ್ಳಿ.

ಮುರಳೀಧರ ಕುಲಕರ್ಣಿ, ಬೀದರ್‌
* ಬ್ಯಾಂಕ್‌ನಲ್ಲಿ ಫಿಕ್‌್ಸಡ್‌ ಡಿಪಾಸಿಟ್‌ ಸರ್ಟಿಫಿಕೇಟನ್ನು ಅಡವಿಟ್ಟು ಅದರ ಮೇಲೆ ಸಾಲವನ್ನು ಪಡೆದಿದ್ದೇನೆ. ಅದಕ್ಕೆ ವಿಧಿಸುವ ಬಡ್ಡಿಗೆ ಆದಾಯ ತೆರಿಗೆ ವಿನಾಯ್ತಿ ಇದೆಯೇ? ನಾನು 2014–15ನೇ ಆರ್ಥಿಕ ವರ್ಷದ ಆದಾಯ ತೆರಿಗೆ ರಿಟರ್ನ್‌ ತುಂಬಿ ಬೀದರ್‌ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ್ದೇನೆ. ನನಗೆ ₹ 1,500 ರಿಫಂಡ್‌ ಬರಬೇಕಾಗಿತ್ತು. ಆದರೆ ಈವರೆಗೆ ಬಂದಿಲ್ಲ. ಅನೇಕ ಬಾರಿ ವಿಚಾರಿಸಿದರೂ ಉಪಯೋಗವಾಗಲಿಲ್ಲ. ಈ ವಿಚಾರದಲ್ಲಿ ಯಾರಿಗೆ ದೂರು ಸಲ್ಲಿಸಬೇಕು.
ಉತ್ತರ:
ಗೃಹಸಾಲದ ಬಡ್ಡಿ ಸೆಕ್ಷನ್‌ 24(ಬಿ) ಆಧಾರದ ಮೇಲೆ ಗರಿಷ್ಠ ₹ 2 ಲಕ್ಷಗಳ ತನಕ ಹಾಗೂ ಶಿಕ್ಷಣ ಸಾಲದ ಬಡ್ಡಿ ಸೆಕ್ಷನ್‌ 80ಇ ಆಧಾರದ ಮೇಲೆ ಸಂಪೂರ್ಣ ಆದಾಯ ತೆರಿಗೆ ವಿನಾಯ್ತಿ ಇದೆ. ಇವೆರಡು ಸಾಲಗಳ ಹೊರತುಪಡಿಸಿ ಬೇರಾವ ಸಾಲದ ಬಡ್ಡಿಗೆ ಆದಾಯ ತೆರಿಗೆ ವಿನಾಯ್ತಿ ಇರುವುದಿಲ್ಲ. ನಿಮ್ಮ ಆದಾಯತೆರಿಗೆ ರಿಫಂಡ್‌ ವಿಚಾರದಲ್ಲಿ, ಕಮಿಷನರ್‌ ಆದಾಯತೆರಿಗೆ ಇಲಾಖೆ, ಕ್ವೀನ್‌್ಸ ರೋಡ್‌ ಬೆಂಗಳೂರು–560001 ಇವರಿಗೆ ದೂರು ಸಲ್ಲಿಸಿ.

ಕೃಷ್ಣಮೂರ್ತಿ, ಬೆಳಗಾವಿ
* ನಾನು ನಿವೃತ್ತಿ ಶಿಕ್ಷಕ. ನಾನು ಹುಟ್ಟಿದ ತಾರೀಖು 28–11–1938. ನನ್ನ ವಾರ್ಷಿಕ ಪಿಂಚಣಿ
₹ 3,33,420 ಹಾಗೂ ಠೇವಣಿಗಳಿಂದ ಬರುವ ಬಡ್ಡಿ ₹ 76,182.  ವಾರ್ಷಿಕ ಆದಾಯ ₹ 4,09,602. ನನ್ನ ಪ್ರಶ್ನೆ: ಒಂದು ಸಂಸ್ಥೆ ಆದಾಯ ತೆರಿಗೆ ಇಲಾಖೆಯಿಂದ 80ಜಿ(ಆರ್‌) ವಿನಾಯಿತಿ ಪಡೆದಿರುವ ಸಂಸ್ಥೆಗೆ ₹ 2.50 ಲಕ್ಷ ಅರ್ಪಿಸಿದ್ದೇನೆ. ನಾನು ಆದಾಯ ತೆರಿಗೆ ಎಷ್ಟು ಕಟ್ಟಬೇಕು. ಈಗಾಗಲೇ ಟಿ.ಡಿ.ಎಸ್‌. ಎಂದು ನನ್ನ ಪಿಂಚಣಿಯಲ್ಲಿ ಹಣ ಹಿಡಿಯುತ್ತಿದ್ದಾರೆ. ಬ್ಯಾಂಕುಗಳಿಗೆ 15ಎಚ್‌ ಸಲ್ಲಿಸಿದ್ದೇನೆ. ನನಗೆ ಅಕ್ಟೋಬರ್‌ 2018ಕ್ಕೆ 80 ವರ್ಷ ತುಂಬುತ್ತದೆ. ನನಗೆ ₹ 5 ಲಕ್ಷ ಆದಾಯ ತೆರಿಗೆ ಮಿತಿ ಯಾವ ವರ್ಷದಿಂದ ಪ್ರಾರಂಭವಾಗುತ್ತದೆ?
ಉತ್ತರ:
ಆದಾಯ ತೆರಿಗೆ ಸೆಕ್ಷನ್‌ 80ಜಿ ಆಧಾರದ ಮೇಲೆ ನೀವು ಒಂದು ಸಂಸ್ಥೆಗೆ ಕೊಟ್ಟಿರುವ ದಾನ ₹ 2.50 ಲಕ್ಷದಲ್ಲಿ ಶೇ 50 ರಷ್ಟು ಅಂದರೆ ₹ 1.25 ಲಕ್ಷ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಹೀಗೆ ಮಾಡಿದಾಗ ನಿಮ್ಮ ವಾರ್ಷಿಕ ಒಟ್ಟು ಆದಾಯ ₹2,84,602 ಆಗುತ್ತದೆ. ನೀವು ಹಿರಿಯ ನಾಗರಿಕರಾಗಿದ್ದರಿಂದ ನಿಮಗೆ ₹ 3 ಲಕ್ಷ ಆದಾಯದ ತನಕ ತೆರಿಗೆ ವಿನಾಯತಿ ಇರುವುದರಿಂದ ನಿಮಗೆ ತೆರಿಗೆ ಬರುವುದಿಲ್ಲ. ಪಿಂಚಣಿಯಲ್ಲಿ ಹಿಡಿದ ಟಿಡಿಎಸ್‌ ವಾಪಸ್‌ ಪಡೆಯಲು ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಿ. ನೀವು ಅಕ್ಷೋಬರ್‌ 2018 ರಂದು 80 ವರ್ಷ ದಾಟುವುದರಿಂದ, ₹ 5 ಲಕ್ಷದ ಆದಾಯ ತೆರಿಗೆ ವಿನಾಯತಿಯನ್ನು 1–4–2018 ರಿಂದ 31–3–2019 ಆರ್ಥಿಕ ವರ್ಷದಲ್ಲಿ ಪಡೆಯಬಹುದು.

ಚಂದ್ರಶೇಖರ್‌ ಇಟ್ಟಗಿ, ಮುದ್ದೇಬಿಹಾಳ
* ನನ್ನ ವಯಸ್ಸು 71. 2004 ರಲ್ಲಿ ನಿವೃತ್ತನಾದೆ. ನನಗೆ ಇಲ್ಲಿ ಸ್ವಂತ ಮನೆ ಇದೆ. ನಿವೃತ್ತಿಯಿಂದ ಬಂದ ಹಣ ಪೋಸ್ಟ್‌ ಆಫೀಸ್‌, ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿಯಾಗಿರಿಸಿ ಅದೆಲ್ಲವೂ ಸೇರಿ ಈಗ ₹ 19.24 ಲಕ್ಷವಾಗಿದೆ. ಮುಂದಿನ ವರ್ಷದಲ್ಲಿ ಅವಧಿ ಮುಗಿಯುತ್ತದೆ. ಈ ಎಲ್ಲಾ ಠೇವಣಿ ನನ್ನ ಮತ್ತು ಹೆಂಡತಿ ಹೆಸರಿನಲ್ಲಿ Either or surviva* ಖಾತೆಯಲ್ಲಿ ಇರಿಸಿದ್ದೇನೆ. ಬೇರೆ ಬೇರೆ ಊರಿನಲ್ಲಿ 54X45 ಹಾಗೂ 30X40 ಹೀಗೆ ಎರಡು ನಿವೇಶನಗಳಿವೆ. ಪಿತ್ರಾರ್ಜಿತವಾಗಿ ಬಂದ 4 ಎಕರೆ 26 ಗುಂಟೆ ಜಮೀನಿದೆ. ನಿವೃತ್ತಿ ನಂತರ ನನ್ನ ಆದಾಯವು ತೆರಿಗೆ ವ್ಯಾಪ್ತಿಗೆ ಬಾರದಿರುವುದರಿಂದ ರಿಟರ್ನ್‌ ಫೈಲ್‌ ಮಾಡಿಲ್ಲ. ಈ ಆರ್ಥಿಕ ವರ್ಷ 2016–17 ರಲ್ಲಿ ರಿಟರ್ನ್‌ ತುಂಬಬಹುದೇ?  ಅಥವಾ ಬೇಡವೇ, ಯಾವುದು ಕ್ಷೇಮ. ಸದ್ಯ ನನ್ನ ನಿವೃತ್ತಿ ವೇತನ ₹ 27,614 ನಿಂದ ರಿಲಯನ್‌್ಸ ಟ್ಯಾಕ್‌್ಸ ಸೇವಿಂಗ್‌್ಸ ಸ್ಕೀಮಿನಲ್ಲಿ ₹ 30,000 ಹಾಕಿದ್ದೇನೆ. ಟ್ಯಾಕ್‌್ಸ ಮಿತಿಯಲ್ಲಿ ಬರುತ್ತ ದೆಯೇ? ತೆರಿಗೆಯಿಂದ ಹೊರಗುಳಿಯಲು ಯಾವ ಯಾವ ಸೇವಿಂಗ್ಸ್‌ ಮಾಡಬಹುದು. ನನಗೆ 2015 ಏಪ್ರಿಲ್‌ನಲ್ಲಿ ಕ್ಯಾನ್ಸರ್‌ ಶಸ್ತ್ರ ಚಿಕಿತ್ಸೆಯಾಗಿ ಗುಣವಾಗಿದ್ದೇನೆ. ಇದರಿಂದ ಏನಾದರೂ ಸೌಲಭ್ಯ ಸಿಕ್ಕೀತೇ? 
ಉತ್ತರ:
ನಿಮ್ಮ ನಿವೃತ್ತಿ ವೇತನ, ಅಂದರೆ ಪಿಂಚಣಿಯಿಂದ ವಾರ್ಷಿಕವಾಗಿ ₹ 3,31,368 ಪಡೆಯುತ್ತಿರಿ, ಜೊತೆಗೆ ಬ್ಯಾಂಕ್‌ ಠೇವಣಿ ಬಡ್ಡಿ ಕೂಡಾ ಬರುತ್ತದೆ. ನಿಮ್ಮ ವಾರ್ಷಿಕ ಒಟ್ಟು ಆದಾಯ, ಪಿಂಚಣಿ ಹಾಗೂ ಠೇವಣಿ ಬಡ್ಡಿ ಸೇರಿ ₹ 3 ಲಕ್ಷ ದಾಟುವುದರಿಂದ ಹಾಗೆ ದಾಟಿದ ಮೊತ್ತಕ್ಕೆ ಆದಾಯ ತೆರಿಗೆ ಸಲ್ಲಿಸಬೇಕು ಮತ್ತು ಆದಾಯತೆರಿಗೆ ರಿಟರ್ನ್‌ ತುಂಬಲೇಬೇಕು. ಸೆಕ್ಷನ್‌ ಡಿಡಿಬಿ ಆಧಾರದ ಮೇಲೆ, ನೀವು ಕ್ಯಾನ್ಸರ್‌ ಚಿಕಿತ್ಸೆಗೆ ಖರ್ಚು ಮಾಡಿದ ಹಣದ ಗರಿಷ್ಠ ₹ 80,000 ತನಕ ಆದಾಯದಿಂದ  ಕಳೆದು  ತೆರಿಗೆ ಸಲ್ಲಿಸಬಹುದು. ಆದರೆ ಈ ಖರ್ಚು 2015 ರಲ್ಲಿ ನಡೆದಿರುವುದರಿಂದ 2016–17ಗೆ ಬರುವುದಿಲ್ಲ. ರಿಲಯನ್‌್ಸ ಟ್ಯಾಕ್‌್ಸ ಸೇವಿಂಗ್‌್ಸ ಸ್ಕೀಮಿನ ₹ 30,000 ಈ ಅವಧಿಯದ್ದಾರೆ, ಈ ಮೊತ್ತ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ನಿಮ್ಮ ಮನೆ ಹಾಗೂ ನಿವೇಶನ ಇವುಗಳಿಂದ ಏನೂ ಆದಾಯವಿರದಿರುವುದರಿಂದ ಆ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳಬೇಡಿ. ಜಮೀನಿನಿಂದ ಆದಾಯವಿದ್ದರೆ ಅದಕ್ಕೂ ಸೆಕ್ಷನ್‌ 10(1) ಆಧಾರದ ಮೇಲೆ ತೆರಿಗೆ ಇಲ್ಲ. ₹ 3 ಲಕ್ಷಕ್ಕೂ ಮಿಕ್ಕಿದ ಆದಾಯಕ್ಕೆ ಕೊಡುವ ತೆರಿಗೆ ಉಳಿಸಲು ಗರಿಷ್ಠ ₹ 1.50 ಲಕ್ಷಗಳ ತನಕ, 5 ವರ್ಷಗಳ ತೆರಿಗೆಗೋಸ್ಕರ ಮೀಸಲಾಗಿರುವ ಠೇವಣಿಯಲ್ಲಿ ಬ್ಯಾಂಕಿನಲ್ಲಿ ತೊಡಗಿಸಬಹುದು. ನೀವು ನಿಮ್ಮ ಮನೆಗೆ ಸಮೀಪದ ತೆರಿಗೆ   ಸಲಹೆಗಾರರ ಮುಖಾಂತರ ಜುಲೈ 2017ರೊಳಗೆ (ಮಾರ್ಚಿ 31ರ ನಂತರ) ತೆರಿಗೆ ರಿಟರ್ನ್‌ ತುಂಬಿ.

ಶ್ರೇಯಸ್‌, ಊರುಬೇಡ
* ನಾನು ಸಹಕಾರಿ ಸಂಘದಲ್ಲಿ ₹ 50 ಲಕ್ಷ ಎಫ್‌.ಡಿ. ಇಟ್ಟಿದ್ದೇನೆ. ಈ ಠೇವಣಿಗೆ ತೆರಿಗೆ ಇದೆಯೇ ಅಥವಾ ಇಲ್ಲವೇ ತಿಳಿಸಿರಿ.
ಉತ್ತರ:
ಠೇವಣಿಯನ್ನು ಬ್ಯಾಂಕ್‌, ಸಹಕಾರಿ ಸಂಘ, ಖಾಸಗಿ ಕಂಪೆನಿ ಹಾಗೂ ಇನ್ನಿತರ ಕಡೆ ಇರಿಸಿದಾಗ, ಇಲ್ಲಿ ಬರುವ ಬಡ್ಡಿ ನಿಮ್ಮ ಆದಾಯಕ್ಕೆ ಸೇರಿಸಿ, ತೆರಿಗೆ ಕೊಡಬೇಕಾಗುತ್ತದೆ. ಆದಾಯ ತೆರಿಗೆ ಕಾನೂನಿನಲ್ಲಿ ಸಹಕಾರಿ ಸಂಘಗಳ ಠೇವಣಿಗೆ ಟಿಡಿಎಸ್‌ ಇರುವುದಿಲ್ಲ. ಈ ಕಾರಣದಿಂದ ತೆರಿಗೆ ಉಳಿಸಲು, ಬಹಳಷ್ಟು ಜನರು ಸಹಕಾರಿ ಸಂಘಗಳ ಮೊರೆ ಹೋಗುತ್ತಾರೆ. ಸಹಕಾರಿ ಸಂಘಗಳಲ್ಲಿ ಠೇವಣಿ ಇರಿಸುವಾಗ ಪ್ಯಾನ್‌ ಕಾರ್ಡು ಕೊಡಬೇಕಾಗುತ್ತದೆ. ಇದರಿಂದಾಗಿ ಈ ಕಾರಣದಿಂದ ಆದಾಯ ತೆರಿಗೆ ಇಲಾಖೆಗೆ ಎಲ್ಲಿ ಹಣ ಇರಿಸಿದರೂ ತಿಳಿಯಲು ಸಾಧ್ಯವಾಗುತ್ತದೆ. ಒಟ್ಟಿನಲ್ಲಿ ಸಹಕಾರಿ ಸಂಘಗಳಲ್ಲಿ ಟಿಡಿಎಸ್‌ ಮಾಡದಿದ್ದರೂ ಅಲ್ಲಿ ಬರುವ ಠೇವಣಿ ಮೇಲಿನ ಬಡ್ಡಿಗೆ ಆದಾಯ ತೆರಿಗೆ ಇರುತ್ತದೆ.

ಭೀಮಾಗೌಡ ನಾಯಕ, ಮಂಡ್ಯ
* ನಿಮ್ಮ ಅಂಕಣದ ಪ್ರಭಾವದಿಂದ 2013 ರಲ್ಲಿ ₹ 5000 ಆರ್‌.ಡಿ., ಎಸ್‌.ಬಿ.ಎಂ.ದಲ್ಲಿ ಮಾಡಿದ್ದೆ, ಮಾರ್ಚ್‌ 2016 ರಲ್ಲಿ ₹ 5000 ತೆರಿಗೆ ಮುರಿದಿದ್ದಾರೆ.  ತೆರಿಗೆ ವಿಚಾರ  ತಿಳಿಸಿ.
ಉತ್ತರ:
ಸೆಕ್ಷನ್‌ 194ಎ ಪ್ರಕಾರ ಠೇವಣಿ ಮೇಲಿನ ಬಡ್ಡಿಗೆ ಶೇ 10 ರಷ್ಟು ಆದಾಯ ತೆರಿಗೆ ಮೂಲದಲ್ಲಿಯೇ (ಟಿಡಿಎಸ್‌) ಮುರಿಯುತ್ತಾರೆ. ಆರ್‌.ಡಿ.ಗೆ ಹಿಂದೆ ಮುರಿಯುತ್ತಿರಲಿಲ್ಲ. ಆದರೆ ಈ ವರ್ಷದಿಂದ ಮುರಿಯಲು ಪ್ರಾರಂಭಿಸಿದ್ದಾರೆ. ನಿಮ್ಮ ಇತರೆ ಆದಾಯ ಹಾಗೂ ಬಡ್ಡಿ ಆದಾಯ ವಾರ್ಷಿಕವಾಗಿ ₹ 2.50 ಲಕ್ಷ ದೊಳಗಿರುವಲ್ಲಿ, ಬ್ಯಾಂಕಿನಲ್ಲಿ ಟಿಡಿಎಸ್‌ ಸರ್ಟಿಫಿಕೇಟ್‌ ಪಡೆದು, ಆದಾಯ ತೆರಿಗೆ ರಿಟರ್ನ್‌ ತುಂಬಿ, ಕಡಿತವಾದ ಹಣ ವಾಪಸ್‌ ಪಡೆಯಬಹುದು.

ಯಮನೂರಪ್ಪ, ಬೆಂಗಳೂರು
* ನಾನು ಸುರಭಿ ಚಿಟ್ಸ್‌ನಲ್ಲಿ ಹಣ ಹೂಡಬೇಕೆಂದಿದ್ದೇನೆ.  ಯೋಜನೆ ಹೇಗಿದೆ ತಿಳಿಸಿರಿ. ಬೇರಾವ ಉತ್ತಮ ಹೂಡಿಕೆ ಇದ್ದರೆ ತಿಳಿಸಿ.
ಉತ್ತರ:
ಸುರಭಿ ಚಿಟ್ಸ್‌ನ ಒಂದು ಕಂಪೆನಿ ಅಥವಾ ಯಾವುದೋ ಚಿಟ್‌್ಸ ಕಂಪೆನಿಯ ಯೋಜನೆ ಎಂಬುದು ತಿಳಿದಿಲ್ಲ. ಚಿಟ್ಸ್‌ನ ಕಂಪೆನಿ ಚೆನ್ನಾಗಿರಬಹುದು. ಪ್ರಾರಂಭದಲ್ಲಿ ಸ್ವಲ್ಪ ಹಣ ತೊಡಗಿಸಿರಿ. ನೀವು ಎಷ್ಟು ಹಣ ಉಳಿಸಬಹುದು ಅಥವಾ ಹೂಡಬಹುದು, ಇವುಗಳನ್ನು ಕೂಡಾ ತಿಳಿಸಿಲ್ಲ. ನಿಮ್ಮ ಆದಾಯದಲ್ಲಿ ಶೇ 10–15 ವಿಮೆಗೆ ತೆಗೆದಿಡಿ. ಇನ್ನು ಉಳಿಸಬಹುದಾದ ಗರಿಷ್ಠ ಹಣ ಬ್ಯಾಂಕ್‌ ಆರ್‌.ಡಿ.ಯಲ್ಲಿ ಕನಿಷ್ಠ 5 ವರ್ಷಗಳ ಅವಧಿಗೆ ಇಡುತ್ತಾ ಬನ್ನಿರಿ, ಹೀಗೆ ಕೂಡಿಡುವ ಹಣದಿಂದ ಮುಂದೊಮ್ಮೆ ನಿವೇಶನ ಕೊಳ್ಳಿರಿ. ಒಟ್ಟಿನಲ್ಲಿ ಉಳಿತಾಯಕ್ಕೆ ಒಂದಿಷ್ಟು ತೆಗೆದಿಟ್ಟು, ಉಳಿದುದನ್ನು ಖರ್ಚಿಗೆ ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT