ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಇಂಟರ್‌ನೆಟ್‌ ಬಳಕೆಯ ನಾಗಾಲೋಟ

Last Updated 3 ಜನವರಿ 2017, 19:30 IST
ಅಕ್ಷರ ಗಾತ್ರ

ನಗದು ರಹಿತ ವಹಿವಾಟು, ಇ–ವಾಲೆಟ್‌, ಮೊಬೈಲ್‌ ಪಾವತಿ, ಡಿಜಿಟಲ್‌ ಪಾವತಿ ವ್ಯವಸ್ಥೆಗಳ ಬಗ್ಗೆ ದೇಶದಾದ್ಯಂತ ಚರ್ಚೆ ಆಗುತ್ತಿರುವ ಸಂದರ್ಭದಲ್ಲೇ, ದೇಶದಲ್ಲಿ ಮೊಬೈಲ್‌ ಇಂಟರ್‌ನೆಟ್‌ ಬಳಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವ ಸುದ್ದಿ ಹೊರಬಿದ್ದಿದೆ.

ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಮ್ಯಾನೇಜ್‌ಮೆಂಟ್‌ ಕನ್ಸಲ್ಟಿಂಗ್‌ ಸಂಸ್ಥೆ ಝಿನ್ನೊವ್‌ ನಡೆಸಿರುವ ಅಧ್ಯಯನದ ಪ್ರಕಾರ, ದೇಶದಲ್ಲಿ ಮೊಬೈಲ್‌ ಇಂಟರ್‌ನೆಟ್‌ ಬಳಕೆ, ಭಾರತೀಯರು ಮೊಬೈಲ್‌ನಲ್ಲಿ ನಡೆಸುತ್ತಿರುವ ಆನ್‌ಲೈನ್‌ ಚಟುವಟಿಕೆ, ಆ್ಯಪ್‌ಗಳ ಬಳಕೆ, ಇ–ವಹಿವಾಟು ಸೇರಿದಂತೆ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದೆ.

‘ಇಂಡಿಯಾ ಆ್ಯಸ್‌ ಮೊಬೈಲ್‌ –ಫರ್ಸ್ಟ್ ನೇಷನ್‌– ಆಪರ್ಚ್ಯುನಿಟೀಸ್‌ ಆ್ಯಂಡ್‌ ಚ್ಯಾಲೆಂಜಸ್‌’ ಹೆಸರಿನಲ್ಲಿ ನಡೆಸಲಾಗಿರುವ  ಅಧ್ಯಯನದ ವರದಿಯನ್ನು ಝಿನ್ನೊವ್‌ ಇತ್ತೀಚೆಗೆ ಬಿಡುಗಡೆ ಮಾಡಿದೆ.

ಮುಂಬೈ, ದೆಹಲಿ, ಕೋಲ್ಕತ್ತ, ಕೊಯಿಮತ್ತೂರು ಮತ್ತು ವಿಜಯವಾಡಗಳಲ್ಲಿ ಮೊಬೈಲ್‌ ಇಂಟರ್‌ನೆಟ್‌ ಬಳಕೆದಾರರ ಜೊತೆ ಸಂವಾದ ನಡೆಸಿ ವರದಿ ಸಿದ್ಧಪಡಿಸಲಾಗಿದೆ.

ಭಾರತದಲ್ಲಿ ಮೊಬೈಲ್‌ ಬಳಕೆದಾರರ ಸಂಖ್ಯೆ ಮಾತ್ರ ಹೆಚ್ಚಾಗಿಲ್ಲ. ಮೊಬೈಲ್‌ ಆಧಾರಿತ ವಹಿವಾಟು ಮತ್ತು ಸೇವೆಗಳನ್ನು   ನೀಡುವ ಹಾಗೂ ಪಡೆಯುವ ಪ್ರಮಾಣದಲ್ಲೂ ಏರಿಕೆಯಾಗಿದೆ. ಮೊಬೈಲ್‌ ಬಳಕೆದಾರರು ಕಂಪ್ಯೂಟರ್‌ನಲ್ಲಿ ನಡೆಸುತ್ತಿದ್ದ ಆನ್‌ಲೈನ್‌ ಚಟುವಟಿಕೆಗಳನ್ನು ಕಡಿಮೆ ಮಾಡಿ ಸ್ಮಾರ್ಟ್‌ಫೋನ್‌ಗಳತ್ತ ಮುಖ ಮಾಡುತ್ತಿದ್ದಾರೆ ಎಂಬ ಸಂಗತಿಯನ್ನೂ ವರದಿ ಉಲ್ಲೇಖಿಸಿದೆ.

ಶೇ 58ರಷ್ಟು ಬಳಕೆದಾರರು ಮೊಬೈಲ್‌ನಲ್ಲಿ ಮಾತ್ರ ಇಂಟರ್‌ನೆಟ್ ಬಳಸುತ್ತಾರೆ. ಇದುವರೆಗೆ ಮೊಬೈಲ್‌ ಮತ್ತು ಕಂಪ್ಯೂಟರ್‌ನಲ್ಲಿ ಇಂಟರ್‌ನೆಟ್‌ ಬಳಸುತ್ತಿದ್ದ ಜನರ ಪೈಕಿ ಶೇ 88ರಷ್ಟು ಜನರು ಕನಿಷ್ಠ ಒಂದು ಆನ್‌ಲೈನ್‌ ಚಟುವಟಿಕೆಯನ್ನು ಈಗ ಸ್ಮಾರ್ಟ್‌ಫೋನ್‌ ಮೂಲಕ ಮಾಡಲು ಆರಂಭಿಸಿದ್ದಾರೆ.

ಅಧ್ಯಯನ ವರದಿ ಏನು ಹೇಳುತ್ತದೆ?
* ಒಬ್ಬ ಬಳಕೆದಾರನ  ಸ್ಮಾರ್ಟ್‌ಫೋನ್‌ನಲ್ಲಿ ಸರಾಸರಿ 12 ಮೊಬೈಲ್‌ ಆ್ಯಪ್‌ಗಳು ಇರುತ್ತವೆ. ಇವುಗಳ ಪೈಕಿ ಕನಿಷ್ಠ ಆರು ಆ್ಯಪ್‌ಗಳನ್ನು ಆತ ಪ್ರತಿ ದಿನ ಬಳಸುತ್ತಾನೆ.

* ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಬಳಸುವ ಬಳಕೆದಾರರ ಪೈಕಿ ಶೇ 80ರಷ್ಟು ಜನರ ವಾರ್ಷಿಕ ಆದಾಯ ₹5ಲಕ್ಷಕ್ಕಿಂತ ಕಡಿಮೆ ಇದೆ.

* ಕಳೆದ ಎರಡು ವರ್ಷಗಳಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರು ಮೊಬೈಲ್‌ಗಳ ಜೊತೆಗೆ ಸಮಯ ಕಳೆಯುವ ಪ್ರಮಾಣ ಶೇ 94ಕ್ಕೆ ಏರಿದೆ.

* ಶೇ 43ರಷ್ಟು ಜನರು ಮೊಬೈಲ್‌ ಇಂಟರ್‌ನೆಟ್‌ಗೆ ತಿಂಗಳಿಗೆ ₹100ಕ್ಕೂ ಹೆಚ್ಚು ಹಣ ವೆಚ್ಚ ಮಾಡುತ್ತಾರೆ.

* ಶೇ 73 ಜನರು ಟಿವಿ ವೀಕ್ಷಣೆಯನ್ನು ಕಡಿಮೆ ಮಾಡಿ, ಮೊಬೈಲ್‌ ಇಂಟರ್‌ನೆಟ್‌ ಜೊತೆ ಹೆಚ್ಚು ಸಮಯ ಕಳೆಯುವುದಕ್ಕೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT